ADVERTISEMENT

‘ನಂದಗೋಕುಲ’ ಧಾರಾವಾಹಿಯಲ್ಲಿ ತಿರುವು; ಪ್ರಿಯಾಳ ನಕಲಿ ಒಡವೆಗಳ ಸತ್ಯ ಬಯಲಾಗುತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 9:30 IST
Last Updated 27 ಫೆಬ್ರುವರಿ 2026, 9:30 IST
<div class="paragraphs"><p>ನಂದಗೋಕುಲ ಧಾರಾವಾಹಿ ನಟಿಯರು</p></div>

ನಂದಗೋಕುಲ ಧಾರಾವಾಹಿ ನಟಿಯರು

   

ಚಿತ್ರ: ಇನ್‌ಸ್ಟಾಗ್ರಾಂ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಗೋಕುಲ’ ಧಾರಾವಾಹಿಯು ರೋಚಕ ತಿರುವು ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ ಈ ಕೌಟುಂಬಿಕ ಕಥೆ ಆಧಾರಿತ ಧಾರಾವಾಹಿ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿದ್ದು, ಇದೀಗ ಕಥೆಯ ಹಾದಿಯೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಚಲನಕ್ಕೆ ಪ್ರಮುಖ ಕಾರಣವಾಗಿರುವುದು ನಂದಕುಮಾರ್ ಅವರ ಹಿರಿ ಸೊಸೆ ಪ್ರಿಯಾಳ ಆಗಮನ.

ADVERTISEMENT

ತಾನು ತೋರಿಸಿದ ಹುಡುಗಿಯನ್ನೇ ತನ್ನ ಮೂರೂ ಮಕ್ಕಳು ಮದುವೆಯಾಗಬೇಕೆಂಬುದು ತಂದೆ ನಂದಕುಮಾರ್ ಅವರ ಅಚಲ ನಿರ್ಧಾರವಾಗಿತ್ತು. ಆದರೆ, ಕೇಶವ-ಮೀನಾ ಪ್ರೇಮ ವಿವಾಹವಾದರೆ, ಅತ್ತ ನಂದನಿಗೆ ತಿಳಿಯದಂತೆ ವಲ್ಲಭ ಕೂಡ ಅಮೂಲ್ಯಳನ್ನು ಮದುವೆಯಾಗಿದ್ದಾನೆ. ಈ ಎಲ್ಲ ಗೊಂದಲಗಳ ನಡುವೆ, ತಂದೆಯ ಮಾತಿಗೆ ಬೆಲೆ ನೀಡಿ ಆತ ತೋರಿಸಿದ ಹುಡುಗಿಯನ್ನೇ ಮದುವೆಯಾಗಿ ನಂದನ ಕನಸನ್ನು ನನಸು ಮಾಡಿದವನು ಮಗ ಮಾಧವ. ಹೀಗಾಗಿಯೇ ನಂದಕುಮಾರ್‌ಗೆ ಮಾಧವ ಮತ್ತು ಆತನ ಪತ್ನಿ ಪ್ರಿಯಾ ಮೇಲೆ ಅತೀವವಾದ ಪ್ರೀತಿ ಮತ್ತು ಹೆಮ್ಮೆ.

ನಂದಗೋಕುಲ ಧಾರಾವಾಹಿ ತಂಡ

ಸದ್ಯದ ಕಥೆಯಲ್ಲಿ, ಪ್ರಿಯಾ ಕೇವಲ ಸೊಸೆಯಾಗಿ ಮಾತ್ರವಲ್ಲದೆ, ನಂದಕುಮಾರನ ಅತ್ಯಂತ ನೆಚ್ಚಿನ ಸೊಸೆಯಾಗಿ ಮನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಪ್ರಿಯಾ ಏನನ್ನು ಹೇಳಿದರೂ ಅದು ಸರಿಯಾಗಿಯೇ ಇರುತ್ತದೆ ಎಂಬ ಕುರುಡು ನಂಬಿಕೆ ನಂದನದ್ದು. ಆದರೆ ಮಾವನ ಈ ಅತಿಯಾದ ಪ್ರೀತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಪ್ರಿಯಾ, ಪ್ರತಿಯೊಂದು ವಿಚಾರದಲ್ಲೂ ತನ್ನದೇ ಮೇಲುಗೈ ಇರಬೇಕೆಂದು ನಂದಕುಮಾರ್ ಮೇಲೆ ಪ್ರಭಾವ ಬೀರಲು ಶುರು ಮಾಡಿದ್ದಾಳೆ. ಇದರಿಂದಾಗಿ ನಂದಗೋಕುಲದ ಮನೆಯ ಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತಿದೆ.

ಅತ್ತೆ ಗಿರಿಜಾ, ಮೀನಾ ಮತ್ತು ಅಮೂಲ್ಯ ಒಂದು ಕಡೆಯಾದರೆ, ತನ್ನ ಚಾಣಾಕ್ಷ ನಡೆಯಿಂದ ಪ್ರಿಯಾ ಮತ್ತೊಂದು ಕಡೆ ನಿಂತಿದ್ದಾಳೆ. ಮೇಲ್ನೋಟಕ್ಕೆ ಸಮರದಂತೆ ಕಾಣದಿದ್ದರೂ, ಒಳಗೊಳಗೆ ವಾರಗಿತ್ತಿಯರ ನಡುವೆ ಕಿಡಿ ಹೊತ್ತಿಕೊಂಡಿದೆ. ಆ ಜಟಾಪಟಿಯಲ್ಲಿ ಕೆಲವೊಮ್ಮೆ ಮೀನಾ ಗೆದ್ದರೆ, ಮಗದೊಮ್ಮೆ ಪ್ರಿಯಾ ತನ್ನ ಪಟ್ಟು ಸಡಿಲಿಸದೆ ಗೆಲುವಿನ ನಗು ಬೀರುತ್ತಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳಿಂದ ನಂದಕುಮಾರನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಲು ಶುರುವಾಗಿವೆ. ಇದು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.

ನಂದಗೋಕುಲ ಧಾರಾವಾಹಿ ತಂಡ

ಈ ಎಲ್ಲಾ ಗದ್ದಲಗಳ ನಡುವೆ ಪ್ರಿಯಾಳ ಈ ವರ್ತನೆ ನಿಜಕ್ಕೂ ಕುಟುಂಬದ ಹಿತಕ್ಕಾಗಿಯೋ ಅಥವಾ ಆಕೆಯ ಅಸಲಿ ಮುಖವಾಡವೇ ಬೇರೆಯಿದೆಯೋ ಎಂಬ ಪ್ರಶ್ನೆ ಮೂಡಿದೆ. ನಂದಕುಮಾರ್ ಅವರ ಕಣ್ಣಿಗೆ ಮಣ್ಣೆರಚಿ ಆಕೆ ಮನೆ ಮುರಿಯುವ ಕೆಲಸಕ್ಕೆ ಕೈ ಹಾಕಿದ್ದಾಳಾ? ಎಂಬ ಆತಂಕವೂ ಮನೆ ಮಾಡಿದೆ. ಇದರ ಜೊತೆಗೆ ಕಥೆಯಲ್ಲಿ ಮತ್ತೊಂದು ಭಾವನಾತ್ಮಕ ಎಳೆ ಕೂಡ ತೆರೆದುಕೊಳ್ಳುತ್ತಿದೆ.

ಮದುವೆಯಾದ ಮೇಲೆ ಅಮೂಲ್ಯ ಈವರೆಗೂ ತನ್ನ ತವರಿಗೆ ಹೋಗಿಲ್ಲ. ಪತ್ನಿಯನ್ನು ಒಮ್ಮೆಯಾದರೂ ಅವಳ ತವರು ಮನೆಗೆ ಕಳಿಸಬೇಕು ಎನ್ನುವ ವಲ್ಲಭನ ಆಸೆ ಇನ್ನೂ ಈಡೇರಿಲ್ಲ. ಈ ನಡುವೆ ಹೋಳಿ ಹಬ್ಬದ ಸಂಭ್ರಮವನ್ನು ಬಳಸಿಕೊಂಡು ಅಮೂಲ್ಯಳನ್ನು ತವರಿಗೆ ಕಳಿಸಲು ವಲ್ಲಭ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

ಅಮೂಲ್ಯಳ ತವರಿನ ಆಸೆ ಈಡೇರುತ್ತಾ? ವಲ್ಲಭ ಹಾಕಿದ ಆ ಉಪಾಯವಾದರೂ ಏನು? ಹಿರಿ ಸೊಸೆ ಪ್ರಿಯಾಳ ಅಸಲಿ ಮುಖ ನಂದಕುಮಾರ್ ಮುಂದೆ ಬಯಲಾಗುತ್ತಾ? ಎಂಬ ಕುತೂಹಲಕಾರಿ ಸಂಚಿಕೆಗಳು ಮುಂಬರುವ ದಿನಗಳಲ್ಲಿ ತೆರೆದುಕೊಳ್ಳಲಿವೆ. ನಂದಗೋಕುಲದ ಒಗ್ಗಟ್ಟು ಉಳಿಯುತ್ತದೆಯೇ ಅಥವಾ ಸೊಸೆಯಂದಿರ ಶೀತಲ ಸಮರ ಕುಟುಂಬವನ್ನು ಹಾದಿ ತಪ್ಪಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.