ADVERTISEMENT

ಕೋವಿಡ್ ಲಸಿಕೆ ನೀಡಿಕೆಯಲ್ಲಿ ತಾರತಮ್ಯ

ಲಸಿಕೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಜನ

ಶಿವಾನಂದ ಕರ್ಕಿ
Published 1 ಜೂನ್ 2021, 3:29 IST
Last Updated 1 ಜೂನ್ 2021, 3:29 IST
ತೀರ್ಥಹಳ್ಳಿ ತಾಲ್ಲೂಕಿನ ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರ
ತೀರ್ಥಹಳ್ಳಿ ತಾಲ್ಲೂಕಿನ ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರ   

ತೀರ್ಥಹಳ್ಳಿ: ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೋವಿಡ್ ಲಸಿಕೆ ಪೂರೈಕೆ ಮಾಡದೇ ಇರುವುದರಿಂದ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ.

ಒಂದು ತಿಂಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಪೂರೈಕೆ ಸ್ಥಗಿತಗೊಳಿಸಲಾಗಿದೆ. ನಗರ, ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಲಸಿಕೆ ಇಲ್ಲದಂತಾಗಿದ್ದು, ಗ್ರಾಮಾಂತರ ಭಾಗದ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಲಾಕ್‌ಡೌನ್ ಕಾರಣ ಪಟ್ಟಣ, ನಗರ ಪ್ರದೇಶಕ್ಕೆ ಗ್ರಾಮೀಣ ಭಾಗದ ಜನರು ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪ್ರವೇಶಿಸುವ ತಪಾಸಣಾ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರನ್ನು ತಡೆದು ವಾಪಸ್‌ ಕಳುಹಿಸಲಾಗುತ್ತಿದೆ. ಲಸಿಕೆಯ ಟೋಕನ್ ಪಡೆಯಲು ಲಸಿಕೆ ನೀಡುವ ಸ್ಥಳಕ್ಕೆ ಹೋಗಬೇಕಾದ ಅನಿವಾರ್ಯಕ್ಕೆ ಜನರು ಸಿಲುಕಿದ್ದು, ಲಸಿಕಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದಂತಾಗಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರಗಳಿಗಳಿಗೆ ಲಸಿಕೆ ಲಭ್ಯವಾಗಿಲ್ಲ.

ಈ ನಡುವೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತ ಲಸಿಕೆ ನೀಡಿಕೆಯಲ್ಲಿಯೂ ಗ್ರಾಮೀಣ ಭಾಗದ ಜನರನ್ನು ಕಡೆಗಣನೆ ಮಾಡಲಾಗಿದೆ ಎಂಬ ಅಸಮಾಧಾನವನ್ನು ಗ್ರಾಮೀಣ ಭಾಗದ ಜನರು ಹೊರಹಾಕಿದ್ದಾರೆ.

‘ತೀರ್ಥಹಳ್ಳಿ ಪಟ್ಟಣದ ಕುವೆಂಪು ಶಾಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕಳೆದ ಮೂರು ದಿನಗಳಿಂದ ಪ್ರತಿದಿನ 150 ಮಂದಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯಲು ಲಸಿಕೆ ಹಾಕುವ ಕೇಂದ್ರಗಳಲ್ಲಿ ಟೋಕನ್ ಪಡೆದು ಹೆಸರು ನೋಂದಾಯಿಸಬೇಕು. ಲಸಿಕೆ ಹಾಕಿಸಿಕೊಳ್ಳುವ ಗ್ರಾಮಾಂತರ ಪ್ರದೇಶದ ಜನರಿಗೆ ತಾಲ್ಲೂಕು ಆಡಳಿತ ಲಸಿಕಾ ಕೇಂದ್ರಕ್ಕೆ ತಲುಪಲು ಪಾಸ್ ನೀಡದೇ ಇರುವುದರಿಂದ ಲಸಿಕೆ ಟೋಕನ್ ಪಡೆಯಲು ಸಾಧ್ಯವಾಗದಂತಾಗಿದೆ’ ಎನ್ನುತ್ತಾರೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಕೀಗಡಿ ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.