
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗಳ ಕುರಿತು ಭಾರತದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಬಾಲಿವುಡ್ ನಟ, ನಟಿಯರು ಕೂಡ ದೀಪು ಚಂದ್ರ ದಾಸ್ ಹತ್ಯೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ದೀರ್ಘ ಪೋಸ್ಟ್ ಹಾಕಿದ್ದಾರೆ. ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಅನಾಗರಿಕ ಕೃತ್ಯ. ಅವರ ಅಮಾನವೀಯತೆ, ಸಾರ್ವಜನಿಕ ಗುಂಪು ಹತ್ಯೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಅದರ ಬಗ್ಗೆ ಓದಿ, ವಿಡಿಯೊಗಳನ್ನು ನೋಡಿ ತಿಳಿದುಕೊಳ್ಳಿ. ಅದನ್ನು ಪ್ರಶ್ನಿಸುವುದು ಅನಿವಾರ್ಯ. ಈ ಘಟನೆಯ ನಂತರವೂ ನಿಮಗೆ ಕೋಪ ಬರದಿದ್ದರೆ, ನಮಗೆ ತಿಳಿಯುವ ಮೊದಲೇ ನಮ್ಮನ್ನು ನಾಶಮಾಡುವುದು ಖಚಿತ. ಯಾವುದೇ ರೂಪಗಳಲ್ಲಾಗಲಿ ಕೋಮು ತಾರತಮ್ಯ ಮತ್ತು ಉಗ್ರವಾದವನ್ನು ಮೊದಲು ಖಂಡಿಸಬೇಕು’ ಎಂದು ಬರೆದಿದ್ದಾರೆ.
ಕಾಜಲ್ ಅಗರ್ವಾಲ್ ಕೂಡಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಎಲ್ಲರ ಕಣ್ಣುಗಳು ಬಾಂಗ್ಲಾದೇಶದ ಹಿಂದೂಗಳ ಮೇಲೆ‘ ಎಂಬ ಗ್ರಾಫಿಕ್ಸ್ ಅನ್ನು ಹಂಚಿಕೊಳ್ಳುವ ಮೂಲಕ ಬಾಂಗ್ಲಾದೇಶದ ಹಿಂದೂಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಒಬ್ಬ ವ್ಯಕ್ತಿಯನ್ನು ಬೆಂಕಿ ಹಚ್ಚಿ ಮರಕ್ಕೆ ನೇಣು ಹಾಕಲಾಗಿದೆ. ಇದು ಗುಂಪು ಹತ್ಯೆಯ ಬೀಕರತೆಯನ್ನು ತೋರಿಸುತ್ತದೆ. 'ಎಚ್ಚರ ಹಿಂದೂಗಳೆ, ಮೌನ ನಿಮ್ಮನ್ನು ಉಳಿಸುವುದಿಲ್ಲ' ಎಂದು ಬರೆದಿದ್ದಾರೆ.
ಗಾಯಕ ಟೋನಿ ಕಕ್ಕರ್ ಪೋಸ್ಟ್ ಮಾಡಿದ್ದು, ‘ಧರ್ಮದ ಆಧಾರದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡುವುದು ಎಷ್ಟು ಸರಿ? ಹಿಂದೂ-ಮುಸ್ಲಿಂ ಅಥವಾ ಇತರೆ ಯಾವುದೇ ಧರ್ಮದವರನ್ನು ಜಾತಿ ಆಧಾರಿತವಾಗಿ ತಾರತಮ್ಯ ಮಾಡಬಾರದು. ದೇವರು ಇದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾನೆ. ಪ್ರಾಣ ಕಳೆದುಕೊಂಡವನ ಬಗ್ಗೆ ಜನರು ಮಾತನಾಡಬೇಕು’ ಎಂದು ಬರೆದುಕೊಂಡಿದ್ದಾರೆ.
ಹಿರಿಯ ನಟಿ ಜಯಪ್ರದ ಕೂಡ ವಿಡಿಯೊ ಸಂದೇಶದ ಮೂಲಕ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘ದಾಸ್’ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಅವರು, ಗುಂಪು ಹತ್ಯೆ, ಕೇವಲ ಒಬ್ಬ ವ್ಯಕ್ತಿಯ ಮೇಲೆ ನಡೆದ ದಾಳಿಯಲ್ಲ, ಅದು ಹಿಂದೂ ಧರ್ಮದ ಮೇಲೆ ನಡೆದ ದಾಳಿಯಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ಮೌನವಾಗಿರುವವರನ್ನು ಪ್ರಶ್ನೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.