
ನಟ ಸುದೀಪ್
ಸುದೀಪ್ ನಟನೆಯ ‘ಮಾರ್ಕ್’ ಇಂದು (ಡಿ.25) ತೆರೆ ಕಂಡಿದೆ. ‘ಮ್ಯಾಕ್ಸ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಕೆಲವು ತಿಂಗಳುಗಳಲ್ಲೇ ಈ ಸಿನಿಮಾ ಪೂರ್ಣಗೊಂಡಿದೆ...
ಹೌದು. ಇದೊಂದು ಸವಾಲಿನ ಪಯಣವಾಗಿತ್ತು. ಪರೀಕ್ಷೆಯಂತೆ ಒಂದು ನಿಮಿಷವೂ ವ್ಯರ್ಥ ಮಾಡದೆ ಹೆಜ್ಜೆ ಇಟ್ಟಿದ್ದೆವು. ಸಿನಿಮಾದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದೇ ಒತ್ತಡವಾಗಿತ್ತು. 120 ದಿನಗಳಲ್ಲಿ 107 ದಿನ ಈ ಸಿನಿಮಾಗಾಗಿ ಕೆಲಸ ಮಾಡಿದ್ದೆವು. ಇಷ್ಟು ಒತ್ತಡದಲ್ಲಿ ಕೆಲಸ ಮಾಡುವಾಗ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುವುದು ಸಾಮಾನ್ಯ. ಚೆನ್ನೈನಲ್ಲಿ ಒಂದು ಹಂತದ ಚಿತ್ರೀಕರಣದ ಬಳಿಕ ತೂತುಕ್ಕುಡಿಯಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಿದ್ದೆವು. ಆಗ ಶೇಕಡ 30ರಷ್ಟು ಶೂಟಿಂಗ್ ಆಗಿತ್ತು. ಇದಾದ ಬಳಿಕ ವೇಗ ಕಡಿಮೆ ಆಗಿದ್ದು ಗಮನಕ್ಕೆ ಬಂತು. ಆಗ ಸಭೆ ನಡೆಸಿ ಉದ್ದೇಶವನ್ನು ನೆನಪಿಸಿದೆ. ಇದಾದ ಬಳಿಕ ಹಗಲು ರಾತ್ರಿ ಶೂಟಿಂಗ್ ನಡೆಯಿತು.
ಇದು ಒಬ್ಬ ಸುದೀಪ್‌ನಿಂದ ಸಾಧ್ಯವಾಗಿದ್ದಲ್ಲ. ಇಷ್ಟೇ ಸಮಯದಲ್ಲಿ ಸಿನಿಮಾ ಮುಗಿಸಬೇಕು ಎನ್ನುವ ಒತ್ತಡ ಯಾರಿಂದಲೂ ಇರಲಿಲ್ಲ. ಅದು ನಮಗೆ ನಾವೇ ಹಾಕಿಕೊಂಡ ಗಡುವು ಆಗಿತ್ತು. ಇದಕ್ಕೆ ನಿರ್ಮಾಣ ಸಂಸ್ಥೆಯೂ ಜೊತೆಯಾಯಿತು. ಸೆನ್ಸಾರ್ ಆದ ಬಳಿಕ ಸಣ್ಣಪುಟ್ಟ ಕಟ್‌ಗಳಿಗೆ ಹೇಳಿರುತ್ತಾರೆ. ಅದನ್ನು ಸರಿಪಡಿಸಬೇಕಾದರೆ ಒಂದು ಹರಿವು ಕಡಿತವಾಗುತ್ತದೆ. ಬ್ಯಾಗ್ರೌಂಡ್ ಸ್ಕೋರ್ ಕೂಡಾ ಬದಲಾಯಿಸಬೇಕಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಕಾನ್ಫರೆನ್ಸ್ ಕರೆಗಳಲ್ಲೇ ಮಾಡುತ್ತಿರಬೇಕಾದರೆ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡಿದಂಥ ಅನುಭವವಾಗಿತ್ತು.
ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ತಯಾರಿ ಹೇಗಿತ್ತು?
‘ಮ್ಯಾಕ್ಸ್’ ಬಿಡುಗಡೆಗೂ ಮುನ್ನ ವಿಜಯ್ ಕಾರ್ತಿಕೇಯ ಅವರಿಗೆ ಕನ್ನಡದ ಬಗ್ಗೆ, ಕನ್ನಡದ ಪ್ರೇಕ್ಷಕರ ಬಗ್ಗೆ ಗೊತ್ತಿರಲಿಲ್ಲ. ಆದರೆ ‘ಮ್ಯಾಕ್ಸ್’ ಬಿಡುಗಡೆ ಬಳಿಕ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಜಯ್ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡಿದ್ದಾರೆ. ಇದರಿಂದ ಹಲವು ಪಾಠ ಕಲಿತಿದ್ದಾರೆ. ಇಷ್ಟೆಲ್ಲಾ ತಿಳಿದುಕೊಂಡು ತಮಿಳುನಾಡಿಗೆ ಹೋಗಿ ಮರಳಿ ಕನ್ನಡಕ್ಕೇ ಬಂದರು. ‘ಮ್ಯಾಕ್ಸ್’ಗಿಂತ ಚೆನ್ನಾಗಿ ಹೋಂವರ್ಕ್ ಮಾಡಿಕೊಂಡೇ ‘ಮಾರ್ಕ್’ ತೆಗೆದುಕೊಂಡು ಬಂದಿದ್ದರು. ನಟ, ನಿರ್ದೇಶಕನಾಗಿ ಅವರೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಕೆಲವು ಸಲಹೆ ನೀಡಿದ್ದೇನಷ್ಟೇ.
ಈ ವೇಗದಲ್ಲಿ ಸಿನಿಮಾ ಮಾಡಿದರೆ ಆಗುವ ಲಾಭವೇನು?
ಎಲ್ಲಾ ಸಿನಿಮಾಗಳನ್ನು ಇಷ್ಟು ವೇಗದಲ್ಲಿ ಮಾಡಲು ಸಾಧ್ಯವಿಲ್ಲ. ಕೆಲವು ಸಿನಿಮಾಗಳನ್ನು ಮಾಡಬಹುದು. ಈ ವೇಗದಲ್ಲಿ ಸಿನಿಮಾ ಮಾಡಿದರೆ ಸುಮಾರು ₹7–8 ಕೋಟಿ ಬಡ್ಡಿ ಉಳಿಯುತ್ತದೆ. ಇದುವೇ ಮೊದಲ ಲಾಭವಲ್ಲವೇ? ಆರು ತಿಂಗಳಲ್ಲೇ ನಿರ್ಮಾಪಕರು ಹಾಕಿದ ಹಣ ಕೈಸೇರುತ್ತದೆ. ಅದಕ್ಕಿಂತ ಹೆಚ್ಚಾಗಿ ಒಂದು ಸಿನಿಮಾ ಪೂರ್ಣಗೊಳಿಸಿ, ಹೊಸ ಹೆಜ್ಜೆ ಇಡಲು ಅನುಕೂಲ.
ಇದಾಗದೇ ಹೋದರೆ ಒಂದು ಪ್ರಾಜೆಕ್ಟ್‌ನಲ್ಲೇ ಹಲವು ವರ್ಷ ಸಿಲುಕಿಕೊಳ್ಳುತ್ತೇವೆ. ಹಾಗೆಂದು, ‘ಬಿಲ್ಲ ರಂಗ ಭಾಷಾ’ವನ್ನು ಆರು ತಿಂಗಳಲ್ಲೇ ಪೂರ್ಣಗೊಳಿಸುವ ಪ್ರಯತ್ನವನ್ನೂ ಮಾಡಲು ಸಾಧ್ಯವಿಲ್ಲ. ಇದರಲ್ಲಿನ ಒಂದೊಂದು ಪಾತ್ರದ ಮೇಕಪ್‌ಗೇ ಒಂದೆರಡು ಗಂಟೆ ಬೇಕು. ಶೇಕಡ 80ರಷ್ಟು ಸಿನಿಮಾಗಳನ್ನು ‘ಮಾರ್ಕ್’ ವೇಗದಲ್ಲೇ ಮಾಡಬಹುದು.
ಏಕಾಏಕಿ ಈ ಸಿನಿಮಾ ಕೈಗೆತ್ತಿಕೊಳ್ಳಲು ಕಾರಣ...
ಈ ವರ್ಷ ‘ಬಿಲ್ಲ ರಂಗ ಬಾಷಾ’ ಬರಲು ಸಾಧ್ಯವೇ ಇಲ್ಲ ಎಂದು ಗೊತ್ತಾದಾಗ, ವರ್ಷವೊಂದನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ಚಿತ್ರರಂಗಕ್ಕೂ ನನ್ನದೊಂದು ಸಿನಿಮಾ ಬೇಕಿತ್ತು. ಹಾಗೆಯೇ ವೈಯಕ್ತಿಕವಾಗಿಯೂ ನನ್ನದೊಂದು ಸಿನಿಮಾ ಬರಬೇಕು ಎಂದಿತ್ತು. ಆ ಸಂದರ್ಭದಲ್ಲಿ ತಲೆಗೆ ಬಂದಿದ್ದೇ ವಿಜಯ್. ಏಕೆಂದರೆ ‘ಮಾರ್ಕ್’ ಎಳೆ ಮೊದಲೇ ಹೇಳಿದ್ದರು. ಇದು ನನಗೆ ಇಷ್ಟವಾಗಿತ್ತು.
ಈ ನಡುವೆ ನಮ್ಮದೇ ನಿರ್ದೇಶಕರಿಗೂ ಕರೆ ಮಾಡಿದ್ದೆ. ಆದರೆ ಅವರ ಸಿನಿಮಾಗಳೇ ಇನ್ನೂ ಪೂರ್ತಿಯಾಗಿರಲಿಲ್ಲ, ಕಥೆಯೂ ಅಪೂರ್ಣವಾಗಿತ್ತು. ವಿಜಯ್ ತಕ್ಷಣದಲ್ಲೇ ಸ್ಪಂದಿಸಿದರು. 15 ದಿನದಲ್ಲೇ ಕಥೆ ಸಿದ್ಧಪಡಿಸಿ ತಂದರು. ಎರಡು ತಿಂಗಳು ಚರ್ಚೆ ನಡೆಸಿ ಶೂಟಿಂಗ್‌ಗೆ ಇಳಿದಿದ್ದೆವು. ಈ ಸಿನಿಮಾದ ಕಥೆಯೇ ಹೆಚ್ಚಿನ ಮಾರ್ಕ್(ಅಂಕ) ಪಡೆಯಲಿದೆ. ಸರಳವಾಗಿರುವ ಕಥೆಯನ್ನು ಮೇಕಿಂಗ್‌ನಲ್ಲಿ ಎತ್ತಿಹಿಡಿಯಲಾಗಿದೆ. ಈ ಸಿನಿಮಾದ ಮಾಸ್ ಪಾತ್ರವು ಮಾಸ್‌ನಲ್ಲೇ ಅಂತ್ಯ ಕಾಣದೆ ಒಂದು ಆಶ್ಚರ್ಯಕರವಾದ ಭಾವನಾತ್ಮಕ ದೃಶ್ಯದೊಂದಿಗೆ ಮನಸ್ಸಿಗೆ ಹತ್ತಿರವಾಗಲಿದೆ.
‘ಮ್ಯಾಕ್ಸ್’, ‘ಮಾರ್ಕ್’ ಯೂನಿವರ್ಸ್ ಇದೆಯೇ?
ಮಾಡಲು ಸಾಧ್ಯವಿದೆ. ಆದರೆ ನಾನು ಮಾಡುವುದಿಲ್ಲ. ‘ಮ್ಯಾಕ್ಸ್–2’ ಮಾಡಬೇಕು ಎನ್ನುವ ಯೋಚನೆಯಿತ್ತು, ಆದರೆ ಕಥೆ ಸಿದ್ಧವಾಗಿರಲಿಲ್ಲ. ಒಂದು ಸಿನಿಮಾ ಓಡಿದಾಗ ಸೀಕ್ವೆನ್‌ನ ಸಾಧ್ಯತೆಯ ಬಗ್ಗೆ ಅಲೋಚಿಸುತ್ತೇವೆ. ಆದರೆ ಬರೆಯಲು ಕುಳಿತಾಗಲೇ ಆಗುವುದಿಲ್ಲ ಎಂದು ತಿಳಿಯುತ್ತದೆ. ‘ಮ್ಯಾಕ್ಸ್’ ಮತ್ತು ‘ಮಾರ್ಕ್’ನ ಪಾತ್ರಗಳ ಗುಣಲಕ್ಷಣಗಳಲ್ಲೇ ಬಹಳ ವ್ಯತ್ಯಾಸವಿದೆ. ಇದೊಂದು ಎಂಟರ್‌ಟೇನ್ಮೆಂಟ್ ಪ್ಯಾಕೇಜ್. ಎಲ್ಲಾ ಅಂಶಗಳಲ್ಲೂ ‘ಮ್ಯಾಕ್ಸ್’ಗಿಂತ ಮೂರು ಪಟ್ಟು ದೊಡ್ಡ ಸಿನಿಮಾ.
ಮುಂದಿನ ಸಿನಿಮಾ ಯಾವುದು?
ವರ್ಷಕ್ಕೆರಡು ಸಿನಿಮಾ ಮಾಡಬೇಕು ಎನ್ನುವ ಗುರಿ ನನ್ನದು. ಸುಕುಮಾರ್ ತಂಡದ ತೆಲುಗಿನ ನಿರ್ದೇಶಕರೊಬ್ಬರ ಒಂದು ರೊಮ್ಯಾಂಟಿಕ್–ಕಾಮಿಡಿ ಕಥಾಹಂದರದ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಕನ್ನಡದ ನಿರ್ಮಾಪಕರೇ ಈ ಸಿನಿಮಾ ಮಾಡಲಿದ್ದಾರೆ. ಇದು 2026ರ ಮಧ್ಯದಲ್ಲಿ ರಿಲೀಸ್ ಆಗಲಿದೆ. ಈ ಜಾನರ್‌ನ ಸಿನಿಮಾ ನನ್ನ ಆಸಕ್ತಿಯದ್ದು. ಹೀರೊಯಿನ್ ಯಾಕೆ ಇರಲ್ಲ ಎನ್ನುವ ಪ್ರಶ್ನೆಗೂ ಈ ಸಿನಿಮಾವೇ ಉತ್ತರ! ‘ಬಿಲ್ಲ ರಂಗ ಬಾಷಾ’ 2026ರ ವರ್ಷಾಂತ್ಯಕ್ಕೆ ಬರಬಹುದು.
ಪ್ರೇಮ್ ಜೊತೆಗೆ ಒಂದು ಸಿನಿಮಾದ ಚರ್ಚೆ ನಡೆಯುತ್ತಿದೆ. ಇದು ಪೌರಾಣಿಕ ಜಾನರ್‌ನ ಸಿನಿಮಾ. ದೊಡ್ಡ ಬಜೆಟ್‌ನ ಚಿತ್ರ. ಅನೂಪ್ ಭಂಡಾರಿ ಜೊತೆಗೂ ಸಿನಿಮಾವೊಂದರ ಚರ್ಚೆ ನಡೆಯುತ್ತಿದೆ.
‘ಮಾರ್ಕ್’ಗೂ ನಾಯಕಿ ಏಕಿಲ್ಲ?
ಸಿನಿಮಾದಲ್ಲಿ ನಾಯಕಿಯನ್ನು ಇಟ್ಟಿಲ್ಲ. ಏಕೆಂದರೆ ಕಥೆಯೊಳಗೆ ನಾಯಕಿ ಇರಬೇಕೆಂದರೆ ಅದಕ್ಕೊಂದು ಬಲವಾದ ಕಾರಣವಿರಬೇಕು. ನನ್ನ ನಾಯಕಿ ಸಿನಿಮಾದೊಳಗೆ ಕೇವಲ ಪ್ರಾಪರ್ಟಿ ಅಥವಾ ಒಂದು ಹಾಡಿಗೆ ಸೀಮಿತವಾಗಬಾರದು. ಕಥೆಗೆ ಅವಶ್ಯಕತೆ ಇಲ್ಲದೇ ಇರುವ ಕಾರಣ ಹಾಸ್ಯವನ್ನೂ ಇಟ್ಟಿಲ್ಲ.
‘ಮಾರ್ಕ್’ ಎಲ್ಲೆಲ್ಲಿ ತೆರೆ ಕಾಣಲಿದೆ?
ಸದ್ಯ ಕನ್ನಡ ಮತ್ತು ತಮಿಳಿನಲ್ಲಷ್ಟೇ ಸಿನಿಮಾ ಬರಲಿದೆ. ಸಮಯ ಕಮ್ಮಿ ಇದ್ದ ಕಾರಣ ತೆಲುಗು, ಹಿಂದಿಯಲ್ಲಿ ಪ್ರಚಾರ ಮಾಡಲು ಸಮಯವೇ ಸಿಕ್ಕಿಲ್ಲ. ಇವುಗಳ ಪ್ರಿಂಟ್ ಸಿದ್ಧವಿದೆ. ಇನ್ನೆರಡು ವಾರ ಬಿಟ್ಟು ಅಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ. ತಮಿಳಿನಲ್ಲೂ ನಾನೇ ಡಬ್ ಮಾಡಿದ್ದೇನೆ.
ನಿರ್ಮಾಣದಲ್ಲೂ ಕೈಜೋಡಿಸಿರುವುದ ಬಗ್ಗೆ...
ನಾನು ಚಿಕ್ಕ ಮೊತ್ತವನ್ನು ಪಡೆದು ಉಳಿದ ಮೊತ್ತವನ್ನು ಶೇರಿಂಗ್‌ನಲ್ಲಿ ಪಡೆದುಕೊಳ್ಳುತ್ತೇನೆ. ಹಣ ಚೆನ್ನಾಗಿಯಾದರೆ ಇಬ್ಬರೂ ಉಳಿಯುತ್ತೇವೆ. ಈ ಅಪಾಯ ಎಳೆದುಕೊಳ್ಳಲು ಕೆಲವು ಸಿನಿಮಾ, ಬ್ಯಾನರ್ ಜೊತೆ ನಾನೂ ಸಿದ್ಧವಿರುತ್ತೇನೆ. ನಾವು ಹೀಗೆ ಬೆಂಬಲ ನೀಡಿದರೆ ಸಿನಿಮಾ ಗುಣಮಟ್ಟ ಕಡಿಮೆಯಾಗಲ್ಲ. ‘ವಿಕ್ರಾಂತ್ ರೋಣ’ದ ಹಿಂದಿನಿಂದಲೂ ನಾನು ಆದಾಯ ಹಂಚಿಕೆ ಮಾದರಿಯಲ್ಲೇ ಇದ್ದೇನೆ.
ನಿಮಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳು ಅಭಿಮಾನಿಗಳಾಗಿದ್ದಾರೆ. ಅವರಿಗೆ ಮಾಸ್ ಜಾನರ್‌ನ ‘ಮಾರ್ಕ್’ ಹಿಡಿಸಲಿದೆಯೇ?
ಅವರು ಇಷ್ಟಪಟ್ಟಿದ್ದೇ ನನ್ನ ರಗಡ್ ಪಾತ್ರಗಳನ್ನು, ದಾಡಿ ಮೀಸೆ, ಸಿಗರೇಟ್ ಅನ್ನು. ಹುಡುಗಿಯರನ್ನು ನಂಬಿಕೊಂಡು ‘ಮುಸ್ಸಂಜೆ ಮಾತು’ ಮಾಡಿದ್ದೆ. ಇದು ಸಾಫ್ಟ್ ಆಗಿ ಓಡಿತ್ತು. ರಫ್ ಲುಕ್‌ನಲ್ಲಿದ್ದ ಸಿನಿಮಾಗಳು ಬಾಕ್ಸ್ ಆಫೀಸ್ ಹಿಟ್ ಆಗಿವೆ.
ಪ್ರಿಯಾ ಅವರು ‘ಮಾರ್ಕ್’ ವಿತರಣೆಯಲ್ಲಿ ಕೈಜೋಡಿಸಿದ್ದಾರೆ. ಇದು ಅವರದ್ದೇ ಹಣ. ಪ್ರಿಯಾಗೆ ಅವರದ್ದೇ ವಹಿವಾಟು ಇದೆ. ವಿತರಣೆಯ ಕ್ಷೇತ್ರವನ್ನು ಅವಲೋಕಿಸುವ ಆಸಕ್ತಿಯೂ ಅವರಿಗಿದೆ. ಬೇರೆ ಸಿನಿಮಾಗಳನ್ನೂ ಅವರು ಮುಂದೆ ವಿತರಣೆ ಮಾಡಲಿದ್ದಾರೆ.ಸುದೀಪ್, ನಟ
‘ಶಿವಣ್ಣ ನಮಗೆ ಬೇಕು. ನಮ್ಮ ಆಸ್ತಿ ಅವರು. ಒಬ್ಬರು ಹಿರಿಯರಾಗಿ ಅವರ ಇರುವಿಕೆಯು ಪ್ರಸ್ತುತ ಚಿತ್ರರಂಗಕ್ಕೆ ಅಗತ್ಯ. ನಟನಾಗಿಯೂ ಅವರು ಮತ್ತಷ್ಟು ಭಿನ್ನ ಪಾತ್ರಗಳನ್ನು ಮಾಡಬೇಕಿದೆ. ಅವರೇನು ಎನ್ನುವುದನ್ನು ಹೇಳಲು ‘45’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದು ಝಲಕ್ ಸಾಲದೇ? ಡಿ.25ಕ್ಕೆ ಎರಡು ಕನ್ನಡ ಸಿನಿಮಾಗಳು ಬರುತ್ತಿವೆ ಎನ್ನುವುದರ ಬಗ್ಗೆ ಖುಷಿಪಡಬೇಕು. ಇಲ್ಲವಾದರೆ ಇದೇ ರಜಾ ದಿನಗಳಲ್ಲಿ ಪರಭಾಷಾ ಸಿನಿಮಾಗಳು ಲಗ್ಗೆ ಇಟ್ಟು ಲೂಟಿ ಮಾಡುವುದಿಲ್ಲವೇ? ಇದು ಯಾವುದೇ ಘರ್ಷಣೆಯಲ್ಲ. ಜುಲೈ 5ರಂದೇ ‘ಮಾರ್ಕ್’ ಡಿ.25ಕ್ಕೆ ಎಂದು ಘೋಷಿಸಿದ್ದೆ. ಇದನ್ನಿಟ್ಟುಕೊಂಡೇ ಹೆಜ್ಜೆ ಇಟ್ಟಿದ್ದೆವು. ಅರ್ಜುನ್ ಜನ್ಯ ಅವರು ‘45’ ಕಥೆಯನ್ನು ಮೊದಲು ಹೇಳಿದ್ದೇ ನನಗೆ. ಈ ಸಿನಿಮಾ ನೋಡಲು ಕಾತುರದಿಂದಿದ್ದೇನೆ’ ಎನ್ನುತ್ತಾರೆ ಸುದೀಪ್.
‘ತಕ್ಷಣದಲ್ಲೇ ಪೈರಸಿ ಲಿಂಕ್‌ಗಳನ್ನು ತೆಗೆಯಲು ತಂಡ ಸಿದ್ಧಪಡಿಸಿದ್ದೇವೆ. ಲಿಂಕ್‌ಗಳು ಜನರಿಗೆ ತಲುಪುವುದನ್ನು ಶೇಕಡ 80ರಷ್ಟು ತಡೆಯುತ್ತೇವೆ. ಯಾವ ಕಲಾವಿದರ ಬಗ್ಗೆಯೂ ನಾನು ತಪ್ಪಾಗಿ ಮಾತನಾಡಿಲ್ಲ. ‘ಮಾರ್ಕ್’ ಪೈರಸಿ ಮಾಡುತ್ತಿರುವುದು ದುಡ್ಡು ಮಾಡುವುದಕ್ಕಲ್ಲ, ಸಿನಿಮಾವನ್ನು ಹಾಳು ಮಾಡುವುದಕ್ಕೆ ಎಂದು ನನಗೆ ಗೊತ್ತಾಗುತ್ತದೆ. ನಾನು ಹುಬ್ಬಳ್ಳಿಗೆ ಹೋಗಿದ್ದು ಸಂಭ್ರಮಿಸುವುದಕ್ಕೆ. ಆದರೆ ಸಂಭ್ರಮ ನಿಲ್ಲಿಸಿ ನಾನು ನೇರವಾಗಿ ಮಾತನಾಡಿದೆ. ಕೇಳಿಸಿಕೊಳ್ಳಬೇಕಾದವರು ಕೇಳಿಕೊಂಡರು. ಅಭಿಮಾನಿಗಳೊಂದಿಗೆ ಕಳೆಯಬೇಕಿದ್ದ ಒಂದು ಅದ್ಭುತ ಸಂಜೆಯನ್ನು ಕಳೆದುಕೊಂಡೆ. ಆವೇಶದಲ್ಲಿ ಮಾತನಾಡುವವನು ನಾನಲ್ಲ. ಈ ಹಿಂದೆ ದರ್ಶನ್ ಬಗ್ಗೆ ಕೇಳಿದಾಗಲೂ ಕೆಟ್ಟದಾಗಿ ಮಾತನಾಡಿಲ್ಲ. ದರ್ಶನ್ ಬಗ್ಗೆ ಗೌರವವಿದೆ. ಕೆಲವು ಆಗುಹೋಗುಗಳ ಬಗ್ಗೆ ನೋವಿದೆ. ನಟರಾಗಿ ನಾವಿಬ್ಬರೂ ಕಿತ್ತಾಡಲೇ ಇಲ್ಲ. ನಮ್ಮಿಬ್ಬರ ನಡುವೆ ಸಾವಿರ ಇರಬಹುದು. ಅದು ನಮ್ಮಿಬ್ಬರದು. ಪರದೆಯಿಂದ ಇಳಿದು ಕೆಳಗೆ ನಡೆಯುತ್ತಿರುವ ಗಲಾಟೆಗಳಿಗೆ ಹೋಗಕೂಡದು. ಕಥೆ ಹೇಳಿ ಮನೆಗೆ ಹೋಗುವುದಷ್ಟೇ ನಮ್ಮ ಕೆಲಸ’ ಎಂದರು ಸುದೀಪ್.
‘ನಾನು ಯಾರಿಗೆ ಹೇಳಿದ್ದು ಎಂದು ಸ್ಪಷ್ಟನೆ ಕೊಟ್ಟಾಗಿದೆ. ಪೈರಸಿ ತಡೆಯಲು ನಾವೇನು ಮಾಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಇದರಲ್ಲಿ ನಾವು ಯಶಸ್ವಿಯಾದರೆ ಒಂದು ಪೈರಸಿ ತಂಡವನ್ನು ಶೇಕಡ 80ರಷ್ಟು ನಿಯಂತ್ರಿಸಲಿದ್ದೇವೆ. ಇದಕ್ಕೆ ಸರ್ಕಾರದಿಂದ ಸಹಾಯವನ್ನು ಕೇಳಿದ್ದೇವೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.