ADVERTISEMENT

ಸಿದ್ದಾಪುರ | ಸಿಬ್ಬಂದಿ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 3:57 IST
Last Updated 11 ಫೆಬ್ರುವರಿ 2023, 3:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿದ್ದಾಪುರ: ಸಿಬ್ಬಂದಿ ಇಲ್ಲದೆ, ಸೌಲಭ್ಯವೂ ಸಿಗದೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿಯೊಬ್ಬರು ಶುಕ್ರವಾರ ಶಿಶುವಿಗೆ ಜನ್ಮ ನೀಡಿದ್ದಾರೆ.

ಗುಹ್ಯ ಗ್ರಾಮದ ನಿವಾಸಿ ಮೂಕಂಡ ಸುಬ್ರಮಣಿ ಎಂಬುವರ ಕಾಫಿ ತೋಟದ ಲೈನ್ ಮನೆಯ ನಿವಾಸಿ, ಕಾರ್ಮಿಕ ಮಹಿಳೆ ಸಂಗೀತಾ ಅವರಿಗೆ ನಸುಕಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೇಂದ್ರಕ್ಕೆ ಬೆಳಿಗ್ಗೆ 6 ಗಂಟೆ ವೇಳೆಗೆ ಅವರನ್ನು ಕರೆತಂದಾಗ ಬಾಗಿಲು ಮುಚ್ಚಿತ್ತು. ಹಲವು ಬಾರಿ ಬಾಗಿಲು ಬಡಿದರೂ ಯಾರೂ ಬಂದಿರಲಿಲ್ಲ.

‘ಅರ್ಧ ತಾಸು ಕಾದು, ಕೇಂದ್ರದ ಹಿಂಬದಿ ಬಾಗಿಲಿನಿಂದ ಹೋದಾಗ ಕಾವಲುಗಾರ ಕಂಡರು. ಅವರಿಗೆ ಮಾಹಿತಿ ನೀಡಿ, ಸಿಬ್ಬಂದಿ ಕರೆಯಲು ಕೋರಿದರೂ ಸ್ಪಂದಿಸಲಿಲ್ಲ. ಕೇಂದ್ರದ ಮುಂಬಾಗಿಲಲ್ಲೇ ಹೆರಿಗೆಯಾಯಿತು. ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ನಂತರ ಸಿಬ್ಬಂದಿ ದಾಖಲಿಸಿಕೊಂಡರು’ ಎಂದು ಸುಬ್ರಮಣಿ ದೂರಿದ್ದಾರೆ.

ADVERTISEMENT

‘ಸಾಮಾನ್ಯವಾಗಿ ರಾತ್ರಿ ವೇಳೆ ಮುಂಬಾಗಿಲು ಮುಚ್ಚಿರುತ್ತದೆ. ಬದಿಯ ಬಾಗಿಲು ತೆರೆದಿರುತ್ತದೆ. ಈ ಮಾಹಿತಿ ಇಲ್ಲದೇ ಗರ್ಭಿಣಿ ಕಾರಿನಲ್ಲೇ ಕುಳಿತಿದ್ದರು. ಹೆರಿಗೆ ಬಳಿಕ ಆಸ್ಪತ್ರೆ ಸಿಬ್ಬಂದಿಯೇ ತಾಯಿ–ಮಗುವನ್ನು ಆರೈಕೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗೆ ವರದಿಸಲ್ಲಿಸಲಾಗುವುದು’ ಎಂದು ವಿರಾಜಪೇಟೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಯತಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸುಳೆ ಸಾವು: ಶುಶ್ರೂಷಕ ಅಮಾನತು
ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ):
‘ಸಕಾಲಕ್ಕೆ ಆಂಬುಲೆನ್ಸ್‌ ಸೇವೆ ಸಿಗದೇ ಹಸುಳೆ ಮೃತಪಟ್ಟ ಪ್ರಕರಣದಲ್ಲಿ ಆಂಬುಲೆನ್ಸ್‌ ಶುಶ್ರೂಷಕ ಮಹೇಶ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ತಿಳಿಸಿದರು.

‘ಆಂಬುಲೆನ್ಸ್‌ನಲ್ಲಿ ಆಮ್ಲಜನಕ ಲಭ್ಯವಿದ್ದರೂ ಅವರು ಸ್ಪಂದಿಸಿರಲಿಲ್ಲ. ಕರ್ತವ್ಯಲೋಪದ ಕುರಿತು ಆಂಬುಲೆನ್ಸ್ ಸೇವೆ ನೀಡುವ ಸಂಸ್ಥೆಗೆ ಮಾಹಿತಿ ನೀಡಿ ಅಮಾನತ್ತು ಮಾಡಲಾಗಿದೆ. ಹಾಲು ಕುಡಿಸುವಾಗ ವ್ಯತ್ಯಾಸವಾಗಿ ಶ್ವಾಸಕೋಶದ ಸಮಸ್ಯೆ ಏರ್ಪಟ್ಟು ಹಸುಳೆ ಮೃತಪಟ್ಟಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.