ADVERTISEMENT

'ವಾರ್ 2' ಆಗಸ್ಟ್‌ 14ಕ್ಕೆ ತೆರೆಗೆ: ಹೃತಿಕ್ ಎದುರು ವಿಲನ್‌ ಆದ ಜೂನಿಯರ್ NTR

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2025, 9:56 IST
Last Updated 9 ಜುಲೈ 2025, 9:56 IST
   

ಮುಂಬೈ: ತೆಲುಗು ನಟ ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್‌ ನಟ ಹೃತಿಕ್ ರೋಷನ್ ಜತೆಗೂಡಿ ಅಭಿನಯಿಸಿರುವ ‘ವಾರ್ 2‘ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಸಿನಿಮಾ ಆಗಸ್ಟ್‌ 14ರಂದು ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿರುವ ಜೂನಿಯರ್ ಎನ್‌ಟಿಆರ್, 'ಚಿತ್ರೀಕರಣದ ವೇಳೆ ಹೃತಿಕ್ ರೋಷನ್ ಜತೆ ಕಾಲ ಕಳೆದಿದ್ದು ಅದ್ಭುತ ಅನುಭವ. ಅವರು ಸದಾ ಹಸನ್ಮುಖಿ. ಈ ಪ್ರಯಾಣದಲ್ಲಿ ಅವರಿಂದ ತುಂಬಾನೇ ಕಲಿತೆ. ನಿರ್ದೇಶಕ ಅಯಾನ್ ಮುಖರ್ಜಿ ಮ್ಯಾಜಿಕ್‌ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

2019ರಲ್ಲಿ ಹೃತಿಕ್‌ ರೋಷನ್‌ ಅಭಿನಯದ ‘ವಾರ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ಇದರ ಮುಂದುವರಿದ ಭಾಗ ವಾರ್‌–2 ಚಿತ್ರವಾಗಿದೆ. ವಾರ್‌ ಚಿತ್ರಕ್ಕೆ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದರು.

ADVERTISEMENT

ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ವಿಲನ್‌ ಆಗಿ ಗಮನ ಸೆಳೆದಿದ್ದಾರೆ. ಇಲ್ಲಿಯವರೆಗೂ ನಾಯಕನಾಗಿ ಕಾಣಿಸಿಕೊಂಡಿದ್ದ ಎನ್‌ಟಿಆರ್, ಮೊದಲ ಸಲ ಖಡಕ್‌ ಖಳ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಎನ್‌ಟಿಆರ್‌ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿತ್ತು. ಒಂದೂವರೆ ನಿಮಿಷದ ಟೀಸರ್‌ನಲ್ಲಿ ಹಾಗೂ ಜೂನಿಯರ್‌ ಎನ್‌ಟಿಆರ್‌ ಮತ್ತು ಹೃತಿಕ್‌ ನಡುವಿನ ಹಣಾಹಣಿ ದೃಶ್ಯಗಳನ್ನೇ ಹೆಚ್ಚು ತೋರಿಸಲಾಗಿತ್ತು.

‘ಈ ಚಿತ್ರದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಹೃತಿಕ್ ರೋಷನ್‌ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ ಅವರಿಗೆ ಜೋಡಿಯಾಗಿದ್ದಾರೆ.

‘ವಾರ್ 2‘ ಚಿತ್ರದ ಸಾಹಸ ದೃಶ್ಯಗಳನ್ನು ಐದು ದೇಶಗಳಲ್ಲಿ ಚಿತ್ರೀಕರಿಸಿದೆ. ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.