ಯಶ್, ಅಕ್ಷಯ್ ಓಬೆರಾಯ್
ಮುಂಬೈ: ‘ಅಂಥ ದೊಡ್ಡ ನಟನ ನೋಡಲು ಜನರು ಕಿಕ್ಕಿರಿದು ಸೇರಿರುತ್ತಾರೆ. ಅವರು ಕೈಬೀಸಿದರೆ ಕೇಕೆ, ಶಿಳ್ಳೆ, ಚಪ್ಪಾಳೆಗಳ ಮಳೆಯನ್ನೇ ಅಭಿಮಾನಿಗಳು ಸುರಿಯುತ್ತದೆ. ಆದರೂ ಆ ನಟನ ಮೃದುಭಾಷೆ, ಆಪ್ತತೆ ನನ್ನನ್ನು ಸಂಪೂರ್ಣ ಆವರಿಸಿ ಪ್ರಭಾವಿಸಿದೆ’ ಎಂದು ಟಾಕ್ಸಿಕ್ ಚಿತ್ರದ ಸಹ ನಟ ಅಕ್ಷಯ್ ಓಬೆರಾಯ್ ನಟ ಯಶ್ ಕುರಿತು ಹೊಗಳಿಕೆಯ ಸುರಿಮಳೆಗರೆದಿದ್ದಾರೆ.
‘ವ್ಯಕ್ತಿತ್ವ, ವೃತ್ತಿ ಬದ್ಧತೆ ಅವರಿಂದ ನಾನು ಕಲಿತ ಪಾಠಗಳು. ಜತೆಗೆ ಸದಾ ದೊಡ್ಡದನ್ನೇ ಕನಸು ಕಾಣುವ ಅವರ ಆಶಾಭಾವವು ನನ್ನ ಮೇಲೆ ಅಘಾದವಾದ ಪರಿಣಾಮವನ್ನುಂಟು ಮಾಡಿದೆ. ಬಾಲಿವುಡ್‌ನ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಅವರೊಂದಿಗೆ ನಟಿಸುವ ಅವಕಾಶ ಲಭಿಸಿತ್ತು. ಈಗ ಯಶ್ ಜತೆ. ಇದು ಅದೃಷ್ಟವೇ ಸರಿ’ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
‘ಯಶ್ ಅವರು ಮೈಸೂರಿನವರು ಎಂದು ತಿಳಿಯಿತು. ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದರಂತೆ. ಅವರು ಹಂತ ಹಂತವಾಗಿ ಈ ಮಟ್ಟಕ್ಕೆ ಏರಿದ್ದಾರೆ. ಅವರ ಬೆಳವಣಿಗೆಗೆ ನಾನು ಮಾರು ಹೋಗಿದ್ದೇನೆ. ನಿಜ್ಕಕ್ಕೂ ಅವರ ವ್ಯಕ್ತಿತ್ವ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕೆಜಿಎಫ್ ಚಿತ್ರ ವೀಕ್ಷಿಸಿದ ನಂತರ ನಾನು ಅವರ ಅಭಿಮಾನಿಯಾಗಿದ್ದೆ. ಈಗ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ. ಎಲ್ಲರಿಗಿಂತಲೂ ಭಿನ್ನವಾಗಿ ಆಲೋಚಿಸುವ ಅವರು, ನನ್ನನ್ನೂ ಆ ರೀತಿ ಆಲೋಚಿಸುವಂತೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ನನ್ನ ವ್ಯಯಕ್ತಿಕ ಹಾಗೂ ವೃತ್ತಿ ಬದುಕಿನ ಬೆಳವಣಿಗೆಗೆ ನೆರವಾಗಲಿದೆ’ ಎಂದು ಅಕ್ಷಯ್ ಓಬೆರಾಯ್ ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಚಿತ್ರವನ್ನು ಗೀತು ಮೋಹನದಾಸ್ ನಿರ್ದೇಶಿಸುತ್ತಿದ್ದಾರೆ. ವಿಎನ್ ನಿರ್ಮಾಣ ಸಂಸ್ಥೆ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಇದನ್ನು ನಿರ್ಮಿಸುತ್ತಿದೆ. 2026ರ ಮಾರ್ಚ್ 19ರಂದು ಈ ಚಿತ್ರ ತೆರೆ ಕಾಣಲಿದೆ ಎಂದು ವರದಿಯಾಗಿದೆ.
ಓಬೆರಾಯ್ ಅವರು ಶಶಾಂಕ್ ಖೈತಾನ್ ನಿರ್ದೇಶನದ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ನಟಿಸಿದ್ದಾರೆ. ಚಿತ್ರವು ಅ. 2ರಂದು ತೆರೆ ಕಾಣಲಿದೆ.
‘ನಟರು ಕನಸುಗಾರರು. ಕಳೆದ 15 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ನಾನು ನಟಿಸಿದ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂದು ಕನಸು ಕಾಣುವುದು ನನ್ನ ಅಭ್ಯಾಸ. ಅದು ನಿಜವೂ ಆಗಿದೆ. ನಾವು ಉಳಿಯಬೇಕೆಂದರೆ ನಮ್ಮಲ್ಲಿರುವ ಸಕಾರಾತ್ಮಕ ಮನೋಭಾವವನ್ನು ಸದಾ ಜಾಗೃತವಾಗಿಟ್ಟುಕೊಳ್ಳಬೇಕು. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ಚಿತ್ರವೂ ಅದ್ಭುತ ಯಶಸ್ಸು ಕಾಣಲಿದೆ ಎಂಬ ವಿಶ್ವಾಸ ನನಗಿದೆ. ಜನರು ನನ್ನ ಕೆಲಸವನ್ನು ಗಮನಿಸುತ್ತಾರೆ ಎಂಬ ವಿಶ್ವಾಸವೂ ಇದೆ. ‘ಫೈಟರ್’ ಚಿತ್ರದಂತೆ ನಾನು ಸದ್ಯ ನಟಿಸುತ್ತಿರುವ ಈ ಎರಡೂ ಚಿತ್ರಗಳು ಗೆಲುವು ದಾಖಲಿಸಿವೆ’ ಎಂಬ ವಿಶ್ವಾಸವನ್ನು ಓಬೆರಾಯ್ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.