ತೆಲುಗು ನಟ ಅಲ್ಲು ಅರ್ಜುನ್, ಉಪೇಂದ್ರ, ಲಹರಿ ವೇಲು
ಹೈದರಾಬಾದ್: ನಟ ಉಪೇಂದ್ರ ಹಾಗೂ ಚಿತ್ರ ನಿರ್ಮಾಪಕ ಲಹರಿ ವೇಲು ಅವರು ಇಂದು (ಶನಿವಾರ) ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ.
‘ಯುಐ’ ಸಿನಿಮಾ ಪ್ರಚಾರದ ಭಾಗವಾಗಿ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
‘ಪುಷ್ಪ–2’ ಚಿತ್ರ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಶುಕ್ರವಾರ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರಬಂದ ಅಲ್ಲು ಅರ್ಜುನ್ ನೇರವಾಗಿ ಮನೆಗೆ ಬಂದಿದ್ದರು. ಮನೆಗೆ ಹಲವು ನಟರು, ನಿರ್ಮಾಪಕರು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಉಪೇಂದ್ರ ಹಾಗೂ ಲಹರಿ ವೇಲು ಅವರೂ ಭೇಟಿಯಾಗಿದ್ದಾರೆ.
ಅಲ್ಲು ಅರ್ಜುನ್ ಮತ್ತು ಉಪೇಂದ್ರ ಅವರು ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
ಈಚೆಗೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ ನಡೆಯುತ್ತಿದ್ದಾಗ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಅಲ್ಲು ಅರ್ಜುನ್ ಅವರು ಆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ವೀಕ್ಷಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನರು ನುಗ್ಗಿ ಬಂದ ಕಾರಣ ಕಾಲ್ತುಳಿತ ಉಂಟಾಗಿತ್ತು.
35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ ಅವರ ಮಗ 9 ವರ್ಷದ ಶ್ರೀತೇಜ್ ಗಾಯಗೊಂಡಿದ್ದಾನೆ. ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಚಿತ್ರಮಂದಿರ, ಅಲ್ಲು ಅರ್ಜುನ್ ಮತ್ತು ಅವರ ಭದ್ರತಾ ಸಿಬ್ಬಂದಿ ಮೇಲೆ ಈ ಕಾಲ್ತುಳಿತದ ಬಳಿಕ ದೂರು ದಾಖಲಿಸಿಕೊಂಡಿದ್ದರು.
ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಮತ್ತು ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.