
ನಟ ಸುನೀಲ್ ಶೆಟ್ಟಿ
ಚಿತ್ರ ಕೃಪೆ: Anand Audio
ನಟ ರೂಪೇಶ್ ಶೆಟ್ಟಿ ಅವರ ‘ಜೈ‘ ಚಿತ್ರದ ಟ್ರೇಲರ್ ಅನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದ್ದಾರೆ. ಟ್ರೇಲರ್ ಬಿಡುಗಡೆ ಬಳಿಕ ‘ಪಿಲಿನಲಿಕೆ’ ವಾದ್ಯಕ್ಕೆ ಇವರು ಹೆಜ್ಜೆ ಹಾಕಿರುವುದನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಜನಸಾಮಾನ್ಯ ಹಾಗೂ ಜನಪ್ರತಿನಿಧಿಗಳ ನಡುವಿನ ಜಿದ್ದಾಜಿದ್ದಿ ಬಗ್ಗೆ ಈ ಚಿತ್ರದಲ್ಲಿ ಕಾಣಬಹುದಾಗಿದೆ. ‘ಜೈ’ ಚಿತ್ರದ ಪಾತ್ರ ಒಂದರಲ್ಲಿ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇನ್ನು ಇವರು ಹೇಳುವ ‘ಕಾಲು ಎಳೆಯೊದಲ್ಲ, ಕಾಲು ಹಿಡಿಯೋದು ನಮ್ಮ ಸಂಸ್ಕೃತಿ’ ಎನ್ನುವ ಡೈಲಾಗ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಟ ರೂಪೇಶ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗೋಡಿ, ಮಂಜುನಾಥ ಅತ್ತಾವರ, ಹಾಗೂ ದೀಕ್ಷಿತ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ಅವರು ಪತ್ರಕರ್ತೆಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ‘ಲವ್ ಯು’ ಹಾಡು ಪ್ರೇಕ್ಷಕರ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.