ADVERTISEMENT

PV Kannada Cine Sammana-3: ಸಾಧಕರ ಮಂದಹಾಸ, ನೃತ್ಯದ ಸಂಭ್ರಮೋಲ್ಲಾಸ...

ಜೀವಮಾನದ ಸಾಧನೆ, ಕನ್ನಡದ ಧ್ರುವತಾರೆ ಪ್ರಶಸ್ತಿ ಪ್ರದಾನ | 25 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 22:34 IST
Last Updated 27 ಜೂನ್ 2025, 22:34 IST
<div class="paragraphs"><p>ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿ ಕಾರ್ಯಕ್ರಮದಲ್ಲಿ ನಟಿಯರಾದ ಚಂದನ ಅನಂತಕೃಷ್ಣ ಮತ್ತು ಖುಷಿ ರವಿ ತಂಡದ ನೃತ್ಯ ಪ್ರದರ್ಶನ ಮನಸೂರೆಗೊಂಡಿತು</p></div>

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿ ಕಾರ್ಯಕ್ರಮದಲ್ಲಿ ನಟಿಯರಾದ ಚಂದನ ಅನಂತಕೃಷ್ಣ ಮತ್ತು ಖುಷಿ ರವಿ ತಂಡದ ನೃತ್ಯ ಪ್ರದರ್ಶನ ಮನಸೂರೆಗೊಂಡಿತು

   

ಬೆಂಗಳೂರು: ವೇದಿಕೆಯ ಮೇಲೆ ಚಂದನವನದ ತಾರೆಯರು ಸಿನಿ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ, ವೇದಿಕೆಯ ಕೆಳಗೆ ಕರತಾಡನದ ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ನಗುವಿನ ಸಿಂಚನ. ಮಧ್ಯೆ ಮಧ್ಯೆ ನಟಿಯರ ಕಣ್ಮನ ಸೆಳೆಯುವ ನೃತ್ಯ ಪ್ರದರ್ಶನ.

ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಮೂರನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಇದು.

ADVERTISEMENT

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಕಲಾವಿದನಿಗೆ ಜೀವಮಾನದ ಪ್ರಶಸ್ತಿ ಮತ್ತು  ಸಿನಿಮಾದ ವಿವಿಧ 25 ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ನೇತಾರರು ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ಸಂಜೆ ಕೆಂಪು ಹಾಸಿನ ಮೇಲೆ ಮಂದಹಾಸದೊಂದಿಗೆ ಕೈಬಿಸುತ್ತ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಕಾತರರಾಗಿದ್ದರು. ಅಕುಲ್‌ ಹಾಗೂ ಅನುಶ್ರೀ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಭಾಜನರಾದ ‘ಪ್ರಣಯರಾಜ’ ಶ್ರೀನಾಥ್‌ ಅವರು ವೇದಿಕೆಗೆ ಏರುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಪ್ರಶಸ್ತಿ ಪ್ರದಾನ ಆಗುತ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರು ಕನ್ನಡ ಸಿನಿ ದ್ರುವತಾರೆ ಪ್ರಶಸ್ತಿ ಸ್ವೀಕರಿಸಿದಾಗ ಸಭೆಯೇ ಅಭಿನಂದನೆ ಸಲ್ಲಿಸಿತು.

ಸಂಗೀತ, ನೃತ್ಯ ನಿರ್ದೇಶನ ಸೇರಿ ವಿವಿಧ ವಿಭಾಗಗಳಲ್ಲಿ ಡಿಜಿಟಲ್ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೊಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು.

ಪ್ರಶಸ್ತಿ ಸ್ವೀಕರಿಸಿ ಕೆಲವರು ಭಾವುಕರಾದರು. ಹಲವರಲ್ಲಿ ಸಾರ್ಥಕದ ಭಾವ ಮೂಡಿತು. ತಮಗೆ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರು ಸೇರಿ ಚಿತ್ರ ತಂಡದ ಸದಸ್ಯರನ್ನು, ಚಿತ್ರೀಕರಣದ ವೇಳೆ ನಡೆದ ಘಟನೆಗಳನ್ನು ಸ್ಮರಿಸಿಕೊಂಡರು. ಹೆತ್ತವರ, ಗೆಳೆಯರ ಪ್ರೋತ್ಸಾಹಗಳನ್ನು ನೆನಪು ಮಾಡಿಕೊಂಡರು.

ಚಿತ್ರರಂಗದ ಪ್ರಮುಖರಾದ ‘ಮುಖ್ಯಮಂತ್ರಿ’ ಚಂದ್ರು, ಹಂಸಲೇಖ, ಶಿವರಾಜಕುಮಾರ್‌, ಗೀತಾ ಶಿವರಾಜಕುಮಾರ್‌, ಗಿರಿಜಾ  ಲೋಕೇಶ್‌, ಪಿ. ಶೇಷಾದ್ರಿ, ತಾರಾ ಅನುರಾಧ, ದ್ರುವ ಸರ್ಜಾ, ಲತಾ ಹಂಸಲೇಖ, ಟಿ.ಎಸ್‌. ನಾಗಾಭರಣ, ಪೂಜಾ ಗಾಂಧಿ, ಸುಮನ್‌ ನಗರ್‌ಕರ್‌, ಶೇಖರ್‌, ಶ್ರುತಿ, ಉಮೇಶ್ ಬಣಕಾರ್, ಲಹರಿ ವೇಲು, ಅರ್ಜುನ್‌ ಜನ್ಯ, ವಿ. ಮನೋಹರ್‌, ದುನಿಯಾ ವಿಜಯ್‌, ದತ್ತಣ್ಣ, ಮಾಲಶ್ರೀ, ಪ್ರಿಯಾಂಕ ಉಪೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಗಣ್ಯರ ದಂಡು

ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದವರೂ ಸಮಾರಂಭಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಾಥ್‌ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಾರಿಗೆ  ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್‌ ಸದಸ್ಯ ಟಿ. ಶರವಣ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.