ADVERTISEMENT

ಕಾಂತಾರ: ದೈವಕ್ಕೆ ಅವಮಾನ; ನಟ ರಣ್‌ವೀರ್‌ ವಿರುದ್ಧ #BoycottDhurandhar ಅಭಿಯಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 5:13 IST
Last Updated 2 ಡಿಸೆಂಬರ್ 2025, 5:13 IST
<div class="paragraphs"><p>ಕಾಂತಾರ ಸಿನಿಮಾದ ದೃಶ್ಯವನ್ನು ನಕಲು ಮಾಡಿದ್ದ ನಟ ರಣ್‌ವೀರ್‌ ಸಿಂಗ್‌ </p></div>

ಕಾಂತಾರ ಸಿನಿಮಾದ ದೃಶ್ಯವನ್ನು ನಕಲು ಮಾಡಿದ್ದ ನಟ ರಣ್‌ವೀರ್‌ ಸಿಂಗ್‌

   

ಬೆಂಗಳೂರು: ಪಣಜಿಯಲ್ಲಿ ಶುಕ್ರವಾರ(ಆ.28) ನಡೆದ 56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(IFFI–ಇಫಿ) ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಪ್ರೀಕ್ವೆಲ್‌ನಲ್ಲಿ ಬರುವ ಚಾವುಂಡಿ ದೈವವನ್ನು ‘ದೆವ್ವ’(ಘೋಸ್ಟ್‌) ಎಂದು ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ಹೇಳಿರುವುದು ವಿವಾದ ಸೃಷ್ಟಿಸಿದ್ದು, ತುಳುನಾಡಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ.

ತುಳುನಾಡಿದ ಜನರಿಗೆ, ಸಂಪ್ರದಾಯಕ್ಕೆ ರಣ್‌ವೀರ್‌ ಸಿಂಗ್‌ ಅಗೌರವ ತೋರಿಸಿದ್ದು, ತುಳುನಾಡಿನ ಜನರನ್ನು ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ADVERTISEMENT

ಈ ನಡುವೆ ರಣ್‌ವೀರ್‌ ನಟನೆಯ ಮುಂಬರುವ ಧುರಂದರ್ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. 

‘ಧುರಂದರ್‌ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಬೇಕೆಂದಿದ್ದೆ. ಆದರೆ ಈಗ ಸಿನಿಮಾವನ್ನು ಬಹಿಷ್ಕರಿಸುತ್ತೇನೆ. ರಿಷಬ್‌ ಶೆಟ್ಟಿಯವರು ಈ ಬಗ್ಗೆ ನಿಲುವು ತೆಗೆದುಕೊಳ್ಳಬೇಕು’ ಎಂದು ‘ಎಕ್ಸ್‌’ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

‘ತುಳುನಾಡಿದ ಜನರಿಗೆ ಚಾವುಂಡಿ ದೈವವಾಗಿದೆ. ಯಾವುದೋ ಹಾಲೊವಿನ್ ದೆವ್ವವಲ್ಲ. ರಣ್‌ವೀರ್‌ ನೀವು ಪವಿತ್ರ ನಂಬಿಕೆಗಳನ್ನು ಅಪಹಾಸ್ಯ ಮಾಡಿ ನಕ್ಕಿದ್ದೀರಿ. ಇದು ಮನರಂಜನೆ ಅಲ್ಲ, ಸಂಸ್ಕೃತಿಯೊಂದರ ಬಗ್ಗೆ ತೋರಿದ ಕಡೆಗಣನೆ. ಅಜ್ಞಾನ ಮತ್ತು ದುರಹಂಕಾರದ ನಡೆಯಾಗಿದೆ. ಕಾಂತಾರ ಅಧ್ಯಾಯ 1 ಗೌರವಕ್ಕೆ ಅರ್ಹವಾಗಿದೆ, ನಿಮ್ಮ ಅಗ್ಗದ ಅಪಹಾಸ್ಯಕ್ಕಲ್ಲ’ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ #BoycottDhurandhar, #BoycottRanveerSingh ಎನ್ನುವ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಸೃಷ್ಟಿಸಿವೆ.

ಧುರಂದರ್‌ ಸಿನಿಮಾದಲ್ಲಿ ರಣ್‌ವೀರ್‌ ಸಿಂಗ್‌, ಸಂಜಯ್‌ ದತ್‌, ಅಕ್ಷಯ ಖನ್ನಾ, ಆರ್. ಮಾಧವನ್, ಅರ್ಜುನ್‌ ರಾಂಪಾಲ್‌, ಸಾರಾ ಅರ್ಜುನ್ ಸೇರಿ ಹಲವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಿ.5ರಂದು ತೆರೆ ಕಾಣಲು ಸಜ್ಜಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.