ADVERTISEMENT

ಸಂದರ್ಶನ | 2025 ಬದುಕು ಬದಲಿಸಿದ ವರ್ಷ: ಜೆ.ಪಿ.ತೂಮಿನಾಡು

ಶ್ವೇತಕುಮಾರಿ
Published 15 ಡಿಸೆಂಬರ್ 2025, 10:31 IST
Last Updated 15 ಡಿಸೆಂಬರ್ 2025, 10:31 IST
<div class="paragraphs"><p>ಜೆ.ಪಿ.ತೂಮಿನಾಡು</p></div>

ಜೆ.ಪಿ.ತೂಮಿನಾಡು

   

ಚಿತ್ರಕೃಪೆ: ಇನ್‌ಸ್ಟಾಗ್ರಾಂ

2025ರಲ್ಲಿ ಕನ್ನಡಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಚಿತ್ರ 'ಸು ಫ್ರಮ್ ಸೋ'. ಭರಪೂರ ಮನರಂಜನೆ ನೀಡಿದ ಈ ಸಿನಿಮಾದ ನಿರ್ದೇಶಕ ಹಾಗೂ ನಾಯಕ ನಟ ಜೆ.ಪಿ.ತೂಮಿನಾಡು. ತುಳು ರಂಗಭೂಮಿಯಲ್ಲಿ 14 ವರ್ಷಗಳ ಕಾಲ ನಟನಾಗಿ, ನಿರ್ದೇಶಕನಾಗಿ ನಿರಂತರ ಸೇವೆ ಸಲ್ಲಿಸಿದ ಜೆ.ಪಿ., ಸ್ವಾತಿ ಮುತ್ತಿನ‌ ಮಳೆ ಹನಿಯೇ, ಸಪ್ತ ಸಾಗರದಾಚೆ ಎಲ್ಲೊ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದರೂ, ಜನರು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ‘ಸು ಫ್ರಮ್ ಸೋ’ ಎನ್ನುವ ಚೊಚ್ಚಲ ನಿರ್ದೇಶನದ ಚಿತ್ರ ತೂಮಿನಾಡು ಅವರ ಬದುಕು ಬದಲಿಸಿತು. ಮಂಗಳೂರು ಮೂಲದ ಜೆ.ಪಿ.ತೂಮಿನಾಡು, ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಮಾತನಾಡಿ, 2025ರ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ಮುಂದಿನ ವರ್ಷದ ಯೋಜನೆ, ಕನಸುಗಳ ಬಗ್ಗೆ ವಿವರಿಸಿದ್ದಾರೆ.

ADVERTISEMENT

2025 ನಿಮ್ಮ ಪಾಲಿಗೆ ಹೇಗಿತ್ತು?

ಮರೆಯಲಾಗದ ವರ್ಷ. 2024ರ ವರೆಗೆ ಒಂದು ಬದುಕು ಇತ್ತು. 2025ರಲ್ಲಿ ಸಂಪೂರ್ಣ ಬದಲಾಯಿತು. ಸಿನಿಮಾ ರಂಗದಲ್ಲಿ ಬಹಳಷ್ಟು ಜನರಿಗೆ 2025 ಬಹುಮುಖ್ಯ ವರ್ಷವೇ ಆಗಿತ್ತು. ಅದೊಂದು ರೀತಿ ನಿರ್ಣಾಯಕ ವರ್ಷದಂತೆ ಅನಿಸಿತ್ತು. 'ಸು ಫ್ರಂ ಸೊ' ಕೇವಲ ನಮ್ಮ ಗೆಲುವಷ್ಟೇ ಅಲ್ಲ, ಇಡೀ ಚಿತ್ರರಂಗದ ಗೆಲುವಾಯಿತು. ಕನ್ನಡದ ಪ್ರೇಕ್ಷಕರು ಒಂದು ಮನರಂಜನಾತ್ಮಕ ಸಿನಿಮಾಕ್ಕಾಗಿ ತುಂಬ ಸಮಯದಿಂದ ಕಾಯುತ್ತಿದ್ದರು. ಆ ಅವಕಾಶ ನಮಗೆ ಸಿಕ್ಕಿತು. ಇದು ಜನರು ಗೆಲ್ಲಿಸಿದ ವರ್ಷ.

2025ರಲ್ಲಿ ನಿಮ್ಮ ಪಾಲಿನ ಸಿಹಿ ನೆನಪು ಯಾವುದು?

'ಸು ಫ್ರಂ ಸೋ’ ಗೆಲುವೇ ನನ್ನ ಪಾಲಿಗೆ ಸಿಹಿ ನೆನಪು. ಅದರಲ್ಲಿಯೂ, ಚಿತ್ರದ ಪ್ರಿಮಿಯರ್ ಪ್ರದರ್ಶನದ ದಿನ ಸಿನಿಮಾ ನೋಡಿದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು. ತಾಯಿ ನನ್ನ ಪಕ್ಕದಲ್ಲಿ ನಿಂತು ತಲೆ ಸವರಿ, 'ನನ್ನ ಮಗು' ಎಂದು ಹೆಮ್ಮೆಯಿಂದ ಹೇಳಿಕೊಂಡ ಆ‌ ಕ್ಷಣ ನನಗೆ ಮರೆಯಲಾಗದು. ಆ ಕ್ಷಣಕ್ಕಾಗಿಯೇ ಇಷ್ಟು ವರ್ಷ ಕಾಯುತ್ತಿದ್ದೆ.

ಏನಾದರೂ ಕಹಿ ನೆನಪು?

ಅದೆಲ್ಲ ಬದುಕಿನಲ್ಲಿ ಸಹಜವಾಗಿ ನಡೆಯುತ್ತಲೇ ಇರುತ್ತವೆ. ಸಿಹಿ ನೆನಪುಗಳನ್ನು ಜೊತೆಯಲ್ಲಿಟ್ಟುಕೊಳ್ಳುತ್ತೇವೆ. ಈ ವರ್ಷ ಒಂದಿಷ್ಟು ಆಪ್ತರನ್ನು ಕಳೆದುಕೊಂಡಿದ್ದೇನೆ. ಅದರಲ್ಲಿ ಕಾಡುವ ಒಂದು ನೆನಪು ಎಂದರೆ, ನನ್ನ ದೊಡ್ಡಮ್ಮನದ್ದು(ತಾಯಿಯ ಅಕ್ಕ). ಇದಕ್ಕೂ ಹಿಂದಿನ ವರ್ಷ ಅವರು ತೀರಿಹೋಗಿದ್ದು. ಆದರೆ ನನ್ನ ಸಿನಿಮಾದ ಗೆಲುವನ್ನು ಕಣ್ತುಂಬಿಕೊಳ್ಳಲು ಈ ಸಂದರ್ಭದಲ್ಲಿ ಅವರು ಇರಬೇಕಿತ್ತು ಎಂಬುದು ಬಹುವಾಗಿ ಕಾಡಿತ್ತು. ನನ್ನ ಬದುಕಿನ ಸಂಕಟಗಳನ್ನು ಬಹಳ ವರ್ಷಗಳಿಂದ ಚೆನ್ನಾಗಿ ಅರಿತುಕೊಂಡಿದ್ದರು. 'ಏನಾದರೂ ಸಾಧಿಸು' ಎಂದು ಬೆನ್ನು ತಟ್ಟಿ ಹರಸುತ್ತಲೇ ಇದ್ದರು. ಹರಸಿ ಬೆಳೆಸಿದವರಿಗೇ ನನ್ನ ಸಿನಿಮಾ ನೋಡುವ ಭಾಗ್ಯ ಸಿಗಲಿಲ್ಲ ಎನ್ನುವ ದುಃಖ ಇದೆ.

2026ರ, ಯೋಜನೆ, ಕನಸುಗಳೇನು?

2026ರ ಜನವರಿಯಲ್ಲಿ ನನ್ನ ನಟನೆಯ ತುಳು- ಕನ್ನಡ ಸಿನಿಮಾ 'ಕಟ್ಟೆಮಾರ್' ತೆರೆ ಕಾಣಲಿದೆ. ಮಂಗಳೂರಿನ ಯುವಕರ ತಂಡ ಮಾಡಿರುವ ಸಿನಿಮಾ ಅದು. ಜೊತೆಗೆ ಒಂದಷ್ಟು ಯೋಜನೆಗಳಿವೆ.

ಮುಂದಿನ ವರ್ಷದಿಂದ ಬದುಕಿನಲ್ಲಿ ಏನಾದರೊಂದು ಬದಲಾವಣೆ ಮಾಡುವುದಾದರೆ...?

ಬದಲಾವಣೆ ಮಾಡಿಕೊಳ್ಳಬೇಕಾದಂಥ ಯಾವ ಅನಗತ್ಯ ಅಭ್ಯಾಸವೂ ನನಗಿಲ್ಲ. ಆದರೆ ಬಹಳಷ್ಟು ಹೊಸ ವಿಷಯಗಳನ್ನು ಕಲಿಯಬೇಕು ಎನ್ನುವ ಹಂಬಲ ಇದೆ. 2026ರ ಕೊನೆಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಯಾವುದಾದರೊಂದು ಹೊಸ ವಿಷಯ ಕಲಿತಿರಬೇಕು ಎಂಬ ಆಲೋಚನೆ ಇದೆ.

ನಿಮ್ಮ ಬದುಕಿನ ಅನುಭವದ ಬುತ್ತಿಯಿಂದ, ಒಂದು ತುಂಡು ರೊಟ್ಟಿ ಹಂಚುವುದಾದರೆ...

ತಾಳ್ಮೆ. ಬದುಕಿನಲ್ಲಿ ತಾಳ್ಮೆ ಎನ್ನುವುದು ಬಹಳ‌ ಮುಖ್ಯ. ಯಾವುದೇ ಕೆಲಸಕ್ಕೆ ಕೈಹಾಕಿದಾಗಲೂ, 'ಇದು ನನಗೆ ಸಾಧ್ಯವಿಲ್ಲ, ನನ್ನಿಂದ ಆಗದು, ನನಗೆ ಸಾಮರ್ಥ್ಯವಿಲ್ಲ' ಎಂದೆಲ್ಲ ತಪ್ಪುಕಲ್ಪನೆ ಇಟ್ಟುಕೊಳ್ಳಬಾರದು. ನಾವೇನು ಹುಡುಕುತ್ತೇವೆಯೋ ಅದು ನಮ್ಮಲ್ಲಿಯೇ ಅಥವಾ ನಮ್ಮ ಬದುಕಿನ ಸುತ್ತಮುತ್ತಲಲ್ಲಿಯೇ ಇರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ಸಹನೆ ಬೇಕು. ಯಾವುದೇ ಕೆಲಸಕ್ಕೆ ಮುಂದಾಗುವಾಗಲೂ, ಆ ಕೆಲಸ ನಮ್ಮಿಂದ ಏನನ್ನು ಬೇಡುತ್ತದೆ, ಎಷ್ಟು ಸಾಮರ್ಥ್ಯ ಬೇಡುತ್ತದೆ ಎನ್ನುವುದನ್ನು ಮುಖ್ಯವಾಗಿಸಿ ಕೆಲಸ ಮಾಡಬೇಕೆ ಹೊರತು ಅದರಿಂದ ನಮಗೆ ಏನು ಸಿಗುತ್ತದೆ ಎಂದು ಯೋಚಿಸಿ ಕೆಲಸ ಮಾಡಬಾರದು. ಸಮಾಜಕ್ಕಾದರೂ ಆಗಲಿ, ದೇಶಸೇವೆಯ ವಿಷಯವೇ ಆಗಲಿ, ನಮ್ಮಿಂದ ಏನು ಮಾಡಲು ಸಾಧ್ಯ ಎನ್ನುವುದಷ್ಟೇ ಯೋಚಿಸಬೇಕು. ಬರಬೇಕಾದ ಫಲ, ಫಲಿತಾಂಶ ನೀವು ಕೇಳದೆಯೇ ನಿಮ್ಮನ್ನು ತಲುಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.