ದೇಶದ ಜನರ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಂತಗಳನ್ನು ಕಡಿಮೆ ಮಾಡುವುದರ ಜೊತೆಗೆ, ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಕೈಗೊಂಡಿದೆ. ಇದೇ 22ರಿಂದ ಹೊಸ ತೆರಿಗೆಗಳು ಅನ್ವಯವಾಗಲಿವೆ. ಜನರ ಜೀವನವನ್ನು ಸುಧಾರಿಸಲು ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಈ ಸುಧಾರಣೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಕಂಪನಿಗಳಿಗೆ ತಿಳಿಸಿದೆ. ವಿವಿಧ ವಲಯಗಳ ಕಂಪನಿಗಳು ಕೂಡ ಜಿಎಸ್‌ಟಿ ಪರಿಷ್ಕರಣೆಯ ಕುರಿತಾಗಿ ಸಕಾರಾತ್ಮಕವಾಗಿ ಸ್ಪಂದಿಸಿವೆ. ಜನರು ಕೂಡ ತಮ್ಮ ಜೇಬಿನ ಮೇಲೆ ಬಿದ್ದಿರುವ ಹೊರೆ ಕೊಂಚವಾದರೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗುತ್ತದೆ ಎಂಬ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಯಲ್ಲಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದ್ದರು. ಜಿಎಸ್‌ಟಿ ವ್ಯವಸ್ಥೆಯಲ್ಲಿನ ಸುಧಾರಣೆಗಳು ದೇಶವಾಸಿಗಳಿಗೆ ದೀಪಾವಳಿಯ ಉಡುಗೊರೆ ರೂಪದಲ್ಲಿ ಇರಲಿವೆ ಎಂದು ಅವರು ಹೇಳಿದ್ದರು. ಈಗ ಆ ಉಡುಗೊರೆಗಳಿಗೆ ಅಧಿಕೃತ ರೂಪ ಸಿಕ್ಕಿದೆ.
ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ತೆಗೆದುಕೊಂಡಿದೆ. ಈ ತೀರ್ಮಾನಗಳು ಇದೇ ತಿಂಗಳ 22ರಿಂದಲೇ ಜಾರಿಗೆ ಬರಲಿವೆ. ಅಂದರೆ, ಗ್ರಾಹಕರಿಗೆ ದೀಪಾವಳಿಯಿಂದ ಅಲ್ಲ, ನವರಾತ್ರಿಯಿಂದಲೇ ಉಡುಗೊರೆ ಸಿಗಲಿದೆ. ಈ ಕೊಡುಗೆಯ ಲಾಭ ತಮ್ಮ ಜೇಬಿನ ಮೇಲಿನ ಹೊರೆ ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ.
‘ಜಿಎಸ್‌ಟಿ ಸುಧಾರಣೆಯು ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಲಿದೆ. ಬೇಡಿಕೆಯಲ್ಲಿನ ಹೆಚ್ಚಳವು ದೇಶದ ಜಿಡಿಪಿ ಬೆಳವಣಿಗೆ ದರವನ್ನು ಮುಂದಿನ ನಾಲ್ಕರಿಂದ ಆರು ತ್ರೈಮಾಸಿಕಗಳ ಅವಧಿಯಲ್ಲಿ ಶೇ 1.2ರವರೆಗೆ ಹೆಚ್ಚಿಸುವ ಶಕ್ತಿ ಹೊಂದಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಹೇರಿರುವ ಭಾರಿ ಪ್ರಮಾಣದ ತೆರಿಗೆಯಿಂದ ಆಗಿರುವ ಸಮಸ್ಯೆಯನ್ನು ನಿಭಾಯಿಸಲು ಜಿಎಸ್‌ಟಿ ಸುಧಾರಣೆಗಳು ಅವಕಾಶ ಕಲ್ಪಿಸಿಕೊಡಲಿವೆ’ ಎಂದು ಪ್ರಭುದಾಸ್ ಲೀಲಾಧರ್ ಬ್ರೋಕರೇಜ್ ಸಂಸ್ಥೆ ಅಂದಾಜು ಮಾಡಿದೆ.
ಎಫ್‌ಎಂಸಿಜಿ ವಲಯ ಏನು ಹೇಳಿದೆ?: ಹಬ್ಬಗಳ ಋತು ಹತ್ತಿರವಾಗಿರುವ ಈ ಹೊತ್ತಿನಲ್ಲಿ ಜಿಎಸ್‌ಟಿ ಮಂಡಳಿ ತೆಗೆದುಕೊಂಡಿರುವ ಈ ತೀರ್ಮಾನವನ್ನು ದೇಶದ ಎಫ್‌ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳು) ವಲಯವು ಸ್ವಾಗತಿಸಿದೆ. ಎಫ್‌ಎಂಸಿಜಿ ಉತ್ಪನ್ನಗಳ ಬೆಲೆಯಲ್ಲಿ ಶೇ 10ರವರೆಗೆ ಇಳಿಕೆ ಆಗಬಹುದು, ಇಡೀ ವಲಯವು ಶೇ 3ರವರೆಗೆ ಬೆಳವಣಿಗೆ ಕಾಣಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
‘ನಿತ್ಯ ಬಳಕೆಯ ಶಾಂಪೂ, ಸೋಪು, ಟೂತ್‌ಪೇಸ್ಟ್ ಇನ್ನಷ್ಟು ಅಗ್ಗವಾಗುವುದಲ್ಲದೆ, ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ ಆಗುವುದಕ್ಕೂ ಈಗಿನ ತೀರ್ಮಾನವು ಕಾರಣವಾಗಲಿದೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಬೇಡಿಕೆಯು ಹೆಚ್ಚಾಗಲಿದೆ’ ಎಂದು ಡಾಬರ್ ಕಂಪನಿಯ ಸಿಇಒ ಮೋಹಿತ್ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾಯಿಸಲು ಕಂಪನಿಯು ಬದ್ಧವಾಗಿ ಇರುವುದಾಗಿ ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಎಫ್‌ಒ ಆಸಿಫ್ ಮಲಬಾರಿ ಹೇಳಿದ್ದಾರೆ. ಜಿಎಸ್‌ಟಿ ಮಂಡಳಿಯ ತೀರ್ಮಾನವು ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆಯ ಪ್ರಮಾಣವನ್ನು ಶೇ 10ರವರೆಗೆ ಹೆಚ್ಚು ಮಾಡಲಿದೆ ಎಂದು ಅಖಿಲ ಭಾರತ ಗ್ರಾಹಕ ಬಳಕೆ ಉತ್ಪನ್ನಗಳ ವಿತರಕರ ಒಕ್ಕೂಟ (ಎಐಸಿಪಿಡಿಎಫ್) ಅಂದಾಜು ಮಾಡಿದೆ.
ತೆರಿಗೆ ಇಳಿಕೆಯ ನಂತರ ಎಫ್‌ಎಂಸಿಜಿ ಕಂಪನಿಗಳು ಜನಪ್ರಿಯ ಬೆಲೆ ಶ್ರೇಣಿಯ ಪೊಟ್ಟಣಗಳಲ್ಲಿ ಮಾರಾಟ ಮಾಡುವ ಉತ್ಪನ್ನಗಳ ತೂಕವನ್ನು ತುಸು ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೆ ಕಂಪನಿಗಳು ಕೆಲವು ದೊಡ್ಡ ಪೊಟ್ಟಣಗಳಲ್ಲಿ ಮಾರಾಟವಾಗುವ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆಯೂ ಇದೆ ಎಂದು ಕಂಪನಿಗಳ ಪ್ರತಿನಿಧಿಗಳು ಹೇಳಿದ್ದಾರೆ. ಆದರೆ, ಈಗಾಗಲೇ ವಿತರಕರ ಬಳಿ ತಲುಪಿರುವ ಹಾಗೂ ಬಹುಕಾಲ ಕೆಡದೆ ಉಳಿಯುವ ಉತ್ಪನ್ನಗಳ ಬೆಲೆಯನ್ನು ಹೇಗೆ ತಗ್ಗಿಸುವುದು ಎಂಬ ವಿಚಾರದಲ್ಲಿ ಕಂಪನಿಗಳಿಗೆ ಸ್ಪಷ್ಟತೆ ಸಿಗುತ್ತಿಲ್ಲ.
ವಾಹನ ಉದ್ಯಮದ ಸ್ವಾಗತ: ನಿರ್ದಿಷ್ಟ ವರ್ಗಗಳಿಗೆ ಸೇರಿದ ವಾಹನಗಳ ಮೇಲಿನ ತೆರಿಗೆ ತಗ್ಗಿಸುವ ತೀರ್ಮಾನವು ಮೊದಲ ಬಾರಿಗೆ ವಾಹನ ಖರೀದಿಸುವವರಿಗೆ, ಮಧ್ಯಮ ಆದಾಯ ಹೊಂದಿರುವ ಕುಟುಂಬಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ವಾಹನ ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
ತೆರಿಗೆ ಇಳಿಕೆ ಕಾರಣದಿಂದಾಗಿ ಆರಂಭಿಕ ಹಂತದ ಕಾರುಗಳು ಅಗ್ಗವಾಗಲಿವೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸಂಘದ (ಎಸ್‌ಐಎಎಂ) ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ. ಜಿಎಸ್‌ಟಿ ಮಂಡಳಿಯ ತೀರ್ಮಾನವು ದ್ವಿಚಕ್ರ ವಾಹನ ವಲಯಕ್ಕೂ ಪೂರಕವಾಗಿದೆ ಎಂದು ಟಿವಿಎಸ್ ಮೋಟರ್ ಕಂಪನಿಯ ಅಧ್ಯಕ್ಷ ಸುದರ್ಶನ್ ವೇಣು ಹೇಳಿದ್ದಾರೆ.
ಔಷಧಗಳ ಬೆಲೆ ಇಳಿಕೆ: ಜೀವರಕ್ಷಕ ಹಾಗೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಇದರಿಂದಾಗಿ ರೋಗಿಗಳಿಗೆ ನೇರ ಪ್ರಯೋಜನ ಲಭಿಸಲಿದೆ ಎಂದು ಔಷಧ ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ. ಹಲವು ಔಷಧಗಳ ಮೇಲಿನ ತೆರಿಗೆ ಶೇ 12ರಷ್ಟು ಇದ್ದಿದ್ದನ್ನು ಶೇ 5ಕ್ಕೆ ತಗ್ಗಿಸಲಾಗಿದೆ. ಇದರಿಂದಾಗಿ ಒಟ್ಟಾರೆ ಚಿಕಿತ್ಸಾ ವೆಚ್ಚವು ಕಡಿಮೆ ಆಗುವ ನಿರೀಕ್ಷೆ ಇದೆ. ಆರೋಗ್ಯ ವಿಮೆ ಹಾಗೂ ಜೀವ ವಿಮೆಯ ಮೇಲೆ ಶೂನ್ಯ ಜಿಎಸ್‌ಟಿ ನಿಗದಿ ಮಾಡಿರುವ ಕ್ರಮವು ಬಹಳ ಒಳ್ಳೆಯದು ಎಂದು ಅಪೋಲೊ ಹೆಲ್ತ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷೆ ಶೋಭನಾ ಕಾಮಿನೇನಿ ಹೇಳಿದ್ದಾರೆ.
ಆದರೆ, ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವ ಮತ್ತು ಕಡಿಮೆ ಮಾಡುವ ಜಿಎಸ್‌ಟಿ ಮಂಡಳಿಯ ತೀರ್ಮಾನದ ಪ್ರಯೋಜನವು, ತೆರಿಗೆ ಇಳಿಕೆಯ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುವುದರ ಮೇಲೆ ನಿಂತಿದೆ.
ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಯಂತ್ರೋಪಕರಣಗಳು ಹಾಗೂ ಇನ್ನಿತರ ವಸ್ತುಗಳ ಮೇಲಿನ ತೆರಿಗೆಯನ್ನು ಶೇ 18 ಮತ್ತು ಶೇ 12ರಿಂದ ಶೇ 5ಕ್ಕೆ ಇಳಿಸಿರುವುದರಿಂದ ರೈತರಿಗೆ ಅನುಕೂಲವಾಗಲಿದೆ.
ಟ್ರ್ಯಾಕ್ಟರ್ ಟೈರ್, ಬಿಡಿ ಭಾಗಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲಾಗಿದೆ. ಟ್ರ್ಯಾಕ್ಟರ್, ಡೀಸೆಲ್ ಎಂಜಿನ್‌ಗಳು ಸೇರಿದಂತೆ ಇತರೆ ಉಪಕರಣಗಳು, ನಿರ್ದಿಷ್ಟ ಜೈವಿಕ–ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು, ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆಗೆ ಬಳಸುವ ವಸ್ತುಗಳ ಮೇಲಿನ ಜಿಎಸ್‌ಟಿ ಶೇ 12ರಿಂದ 5ಕ್ಕೆ ಇಳಿದಿದೆ. ರಸಗೊಬ್ಬರಗಳ ತಯಾರಿಕೆಯಲ್ಲಿ ಬಳಸುವ ಸಲ್ಫ್ಯೂರಿಕ್ ಆ್ಯಸಿಡ್, ನೈಟ್ರಿಕ್ ಆ್ಯಸಿಡ್ ಮತ್ತು ಅಮೋನಿಯಗಳ ಮೇಲಿನ ತೆರಿಗೆಯನ್ನು ಶೇ 18ರಿಂದ 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ರಸಗೊಬ್ಬರ ಗಳ ಬೆಲೆಯಲ್ಲಿ ಇಳಿಕೆಯಾಗ ಬಹುದು ಎಂದು ಅಂದಾಜಿಸಲಾಗಿದೆ.
ಜಿಎಸ್‌ಟಿ ಇಳಿಕೆಯಿಂದ ಸಣ್ಣ ಕಾರುಗಳ ಬೆಲೆಯು ₹1 ಲಕ್ಷದವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಅಲ್ಲದೆ, ಮಧ್ಯಮ ಹಾಗೂ ಐಷಾರಾಮಿ ವರ್ಗದ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 40ಕ್ಕೆ ಏರಿಸಲಾಗಿದ್ದರೂ ಅವುಗಳಿಗೆ ಸೆಸ್ ಇಲ್ಲದಿರುವ ಕಾರಣಕ್ಕೆ ಆ ವಾಹನಗಳ ಬೆಲೆ ಕೂಡ ಕಡಿಮೆ ಆಗುವ ನಿರೀಕ್ಷೆ ಇದೆ.
ಪ್ರಸ್ತುತ ಐಷಾರಾಮಿ ಕಾರುಗಳಿಗೆ ಶೇ 28ರಷ್ಟು ಜಿಎಸ್‌ಟಿಯ ಜೊತೆಗೆ ಶೇ 17ರಿಂದ ಶೇ 22ರವರೆಗೆ ಸೆಸ್ ವಿಧಿಸಲಾಗುತ್ತಿದೆ. ಇದರಿಂದ ಒಟ್ಟಾರೆ ಕಾರುಗಳ ಮೇಲೆ ಶೇ 45–ಶೇ 50ರಷ್ಟು ತೆರಿಗೆ ಬಿದ್ದಂತಾಗುತ್ತಿತ್ತು. ಶೇ 28 ಜಿಎಸ್‌ಟಿಯನ್ನು ಶೇ 40ಕ್ಕೆ ಏರಿಸಿದ್ದರೂ ಹೆಚ್ಚುವರಿ ಸೆಸ್ ಅನ್ನು ಕೈಬಿಡಲಾಗಿದೆ. ಹಾಗಾಗಿ, ಖರೀದಿದಾರರು ಶೇ 40ರಷ್ಟು ತೆರಿಗೆ ಪಾವತಿ ಮಾಡಿದರೆ ಸಾಕು. ಶೇ 5ರಿಂದ ಶೇ 10ರಷ್ಟು ತೆರಿಗೆ ಉಳಿತಾಯವಾಗಲಿದೆ. 1,200 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಎಂಜಿನ್ ಹೊಂದಿರುವ ಎಲ್ಲ ಕಾರುಗಳು, ಎಸ್‌ಯುವಿಗಳಿಗೂ ಇದು ಅನ್ವಯವಾಗಲಿದೆ.
‘ಹೆಚ್ಚುವರಿಯಾಗಿ ಸೆಸ್ ವಿಧಿಸದೆ, ಐಷಾರಾಮಿ ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ ನಿಗದಿ ಮಾಡಿರುವುದು ಒಳ್ಳೆಯ ವಿಚಾರ’ ಎಂದು ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಹರ್ದೀಪ್ ಸಿಂಗ್ ಬ್ರಾರ್ ಹೇಳಿದ್ದಾರೆ.
ಆದರೆ, 350 ಸಿ.ಸಿ.ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೇಲೆ ಶೇ 40ರಷ್ಟು ತೆರಿಗೆ ವಿಧಿಸುವುದರಿಂದ ಮಧ್ಯಮ ಹಾಗೂ ಐಷಾರಾಮಿ ವರ್ಗದ ದ್ವಿಚಕ್ರ ವಾಹನ ಮಾದರಿಗಳ ಮಾರಾಟದ ಮೇಲೆ ಕೆಟ್ಟ ಪರಿಣಾಮ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿನ ಬದಲಾವಣೆಗಳಿಂದಾಗಿ ಟ್ರಕ್, ಬಸ್ಸುಗಳ ಬೆಲೆ ಕೂಡ ಕಡಿಮೆ ಆಗಲಿದೆ ಎಂದು ಅಶೋಕ್ ಲೇಲ್ಯಾಂಡ್‌ನ ಸಿಇಒ ಶೇನು ಅಗರ್ವಾಲ್ ಹೇಳಿದ್ದಾರೆ.
₹2,500ಕ್ಕಿಂತ ಹೆಚ್ಚಿನ ಬೆಲೆಯ ಉಡುಪುಗಳಿಗೆ ತೆರಿಗೆ ಶೇ 12ರಷ್ಟು ಇದ್ದಿದ್ದನ್ನು ಶೇ 18ಕ್ಕೆ ಹೆಚ್ಚಿಸಿರುವ ಕ್ರಮಕ್ಕೆ ಭಾರತೀಯ ರಿಟೇಲರ್‌ಗಳ ಸಂಘದಿಂದ (ಆರ್‌ಎಐ) ಆಕ್ಷೇಪ ವ್ಯಕ್ತವಾಗಿದೆ. ಈ ಕ್ರಮದಿಂದಾಗಿ ಮಧ್ಯಮ ವರ್ಗದವರಿಗೆ ತೊಂದರೆ ಆಗಲಿದೆ ಎಂದು ಅದು ಹೇಳಿದೆ.
₹2,500ಕ್ಕಿಂತ ಹೆಚ್ಚಿನ ಬೆಲೆಯ ಉಡುಪುಗಳನ್ನು ಕೂಡ ಜನಸಾಮಾನ್ಯರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಈ ಬೆಲೆಯ ಉಡುಪುಗಳು ಹಾಗೂ ಪಾದರಕ್ಷೆಗಳಿಗೆ ಶೇ 18ರಷ್ಟು ತೆರಿಗೆ ವಿಧಿಸುವುದರಿಂದ ಮಧ್ಯಮ ವರ್ಗಕ್ಕೆ ತೊಂದರೆ ಆಗಿ, ಸಂಘಟಿತ ರಿಟೇಲ್ ವಲಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಆರ್‌ಎಐ ಹೇಳಿಕೆ ತಿಳಿಸಿದೆ.
ನಾವು ಈಗ ಕದನ ಕಣ ಪ್ರವೇಶಿಸಿದ್ದೇವೆ... ಹೆಚ್ಚಿನ ಹಾಗೂ ತ್ವರಿತವಾದ ಸುಧಾರಣಾ ಕ್ರಮಗಳು ಬೇಡಿಕೆಯನ್ನು ಮತ್ತು ಹೂಡಿಕೆಯನ್ನು ಹೆಚ್ಚಿಸಲು ಇರುವ ಖಚಿತ ಮಾರ್ಗೋಪಾಯಗಳು. ಇವು ಅರ್ಥ ವ್ಯವಸ್ಥೆಯನ್ನು ಹಿಗ್ಗಿಸುತ್ತವೆ, ಜಗತ್ತಿನಲ್ಲಿ ಭಾರತದ ದನಿ ಇನ್ನಷ್ಟು ಗಟ್ಟಿಯಾಗಿ ಕೇಳುವಂತೆ ಮಾಡುತ್ತವೆ. ಆದರೆ, ಇನ್ನಷ್ಟು ಸುಧಾರಣೆಗಳ ಅಗತ್ಯ ಇದೆ.-ಆನಂದ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ ಸಮೂಹದ ಅಧ್ಯಕ್ಷ
ಹಣಕಾಸು ಮತ್ತು ವಿತ್ತೀಯ ನೀತಿಗಳು ಒಂದಕ್ಕೊಂದು ಪೂರಕವಾಗಿ ಸಾಗುತ್ತಿವೆ. ಆರ್‌ಬಿಐ ರೆಪೊ ದರ ತಗ್ಗಿಸಿರುವುದು ಹಾಗೂ ಈಗ ಜಿಎಸ್‌ಟಿ ದರವನ್ನು ಸರ್ಕಾರ ಇಳಿಕೆ ಮಾಡಿರುವುದು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ. ರೆಪೊ ದರ ಇಳಿಕೆಯ ಪ್ರಯೋಜನವು ವರ್ಗಾವಣೆ ಕಂಡಂತೆಲ್ಲ, ಮಾರುಕಟ್ಟೆಯಲ್ಲಿ ಬೇಡಿಕೆಯು ಸಹಜವಾಗಿಯೇ ಹೆಚ್ಚಳ ಕಾಣಲಿದೆ.-ಸದಾಫ್ ಸಯೀದ್, ಮುತ್ತೂಟ್ ಮೈಕ್ರೊಫೈನಾನ್ಸ್‌ನ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.