ADVERTISEMENT

ಹರಪನಹಳ್ಳಿ ಶಾಸಕಿ ಕಚೇರಿಯಿಂದ ಕಳ್ಳತನ; ಇಬ್ಬರಿಂದ ₹11.65 ಲಕ್ಷ ಮೌಲ್ಯದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 12:14 IST
Last Updated 5 ನವೆಂಬರ್ 2025, 12:14 IST
   

ಹೊಸಪೇಟೆ (ವಿಜಯನಗರ): ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿಯಿಂದ ಜುಲೈ 17ರಂದು ಆಭರಣ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದು, ಅವರಿಂದ ಕಳವಾದ ₹11.65 ಲಕ್ಷ ಮೌಲ್ಯದ ಎಲ್ಲಾ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಎಸ್‌.ಜಾಹ್ನವಿ ಹೇಳಿದರು.

ಇಲ್ಲಿ ಬುಧವಾರ ವಶಪಡಿಸಿಕೊಂಡ ಆಭರಣಗಳ ಸಹಿತ ಸುದ್ದಿಗೋಷ್ಠಿ ನಡೆಸಿದ ಅವರು, ಮಧ್ಯಪ್ರದೇಶದ ಥಾರ್ ಜಿಲ್ಲೆಯತ ಜಿಲ್ಯ ಅಲಿಯಾಸ್‌ ಜೀಲು (26) ಮತ್ತು ರಾಕೇಶ್ ಪವಾರ್‌ (22) ಎಂಬುವವರನ್ನು ಬಂಧಿಸಲಾಗಿದೆ, ಕದ್ದ ಎಲ್ಲ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹರಪನಹಳ್ಳಿ ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿ ಶಾಸಕಿ ಲತಾ ಅವರ ಕಚೇರಿ ಇದ್ದು, ಗೋದ್ರೇಜ್ ಬೀರುವಿನಲ್ಲಿ ಅವರು ಈ ಆಭರಣಗಳನ್ನು ಇಟ್ಟಿದ್ದರು. ಜುಲೈ 17ರಂದು ಮಧ್ಯರಾತ್ರಿ 1ರಿಂದ 4 ಗಂಟೆ ನಡುವೆ ಕಚೇರಿಯ ಬಾಗಿಲಿನ ಬೀಗ, ಬೀರುವಿನ ಬೀಗ ಮುರಿದು ಆಭರಣ ದೋಚಿದ್ದರು. ಕಳ್ಳರ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಮಧ್ಯಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ. ಅವರು ಆಭರಣಗಳನ್ನು ಮಾರಾಟ ಮಾಡಿರಲಿಲ್ಲ. ಒಂದೆಡೆ ಬಚ್ಚಿಟ್ಟಿದ್ದ ಆಭರಣಗಳನ್ನು ಹಾಗೆಯೇ ನೀಡಿದ್ದು, ಎಲ್ಲವೂ ಇದೀಗ ಶಾಸಕಿ ಅವರಿಗೆ ಮರಳಿ ಸಿಕ್ಕಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ADVERTISEMENT

ಎಎಸ್‌ಪಿ ಜಿ.ಮಂಜುನಾಥ್‌, ಹರಪನಹಳ್ಳಿ ಇನ್‌ಸ್ಪೆಕ್ಟರ್‌ ಮಹಾಂತೇಶ ಜಿ.ಸಜ್ಜನ್‌, ಪಿಎಸ್‌ಐ ಶಂಭುಲಿಂಗ ಹಿರೇಮಠ, ಕಾರ್ಯಾಚರಣೆಯಲ್ಲಿ ಭಾಗಿಯಾಧ ಇತರ ಸಿಬ್ಬಂದಿ ಇದ್ದರು. ಎಲ್ಲರಿಗೂ ಬಹುಮಾನ ನೀಡುವುದಾಗಿ ಎಸ್‌ಪಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.