ಟಾಕ್ಸಿಕ್
ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. 2026ರಲ್ಲಿ ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಅವುಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಕೂಡ ಒಂದು.
ಜ.8ರಂದು ಯಶ್ ಜನ್ಮದಿನದ ಪ್ರಯುಕ್ತ ಚಿತ್ರದಲ್ಲಿ ಹೇಗೆ ಕಾಣಿಸಲಿದ್ದಾರೆ ಎನ್ನುವ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಈ ಹಿಂದೆ ಚಿತ್ರಕ್ಕೆ ಸಂಬಂಧಿಸಿದಂತೆ ಯಶ್ ಅವರ ಒಂದಷ್ಟು ಫೋಟೊಗಳೂ ಬಿಡುಗಡೆಯಾಗಿವೆ. ಅದರ ಪ್ರಕಾರ, ಗನ್ ಹಿಡಿದ ಗ್ಯಾಂಗ್ ಲೀಡರ್ ಪೋಸ್ಟರ್, ಅಂಬಾಸಿಡರ್ ಕಾರಿನ ಬಳಿ ಸಿಗರೇಟ್ ಹಿಡಿದು ನಿಂತಿರುವುದು ಕಂಡುಬಂದಿದೆ.
ಕಳೆದ ವರ್ಷ ಯಶ್ ಜನ್ಮದಿನಕ್ಕೆ ಟೈಟಲ್ ಟೀಸರ್ (ಬರ್ತಡೇ ಪೀಕ್) ಬಿಡುಗಡೆಯಾಗಿತ್ತು. ಅದರಲ್ಲಿ ಯಶ್ ದೊಡ್ಡ ಪಾರ್ಟಿ ಒಂದಕ್ಕೆ ಪ್ರವೇಶ ಮಾಡಿ ಗ್ಯಾಂಗ್‌ಸ್ಟರ್ ರೀತಿಯಲ್ಲಿ ಖಡಕ್ ಲುಕ್‌ನಲ್ಲಿ ಮಿಂಚಿದ್ದರು.
ಅಂದಿನಿಂದ ಇಂದಿನವರೆಗೂ ಚಿತ್ರದ ಕುರಿತು ಸಣ್ಣ ಸಣ್ಣ ಮಾಹಿತಿಯನ್ನು ತಂಡ ಹಂಚಿಕೊಳ್ಳುತ್ತಲೇ ಇದೆ. ಡಿಸೆಂಬರ್‌ನಿಂದ ನಟಿಯರನ್ನು ಪರಿಚಯಿಸಲು ಆರಂಭಿಸಿತ್ತು.
ಮೆಲಿಸಾ ಆಗಿ ರುಕ್ಮಿಣಿ ವಸಂತ್, ಗಂಗಾ ಆಗಿ ನಯನತಾರಾ, ಎಲಿಜಬೇತ್ ಆಗಿ ಹುಮಾ ಖುರೇಷಿ, ನಾದಿಯಾ ಆಗಿ ಕಿಯಾರಾ ಅಡ್ವಾಣಿ, ರೆಬೆಕಾ ಆಗಿ ತಾರಾ ಸುತಾರಿಯಾ ಅವರನ್ನು ಒಬ್ಬೊಬ್ಬರನ್ನೇ ವಿಭಿನ್ನ ರೀತಿಯಲ್ಲಿ ಪರಿಚಯಿಸಲಾಗಿದೆ.
ಚಿತ್ರತಂಡ ಹಂಚಿಕೊಂಡ ಪೋಸ್ಟರ್‌ಗಳಲ್ಲಿ ರುಕ್ಮಿಣಿ ವಸಂತ್ ಅವರು ಉದ್ದನೆಯ ಗೌನ್‌ನಲ್ಲಿ, ತಾರಾ ಸುತಾರಿಯಾ ಅವರನ್ನು ಗನ್ ಹಿಡಿದ ರೂಪದಲ್ಲಿ, ನಯನಾತಾರ ಅವರನ್ನು ಕೈಯಲ್ಲಿ ಗನ್ ಹಿಡಿದು ಕಪ್ಪು ಗೌನ್ ತೊಟ್ಟು ರೆಬೆಲ್ ಅವತಾರದಲ್ಲಿ, ಹುಮಾ ಖುರೇಷಿ ಅವರು ಯಾವುದೋ ಒಂದು ಸಾಮಾಜ್ಯದಲ್ಲಿ ಕಾರಿನ ಬಳಿ ಕಪ್ಪು ಬಣ್ಣದ ಉಡುಗೆ ತೊಟ್ಟು ನಿಂತಿರುವ ರೀತಿಯಲ್ಲಿ ಹಾಗೂ ಕಿಯಾರಾ ಅಡ್ವಾಣಿ ಅವರೂ ಉದ್ದನೆಯ ಗೌನ್ ಧರಿಸಿ ಬಣ್ಣ ಬಣ್ಣದ ಬೆಳಕಿನ ನಡುವೆ ನಡೆದು ಬರುವಂತೆ ತೋರಿಸಲಾಗಿದೆ.
ಬಿಗ್ ಟ್ವಿಸ್ಟ್‌ಅನ್ನು ಗೆಸ್ ಮಾಡಿದ ಅಭಿಮಾನಿಗಳು
ಈ ಎಲ್ಲಾ ಅಪ್ಡೇಟ್‌ಗಳನ್ನು ಗಮನಿಸಿರುವ ನೆಟ್ಟಿಗರು, ಸಿನಿಮಾದಲ್ಲಿ ಊಹಿಸಲಾರದ ತಿರುವು ಇದೆ ಎಂದು ಅಂದಾಜಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
ಎಲ್ಲಾ ನಟಿಯರು ಒಂದೇ ಪಾರ್ಟಿಗೆ ಬಂದು ನಟ ಯಶ್ ಅವರನ್ನು ಹೊಡೆದುರುಳಿಸುವ ತಂತ್ರ ರೂಪಿಸಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಇನ್ನೂ ಕೆಲವರು ರುಕ್ಮಿಣಿ ವಸಂತ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸಿನಿಮಾದ ಸೊಬಗು ಹೆಚ್ಚಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.