ಎ.ಆರ್. ರೆಹಮಾನ್
(ಇನ್‌ಸ್ಟಾಗ್ರಾಂ ಚಿತ್ರ)
ಚೆನ್ನೈ: ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆರೋಗ್ಯವಂತರಾಗಿದ್ದು, ಮನೆಗೆ ಮರಳಿದ್ದಾರೆ ಎಂದು ಕುಟುಂಬದವರು ಇಂದು (ಭಾನುವಾರ) ತಿಳಿಸಿದ್ದಾರೆ.
'ಎರಡು ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ 58 ವರ್ಷದ ರೆಹಮಾನ್ ಅವರನ್ನು ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಯಿತು' ಎಂದು ಅವರ ವ್ಯವಸ್ಥಾಪಕ ಸೆಂಥಿಲ್ ವೇಲನ್ ತಿಳಿಸಿದ್ದಾರೆ.
'ರೆಹಮಾನ್ ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದು, ಮನೆಗೆ ಮರಳಿದ್ದಾರೆ. ವೈದ್ಯರು ಕೆಲವು ಪರೀಕ್ಷೆಗಳನ್ನು ನಡೆಸಿದ್ದಾರೆ. ಎಲ್ಲವೂ ಸಹಜವಾಗಿತ್ತು' ಎಂದು ಅವರು ಹೇಳಿದ್ದಾರೆ.
ಎದೆ ನೋವು ಕಾಣಿಸಿಕೊಂಡಿದ್ದರಿಂದ ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳನ್ನು ನಿರಾಕರಿಸಿರುವ ಸಹೋದರಿ ಎ.ಆರ್. ರೆಹಾನಾ, 'ಅವರಿಗೆ ನಿರ್ಜಲೀಕರಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು' ಎಂದು ಹೇಳಿದ್ದಾರೆ.
ರೆಹಮಾನ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಅಪೊಲೊ ಆಸ್ಪತ್ರೆಯ ಮೆಡಿಕಲ್ ಬುಲೆಟಿನ್ ಅನ್ನು ರೆಹಮಾನ್ ಅವರ ಪುತ್ರ ಎ.ಆರ್. ಅಮೀನ್, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಹಿತೈಷಿಗಳ ಪ್ರೀತಿ, ಪ್ರಾರ್ಥನೆಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ರೆಹಮಾನ್ ಆರೋಗ್ಯ ಸಂಬಂಧ ಅಪೊಲೊ ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.