ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರ |ಭೂ ಸ್ವಾಧೀನಕ್ಕೆ ವಿರೋಧ: ಕೀಟನಾಶಕ ಕುಡಿಯಲು ಯತ್ನ

ಧರಣಿಗೆ ಬಿಜೆಪಿ ನಾಯಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 12:59 IST
Last Updated 16 ಸೆಪ್ಟೆಂಬರ್ 2025, 12:59 IST
   

ಬಿಡದಿ (ರಾಮನಗರ): ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ, ಹೋಬಳಿಯ ಭೈರಮಂಗಲದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಭಾಷಣ ಮಾಡುವಾಗ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ರೈತರು, ‘ಯೋಜನೆಗೆ ನಾವು ಭೂಮಿ ಕೊಡುವುದಿಲ್ಲ’ ಎಂದು ಕೀಟನಾಶಕ ಕುಡಿಯಲು ಯತ್ನಿಸಿದರು.

ಹೊಸೂರಿನ ರಮ್ಯ, ಕಂಚುಗಾರನಹಳ್ಳಿ ಶಾರದಾ, ಚಿಕ್ಕಭೈರಮಂಗಲದ ನಾಗೇಶ್ ಕುಮಾರ್ ಹಾಗೂ ಭೈರಮಂಗಲದ ಶ್ರೀಧರ್ ಕೀಟನಾಶಕ ಕುಡಿಯಲು ಯತ್ನಿಸಿದವರು. ಕೂಡಲೇ ಇತರ ರೈತರು ಅವರನ್ನು ತಡೆದು, ಕೀಟನಾಶಕದ ಬಾಟಲಿಗಳನ್ನು ಕಸಿದುಕೊಂಡರು. ಮುಂಜಾಗ್ರತಾ ಕ್ರಮವಾಗಿ ನಾಲ್ವರನ್ನೂ ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ರೈತ ಮುಖಂಡರು ತಿಳಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಂಸದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿ ಭಾಷಣ ಮಾಡಿದರು. ಅಶ್ವತ್ಥ ನಾರಾಯಣ ಭಾಷಣ ವೇಳೆ ನಾಲ್ವರೂ, ‘ಯೋಜನೆಗೆ ನಾವು ಭೂಮಿ ಕೊಡುವುದಿಲ್ಲ’ ಎಂದು ಕೀಟನಾಶಕ ಕುಡಿಯಲು ಯತ್ನಿಸಿದರು. ರೈತರನ್ನು ಆಸ್ಪತ್ರೆಗೆ ಕಳಿಸಿದ ಬಳಿಕ ಭಾಷಣ ಮುಂದುವರಿಯಿತು.

ADVERTISEMENT

ಯೋಜನಾ ಪ್ರದೇಶದಲ್ಲಿ ಸೆ. 11ರಿಂದ ಜಂಟಿ ಅಳತೆ ಮೌಲ್ಯಮಾಪನ (ಜೆಎಂಸಿ) ಶುರುವಾಗಿದೆ. ಮಾರನೇಯ ದಿನದಿಂದಲೇ ಭೈರಮಂಗಲ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು, ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.