ಅಲ್ಲು ಅರ್ಜುನ್
(ಪಿಟಿಐ ಚಿತ್ರ)
ಹೈದರಾಬಾದ್: ಹೈದರಾಬಾದ್ (ಪಿಟಿಐ): ‘ಪುಷ್ಪ 2: ದಿ ರೂಲ್’ ಸಿನಿಮಾ ಪ್ರದರ್ಶನದ ಅಂಗವಾಗಿ ಇಲ್ಲಿನ ಚಿತ್ರಮಂದಿರವೊಂದಕ್ಕೆ ಬಂದಿದ್ದ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ. 35 ವರ್ಷದ ಮಹಿಳೆ ತನ್ನ 9 ವರ್ಷದ ಮಗನೊಂದಿಗೆ ಸಿನಿಮಾ ವೀಕ್ಷಿಸಲು ಬಂದಿದ್ದರು.
‘ನಟ ಹಾಗೂ ಸಿನಿಮಾ ತಂಡವು ಚಿತ್ರಮಂದಿರಕ್ಕೆ ಭೇಟಿ ನೀಡುವ ಕುರಿತು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಚಿತ್ರಮಂದಿರವೂ ಸಣ್ಣದಾಗಿತ್ತು. ಭಾರಿ ಸಂಖ್ಯೆಯ ಜನರು ಚಿತ್ರಮಂದಿರದ ಒಳಗೆ ಹಿಡಿಸುತ್ತಿರಲಿಲ್ಲ. ಜೊತೆಗೆ, ಚಿತ್ರಮಂದಿರದ ಆಡಳಿತ ಕೂಡ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ನಟನನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರದ ಒಳಗೆ ನುಗ್ಗಿದರು. ಇದೇ ವೇಳೆ ಮಹಿಳೆ ಹಾಗೂ ಆಕೆಯ ಮಗನಿಗೆ ಉಸಿರುಗಟ್ಟಿದೆ. ಜನರು ಹಿಂದಿನಿಂದ ದೂಡುತ್ತಿದ್ದಂತೆಯೇ ಇಬ್ಬರೂ ಪ್ರಜ್ಞೆತಪ್ಪಿ ಬಿದ್ದಿದ್ದಾರೆ’ ಎಂದರು.
ಪ್ರಜ್ಞೆತಪ್ಪಿ ಬಿದ್ದಿದ್ದ ಮಹಿಳೆ ಹಾಗೂ ಮಗುವಿಗೆ ಅಲ್ಲೇ ಇದ್ದ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿದ ನಂತರ, ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ.
‘ಮುಂದಿನ 48 ಗಂಟೆಗಳವರೆಗೂ ಮಗನ ಆರೋಗ್ಯದ ಸ್ಥಿತಿ ಕುರಿತು ಏನೂ ಹೇಳಲು ಆಗುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ’ ಎಂದು ಮಹಿಳೆಯ ಪತಿ ಹೇಳಿದರು. ಭಾರಿ ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.
ಪುಷ್ಪ-2 ದಿ ರೂಲ್ ಸಿನಿಮಾ ಇಂದು ತೆರೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.