ADVERTISEMENT

ಹೊಸಪೇಟೆ: ಕಾರ್ಮಿಕರು, ಪರೀಕ್ಷೆ ಬರೆಯುವವರ ಪ್ರಯಾಣಕ್ಕೆ ಅನುಮತಿ

ವೀಕೆಂಡ್‌ ಕರ್ಫ್ಯೂ: ಮದುವೆಗಿಲ್ಲ ಅಡ್ಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 14:53 IST
Last Updated 7 ಜನವರಿ 2022, 14:53 IST
ಅನಿರುದ್ಧ್‌ ಪಿ. ಶ್ರವಣ್‌
ಅನಿರುದ್ಧ್‌ ಪಿ. ಶ್ರವಣ್‌    

ಹೊಸಪೇಟೆ (ವಿಜಯನಗರ): ವೀಕೆಂಡ್‌ ಕರ್ಫ್ಯೂ ಸಂದರ್ಭದಲ್ಲಿ ಮದುವೆ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಹೊರಾಂಗಣದಲ್ಲಿ 200 ಹಾಗೂ ಒಳಾಂಗಣದಲ್ಲಿ 100 ಜನ ಮೀರದಂತೆ ಕೋವಿಡ್‌ ಮಾರ್ಗಸೂಚಿ ಪ್ರಕಾರ ಮದುವೆ ಆಯೋಜಿಸಬಹುದು. ಅದೇ ರೀತಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರ ತೋರಿಸಿ ಪ್ರಯಾಣಿಸಬಹುದು ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಶುಕ್ರವಾರ ತಿಳಿಸಿದ್ದಾರೆ.

ಎಲ್ಲ ಸಾರ್ವಜನಿಕ ಉದ್ಯಾನಗಳಲ್ಲಿ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಎಲ್ಲ ರೀತಿಯ ಕೈಗಾರಿಕೆಗಳನ್ನು ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಅಲ್ಲಿ ಕೆಲಸ ನಿರ್ವಹಿಸುವ ನೌಕರರು ಕೈಗಾರಿಕೆಯ ಐ.ಡಿ. ಕಾರ್ಡ್‌ ತೋರಿಸಿ ಸಂಚರಿಸಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ತುರ್ತು ವೈದ್ಯಕೀಯ ಚಿಕಿತ್ಸೆ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವವರು ಸೂಕ್ತ ದಾಖಲೆಗಳನ್ನು ತೋರಿಸಿ ಓಡಾಡಬಹುದು. ರೆಸ್ಟೊರೆಂಟ್‌, ಹೋಟೆಲ್‌ಗಳಿಂದ ಆಹಾರವನ್ನು ಪಾರ್ಸೆಲ್‌ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ. ಆಹಾರ, ದಿನಸಿ, ಹಣ್ಣು, ಹಾಲು, ಮಾಂಸದಂಗಡಿ, ನ್ಯಾಯಬೆಲೆ ಅಂಗಡಿ, ಬೀದಿ ಬದಿ ವ್ಯಾಪಾರಿಗಳಿಗೆ ಎಂದಿನಂತೆ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ. ರೈಲು, ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಗಳು ಸಂಚರಿಸಬಹುದು. ಆದರೆ, ಪ್ರಯಾಣಿಕರು ಪ್ರಯಾಣದ ಟಿಕೆಟ್‌ ತೋರಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಹಂಪಿ ಭೇಟಿ ನಿರ್ಬಂಧ: 30 ಚೆಕ್‌ ಪೋಸ್ಟ್‌ ಸ್ಥಾಪನೆ
‘ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ 30 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

‘ಹೊಸಪೇಟೆ ಉಪವಿಭಾಗದ ವ್ಯಾಪ್ತಿಯಲ್ಲಿ 11, ಹರಪನಹಳ್ಳಿಯಲ್ಲಿ 8, ಕೂಡ್ಲಿಗಿ ವ್ಯಾಪ್ತಿಯಲ್ಲಿ 7, ಹಂಪಿಯಲ್ಲಿ ನಾಲ್ಕು ಕಡೆ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಶನಿವಾರ, ಭಾನುವಾರ ಪ್ರವಾಸಿಗರ ಹಂಪಿ ಭೇಟಿಗೆ ನಿರ್ಬಂಧಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.