ADVERTISEMENT

Jobs: ಕ್ರೀಡಾ ಪ್ರತಿಭೆಗಳಿಗೆ ಬಿಎಸ್‌ಎಫ್‌ನಲ್ಲಿ 549 ಹುದ್ದೆಗಳು- ವಿವರ ಇಲ್ಲಿದೆ

Manjunath C Bhadrashetti
Published 27 ಡಿಸೆಂಬರ್ 2025, 11:28 IST
Last Updated 27 ಡಿಸೆಂಬರ್ 2025, 11:28 IST
<div class="paragraphs"><p>ಬಿಎಸ್‌ಎಫ್‌ ಯೋಧರು</p></div>

ಬಿಎಸ್‌ಎಫ್‌ ಯೋಧರು

   

ಬಿಎಸ್‌ಎಫ್‌

ಬೆಂಗಳೂರು: ಕ್ರೀಡೆಯಲ್ಲಿ ಸಾಧನೆ ಮಾಡಿ ಅದರ ಮೂಲಕವೇ ಉದ್ಯೋಗ ಕಂಡುಕೊಂಡು ಮತ್ತಷ್ಟು ಸಾಧನೆ ಮಾಡಲು ಹಾತೊರೆಯುತ್ತಿರುವ ದೇಶದ ಯುವಕ–ಯುವತಿಯರಿಗೆ ಸುವರ್ಣವಕಾಶವೊಂದು ಬಂದೊದಗಿದೆ.

ADVERTISEMENT

ಕೇಂದ್ರದ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರೀಯ 'ಸಶಸ್ತ್ರ ಮೀಸಲು ಪೊಲೀಸ್ ಪಡೆ'ಯ ಒಂದು (CAPF) ಬಲಿಷ್ಠ ಘಟಕವಾಗಿರುವ 'ಗಡಿ ಭದ್ರತಾ ಪಡೆ'ಯಲ್ಲಿ (BSF) ಯೋಧರಾಗಿ ಸೇವೆ ಸಲ್ಲಿಸಲು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಯುವಕ–ಯುವತಿಯರಿಗಾಗಿಯೇ 549 ‘ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ–ಜಿಡಿ’ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇದರ ವಿವರಗಳನ್ನು ಇಲ್ಲಿ ನೋಡೋಣ.

ಕ್ರೀಡಾ ಕೋಟಾದಲ್ಲಿ 549 ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇದರಲ್ಲಿ 277 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಹಾಗೂ 272 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿವೆ.

ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೇ ಡಿಸೆಂಬರ್ 27 ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮುಂದಿನ ತಿಂಗಳು ಜನವರಿ 15 ಕಡೆಯ ದಿನ.

ಶೈಕ್ಷಣಿಕ ಹಾಗೂ ಕ್ರೀಡಾ ಅರ್ಹತೆ ಏನು?

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಅಥವಾ ಮೆಟ್ರಿಕುಲೇಷನ್ ಪಾಸಾಗಿರಬೇಕು. ಸೂಚಿತ (ಪಟ್ಟಿ ನೋಡಿ) ಕ್ರೀಡಾ ವಿಭಾಗಗಳಲ್ಲಿ ಅಭ್ಯರ್ಥಿಗಳು ಅಂತರರಾಷ್ಟ್ರೀಯ ಅಥವಾ ರಾಷ್ಟ್ರೀಯ ಮಟ್ಟದ ಪದಕ ಪಡೆದಿರಬೇಕು. ಈ ನಿಯಮ ಗುಂಪು ಆಟಗಳಿಗೂ ಅನ್ವಯ ಆಗುತ್ತದೆ.

ನ್ಯಾಷನಲ್ ಸ್ಪೋರ್ಟ್ ಫೆಡರೇಷನ್ (NSF), ಇಂಡಿಯನ್ ಒಲಿಂಪಿಕ್ ಅಸೋಶಿಯೆಷನ್ (IOA) ಹಾಗೂ ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಅಥವಾ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ಹಾಗೂ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಪದಕಗಳನ್ನು ಪಡೆದಿರಬೇಕು. ಅಥವಾ ಅಂತಹ ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದರೂ ಅರ್ಜಿ ಸಲ್ಲಿಸಬಹುದು.

ಗಮನಿಸಬೇಕಾದ ಸಂಗತಿ ಎಂದರೆ ಅಭ್ಯರ್ಥಿಗಳು ಕ್ರೀಡಾಕೂಟಗಳಲ್ಲಿ ಈ ಪದಕಗಳನ್ನು ಪಡೆದು ಎರಡು ವರ್ಷಗಳಿಗಿಂತ ಹೆಚ್ಚಿಗೆ ಅವಧಿ ಮೀರಿರಬಾರದು.

ವಯೋಮಿತಿ ಏನಿದೆ?

ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18. ಗರಿಷ್ಠ ವಯೋಮಿತಿ 23. ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅಥ್ಲೆಟಿಕ್ಸ್, ಈಜು ಹಾಗೂ ಕುಸ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಹೆಚ್ಚು ಹುದ್ದೆಗಳಿವೆ.

ಸ್ಪರ್ಧಾತ್ಮ ಪರೀಕ್ಷೆ ಇಲ್ಲ!

ವಿಶೇಷ ಎಂದರೆ ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಲಿಖಿತ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಇರುವುದಿಲ್ಲ. ನಿಯಮಾನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಅವರು ವಿವಿಧ ಕ್ರೀಡಾಕೂಟಗಳಲ್ಲಿ ಪಡೆದ ಪದಕಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ಕನಿಷ್ಠ ಅಂಕಗಳನ್ನು ಪಡೆದ ಎಲ್ಲರನ್ನೂ ಮುಂದಿನ ಹಂತಕ್ಕೆ ಪರಿಗಣಿಸಲಾಗುತ್ತದೆ. ಮೊದಲನೇ ಹಂತವಾಗಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಎರಡನೇ ಹಂತದಲ್ಲಿ ದೈಹಿಕ ಅರ್ಹತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ (ETPST) ನಡೆಯಲಿದೆ. ನಂತರ ಮೆರಿಟ್ ಆಧಾರದ ಮೇಲೆ ಅರ್ಹರ ಪಟ್ಟಿ ಪ್ರಕಟಿಸಲಾಗುತ್ತದೆ. ತದನಂತರ ವೈದ್ಯಕೀಯ ಪರೀಕ್ಷೆ ನಡೆದು ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಲಾಗುತ್ತದೆ. ಯಾವುದೇ ಸಂದರ್ಶನ ಇರುವುದಿಲ್ಲ.

ವೇತನ ಎಷ್ಟು?

ಕಾನ್‌ಸ್ಟೆಬಲ್ ಜನರಲ್ ಡ್ಯೂಟಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 9 ತಿಂಗಳು ಕಠಿಣ ತರಬೇತಿ ಇರಲಿದೆ. ದೇಶದಾದ್ಯಂತ ಎಲ್ಲಿಗೆ ಬೇಕಾದರೂ ಪೋಸ್ಟಿಂಗ್ ಸಿಗಬಹುದು. ಇವರಿಗೆ 7ನೇ ವೇತನ ಆಯೋಗದ ವರದಿ ಪ್ರಕಾರ ಗರಿಷ್ಠ ₹69,100 ವೇತನ ಹಾಗೂ ಇತರ ಭತ್ಯೆಗಳು ಸಿಗಲಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಹ ಅಭ್ಯರ್ಥಿಗಳು ಬಿಎಸ್‌ಎಫ್‌ನ ಅಧಿಕೃತ ವೆಬ್‌ಸೈಟ್ https://rectt.bsf.gov.in/ ಗೆ ಭೇಟಿ ನೀಡಿ ವಿವರವಾದ ಅಧಿಸೂಚನೆ ನೋಡಿಕೊಂಡು ಜನವರಿ 15ರೊಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಗಳು ವರ್ಗೀಕರಣದ ಪಟ್ಟಿ ಇಲ್ಲಿದೆ..

ಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.