ಜಯಶ್ರೀ ರಾಮಯ್ಯ, ಸಿದ್ಧಾರ್ಥ ಶುಕ್ಲಾ, ಶೆಫಾಲಿ ಜರಿವಾಲಾ
ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟು ವೀಕ್ಷಕರಿಗೆ ಮನರಂಜನೆ ನೀಡಿದ್ದ ಅನೇಕ ಮಾಜಿ ಸ್ಪರ್ಧಿಗಳು ಇಂದು ನಮ್ಮೊಂದಿಗಿಲ್ಲ. ಬಿಗ್‌ಬಾಸ್ ಮನೆಗೆ ಆಗಮಿಸಿದ್ದ ಸ್ಪರ್ಧಿಗಳು ಅಕಾಲಿಕವಾಗಿ ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ನಟಿ ಜಯಶ್ರೀ ರಾಮಯ್ಯ, ಸಿದ್ಧಾರ್ಥ್ ಶುಕ್ಲಾ, ಶೆಫಾಲಿ ಜರಿವಾಲಾ, ಪ್ರತ್ಯೂಷಾ ಬ್ಯಾನರ್ಜಿ, ಸೋಮದಾಸ್ ಚತ್ತನ್ನೂರ್, ಸೋನಾಲಿ ಫೋಗಟ್ ಸೇರಿದಂತೆ ಮುಂತಾದವರು ಹೃದಯಾಘಾತ, ಆತ್ಮಹತ್ಯೆ, ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಜಯಶ್ರೀ ರಾಮಯ್ಯ
ಜಯಶ್ರೀ ರಾಮಯ್ಯ
ಕನ್ನಡದ ಬಿಗ್‌ಬಾಸ್ 3ನೇ ಆವೃತ್ತಿಗೆ ನಟಿ ಜಯಶ್ರೀ ರಾಮಯ್ಯ ಎಂಟ್ರಿ ಕೊಟ್ಟಿದ್ದರು. ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ತುಂಬಾ ಚೆನ್ನಾಗಿ ಟಾಸ್ಕ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ, ಮಾನಸಿಕ ಖಿನ್ನತೆಯಿಂದಾಗಿ 2020ರಲ್ಲಿ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡರು.
ಖಾಸಗಿ ಕಂಪೆನಿಯಲ್ಲಿ ಎಚ್‌ಆರ್ ಆಗಿದ್ದ ಜಯಶ್ರೀ, ಮಾಡೆಲಿಂಗ್ ಕ್ಷೇತದ ಕಡೆಗೆ ಆಕರ್ಷಿತರಾಗಿದ್ದರು. ಬಳಿಕ ಬಿಗ್‌ಬಾಸ್ ಮನೆಗೂ ಕಾಲಿಟ್ಟರು. ನಂತರ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು. ಆದರೆ, ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ತಮ್ಮ ಫೇಸ್‌ಬುಕ್‌ನಲ್ಲಿ, ಜುಲೈ 22, 2020ರ ಬುಧವಾರ ಬೆಳಿಗ್ಗೆ 'I Quit... ಎಂದು ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿದ್ಧಾರ್ಥ ಶುಕ್ಲಾ
ಹಿಂದಿಯ ಬಿಗ್‌ಬಾಸ್ 13ನೇ ಆವೃತ್ತಿಯ ವಿಜೇತ ಹಾಗೂ 'ಬಾಲಿಕಾ ವಧು' ಧಾರಾವಾಹಿ ನಟ ಸಿದ್ಧಾರ್ಥ ಶುಕ್ಲಾ (40) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎದೆ ನೋವಿನಿಂದ ಅವರು ಸೆಪ್ಟೆಂಬರ್ 2, 2021ರಂದು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಟ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಮೊದಲು ಮಾಡೆಲ್ ಆಗಿದ್ದ ಶುಕ್ಲಾ, ದೂರದರ್ಶನದ ಪ್ರಮುಖ ಧಾರಾವಾಹಿ 'ಬಾಬುಲ್ ಕಾ ಆಂಗನ್ ಚೂಟೆ ನಾ' ಮೂಲಕ ನಟನಾ ರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ 'ಜಾನೆ ಪೆಹ್ವಾನೆ ಸೆ ... ಯೆ ಅಜ್ಜಬಿ’, 'ಲವ್ ಯು ಜಿಂದಗಿ' ನಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ದೂರದರ್ಶನದಲ್ಲಿ ದೀರ್ಘಕಾಲ ಪ್ರಸಾರವಾದ 'ಬಾಲಿಕಾ ವಧು' ಧಾರಾವಾಹಿ ಮೂಲಕ ದೇಶದಾದ್ಯಂತ ಮನೆಮಾತಾಗಿದ್ದರು.
ಇದಾದ ಬಳಿಕ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಬಿಗ್‌ಬಾಸ್ 13ನೇ ಆವೃತ್ತಿಯಲ್ಲಿ ಭಾಗವಹಿಸಿ ವಿಜೇತರಾದರು. ನಂತರ ಕರಣ್ ಜೋಹರ್ ನಿರ್ಮಾಣದ 'ಹಂಪ್ಪಿ ಶರ್ಮಾ ಕಿ ದುಲ್ಲೇನಿಯಾ' ಸಿನಿಮಾದಲ್ಲೂ ನಟಿಸಿದ್ದರು. ಅಲ್ಲದೇ 'ಡ್ಯಾನ್ಸ್ ದಿವಾನೇ 3' ರಲ್ಲಿ ಸೇರಿದಂತೆ ಅನೇಕ ಹಿಂದಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ಪ್ರತ್ಯೂಷಾ ಬ್ಯಾನರ್ಜಿ
ಪ್ರತ್ಯೂಷಾ ಬ್ಯಾನರ್ಜಿ
ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ‘ಬಾಲಿಕಾ ವಧು‘ ಧಾರಾವಾಹಿಯಲ್ಲಿ ಆನಂದಿ ಪಾತ್ರದಲ್ಲಿ ನಟಿಸುತ್ತಿದ್ದರು. ಇದಾದ ಬಳಿಕ ಹಿಂದಿ ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.
ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಂಡಿದ್ದ ನಟಿ ಪ್ರತ್ಯೂಷಾ ಬ್ಯಾನರ್ಜಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ನಟಿಯ ಸಾವು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನು ಉಂಟುಮಾಡಿತು.
ಸೋನಾಲಿ ಫೋಗಟ್
ಸೋನಾಲಿ ಫೋಗಟ್
ನಟಿ ಸೋನಾಲಿ ಫೋಗಟ್ ಅವರು ಹಿಂದಿ ಬಿಗ್‌ಬಾಸ್ 14ನೇ ಆವೃತ್ತಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರು ಆಗಸ್ಟ್ 2022ರಲ್ಲಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು.
ಸ್ವಾಮಿ ಓಂ
ಸ್ವಾಮಿ ಓಂ
ಸ್ವಾಮಿ ಓಂ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು. ಇವರು ಬಿಗ್‌ಬಾಸ್ 10ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಬಿಗ್‌ಬಾಸ್ ಮೂಲಕವೇ ಜನಪ್ರಿಯತೆ ಪಡೆದುಕೊಂಡಿದ್ದರು. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಇವರು, ಕಳ್ಳತನದ ಆರೋಪ ವಿವಾದಾತ್ಮಕ ಹೇಳಿಕೆ ಹಾಗೂ ಬಂಧನಕ್ಕೊಳಗಾಗಿದ್ದರು.
ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಫೆಬ್ರವರಿ 2021ರಂದು 63ನೇ ವಯಸ್ಸಿನಲ್ಲಿ ನಿಧನರಾದರು.
ಸೋಮದಾಸ್ ಚತ್ತನ್ನೂರ್
ಸೋಮದಾಸ್ ಚತ್ತನ್ನೂರ್
ಮಲಯಾಳಂ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದ ಗಾಯಕ ಸೋಮದಾಸ್ ಚತ್ತನ್ನೂರ್ 2021ರಲ್ಲಿ ಕೋವಿಡ್‌ನಿಂದ ಕೊನೆಯುಸಿರೆಳೆದರು. ಗಾಯಕರಾಗಿದ್ದ ಇವರು, ದೂರದರ್ಶನ ಹಾಗೂ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿಕೊಂಡಿದ್ದರು.
ಶೆಫಾಲಿ ಜರಿವಾಲಾ
ಇತ್ತೀಚೆಗೆ ನಟಿ, ರೂಪದರ್ಶಿ, ಬಿಗ್‌ಬಾಸ್ ಮಾಜಿ ಸ್ಪರ್ಧಿಯಾಗಿದ್ದ ಶೆಫಾಲಿ ಜರಿವಾಲಾ (42) ಕಳೆದ ಜೂನ್ ತಿಂಗಳಿನಲ್ಲಿ ಮುಂಬೈನಲ್ಲಿ ಮೃತಪಟ್ಟಿದ್ದರು. ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ 11.15ರ ಸುಮಾರಿಗೆ ಶೆಫಾಲಿ ಅವರಿಗೆ ಹೃದಯಸ್ತಂಭನವಾಗಿದ್ದು, ಅವರ ಪತಿ ಪರಾಗ್ ತ್ಯಾಗಿ ಅಂಧೇರಿಯ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಅಸುನೀಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಘೋಷಿಸಿದ್ದರು.
ನಿರ್ದೇಶಕ, ನಟ ಸೂರ್ಯ ಕಿರಣ್
ನಿರ್ದೇಶಕ, ನಟ ಸೂರ್ಯ ಕಿರಣ್
ತೆಲುಗು ಸಿನಿಮಾ ನಿರ್ದೇಶಕ, ನಟ ಮತ್ತು ಬರಹಗಾರರಾಗಿದ್ದ ಸೂರ್ಯ ಕಿರಣ್ ಅವರು 48ನೇ ವಯಸ್ಸಿನಲ್ಲಿ ಜಾಂಡಿಸ್‌ನಿಂದ ನಿಧನರಾದರು. ಇವರು ತೆಲುಗು ಬಿಗ್‌ಬಾಸ್ 4ರಲ್ಲಿ ಸ್ಪರ್ಧಿಯಾಗಿದ್ದರು.
ಜಾಂಡಿಸ್‌ನಿಂದ ಬಳಲುತ್ತಿದ್ದ ನಟ ಸೂರ್ಯ ಕಿರಣ್ 2024ರ ಮಾರ್ಚ್ 11ರಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು. ಇವರು 2003ರಲ್ಲಿ 'ಸತ್ಯಂ' ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನ ಮಾಡಿದರು, ಇದು ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಬಳಿಕ 'ಧನ 51', 'ರಾಜು ಭಾಯ್' ಮತ್ತು 'ಅಧ್ಯಾಯ 6' ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.