ADVERTISEMENT

ಲೋಕಸಭೆ ಚುನಾವಣೆ: ಶಿವಮೊಗ್ಗದಿಂದ ಎರಡನೇ ಬಾರಿಗೆ ಗೀತಾ ಶಿವರಾಜಕುಮಾರ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:08 IST
Last Updated 8 ಮಾರ್ಚ್ 2024, 16:08 IST
<div class="paragraphs"><p>ಗೀತಾ ಶಿವರಾಜಕುಮಾರ್</p></div>

ಗೀತಾ ಶಿವರಾಜಕುಮಾರ್

   

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೀತಾ ಶಿವರಾಜಕುಮಾರ್ ಅವರಿಗೆ ಶುಕ್ರವಾರ ಅಂತಿಮಗೊಂಡಿದೆ. ಇದರೊಂದಿಗೆ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆ ಸೇರಿದಂತೆ ಟಿಕೆಟ್ ವಿಚಾರದಲ್ಲಿ ಹರಡಿದ್ದ ಎಲ್ಲ ಊಹಾಪೋಹಗಳಿಗೂ ತೆರೆಬಿದ್ದಿದೆ.

ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಾಗಿ ಶಿವಮೊಗ್ಗ ಕ್ಷೇತ್ರ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಕದನ ಕಣವಾಗಿ ಮಾರ್ಪಡಲಿದೆ.

ADVERTISEMENT

ಎರಡನೇ ಬಾರಿ ಕಣಕ್ಕೆ: ಗೀತಾ ಈ ಹಿಂದೆ 2014ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆಗ ಬಿಜೆಪಿ ಅಭ್ಯರ್ಥಿ ಆಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಆಗಿನ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಗೀತಾ ಸಹೋದರ ಮಧು ಬಂಗಾರಪ್ಪ ಆಗ ಜೆಡಿಎಸ್‌ನಿಂದ ಸೊರಬ ಕ್ಷೇತ್ರದ ಶಾಸಕರಾಗಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗೀತಾ 2023ರ ಏಪ್ರಿಲ್‌ 23ರಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಪಕ್ಷದ ಅಭ್ಯರ್ಥಿ ಆಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಹೋದರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಲ ಹಾಗೂ ಪತಿ, ನಟ ಶಿವರಾಜಕುಮಾರ್ ಅವರ ವರ್ಚಸ್ಸು ಗೀತಾ ಬೆನ್ನಿಗಿದೆ.

ಪಕ್ಷ ಸೇರ್ಪಡೆಯ ನಂತರ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಗೀತಾ ಶಿವರಾಜಕುಮಾರ್ ಕಳೆದ ವಿಧಾನಸಭೆ ಚುನಾವಣೆ ವೇಳೆ ಸೊರಬದಲ್ಲಿ ಸಹೋದರ ಮಧು ಬಂಗಾರಪ್ಪ, ಶಿರಸಿಯಲ್ಲಿ ಸಂಬಂಧಿ ಭೀಮಣ್ಣ ನಾಯ್ಕ ಪರ ಪ್ರಚಾರ ಕೈಗೊಂಡು ಗೆಲ್ಲಿಸಿದ್ದರು. ಬಳ್ಳಾರಿಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದರು. ಜೊತೆಗೆ ಡಾ.ರಾಜಕುಮಾರ್‌ ಕುಟುಂಬ ಮೈಸೂರಿನಲ್ಲಿ ನಡೆಸುತ್ತಿರುವ ಅಬಲಾಶ್ರಮ ’ಶಕ್ತಿಧಾಮ‘ದ ಉಸ್ತುವಾರಿ ಹೊತ್ತಿರುವ ಗೀತಾ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.