
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಕಾರ್ಯ ಹಾಗೂ ರಾಜ್ಯಶಾಸ್ತ್ರ ವಿಭಾಗಗಳು ಆಯೋಜಿಸಿದ್ದ ‘ಸಮಕಾಲೀನ ಭಾರತ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೃತಿಗಳ ಅನುಸಂಧಾನ’ ಕುರಿತ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕೃತಿಗಳನ್ನು ವಿತರಿಸಲಾಯಿತು
- ಪ್ರಜಾವಾಣಿ ಚಿತ್ರ
ರಾಯಚೂರು: ‘ಎಲ್ಲಿಯ ತನಕ ಜಾತಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಅನಿವಾರ್ಯ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅಭಿಪ್ರಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಕಾರ್ಯ ಹಾಗೂ ರಾಜ್ಯಶಾಸ್ತ್ರ ವಿಭಾಗಗಳುಆಯೋಜಿಸಿದ್ದ ‘ಸಮಕಾಲೀನ ಭಾರತ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೃತಿಗಳ ಅನುಸಂಧಾನ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಕೆಲವರು ಮೀಸಲಾತಿಯನ್ನು ಬಿಡಬೇಕೆಂದು ವಾದಿಸುತ್ತಾರೆ. ಅದು ಸರಿಯಲ್ಲ. ದೇಶದಲ್ಲಿನ ಶ್ರೇಣಿಕೃತ ವರ್ಗ ಸಂಘರ್ಷ ನೋವುಂಡ ತಳಸಮುದಾಯಗಳಿಗೆ ಅರ್ಥವಾಗುತ್ತದೆ ವಿನಃ ಹೊಟ್ಟೆ ತುಂಬಿದವರಿಗೆ ಅಲ್ಲ. ಶೋಷಿತರ, ಬಡವರ ಸ್ಥಿತಿಗತಿಯನ್ನು ಒಮ್ಮೆ ಅವಲೋಕಿಸಿದರೆ ಸಮಾನತೆ ಯಾಕೆ ಬೇಕು ಎಂಬುದು ಸ್ಪಷ್ಟವಾಗುತ್ತದೆ’ ಎಂದು ವಿಶ್ಲೇಷಿಸಿದರು.
‘ಅಂಬೇಡ್ಕರ್ ಅವರು ದೇಶದ ಎಲ್ಲ ಜಾತಿಗಳ ಮಹಿಳೆಯರು ಮುಖ್ಯವಾಹಿನಿಗೆ ಬರಲು ಕಾರಣವಾಗಿದ್ದಾರೆ. ಅಕಸ್ಮಾತ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಜನ್ಮತಾಳದೇ ಹೋಗಿದ್ದರೆ ಮಹಿಳೆಯರು, ದಲಿತರು, ಬಡವರು ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗುವ ಪರಿಸ್ಥಿತಿ ಬರುತ್ತಿತ್ತು. ಹಾಗಾಗಿ ಯುವ ಸಮುದಾಯ ಅಂಬೇಡ್ಕರ್ ಅವರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಅವರ ತತ್ವ, ಸಿದ್ಧಾಂತಗಳ ತಿರುಳನ್ನು ಅರಿತು ಮಾನವೀಯ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ‘ಸಮಾನತೆ, ಪ್ರೀತಿ, ಕರುಣೆ ತುಂಬಿದ ಧರ್ಮವೆಂದರೆ ಅದು ಬೌದ್ಧ ಧರ್ಮ. ಆ ಕಾರಣಕ್ಕಾಗಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸುತ್ತಾರೆ. ಬೌದ್ಧ ಧರ್ಮದಲ್ಲಿ ಮಾಕ್ರ್ಸ್‍ನ ಚಿಂತನೆಗಳ ಎಳೆಗಳನ್ನು ಗುರುತಿಸುತ್ತ ಅಧಿಕಾರ ಎಂದರೆ ಲಾಲಸೆಯಿಂದ ಅನುಭವಿಸುವುದಲ್ಲ, ಅದು ಜನರ ಬಂಧನದ ಬಿಡುಗಡೆಗೆ ದಾರಿಯಾಗಬೇಕು ಎಂದು ವ್ಯಾಖ್ಯಾನಿಸುತ್ತಾರೆ’ ಎಂದು ತಿಳಿಸಿದರು.
ಪತ್ರಕರ್ತ ಎನ್.ಜಗದೀಶ್ ಕೊಪ್ಪ ಅವರು ಅಂಬೇಡ್ಕರ್ ಅವರ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಕುರಿತು ಉಪನ್ಯಾಸ ನೀಡಿ, ‘ಅಹಿಂಸೆ ಮತ್ತು ಯುದ್ಧದ ಬಗೆಗೆ ಮೊದಲು ಮಾತನಾಡಿದ್ದು ಬುದ್ಧ. ಈ ಬುದ್ಧನ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿದ್ದು ಅಂಬೇಡ್ಕರ್. ಹಿಂದೂ ಧರ್ಮ ಕಿಡಕಿ ಮತ್ತು ಬಾಗಿಲುಗಳು ಇಲ್ಲದ ಮನೆ ಇದ್ದಂತೆ. ಅಲ್ಲಿ ಕತ್ತಲು ತುಂಬಿದೆ. ಆ ಕತ್ತಲನ್ನು ಕಳೆಯಲು ಬುದ್ಧನ ವಿಚಾರಗಳು ಬೆಳಕಾಗಿ ಪರಿಣಮಿಸಬಲ್ಲವು ಎಂಬುದನ್ನು ಅಂಬೇಡ್ಕರ್ ಕಂಡುಕೊಂಡರು’ ಎಂದರು.
‘ಬುದ್ಧನ ವೈಚಾರಿಕ ನಿಲುವುಗಳು ಮಹತ್ವದ್ದಾಗಿವೆ. ಆತ್ಮ, ಪುನರಜನ್ಮ ಎಂಬುದು ಕಟ್ಟು ಕತೆ. ಮನುಷ್ಯ, ಯಾವುದೇ ಜೀವಿಯನ್ನು ದೇವರು ಸೃಷ್ಟಿಸಿಲ್ಲ. ಪ್ರಕೃತಿ ಸೃಷ್ಟಿಸಿದೆ. ಒಂದು ದಿನ ನಶ್ವರತೆ ನಮಗೆಲ್ಲ ಕಾಯ್ದಿದೆ. ಅಲ್ಲಿವರೆಗೂ ದುಡಿಮೆ ಮಾಡಿಕೊಂಡು ಸುಖವಾಗಿ ಬಾಳಿ ಎನ್ನುದುದನ್ನು ಬುದ್ಧ ಹೇಳುತ್ತಾನೆ. ಅಂಬೇಡ್ಕರ್ ಮತ್ತು ಬುದ್ಧ ಯಾವ ಜಾತಿಗೂ ಸೀಮಿತವಲ್ಲ. ಅವರು ಮನುಕುಲದ ನಾಯಕರು’ ಎಂದು ಹೇಳಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟಿ ಅಂಬೇಡ್ಕರ್ ಅವರ ‘ರೂಪಾಯಿಯ ಸಮಸ್ಯೆ : ಇದರ ಮೂಲ ಮತ್ತು ಪರಿಹಾರ’ ಕೃತಿಯ ಕುರಿತು ವಿಷಯ ಮಂಡಿಸಿ, ಅಂಬೇಡ್ಕರ್ ಅವರು 1921 ರಲ್ಲಿ ಎಡ್ವೀನ್ ಕೆನಾನ್ ಅವರ ಮಾರ್ಗದರ್ಶನದಲ್ಲಿ ಡಿಎಸ್‍ಇ ಪದವಿ ಪಡೆಯುವ ಸಲುವಾಗಿ ರೂಪಾಯಿಯ ಸಮಸ್ಯೆ ಕುರಿತು ಪ್ರಬಂಧ ಮಂಡಿಸುತ್ತಾರೆ. ಇದರಲ್ಲಿ ಈ ಹೊತ್ತಿಗೂ ಪರಿಹಾರ ಕಂಡುಕೊಳ್ಳುವ ಆರ್ಥಿಕ ವಿಚಾರಗಳು ಅಡಗಿವೆ. ತಳವರ್ಗದ ಜನರ ಆರ್ಥಿಕ ಅಭ್ಯುದಯವನ್ನು ಬಯಸುವ ಸದುದ್ದೇಶ ಅಂಬೇಡ್ಕರ್ ಅವರಿಗಿತ್ತು’ ಎಂದರು.
ಕಲಬುರಗಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ಎಂ. ಗಾಜನೂರು ‘ಜಾತಿ ವಿನಾಶ’ ಕೃತಿಯ ಕುರಿತು ಮಾತನಾಡಿ, ಜಾತಿ ವಿನಾಶವನ್ನು ಮಾಡದೇ ಅದನ್ನು ಸುಧಾರಿಸುವುದು ಅಸಾಧ್ಯ ಎನ್ನುವುದು ಈ ಕೃತಿಯ ಆಶಯ. ಹಿಂದೂ ಸಮಾಜ ಸಮಾನತೆಯನ್ನು ಒಪ್ಪದ ಒಂದು ಸ್ಥಿತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ದೇಶದ ನೈತಿಕತೆ ಒಂದೊಂದು ಜಾತಿಗೂ ಬದಲಾಗುತ್ತದೆ. ಈ ಸ್ಥಾಪಿತ ಗುಣ ಸಾಮಾನ್ಯ ನಾಗರಿಕರ ನೈತಿಕತೆಯನ್ನು ಹಾಳುಗೆಡುವುತ್ತದೆ. ಅಂತರ್ಜಾತಿ ವಿವಾಹ, ಸಹಭೋಜನ, ದೇವಾಲಯ ಪ್ರವೇಶ ಜಾತಿ ವಿನಾಶವಾಗುವ ತಾತ್ಕಾಲಿಕ ದಾರಿಗಳು. ಸೈದ್ಧಾಂತಿಕವಾಗಿ ಬದಲಾವಣೆಯಾದಾಗ ಮಾತ್ರ ಸಂಪೂರ್ಣ ಜಾತಿ ವಿನಾಶ ಸಾಧ್ಯವೆಂದು ಅಂಬೇಡ್ಕರ್ ಈ ಕೃತಿಯಲ್ಲಿ ಪ್ರತಿಪಾದಿಸುತ್ತಾರೆ’ ಎಂದರು.
ವಿಚಾರ ಸಂಕಿರಣದ ಸಂಚಾಲಕರಾದ ಕೆ.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಕೃತಿಗಳ ಓದಿನ ಪ್ರವೇಶಿಕೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಯೋಜಿಸಲಾಗಿದೆ. ಹುಸಿ ಸುದ್ದಿಗಳನ್ನೇ ಸತ್ಯವೆಂದು ನಂಬುವ ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಕೃತಿಗಳ ಮರು ಓದು ಹೊಸ ಒಳನೋಟಗಳನ್ನು ಕಲ್ಪಿಸಿಕೊಡಲಿದೆ ಎಂದರು.
ಕುಲಸಚಿವರಾದ ಡಾ. ಎ.ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ಧಮ್ಮ ಪ್ರಕಾಶ್ ಉಪಸ್ಥಿತರಿದ್ದರು.
ಮಂಜುನಾಥ ನಿರೂಪಿಸಿದರು. ವಿದ್ಯಾರ್ಥಿನಿ ಸ್ನೇಹಾ ಪ್ರಾರ್ಥನೆ ಗೀತೆ ಹಾಡಿದರು. ರಮೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.