'ಥಾಮ' ಚಿತ್ರದ ಪೋಸ್ಟರ್
ಚಿತ್ರಕೃಪೆ– @MaddockFilms
ಬೆಂಗಳೂರು: ಆದಿತ್ಯ ಸರ್ಪೋತದಾರ್ ನಿರ್ದೇಶನದ ನಟಿ ರಶ್ಮಿಕಾ ಮಂದಣ್ಣ, ನಟ ಆಯುಷ್ಮಾನ್ ಖುರಾನಾ ಹಾಗೂ ನವಾಜುದ್ದೀನ್ ಸಿದ್ದಿಕಿ ಅಭಿನಯದ ಬಹುನಿರೀಕ್ಷಿತ 'ಥಾಮ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಈ ಸಂಬಂಧ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ದಟ್ಟ ಕಾಡಿನಿಂದ ಆರಂಭವಾಗುವ ಟೀಸರ್‌ನಲ್ಲಿ, ವಿಭಿನ್ನ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಭಯಾನಕ, ರೊಮ್ಯಾಂಟಿಕ್ ದೃಶ್ಯಗಳು ಜತೆಗೆ ರಕ್ತಸಿಕ್ತ ದೃಶ್ಯಗಳು ಕಂಡು ಬಂದಿದೆ. ಮಲೈಕಾ ಅರೋರಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಹಿಂದೆಂದೂ ಕಾಣದ ಹಾರರ್–ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ ಇದೇ ದೀಪಾವಳಿಗೆ ತೆರೆ ಮೇಲೆ ಬರಲಿದ್ದು, ಈ ಸಿನಿಮಾ ನಿಮಗೆ ಅದ್ಭುತ ಅನುಭವವನ್ನು ನೀಡಲಿದೆ. ರಕ್ತಸಿಕ್ತ ಕಥಾಹಂದರವು ಪ್ರೀತಿ ಜತೆಗೆ ಭಯಾನಕ ಅನುಭವಗಳ ಸರಮಾಲೆಯನ್ನು ಹೊತ್ತು ತಂದಿದೆ ಎಂದು ಮ್ಯಾಡಾಕ್ ಫಿಲ್ಮ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ಚಿತ್ರವನ್ನು ದಿನೇಶ್ ವಿಜನ್ ನಿರ್ಮಿಸಿದ್ದು, ಚಿತ್ರಕಥೆಯನ್ನು ನಿರೇನ್ ಭಟ್, ಸುರೇಶ್ ಮ್ಯಾಥ್ಯೂ ಮತ್ತು ಅರುಣ್ ಫುಲಾರಾ ಬರೆದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.