ADVERTISEMENT

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ

ಬ್ಯಾಸಿಗಿದೇರಿಯ 2 ಶಾಲೆಗಳು ವಿವಾದಗಳ ಕೇಂದ್ರಗಳು: ಕಸ್ತೂರಬಾ ವಸತಿ ಶಾಲೆ ಪ್ರವೇಶಕ್ಕೆ ದರ ನಿಗದಿ

ಸಿ.ಶಿವಾನಂದ
Published 2 ಜುಲೈ 2025, 5:47 IST
Last Updated 2 ಜುಲೈ 2025, 5:47 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿ ಒಂದೇ ಕ್ಯಾಂಪಸ್‍ನಲ್ಲಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಕಸ್ತೂರಬಾ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಎರಡೂ ವಿವಾದಗಳ ಕೇಂದ್ರಗಳಾಗಿವೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತಲೂ ಹೆಚ್ಚು ವಸೂಲಿ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳ ಪಾಲಕರು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ 485 ವಿದ್ಯಾರ್ಥಿಗಳಿದ್ದಾರೆ.

ಎಂ.ರಾಮಪ್ಪ ಎಂಬುವರು ಜಿಲ್ಲಾಧಿಕಾರಿ ಅವರಿಗೆ ಬರೆದಿರುವ ಕೈ ಬರಹದ ಪತ್ರವೊಂದು ಗಮನ ಸೆಳೆದಿದೆ. 8ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕೆ ₹70 ಶುಲ್ಕ ನಿಗದಿಯಾಗಿದ್ದರೂ ಅವರಿಂದ ₹ 300ರಿಂದ ₹500ರವರೆಗೂ ವಸೂಲಿ ಮಾಡಲಾಗಿದೆ, ಬಾಲಕಿಯರಿಗೆ ಸರಿಯಾದ ಶೌಚಾಲಯ ಇಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಪತ್ರದಲ್ಲಿ ನಮೂದಾಗಿದೆ.

ADVERTISEMENT

8ನೇ ತರಗತಿಯಲ್ಲಿ 115 ವಿದ್ಯಾರ್ಥಿಗಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು, ಎಲ್ಲ ಜಾತಿಯ ಬಾಲಕಿಯರು, ಆದಾಯ ₹2 ಲಕ್ಷಕ್ಕಿಂತ ಕೆಳಗಿರುವ ಪ್ರವರ್ಗ-1ರ ವಿದ್ಯಾರ್ಥಿಗಳು, ₹44,500 ವಾರ್ಷಿಕ ಆದಾಯದ ಒಳಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದರೂ ಎಲ್ಲ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜಾತಿ ಮತ್ತು ಆದಾಯ ಪತ್ರಗಳನ್ನು ಸಲ್ಲಿಸಿದ್ದರೂ ಯಾವುದೇ ರಿಯಾಯಿತಿ ನೀಡದೆ ಪಾಲಕರು ಮತ್ತು ಪೋಷಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಾಲೆಯ ಶಿಕ್ಷಕರೊಬ್ಬರು ತಿಳಿಸಿದರು.

ಮುಖ್ಯ ಶಿಕ್ಷಕ ಪಿ.ನಾಗರಾಜ ಪ್ರತಿಕ್ರಿಯಿಸಿ, ‘ಯಾರಿಂದಲೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಿಲ್ಲ, ಪಾಲಕರು ಮತ್ತು ಶಿಕ್ಷಕರು ಮಾಡಿರುವ ಆರೋಪ ಸುಳ್ಳು’ ಎಂದು ಹೇಳಿದ್ದಾರೆ.

ಕಸ್ತೂರಬಾ ಬಾಲಿಕಾ ವಿದ್ಯಾಲಯ: ಬ್ಯಾಸಿಗಿದೇರಿ ಗ್ರಾಮದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯದಲ್ಲಿ ಬಾಲಕಿಯರಿಗೆ ಹೊಸದಾಗಿ ಪ್ರವೇಶ ನೀಡಲು ಪಾಲಕರಿಂದ ಶಾಲೆಯ ಶಿಕ್ಷಕಿ ಮತ್ತು ಮೇಲ್ವಿಚಾರಕರು ಸಾವಿರಾರು ರೂಪಾಯಿ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. 6ನೇ ತರಗತಿಗೆ ದಾಖಲಿಸುವ ವಿದ್ಯಾರ್ಥಿಗಳಿಂದ ₹3 ಸಾವಿರದಿಂದ ₹5ಸಾವಿರದವರೆಗೂ ಪಡೆದಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಸಿಗಿದೇರಿ ಗ್ರಾಮದಲ್ಲಿರುವ ಕಸ್ತೂರಬಾ ಬಾಲಿಕಾ ವಿದ್ಯಾಲಯ
ಪಾಲಕರೊಬ್ಬರು ಶಾಲೆಯ ಅವ್ಯವಸ್ಥೆಯ ಕುರಿತು ಬರೆದಿರುವ ಪತ್ರ ವ್ಯಾಟ್ಸ್‌ಆ್ಯಪ್‍ಗಳಲ್ಲಿ ಹರಿದಾಡಿದೆ. ಈ ಕುರಿತು ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿ ವಿವರಣೆ ಪಡೆಯಲಾಗುವುದು
-ಮೈಲೇಶ್ ಬೇವೂರ್, ಕ್ಷೇತ್ರ ಶಿಕ್ಷಣಾಧಿಕಾರಿ
ಕಡು ಬಡತನದಲ್ಲಿರುವ ವಿದ್ಯಾರ್ಥಿನಿಯೊಬ್ಬರಿಂದ ₹ 3ಸಾವಿರ ಪಡೆದು ಕಸ್ತೂರಬಾ ಶಾಲೆಯಲ್ಲಿ ಪ್ರವೇಶ ನೀಡಲಾಗಿದೆ. ಇದಕ್ಕೆ ಫೋನ್‌ ಪೇ ಸಾಕ್ಷ್ಯ ಇದೆ. ಇತರ ಅನೇಕ ಸಾಕ್ಷಿಗಳು ದೊರೆಯುತ್ತವೆ
-ಹೊಸಮನಿ ಮಂಜುನಾಥ, ಬ್ಯಾಸಿಗಿದೇರಿ ಗ್ರಾಮಸ್ಥ
ಕಸ್ತೂರ ಬಾ ಶಾಲೆಯ ಪ್ರವೇಶಕ್ಕೆ ವಿದ್ಯಾರ್ಥಿಗಳ ಪಾಲಕರಿಂದ ಯಾವುದೇ ಶುಲ್ಕ ವಸೂಲಿ ಮಾಡಿಲ್ಲ ಗ್ರಾಮಸ್ಥರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ.
-ಟಿ.ಸಿ.ಎಂ. ಭಾಗ್ಯದೇವಿ ಪ್ರಭಾರ ಮುಖ್ಯ ಶಿಕ್ಷಕಿ ಕಸ್ತೂರಬಾ ಬಾಲಿಕಾ ವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.