ADVERTISEMENT

ಪೌಷ್ಟಿಕ ಆಹಾರ ವಿತರಣೆಯಲ್ಲೂ ಕೊರಗರ ನಿರ್ಲಕ್ಷ್ಯ

ಕೊಳೆತ ಮೊಟ್ಟೆ, ಕಳಪೆ ಅಡುಗೆ ಎಣ್ಣೆ ವಿತರಣೆ– ದೂರು; ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ನೀಡಲು ಆಗ್ರಹ

ನವೀನ್ ಕುಮಾರ್ ಜಿ.
Published 18 ಮೇ 2025, 0:30 IST
Last Updated 18 ಮೇ 2025, 0:30 IST
ಕೊರಗ ಸಮುದಾಯದವರಿಗೆ ಈಚೆಗೆ ವಿತರಿಸಿರುವ ಮೊಟ್ಟೆ
ಕೊರಗ ಸಮುದಾಯದವರಿಗೆ ಈಚೆಗೆ ವಿತರಿಸಿರುವ ಮೊಟ್ಟೆ   
ಅಪೌಷ್ಟಿಕತೆಯಿಂದ ಬಳಲುತ್ತಿರುವ ಕೊರಗರು | 2–3 ತಿಂಗಳ ಆಹಾರ ಒಟ್ಟಿಗೆ ವಿತರಿಸುವುದಕ್ಕೆ ಆಕ್ಷೇಪ

ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲಸಿರುವ ತೀರಾ ಹಿಂದುಳಿದ, ಆದಿವಾಸಿ ಕೊರಗ ಸಮುದಾಯದವರಿಗೆ ಪೌಷ್ಟಿಕ ಆಹಾರ ವಿತರಣೆಯಲ್ಲೂ ನಿರ್ಲಕ್ಷ್ಯ ತೋರಲಾಗಿದೆ ಎಂದು ಈ ಸಮುದಾಯದ ಕೆಲವರು ಅಳಲು ತೋಡಿಕೊಂಡಿದ್ದಾರೆ. 

ಈ ಸಮುದಾಯದ ಹಲವರು ರಕ್ತ ಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರವು ಕೊರಗ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಿಸುತ್ತಿದೆ. ಆರೋಗ್ಯ ಸುಧಾರಣೆಯ ಉದ್ದೇಶದಿಂದ ಅವರಿಗೆ ಮೊಟ್ಟೆ, ತುಪ್ಪ, ಎಣ್ಣೆ, ತೊಗರಿ ಬೇಳೆ, ಸಕ್ಕರೆ, ಬೆಲ್ಲ, ಹೆಸರುಕಾಳು, ಅಕ್ಕಿ ಮೊದಲಾದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಆದರೆ ಈಚೆಗೆ ಪೂರೈಸುತ್ತಿರುವ ಪೌಷ್ಟಿಕ ಆಹಾರವು ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂಬುದು ಆ ಸಮುದಾಯದವರ ಆರೋಪ.

ಕಳಪೆ ಮಟ್ಟದ ಆಹಾರ ಪದಾರ್ಥ ವಿತರಿಸಿದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕೊರಗ ಸಮುದಾಯದ ಮುಖಂಡರು ದೂರಿದ್ದಾರೆ.

ADVERTISEMENT

‘ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳು ವಿತರಿಸುತ್ತಿಲ್ಲ. ಎರಡು, ಮೂರು ತಿಂಗಳ ಆಹಾರವನ್ನು ಒಟ್ಟಿಗೆ ವಿತರಿಸಲಾಗುತ್ತದೆ. ಹಲವು ಕುಟುಂಬಗಳಿಗೆ ಈಚೆಗೆ ವಿತರಿಸಿದ ಮೊಟ್ಟೆಗಳು ಕೆಟ್ಟುಹೋಗಿದ್ದವು. ಸೂರ್ಯಕಾಂತಿ ಎಣ್ಣೆ ಕೂಡ ಕಳಪೆ ಮಟ್ಟದ್ದಾಗಿತ್ತು. ಕಡಲೆ ಕಾಳು ಬಿಳಿ ಬಣ್ಣಕ್ಕೆ ತಿರುಗಿತ್ತು’ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳದ ಸಂಯೋಜಕ ಕೆ.ಪುತ್ರನ್‌ ತಿಳಿಸಿದರು.

‘ಕೊರಗ ಸಮುದಾಯದ ಹಲವರು ಈಗಲೂ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಹಿಂದೆ ನಾವು ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ನಮಗೆ ಪೌಷ್ಟಿಕ ಆಹಾರ ನೀಡಲು ಆರಂಭಿಸಿತ್ತು. ಈಗ ಕಳಪೆ ಮಟ್ಟದ ಆಹಾರ ಪೂರೈಸುವ ಮೂಲಕ ನಮಗೆ ಮತ್ತೆ ಅನ್ಯಾಯ ಮಾಡಲಾಗುತ್ತಿದೆ’ ಎಂದೂ ಅವರು ಹೇಳಿದರು.

‘ಕಳಪೆ ಮಟ್ಟದ ಆಹಾರ ಪೂರೈಸಿದವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮುಂದೆ ಈ ರೀತಿ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು. ಹಿಂದೆ ನಮಗೆ ಆಹಾರದ ಕಿಟ್‌ನಲ್ಲಿ ಬೆಲ್ಲ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಿ, ಸಕ್ಕರೆ ವಿತರಿಸಲಾಗುತ್ತಿದೆ. ನಮಗೆ ಸಕ್ಕರೆ ಬೇಡ, ಬೆಲ್ಲವನ್ನೇ ವಿತರಿಸಬೇಕು’ ಎಂದೂ ಅವರು ಆಗ್ರಹಿಸಿದರು.ಕೆ.ಪುತ್ರನ್‌ ಸಂಯೋಜಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ

ಕೊರಗ ಸಮುದಾಯದವರಿಗೆ ವಿತರಿಸಿರುವ ಅಡುಗೆ ಎಣ್ಣೆ
ಕೊರಗ ಸಮುದಾಯದವರಿಗೆ ಕಳಪೆ ಆಹಾರ ಪೂರೈಸಿರುವ ದೂರುಗಳು ಬಂದಿದ್ದು ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕಳಪೆ ಆಹಾರ ಪದಾರ್ಥ ಪೂರೈಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ
ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ
ಕೊರಗ ಸಮುದಾಯದವರಿಗೆ ಪೌಷ್ಟಿಕ ಆಹಾರ ವಿತರಿಸಲು ರಾಜ್ಯಮಟ್ಟದಲ್ಲಿ ಟೆಂಡರ್‌ ನೀಡಿರುವುದನ್ನು ರದ್ದುಪಡಿಸಿ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ನೀಡಬೇಕು
ಕೆ.ಪುತ್ರನ್‌ ಸಂಯೋಜಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ
ರಾಜ್ಯ ಮಟ್ಟದಲ್ಲಿ ಟೆಂಡರ್‌ ಪಡೆದವರ ವಿಳಾಸವೇ ನಮಗೆ ಗೊತ್ತಿಲ್ಲ. ಆಹಾರ ಪದಾರ್ಥಗಳನ್ನು ಎಷ್ಟೋ ತಿಂಗಳು ಸಂಗ್ರಹಿಸಿಟ್ಟು ಕೆಟ್ಟುಹೋದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ
ಸುಶೀಲಾ ನಾಡ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ

‘ಶೇ 70ರಷ್ಟು ಮಂದಿಗೆ ಅಪೌಷ್ಟಿಕತೆ’

‘ಕೊರಗರು ರಾಜ್ಯದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನೆಲಸಿದ್ದಾರೆ. ಈ ಸಮುದಾಯದ ಜನಸಂಖ್ಯೆ ಅಂದಾಜು 16 ಸಾವಿರದಷ್ಟಿದೆ. ಇವರಲ್ಲಿ ಶೇ 70ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಲವು ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ತಲುಪಿಯೇ ಇಲ್ಲ’ ಎಂದು ಕೆ.ಪುತ್ರನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.