
ಲ್ಯಾಂಡ್‌ಲಾರ್ಡ್, ಟಾಕ್ಸಿಕ್ ಹಾಗೂ ಬಿಲ್ಲ ರಂಗ ಬಾಷಾ ಸಿನಿಮಾಗಳ ಪೋಸ್ಟರ್‌ಗಳು
ಚಂದನವನದ ಪ್ರಮುಖ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ, 2025ರ ಪ್ರಥಮಾರ್ಧ ಕಳೆದುಹೋಗಿತ್ತು. ಇದೇ ಕಾರಣಕ್ಕೆ, ಮೊದಲ ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಆದರೆ, ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗಪ್ಪಳಿಸಿದ್ದವು.
ದೇಶದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾದ 'ಕಾಂತಾರ–ಚಾಪ್ಟರ್ 1' ಕೂಡ ಇದೇ ಅವಧಿಯಲ್ಲಿ ಬಿಡುಗಡೆಯಾಗಿತ್ತು. ದುಡ್ಡು ಮಾಡಿದ ಸಿನಿಮಾಗಳು ಬೆರಳೆಣಿಕೆಯಷ್ಟೇ ಆದರೂ, 2025ರಲ್ಲಿ ಬರೋಬ್ಬರಿ 226 ಕನ್ನಡ ಸಿನಿಮಾಗಳು ಪ್ರೇಕ್ಷಕರ ಎದುರು ಬಂದಿದ್ದವು.
ಯಶ್, ರಕ್ಷಿತ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ, ಶ್ರೀಮುರಳಿ, ದುನಿಯಾ ವಿಜಯ್ ಅವರ ಸಿನಿಮಾಗಳು ಈ ವರ್ಷ ತೆರೆ ಕಂಡಿಲ್ಲ. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್', ಕಿಚ್ಚ ಸುದೀಪ್ ಅವರ 'ಮಾರ್ಕ್' ಮತ್ತು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ '45' ಸಿನಿಮಾಗಳು ಹೊಸ ವರ್ಷದ ಹೊಸ್ತಿಲಲ್ಲಿ ಬಿಡುಗಡೆಯಾಗಿವೆ.
ವರ್ಷಾರಂಭದಲ್ಲೇ 'ಲ್ಯಾಂಡ್‌ಲಾರ್ಡ್'
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಲ್ಯಾಂಡ್‌ಲಾರ್ಡ್' ಈ ವರ್ಷಾರಂಭದಲ್ಲೇ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ.
'ಕಾಟೇರ' ಸಿನಿಮಾಗೆ ಕಥೆ ಬರೆದಿದ್ದ ಜಡೇಶ ಕೆ. ಹಂಪಿ ನಿರ್ದೇಶನದ, ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಿಸುತ್ತಿರುವ ಈ ಸಿನಿಮಾ, ಜನವರಿ 23ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಯಶ್ 'ಟಾಕ್ಸಿಕ್'
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ 'ಟಾಕ್ಸಿಕ್' ಸಿನಿಮಾ 2026ರ ಮಾರ್ಚ್ 19ಕ್ಕೆ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಇದರೊಂದಿಗೆ, ಅವರು 2022ರ ನಂತರ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರ, ಕಿಯಾರಾ ಅಡ್ವಾನಿ ಸೇರಿದಂತೆ ತಾರಾ ನಟರ ದಂಡೇ ಇದೆ. ಚಿತ್ರಕಥೆ ಬರವಣಿಗೆಯಲ್ಲಿ ಗೀತು ಅವರೊಂದಿಗೆ ಯಶ್ ಕೂಡ ಕೈ ಜೋಡಿಸಿದ್ದಾರೆ.
ಕೆವಿಎನ್ ಪ್ರೋಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
'KD'ಯಾಗಲಿರುವ ಧ್ರುವ ಸರ್ಜಾ
'ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅಭಿನಯದ 'ಕೆ.ಡಿ: ದಿ ಡೆವಿಲ್' ಸಿನಿಮಾ 2026ರ ಏಪ್ರಿಲ್‌ನಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದೆ.
ಧ್ರುವ ನಟನೆಯ ಮೊದಲ ಮೂರು ಚಿತ್ರಗಳು (ಅದ್ದೂರಿ, ಬಹದ್ದೂರ್, ಭರ್ಜರಿ) ಸಿನಿಪ್ರಿಯರ ಮನಗೆದ್ದಿದ್ದವು. ಆದರೆ, ನಂತರ ಬಂದ ಪೊಗರು ಮತ್ತು ಮಾರ್ಟಿನ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ, ಕೆ.ಡಿ. ಮೇಲೆ ನಿರೀಕ್ಷೆ ಹುಟ್ಟಿಸಿದೆ.
ಪ್ರೇಮ್ ನಿರ್ದೇಶನದ ಈ ಸಿನಿಮಾವನ್ನು ವಿಎನ್ ಪ್ರೋಡಕ್ಷನ್ಸ್ ನಿರ್ಮಿಸುತ್ತಿ್ದು, ವಿ. ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಸಹ ಧ್ರುವ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಬಿಲ್ಲ ರಂಗ ಬಾಷಾ
ಮಾರ್ಕ್ ಬಿಡುಗಡೆ ಸಂತಸದಲ್ಲಿರುವ ಕಿಚ್ಚ ಸುದೀಪ್ ಅವರ ಮತ್ತೊಂದು ಸಿನಿಮಾ 'ಬಿಲ್ಲಾ ರಂಗ ಬಾಷಾ' 2026ರಲ್ಲಿ ತೆರೆ ಕಾಣುವ ಸಾಧ್ಯತೆ ದಟ್ಟವಾಗಿದೆ. ಬಿಡುಗಡೆ ದಿನಾಂಕ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
ಅನೂಪ್ ಭಂಡಾರಿ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್
ಗೋಧಿ ಬಣ್ಣ ಸಾಧಾರಾಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ.. ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸಿರುವ ಹೇಮಂತ್ ಎಂ.ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ 2026ರಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.