ಮುಂಬೈ: ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಮೊಸರು ಗಡಿಗೆ ಉತ್ಸವದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಮುಂಬರುವ ತಮ್ಮ ‘ಪರಮ ಸುಂದರಿ‘ ಚಿತ್ರದ ಪ್ರಚಾರದ ಸಲುವಾಗಿ ಮೊಸರು ಗಡಿಗೆ ಉತ್ಸವದಲ್ಲಿ ಜಾಹ್ನವಿ ಭಾಗಿಯಾಗಿದ್ದರು. ಈ ವೇಳೆ ಮೊಸರು ಗಡಿಗೆ ಹೊಡೆಯುವ ಸಂದರ್ಭದಲ್ಲಿ 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿದ್ದರು.
ಶನಿವಾರ ನಡೆದ ಕೃಷ್ಣ ಜನ್ಮಾಷ್ಟಮಿ ಆಚರಣೆಯಯಲ್ಲಿ ನಟಿ ಜಾಹ್ನವಿ ಕಪೂರ್ ಭಾಗಿಯಾಗಿ ಘೋಷಣೆಗಳನ್ನು ಕೂಗಿದ್ದರು. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು, ನೆಟ್ಟಿಗರು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಾಹ್ನವಿ ಕಪೂರ್, ಏನೇ ಮಾಡಿದರೂ ಟೀಕೆಗೆ ಒಳಗಾಗುತ್ತೇವೆ. ಇದು ಒಂದು ಸಮಸ್ಯೆಯಾಗಿದೆ. ನಾನು ಕೃಷ್ಣ ಜನ್ಮಾಷ್ಟಮಿಯಂದು ಮಾತ್ರವಲ್ಲ, ಪ್ರತಿದಿನ 'ಭಾರತ್ ಮಾತಾ ಕೀ ಜೈ' ಎನ್ನುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ ‘ಪರಮ ಸುಂದರಿ‘ ಚಿತ್ರ ಆಗಸ್ಟ್ 29ರಂದು ವಿಶ್ವದಾದ್ಯಂತ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ದಸ್ವಿ‘ ಖ್ಯಾತಿಯ ತುಷಾರ್ ಜಲೋಟಾ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ, ಈ ಚಿತ್ರದಲ್ಲಿ ಪ್ರೇಮಕಥೆ ಜತೆಗೆ ಸಂಘರ್ಷವೂ ಇರಲಿದ್ದು, ಚಿತ್ರ ವಿಭಿನ್ನವಾಗಿ ಮೂಡಿಬರಲಿದೆ. ಕೇರಳ ಸೇರಿದಂತೆ ವಿವಿಧ ಕಡೆ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.