ಅತ್ತ ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ನಡೆಯುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಪ್ರವಾಹವೇ ಹರಿಯುತ್ತಿತ್ತು. ಮುಖ್ಯವಾಹಿನಿಯಲ್ಲಿರುವ ಕೆಲವು ಮಾಧ್ಯಮಗಳು ಕೂಡ ವಾಸ್ತವ ಅಲ್ಲದ ಸುದ್ದಿಗಳನ್ನು ಪ್ರಕಟಿಸಿ ಮುಜುಗರ ಅನುಭವಿಸುವಂತಾಯಿತು. ಸುಳ್ಳು ಮಾಹಿತಿಯನ್ನೇ ತನ್ನ ಆಯುಧವಾಗಿ ಬಳಸುವ ಪಾಕಿಸ್ತಾನವು ಭಾರತದ ವಿರುದ್ಧ ಮಿಥ್ಯಾ ಸುದ್ದಿಗಳ ಸುರಿಮಳೆಯನ್ನೇ ಮಾಡಿತು. ಭಾರತದಲ್ಲೂ ಸಾಮಾಜಿಕ ಜಾಲತಾಣಗಳ ಬಳಕೆದಾರರು ಸುಳ್ಳು ಮಾಹಿತಿಗಳನ್ನು ಹಂಚಿಕೊಂಡರು. ಕದನ ವಿರಾಮದ ಕಾರಣಕ್ಕೆ ಎರಡೂ ರಾಷ್ಟ್ರಗಳ ನಡುವಿನ ಸೇನಾ ಸಂಘರ್ಷ ನಿಂತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ‘ಯುದ್ಧ’ ಮುಂದುವರಿದಿದೆ...
‘ಪಾಕಿಸ್ತಾನವು ಬೆಂಗಳೂರು ಬಂದರನ್ನು (ಪೋರ್ಟ್) ನಾಶಪಡಿಸಿದೆ’
ಪಾಕಿಸ್ತಾನದವರು ಎನ್ನಲಾದ ಫವಾದ್ ಉರ್ ರೆಹಮಾನ್ ಅವರು ‘ಎಕ್ಸ್’ ವೇದಿಕೆಯಲ್ಲಿ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವ್ಯಾಪಕ ಪ್ರಚಾರ ಪಡೆದಿದೆ. ಕೆಲವರು ಬೆಂಗಳೂರಿನ ಬಳಿ ಬಂದರು ಎಲ್ಲಿದೆ ಎಂದು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಮೀಮ್‌ಗಳ ಮೂಲಕ ವ್ಯಂಗ್ಯ ಮಾಡಿದ್ದಾರೆ. ‘ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ಹೆಬ್ಬಾಳ, ಗೊರಗುಂಟೆಪಾಳ್ಯ, ಕೆಂಗೇರಿ ಮತ್ತು ವೈಟ್‌ಫೀಲ್ಡ್‌ನ ವಾಯುನೆಲೆಗಳನ್ನು ಅವರು (ಪಾಕಿಸ್ತಾನ) ಭೇದಿಸಿರುವ ಪರಿಗೆ ಜಗತ್ತೇ ದಿಗ್ಭ್ರಮೆಗೊಂಡಿದೆ’ ಎಂದು ವಿಡಂಬಿಸಿದ್ದಾರೆ. ಅರುಣ್ ಬೊಥ್ರಾ ಎನ್ನುವ ಐಪಿಎಸ್ ಅಧಿಕಾರಿ ‘ಬೆಂಗಳೂರಿನಲ್ಲಿ ಇರುವುದು ಯುಎಸ್‌ಬಿ ಪೋರ್ಟ್‌ಗಳು ಮಾತ್ರ’ ಎಂದು ಪ್ರತಿಕ್ರಿಯಿಸಿರುವುದೂ ಸುದ್ದಿಯಾಗಿದೆ.
ಅರುಣ್ ಬೊಥ್ರಾ ನೀಡಿರುವ ಪ್ರತಿಕ್ರಿಯೆ
ಬಿಲಾಲ್ ಷರೀಫ್ ಎನ್ನುವ ಮತ್ತೊಬ್ಬ ‘ಎಕ್ಸ್’ ಬಳಕೆದಾರ ‘ಪಾಕಿಸ್ತಾನದ ವಾಯುಸೇನೆಯು ಪಟ್ನಾ ಬಂದರನ್ನು ನಾಶಪಡಿಸಿದೆ’ ಎನ್ನುವ ‘ಬ್ರೇಕಿಂಗ್’ ಸುದ್ದಿಯನ್ನು ಪೋಸ್ಟ್ ಮಾಡಿರುವುದರ ಬಗ್ಗೆಯೂ ‘ಎಕ್ಸ್’ ಬಳಕೆದಾರರು ಇದೇ ರೀತಿ ವ್ಯಂಗ್ಯವಾಡಿದ್ದಾರೆ. ಇವೆರಡು ಉದಾಹರಣೆಗಳಷ್ಟೆ. ಮೂರು ದಿನ ನಡೆದ ಭಾರತ–ಪಾಕಿಸ್ತಾನ ಸೇನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ದಾಳಿ, ಹತ್ಯೆಗಳ ಸಾವಿರಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಸುಳ್ಳುಸುದ್ದಿ ಹಂಚಿಕೊಳ್ಳುವುದರಲ್ಲಿ, ಅಪಪ್ರಚಾರ ಮಾಡುವುದರಲ್ಲಿ ಪಾಕಿಸ್ತಾನಿಯರೇ ಮುಂದಿದ್ದಾರೆ.
ಪಾಕಿಸ್ತಾನದ ಸೇನೆಯ ಡಿಜಿ–ಐಎಸ್‌ಪಿಆರ್ ಅಹ್ಮದ್ ಷರೀಫ್ ಚೌಧರಿಯವರೇ ಅಪೂರ್ಣ ವಿಡಿಯೊ ತೋರಿಸಿ ಸುಳ್ಳು ಪ್ರತಿಪಾದನೆ ಮಾಡಿರುವ ಘಟನೆಯೂ ನಡೆದಿದೆ. ಭಾರತದ ಸುದ್ದಿವಾಹಿನಿಯ ಸಣ್ಣ ತುಣುಕನ್ನು ಮಾಧ್ಯಮಗಳಿಗೆ ತೋರಿಸಿದ್ದ ಅವರು, ಭಾರತದ ವಾಯುನೆಲೆಯನ್ನು ಪಾಕಿಸ್ತಾನ ನಾಶಪಡಿಸಿದೆ ಎಂದು ಹೇಳಿದ್ದರು. ಆದರೆ, ಅದು ಸುಳ್ಳು ಸುದ್ದಿ ಆಗಿತ್ತು. ವಾಸ್ತವವಾಗಿ ಅದು ಭಾರತದ ಸೇನೆಯು ಪಾಕಿಸ್ತಾನದ ವಾಯುನೆಲೆ ಮೇಲೆ ನಡೆಸಿದ ದಾಳಿಯ ವಿಡಿಯೊ ಆಗಿತ್ತು. ಸಂಬಂಧವಿಲ್ಲದ ವಿಡಿಯೊ ತೋರಿಸುವ ಮೂಲಕ ಷರೀಫ್ ಅವರು ತಮ್ಮದೇ ದೇಶದ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಭಾರತದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (ಪಿಐಬಿ) ಫ್ಯಾಕ್ಟ್ ಚೆಕ್ ವರದಿಯಲ್ಲಿ ಹೇಳಿತ್ತು.
ಸುಳ್ಳೇ ಅಸ್ತ್ರ: ಭಾರತ–ಪಾಕಿಸ್ತಾನಕ್ಕೆ ಸಂಬಂಧಿಸಿದ ಇಂಥ ನೂರಾರು ನಕಲಿ ಚಿತ್ರ, ತಪ್ಪು ಮಾಹಿತಿ, ತಿರುಚಿದ ವಿಡಿಯೊಗಳು ಎಕ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೆಯಾಗುತ್ತಿವೆ. ಸುಳ್ಳು ಸುದ್ದಿಯನ್ನೇ ಅಸ್ತ್ರವನ್ನಾಗಿಸುವ ಜಾಯಮಾನದ ಪಾಕಿಸ್ತಾನವು ಈ ಬಾರಿಯೂ ಭಾರತದ ವಿರುದ್ಧ ಸೇನಾ ಸಂಘರ್ಷದ ಜೊತೆಗೆ ಸುಳ್ಳು ಮಾಹಿತಿ, ಅಪಪ್ರಚಾರದ ಮೂಲಕ ಭಾರತೀಯರ ಮನೋಸ್ಥೈರ್ಯವನ್ನು ಕುಂದಿಸುವುದು, ಜಾಗತಿಕ ಮಟ್ಟದಲ್ಲಿ ಗೊಂದಲ ಸೃಷ್ಟಿಸುವುದು ಮತ್ತು ತಾನು ಸಂತ್ರಸ್ತ ಎನ್ನುವ ಮುಖವಾಡ ಪ್ರದರ್ಶಿಸುವ ಪ್ರಯತ್ನವನ್ನು ಮಾಡಿತ್ತು.
ಭಾರತದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎನ್ನುವಂತೆ, ಭಾರತದ ಗಡಿಗೆ ಹೊಂದಿಕೊಂಡ ಗ್ರಾಮಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎನ್ನುವಂತೆ ಸುದ್ದಿ, ಚಿತ್ರ, ವಿಡಿಯೊಗಳನ್ನು ಸೃಷ್ಟಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಯಿತು. ಈ ಪೈಕಿ, ಅತ್ಯಂತ ಅಪಾಯಕಾರಿ ಸುಳ್ಳು ಎಂದರೆ, ಭಾರತವು ಅಮೃತಸರದ ಕಡೆಗೆ ಕ್ಷಿಪಣಿಗಳನ್ನು ಹಾರಿಸುತ್ತಿದೆ; ಪಾಕಿಸ್ತಾನದಲ್ಲಿರುವ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆಸಿದೆ ಎನ್ನುವುದು. ಈ ಮೂಲಕ ಭಾರತದಲ್ಲಿ ಕೋಮು ಸಂಘರ್ಷ, ಕ್ಷೋಭೆ, ಗೊಂದಲ ಉಂಟುಮಾಡುವುದು ಅದರ ಯತ್ನವಾಗಿತ್ತು. ಅಲ್ಲದೇ, ತಾನು ಸಂಯಮದಿಂದ ವರ್ತಿಸುತ್ತಿದ್ದೇನೆ ಎಂದು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿ, ಜಾಗತಿಕ ಸಮುದಾಯದ ಸಹಾನುಭೂತಿ ಗಿಟ್ಟಿಸುವ ಉದ್ದೇಶವೂ ಇದರ ಹಿಂದಿತ್ತು ಎಂದೂ ಹೇಳಲಾಗಿದೆ.
ಭಾರತದಲ್ಲೂ ಸುಳ್ಳಿನ ಪ್ರಚಾರ:
ಭಾರತದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೂಡ ಪಾಕಿಸ್ತಾನದ ವಿರುದ್ಧ ಇಂಥ ಸುಳ್ಳು ಸುದ್ದಿಗಳನ್ನು ಸಂಘರ್ಷದ ಸಂದರ್ಭದಲ್ಲಿ ಹರಡಿರುವುದು ಫ್ಯಾಕ್ಟ್ ಚೆಕ್‌ಗಳ ಮೂಲಕ ಬಯಲಾಗಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ವಾಸ್ತವಾಂಶಗಳನ್ನು ತಿರುಚಿ ಸುಳ್ಳು ಪ್ರತಿಪಾದನೆಗಳನ್ನು ಮಾಡಲಾಗಿತ್ತು. ಹಿಂದಿ, ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳ ಮುಖ್ಯವಾಹಿನಿಯ ಹಲವು ಮಾಧ್ಯಮಗಳಲ್ಲಿ ಕೂಡ ಖಚಿತವಾಗಿರದಿದ್ದ ಸುದ್ದಿಗಳು ಪ್ರಸಾರವಾಗಿವೆ. ವಿಡಿಯೊ ಗೇಮ್‌ಗಳ ತುಣುಕುಗಳನ್ನೇ ದಾಳಿಯ ವಿಡಿಯೊಗಳು ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಲಾಗಿದೆ. ಮಾಧ್ಯಮಗಳು ಕೂಡ ಇಂತಹದ್ದೇ ವಿಡಿಯೊಗಳನ್ನು ತಮ್ಮ ವರದಿಗಳಲ್ಲಿ ಬಳಸಿವೆ. ಕೊನೆಗೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ‘ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುವಾಗ ನಿಜವೇ ಸುಳ್ಳೇ ಎಂಬುದನ್ನು ಪರಿಶೀಲಿಸಿ. ಪಾಕಿಸ್ತಾನ ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಎಚ್ಚರವಿರಿ’ ಎಂದು ಸಲಹೆ ನೀಡಬೇಕಾಯಿತು.
ಸದ್ದು ಮಾಡಿದ ಪ್ರಮುಖ ಸುಳ್ಳು ಸುದ್ದಿಗಳು
1. ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ದಾಳಿ: ಮೇ 8ರ ರಾತ್ರಿ ಭಾರತೀಯ ನೌಕಾ ಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಿ ಭಾರಿ ಹಾನಿ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಜತೆಗೆ ಒಂದು ವಿಡಿಯೊವನ್ನೂ ಬಳಕೆದಾರರು ಪೋಸ್ಟ್ ಮಾಡಿದ್ದರು. ಹಲವು ಸುದ್ದಿ ವಾಹಿನಿಗಳು ಬಂದರಿನ ಮೇಲೆ ದಾಳಿ ಮಾಡಿರುವ ಸುದ್ದಿ ಪ್ರಸಾರ ಮಾಡಿದವು. ಮಾರನೇ ದಿನ ಕೆಲವು ಪತ್ರಿಕೆಗಳಲ್ಲೂ ಇದು ವರದಿಯಾಯಿತು. ಆದರೆ, ಕರಾಚಿ ಬಂದರಿನ ಮೇಲೆ ಭಾರತೀಯ ಪಡೆಗಳು ದಾಳಿ ನಡೆಸಿರಲಿಲ್ಲ. ಹಂಚಿಕೊಂಡಿದ್ದ ವಿಡಿಯೊವು ಫಿಲಡೆಲ್ಫಿಯಾದಲ್ಲಿ ಸಂಭವಿಸಿದ್ದ ವಿಮಾನ ಪತನದ್ದಾಗಿತ್ತು ಎಂದು ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೇರ್ ಹೇಳಿದ್ದರು
2. ಆಸೀಂ ಮುನೀರ್ ರಾಜೀನಾಮೆ, ವಜಾ, ಬಂಧನ: ಮೇ 8ರ ರಾತ್ರಿ, ಭಾರತವು ತನ್ನ ದಾಳಿಯನ್ನು ತೀವ್ರಗೊಳಿಸುತ್ತಲೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರನ್ನು ಸರ್ಕಾರ ಹುದ್ದೆಯಿಂದ ವಜಾ ಮಾಡಿದೆ/ಅವರು ರಾಜೀನಾಮೆ ನೀಡಿದ್ದಾರೆ/ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತು. ಕೆಲವು ಸುದ್ದಿ ವಾಹಿನಿಗಳಲ್ಲಿ ಇದು ಬಿತ್ತರವಾಯಿತು. ಮರುದಿನ ದಿನಪತ್ರಿಕೆಗಳು ಕೂಡ ಇದನ್ನು ವರದಿ ಮಾಡಿದವು. ವಾಸ್ತವದಲ್ಲಿ ಅಂತಹ ಬೆಳವಣಿಗೆ ನಡೆದಿರಲಿಲ್ಲ
3. ಪ್ರಧಾನಿ ಮನೆ ಬಳಿ ಭಾರಿ ಸ್ಫೋಟ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಬಳಿ ಸ್ಫೋಟ ಸಂಭವಿಸಿದೆ. ಅವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಆದರೆ, ಅಂತಹದ್ದೇನೂ ಆಗಿರಲಿಲ್ಲ
4. ಆತ್ಮಾಹುತಿ ದಾಳಿ: ಜಮ್ಮುವಿನ ರಾಜೌರಿಯಲ್ಲಿರುವ ಸೇನಾ ನೆಲೆಯ ಮೇಲೆ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡರು. ಸುದ್ದಿ ವಾಹಿನಿಗಳಲ್ಲೂ ಇದು ವರದಿಯಾಯಿತು. ಪಿಐಬಿ ಫ್ಯಾಕ್ಟ್‌ಚೆಕ್ ಇದನ್ನು ತಳ್ಳಿ ಹಾಕಿತು
5. ಯುದ್ಧವಿಮಾನ ಪತನ, ಪೈಲಟ್ ಬಂಧನ: ಪಾಕಿಸ್ತಾನದ ಚೀನಾ ನಿರ್ಮಿತ ಜೆಎಫ್–17ಎಸ್ ಯುದ್ಧವಿಮಾನವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪತನವಾಗಿದೆ. ಪೈಲಟ್‌ನನ್ನು ಸೆರೆ ಹಿಡಿಯಲಾಗಿದೆ ಎಂಬ ಸುದ್ದಿಯನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಹಲವು ಸುದ್ದಿ ವೆಬ್‌ಸೈಟ್‌ಗಳು ಕೂಡ ಇದರ ವರದಿ ಮಾಡಿದವು. ಆದರೆ, ಅಂತಹ ಬೆಳವಣಿಗೆಯನ್ನು ಭಾರತೀಯ ಸೇನೆ ಖಚಿತಪಡಿಸಲಿಲ್ಲ
6.ಜಲಂಧರ್ ಮೇಲೆ ಡ್ರೋನ್ ದಾಳಿ: ಪಂಜಾಬ್‌ನ ಜಲಂಧರ್‌ನ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ ಎಂದು ಪಾಕಿಸ್ತಾನದ ಹಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ‘ಎಕ್ಸ್’, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಅದು ಸುಳ್ಳು ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿಸಿತ್ತು
7. ಭಾರತದ ಮೇಲೆ ಕ್ಷಿಪಣಿ ದಾಳಿ: ಪಾಕಿಸ್ತಾನವು ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಮೇ 7ರಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೊ ತುಣುಕಿನೊಂದಿಗೆ ಪಾಕಿಸ್ತಾನದವರು ಪೋಸ್ಟ್ ಮಾಡಿದ್ದರು. ಆದರೆ, ಆ ವಿಡಿಯೊವು ಲೆಬನಾನಿನ ಬೈರೂತ್‌ನಲ್ಲಿ 2020ರಲ್ಲಿ ಸಂಭವಿಸಿದ ಸ್ಫೋಟದ ವಿಡಿಯೊ ಆಗಿತ್ತು ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಹೇಳಿತ್ತು
8. ಅಮೃತಸರದ ಮೇಲೆ ಸ್ವತಃ ಭಾರತದ ದಾಳಿ: ಭಾರತೀಯ ಸೇನೆಯು ಅಮೃತಸರದ ಮೇಲೆ ದಾಳಿ ನಡೆಸಿದ್ದು, ಅದಕ್ಕಾಗಿ ಅಂಬಾಲ ವಾಯುನೆಲೆ ಬಳಸಿದೆ ಎಂದು ಪ್ರತಿಪಾದಿಸುತ್ತಾ ಪಾಕಿಸ್ತಾನದವರು ‘ಎಕ್ಸ್’ನಲ್ಲಿ ಮೇ 8ರಂದು ಪೋಸ್ಟ್ ಮಾಡಿದ್ದರು
9. ಪ್ರವೇಶ ನಿರ್ಬಂಧ: ಭಾರತದ ಎಲ್ಲ ವಿಮಾನ ನಿಲ್ದಾಣಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂಬ ಮತ್ತೊಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕೇಂದ್ರ ಸರ್ಕಾರ ಅಂತಹ ತೀರ್ಮಾನ ಕೈಗೊಂಡಿರಲಿಲ್ಲ
10. ರಹಸ್ಯ ಪತ್ರ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ನಾರಾಯಣ್ ಅವರು ಸೇನಾ ಸನ್ನದ್ಧತೆ ಕುರಿತಂತೆ ಉತ್ತರ ವಿಭಾಗದ ಕಮಾಂಡರ್ ಅವರಿಗೆ ಬರೆದಿರುವ ಗೋಪ್ಯ ಪತ್ರ ಎಂದು ಹೇಳಿಕೊಂಡು ನಕಲಿ ಪತ್ರವೊಂದನ್ನು ಪಾಕಿಸ್ತಾನದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪಿಐಬಿ ಈ ಬಗ್ಗೆ ಫ್ಯಾಕ್ಟ್‌ಚೆಕ್ ನಡೆಸಿತಲ್ಲದೆ, ವಿ.ಕೆ.ನಾರಾಯಣ್ ಅವರು ಸೇನಾ ಮುಖ್ಯಸ್ಥ ಅಲ್ಲ ಎಂದು ಹೇಳಿತು
ಪಾಕ್ ಜಾಲತಾಣಿಗರು ಹಂಚಿಕೊಂಡ ಸುಳ್ಳುಗಳು
* ಬಡಗಾಮ್‌ನಲ್ಲಿ 2019ರಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದ ಘಟನೆಯ ವಿಡಿಯೊವನ್ನು ಈಗಿನ ಸಂಘರ್ಷಕ್ಕೆ ತಳಕು ಹಾಕಿದ ಪಾಕಿಸ್ತಾನಿ ಬಳಕೆದಾರರು
* ಭಾರತದ ಸೇನಾ ಕಾಲೊನಿ ಮೇಲೆ ಪಾಕಿಸ್ತಾನ ದಾಳಿ ಮಾಡಿದೆ ಎಂದು ಇಂಡೊನೇಷ್ಯಾದಲ್ಲಿ ನಡೆದ ಘಟನೆಯ ವಿಡಿಯೊ ಹಂಚಿಕೆ
* ಭಾರತದ ವಾಯು ರಕ್ಷಣಾ ವ್ಯವಸ್ಥೆ ಎಸ್–400 ಅನ್ನು ಪಾಕ್ ನಾಶ ಪಡಿಸಿದೆ ಎಂದು 2023ರಲ್ಲಿ ಮಾಸ್ಕೊದ ಸೇನಾ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ವಿಡಿಯೊ ತುಣುಕು ಪೋಸ್ಟ್
* ಜಮ್ಮು ಮತ್ತು ಕಾಶ್ಮೀರದ ವಾಯು ನೆಲೆಯನ್ನು ಪಾಕಿಸ್ತಾನ ನಾಶ ಪಡಿಸಿದೆ ಎಂದು ಪ್ರತಿಪಾದಿಸುತ್ತಾ 2021ರ ಆಗಸ್ಟ್‌ನಲ್ಲಿ ಕಾಬೂಲ್ ವಿಮಾನ ನಿಲ್ದಾಣ ಸ್ಫೋಟದ ವಿಡಿಯೊ ಹಂಚಿಕೆ
* ಅಮೃತಸರ ವಾಯುನೆಲೆ ಮೇಲೆ ಪಾಕ್ ದಾಳಿ ನಡೆಸಿದೆ ಎಂದು 2024ರ ಕಾಳ್ಗಿಚ್ಚಿನ ವಿಡಿಯೊ ಪೋಸ್ಟ್
* ಪಾಕಿಸ್ತಾನದ ನೀಲಂ–ಝೇಲಮ್ ಜಲ ವಿದ್ಯುತ್ ಯೋಜನೆಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದೆ ಎಂಬ ಮಾಹಿತಿ ಹಂಚಿಕೆ
* ಭಾರತ ಸೇನೆಯ 20 ರಾಜ್ ಬೆಟಾಲಿಯನ್ ಸೇನಾ ನೆಲೆಯನ್ನು ಪಾಕಿಸ್ತಾನ ಧ್ವಂಸ ಮಾಡಿದೆ ಎಂಬ ವಾದ (ಭಾರತದಲ್ಲಿ ಅಂತಹ ಘಟಕವೇ ಇಲ್ಲ)
* ಪಾಕಿಸ್ತಾನವು ಭಾರತದ ಮೇಲೆ ಬಹು ರಾಕೆಟ್ ಉಡಾವಣೆ ವ್ಯವಸ್ಥೆಯ ಮೂಲಕ ದಾಳಿ ಮಾಡಿದೆ ಎಂದು ಪ್ರತಿಪಾದಿಸಿ ವಿಡಿಯೊ ಗೇಮ್‌ನ ವಿಡಿಯೊ ಹಂಚಿಕೆ
* ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಬಟ್ಟಲ್ ವಲಯದಲ್ಲಿರುವ ಭಾರತದ ಸೇನಾ ಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 12 ಭಾರತೀಯ ಯೋಧರು ಮೃತಪಟ್ಟಿದ್ದಾರೆ ಎಂದು 2011ರ ಆಗಸ್ಟ್‌ನ ಚಿತ್ರವೊಂದನ್ನು ಹಂಚಿಕೆ
ನಿರಂತರ ಫ್ಯಾಕ್ಟ್‌ಚೆಕ್
ಸುಳ್ಳು ಸುದ್ದಿಗಳ ಪ್ರವಾಹದ ನಡುವೆ, ಅದು ನಿಜವೇ, ಸುಳ್ಳೇ ಎಂಬುದನ್ನು ಹಲವು ಸಂಸ್ಥೆಗಳು, ವ್ಯಕ್ತಿಗಳು ಫ್ಯಾಕ್ಟ್‌ಚೆಕ್ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಮೇ 7ರ ನಸುಕಿನಲ್ಲಿ ಭಾರತೀಯ ಪಡೆಗಳು ‘ಆಪರೇಷನ್ ಸಿಂಧೂರ’ ಆರಂಭಿಸಿದ ಸಂದರ್ಭದಲ್ಲೇ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಈ ಸಂಬಂಧ ಫ್ಯಾಕ್ಟ್‌ಚೆಕ್ ಆರಂಭಿಸಿದ್ದರು. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್ ಮಾಡುತ್ತಿದ್ದ ವಿಡಿಯೊ ತುಣುಕುಗಳನ್ನು ಅವರು ಪರಿಶೀಲನೆಗೆ ಒಳಪಡಿಸಿದ್ದರು. ಸುಳ್ಳು ಮಾಹಿತಿಗಳ ಹಂಚಿಕೆ ಜಾಸ್ತಿಯಾಗುತ್ತಿದ್ದಂತೆಯೇ ಪಿಟಿಐ, ಬೂಮ್‌ಲೈವ್, ಕೇಂದ್ರ ಸರ್ಕಾರದ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಸೇರಿದಂತೆ ಹಲವು ಸಂಸ್ಥೆಗಳು ನಿರಂತರವಾಗಿ ಫ್ಯಾಕ್ಟ್‌ಚೆಕ್ ಕಾರ್ಯಕ್ಕೆ ಇಳಿದವು. ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದ ಮಾಹಿತಿ, ವಿಡಿಯೊವನ್ನು ಪರಿಶೀಲನೆಗೆ ಒಳಪಡಿಸಿ ಸೂಕ್ತ ದಾಖಲೆ, ಮಾಹಿತಿ, ವಿಡಿಯೊಗಳ ಮೂಲಕ ಪ್ರಬುದ್ಧ ರೀತಿಯಲ್ಲಿ ಉತ್ತರ ನೀಡುತ್ತಾ ಬಂದವು. ಭಾರತೀಯ ಸೇನೆ, ವಿದೇಶಾಂಗ ಇಲಾಖೆ ಅಧಿಕಾರಿಗಳು ಪ್ರತಿ ದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಸೇನೆ ಹಾಗೂ ಅಲ್ಲಿನ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಪಾದಿಸಿದ ಸುಳ್ಳುಗಳನ್ನು ಸಾಕ್ಷ್ಯ ಸಮೇತ ತಿರಸ್ಕರಿಸುತ್ತಾ ಬಂದರು. ಕದನ ವಿರಾಮ ಜಾರಿಯಾದ ನಂತರವೂ ಈ ಸಂಸ್ಥೆಗಳ ಫ್ಯಾಕ್ಟ್‌ಚೆಕ್ ಮುಂದುವರಿದಿದೆ.
‘ಎಕ್ಸ್’ ಫೇಸ್‌ಬುಕ್ ಥ್ರೆಡ್ಸ್ ಇನ್‌ಸ್ಟಾಗ್ರಾಂ ವಾಟ್ಸ್‌ಆ್ಯಪ್ ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಂಚಿಕೆ ಅಪಪ್ರಚಾರ. ಸುಳ್ಳಿನ ಪ್ರತಿಪಾದನೆಗೆ ಹಳೆಯ ವಿಡಿಯೊ ತುಣುಕು ಫೋಟೊಗಳು ವಿಡಿಯೊ ಗೇಮ್‌ಗಳ ತುಣುಕುಗಳ ಬಳಕೆ
ಆಧಾರ: ಪಿಟಿಐ, ಪಿಐಬಿ ಫ್ಯಾಕ್ಟ್‌ಚೆಕ್‌ಗಳು, ‘ಎಕ್ಸ್’, ಫೇಸ್‌ಬುಕ್ ಪೋಸ್ಟ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.