ADVERTISEMENT

ಹಂಪಿ: ಮಾತಂಗ ಬೆಟ್ಟದ ಕಲ್ಲು ಕೊರಕಲಿಗೆ ಬಿದ್ದ ಪ್ರವಾಸಿಗನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 11:46 IST
Last Updated 8 ಜೂನ್ 2025, 11:46 IST
<div class="paragraphs"><p>ಪ್ರವಾಸಿಗನೊಂದಿಗೆ ರಕ್ಷಣಾ ತಂಡ</p></div>

ಪ್ರವಾಸಿಗನೊಂದಿಗೆ ರಕ್ಷಣಾ ತಂಡ

   

ಹೊಸಪೇಟೆ (ವಿಜಯನಗರ): ಹಂಪಿಯ ಮಾತಂಗ ಬೆಟ್ಟದ ಕಲ್ಲಿನ ಕೊರಕಲಿಗೆ ಕಾಲು ಜಾರಿ ಬಿದ್ದ ಪ್ರವಾಸಿಗನೊಬ್ಬನನ್ನು ಸ್ಥಳೀಯ ಪೊಲೀಸರು ಹಾಗೂ ಹಂಪಿ ಟೂರಿಸ್ಟ್ ಹೆಲ್ಪ್‌ಲೈನ್‌ ತಂಡದವರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಮಧ್ಯಪ್ರದೇಶ ಭೋಪಾಲ್‌ನ ಪರ್ವ ಅಸತ್‌ (18) ಎಂಬಾತ ಹಂಪಿಗೆ ಬಂದವನು ಮಾತಂಗ ಬೆಟ್ಟ ಏರುತ್ತಿದ್ದ. ಆಗ ಕಾಲು ಜಾರಿ ಗುಹೆ ಮಾದರಿಯ ಕೊರಕಲಿಗೆ ಬಿದ್ದಿದ್ದ. ಇದನ್ನು ಗಮನಿಸಿದ ಇತರ ಪ್ರವಾಸಿಗರು ತಕ್ಷಣ ಹಂಪಿ ಟೂರಿಸ್ಟ್‌ ಹೆಲ್ಪ್‌ಲೈನ್‌ ತಂಡಕ್ಕೆ ಮಾಹಿತಿ ನೀಡಿದರು. 

ADVERTISEMENT

ಹಗ್ಗ ಸಹಿತ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಮತ್ತು ಹೆಲ್ಪ್‌ಲೈನ್ ತಂಡದವರು ಪ್ರವಾಸಿಗನನ್ನು ಸುರಕ್ಷಿತವಾಗಿ ಮೇಲೆ ತಂದರು. ರಕ್ಷಣಾ ಕಾರ್ಯಾಚರಣೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ಪ್ರವಾಸಿಗರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ವಿಶ್ವನಾಥ ಇತರರು ಸಹ ಸಹಕರಿಸಿದರು.

ಪ್ರವಾಸಿಗರ ದಂಡು: ಈ ಮಧ್ಯೆ, ಶನಿವಾರ ಮತ್ತು ಭಾನುವಾರ ಹಂಪಿಯಲ್ಲಿ ಪ್ರವಾಸಿಗರ ದಂಡು ಕಾಣಿಸಿತು. ಶನಿವಾರ ವಾಹನ ನಿಲುಗಡೆ ಸ್ಥಳಗಳೆಲ್ಲ ಭರ್ತಿಯಾಗಿತ್ತು. ಭಾನುವಾರ ಸಹ ಬಹುತೇಕ ಅಷ್ಟೇ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರು. ಒಂದು ಅಂದಾಜಿನ ಪ್ರಕಾರ ಶನಿವಾರ 50 ಸಾವಿರಕ್ಕಿಂತ ಅಧಿಕ ಹಾಗೂ ಭಾನುವಾರ 40 ಸಾವಿರಕ್ಕಿಂತ ಅಧಿಕ ಪ್ರವಾಸಿಗರು ಹಂಪಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವಾರದವರೆಗೆ ಸುರಿದ ಉತ್ತಮ ಮಳೆಯಿಂದ ಹಂಪಿ ಪರಿಸರದಲ್ಲಿ ಇದೀಗ ಹಸಿರು ನಳನಳಿಸುತ್ತಿದೆ. ಬಿಸಿಲಿನ ಝಳವೂ ಅಷ್ಟಾಗಿ ಇಲ್ಲದ ಕಾರಣ ಪ್ರವಾಸಿಗರಿಗೆ ಭೇಟಿಗೆ ಉತ್ತಮ ವಾತಾವರಣ ನಿರ್ಮಿಸಿದೆ. ಶಾಲಾ, ಕಾಲೇಜುಗಳು ಆರಂಭವಾಗಿದ್ದರೂ, ವಾರಾಂತ್ಯಗಳಲ್ಲಿ ಪ್ರವಾಸಿಗರು, ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುವುದು ಕಳೆದ ವಾರದಿಂದ ಕಂಡುಬಂದಿದೆ. ಸಾಮಾನ್ಯವಾಗಿ ಹಂಪಿಗೆ ಅಕ್ಟೋಬರ್‌ನಿಂದ ಫೆಬ್ರುವರಿ ತನಕ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.