ADVERTISEMENT

ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಡನಾಟ ಹೆಚ್ಚಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 21:15 IST
Last Updated 9 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೆಲವು ಪ್ರೌಢಶಾಲೆ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಓದುವ ಅಭಿರುಚಿಯ ಬಗ್ಗೆ ವಿಚಾರಿಸಿದ್ದಿದೆ. ಯಾವ ಪುಸ್ತಕಗಳನ್ನು ಓದಿದ್ದೀರಿ. ಅಂಥವರು ಕೈಯೆತ್ತಿ ಎಂದಾಗ ಯಾವ ವಿದ್ಯಾರ್ಥಿಯೂ ಕೈ ಎತ್ತಲಿಲ್ಲ.

ಓದುವ ಹವ್ಯಾಸವೇ ಇಲ್ಲದೇ ಮಕ್ಕಳ ಕಲ್ಪನಾಲೋಕ ಎಷ್ಟು ಸೊರಗಿದೆ. ಈ ಓದುವ ಅಭಿರುಚಿ ಮಕ್ಕಳಲ್ಲಿ ಅಷ್ಟೇ ಅಲ್ಲ ಅನೇಕ ಮಂದಿ ದೊಡ್ಡವರಲ್ಲಿಯೂ ಕಡಿಮೆಯಾಗಿದೆ. ಟಿ.ವಿ. ಮೊಬೈಲ್‌, ಕಂಪ್ಯೂಟರ್‌ಗಳಿಂದಾಗಿ ಪುರಸೊತ್ತಿಲ್ಲದ ಒತ್ತಡದ ಬದುಕು. ಓದುವ ಅಭ್ಯಾಸವಾದರೂ ಎಲ್ಲಿಂದ ಬರುತ್ತದೆ?

‘ಮನೆಯ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಪೋಷಕರಾದ ನಾವುಗಳು ಮನೆಗಳಲ್ಲಿ ಪುಸ್ತಕ ಸಂಗ್ರಹಿಸಿ ಆಗಾಗ ಓದುತ್ತಿದ್ದರೆ ಮಕ್ಕಳಲ್ಲೂ ಓದುವ ಅಭಿರುಚಿ ಬರುತ್ತದೆ. ಮನೆಯಲ್ಲಿಯೇ ಈ ವಾತಾವರಣ ಇಲ್ಲದಿದ್ದಾಗ ಶಿಕ್ಷಕರಾದರೂ ಈ ಕರ್ತವ್ಯವನ್ನು ಪಾಲಿಸಬೇಕು.

ADVERTISEMENT

ಬಹಳಷ್ಟು ಶಾಲೆಗಳಲ್ಲಿ ಗ್ರಂಥಾಲಯಗಳಿರುತ್ತವೆ. ಆದರೆ, ಅದರಲ್ಲಿನ ಪುಸ್ತಕಗಳು ಮಕ್ಕಳ ಕೈಗೆಟುವಂತಿರುವುದಿಲ್ಲ. ಪ್ರತಿ ಶಾಲೆಯಲ್ಲಿ ಮಕ್ಕಳ ವಯೋಮಾನಕ್ಕೆ ಅನುಗುಣವಾದ ಪುಸ್ತಕಗಳನ್ನು ಸಂಗ್ರಹಿಸಬೇಕು. ದಾನಿಗಳಿಂದ, ಇಲಾಖೆಯ ಅನುದಾನದಿಂದ ಉತ್ತಮ ಪುಸ್ತಕ ಖರೀದಿಸಬೇಕು. ಕಥೆ, ಕವಿತೆ, ಹಾಸ್ಯ, ಚಿತ್ರಕಲೆ, ಗಾದೆ, ಒಗಟು, ವ್ಯಕ್ತಿ ಪರಿಚಯ, ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಖರೀದಿಸಬೇಕು. ಕಪಾಟಿನಲ್ಲಿ ಪುಸ್ತಕವಿಟ್ಟು ಭದ್ರ ಪಡಿಸುವ ಬದಲು ಮಕ್ಕಳ ಕೈಗೆ ಸುಲಭವಾಗಿ ಸಿಗುವಂತೆ ಇಡಬೇಕು. ಸೂಕ್ತ ಕೊಠಡಿಯಲ್ಲಿ ಕಪಾಟು ಇಟ್ಟು, ಪುಸ್ತಕಗಳನ್ನು ಮಕ್ಕಳೇ ಜೋಡಿಸುವಂತಾಗಬೇಕು. ಈ ಕೆಲಸಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಬೇಕು. ಗ್ರಂಥಾಲಯದ ನಿರ್ವಹಣೆ ಜವಾಬ್ದಾರಿಯನ್ನು ಹಿರಿಯ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ವಹಿಸಬೇಕು.

ಪುಸ್ತಕದ ಬಳಕೆಗೆ ಹೀಗೆ ಮಾಡಿ

*ನಾಲ್ಕು ಅಥವಾ ಐದು ವಿದ್ಯಾರ್ಥಿಗಳು ಕಪಾಟಿನ ಹತ್ತಿರ ಹೋಗಿ ತಮಗೆ ಬೇಕಾದ ಪುಸ್ತಕವನ್ನು ಆರಿಸಿಕೊಳ್ಳಬೇಕು.

*ಒಂದು ನೋಂದಣಿ ಪುಸ್ತಕ ಅಲ್ಲಿಟ್ಟು, ಅದರಲ್ಲಿ ಕ್ರಮ ಸಂಖ್ಯೆ/ದಿನಾಂಕ/ವಿದ್ಯಾರ್ಥಿಯ ಹೆಸರು/ತರಗತಿ/ಆರಿಸಿಕೊಂಡ ಪುಸ್ತಕದ ಹೆಸರು/ಲೇಖಕರ ಹೆಸರು/ಪುಸ್ತಕದ ಬೆಲೆ/ವಿದ್ಯಾರ್ಥಿಯ ಸಹಿ ಇರಲಿ.

*ವಿದ್ಯಾರ್ಥಿಗಳು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡ ಮೇಲೆ ಶಿಕ್ಷಕರಿಲ್ಲದ ಅವಧಿಯಲ್ಲಿ ತರಗತಿಯ ಹೊರಗೆ ಅಥವಾ ಖಾಲಿ ಇರುವ ಸೂಕ್ತ ಜಾಗದಲ್ಲಿ ಕುಳಿತು ಓದುವಂತಾಗಬೇಕು.

*ವಿದ್ಯಾರ್ಥಿಗಳು ಓದಿದ ಮೇಲೆ ಪ್ರತ್ಯೇಕ ಪುಸ್ತಕದಲ್ಲಿ ಓದಿದ ಪುಸ್ತಕದ ಹೆಸರು ಅದರ ಸಾರಾಂಶವನ್ನು ಬರೆಯಬೇಕು.

ವಾರಕ್ಕೊಮ್ಮೆ ವಿತರಣೆ

ವಾರಕ್ಕೊಮ್ಮೆ ತರಗತಿವಾರು ಅಂದರೆ ನಾಲ್ಕನೇ ತರಗತಿಯಿಂದ ಮೇಲ್ಪಟ್ಟ ತರಗತಿಗಳ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಬೇಕು. ಆಗಲೂ ಸಹ ಮಕ್ಕಳೇ ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರವಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.