
ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು, ನರೇಂದ್ರ ಮೋದಿ ಹಾಗೂ ಅಯಾತೊಲ್ಲಾ ಖಮೇನಿ
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುವ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಯುದ್ಧ ಆರಂಭದ ನಂತರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಇರಾನ್ ದಾಳಿಗೆ ತುತ್ತಾಗಿರುವ ಕೊಲ್ಲಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೂ ಅವರು ಮಾತನಾಡಿದ್ದಾರೆ. ಆದರೆ, ಯುದ್ಧದಲ್ಲಿ ಇರಾನ್ ಸರ್ವೋಚ್ಚ ನಾಯಕ ಮತ್ತು ಅವರ ಪತ್ನಿ ಹತ್ಯೆಗೀಡಾದರೂ, ಇದುವರೆಗೂ ಅದರ ಬಗ್ಗೆ ಸಂತಾಪ ಸೂಚಿಸಿಲ್ಲ; ಹತ್ಯೆಯನ್ನು ಖಂಡಿಸಿಲ್ಲ. ಇರಾನ್ ಪರವಾಗಿ ಮಾತನಾಡಿಲ್ಲ. ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ಭಾರತ ಯಾರ ಪರ ಎನ್ನುವುದನ್ನೂ, ಪಶ್ಚಿಮ ಏಷ್ಯಾದ ಹಲವು ರಾಷ್ಟ್ರಗಳ ಕುರಿತ ದೇಶದ ವಿದೇಶಾಂಗ ನೀತಿ ಬದಲಾಗುತ್ತಿರುವುದನ್ನೂ ಇದು ಸಂಕೇತಿಸುತ್ತಿದೆ
'ಅಲಿಪ್ತ ನೀತಿ'ಯನ್ನು ಅಳವಡಿಸಿಕೊಂಡಿದ್ದ ಭಾರತವು ದಶಕಗಳಿಂದಲೂ ಪಶ್ಚಿಮ ಏಷ್ಯಾದ ರಾಷ್ಟ್ರಗಳೊಂದಿಗೆ ಅತ್ಯಂತ ಜಾಗರೂಕತೆಯ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿತ್ತು. ತಟಸ್ಥ ಧೋರಣೆಯ ಹೊರತಾಗಿಯೂ ಪ್ಯಾಲೆಸ್ಟೀನ್ ಪರ ಸಹಾನುಭೂತಿ ಹೊಂದಿತ್ತು ಮತ್ತು ಅದನ್ನು ಸೈದ್ಧಾಂತಿಕವಾಗಿ ಬೆಂಬಲಿಸುತ್ತಿತ್ತು. ಅದರ ಸಾರ್ವಭೌಮತೆಯನ್ನು ಸಮರ್ಥಿಸಿತ್ತು ಮತ್ತು ವಸಾಹತುಶಾಹಿ ವಿರೋಧಕ್ಕೆ ನೈತಿಕ ಬೆಂಬಲ ನೀಡಿತ್ತು. ಪ್ಯಾಲೆಸ್ಟೀನ್ ಲಿಬರೇಷನ್ ಆರ್ಮಿಗೆ (ಪಿಎಲ್‌ಒ) 1975ರಲ್ಲಿ ಭಾರತವು ರಾಜತಾಂತ್ರಿಕ ಮಾನ್ಯತೆ ನೀಡಿತ್ತು. ಈ ಮೂಲಕ ಪಿಎಲ್‌ಒ ಬೆಂಬಲಿಸಿದ ಮೊದಲ ಮುಸ್ಲಿಮೇತರ ರಾಷ್ಟ್ರವಾಗಿತ್ತು.
1950ರಲ್ಲಿ ಭಾರತವು ಇಸ್ರೇಲ್ ದೇಶಕ್ಕೆ ಮಾನ್ಯತೆ ನೀಡಿತು. ಅದರ ನಂತರ ನಿಧಾನಕ್ಕೆ ಅದರೊಂದಿಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳೂ ಆರಂಭವಾದವು. 1992ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರು ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಕ್ಕೆ ಅಡಿಗಲ್ಲು ಹಾಕಿದರು. 1971ರ ಬಾಂಗ್ಲಾ ವಿಮೋಚನೆ ಮತ್ತು 1999ರ ಕಾರ್ಗಿಲ್ ಯುದ್ಧಗಳಲ್ಲಿ ಇಸ್ರೇಲ್ ಭಾರತಕ್ಕೆ ಸೇನಾ ನೆರವು ನೀಡಿತ್ತು.
ದೊಡ್ಡ ಸಂಖ್ಯೆಯ ಭಾರತೀಯರು ಕೆಲಸದಲ್ಲಿರುವ ಕೊಲ್ಲಿ ರಾಷ್ಟ್ರಗಳು, ಇಂಧನ ರಫ್ತು ಮಾಡುವುದರ ಜತೆಗೆ ಚಾರಿತ್ರಿಕ ಸಂಬಂಧವೂ ಇರುವ ಇರಾನ್ ಮತ್ತು ಶಸ್ತ್ರಾಸ್ತ್ರ, ತಂತ್ರಜ್ಞಾನ ನೆರವು ನೀಡುವ ಇಸ್ರೇಲ್‌ನೊಂದಿಗಿನ ಸಂಬಂಧಗಳು ಭಾರತಕ್ಕೆ ಅತಿ ಮುಖ್ಯವಾದುವು. ಹಾಗಾಗಿಯೇ ಬಹಿರಂಗವಾಗಿ ಯಾವುದೇ ದೇಶದ ಪರ ಹೆಚ್ಚು ಒಲವು ತೋರದೇ, ಸಮನ್ವಯದಿಂದ ಮುನ್ನಡೆಯುತ್ತಿತ್ತು.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪಶ್ಚಿಮ ಏಷ್ಯಾದ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧದಲ್ಲಿ ಬದಲಾವಣೆಗಳು ಗೋಚರಿಸತೊಡಗಿದವು. 2017ರಲ್ಲಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಮೊದಲ ಬಾರಿ ಭೇಟಿ ನೀಡಿದರು. ಭಾರತದ ಪ್ರಧಾನಿಯೊಬ್ಬರು ಇಸ್ರೇಲ್‌ಗೆ ನೀಡಿದ ಮೊದಲ ಭೇಟಿ ಅದು. ರಾಜತಾಂತ್ರಿಕ ಸಮನ್ವಯ ಕಾಯ್ದುಕೊಳ್ಳಲು ಅವರು 2018ರಲ್ಲಿ ಪ್ಯಾಲೆಸ್ಟೀನ್‌ನ ರಾಮಲ್ಲಾಹ್‌ಗೂ ಭೇಟಿ ನೀಡಿದರು. ಹಾಗೆಯೇ, ಕೊಲೆ ಪ್ರಕರಣವೊಂದರ ಸಂಬಂಧ ಅನೇಕ ದೇಶಗಳಲ್ಲಿ ಅವಕೃಪೆಗೆ ಗುರಿಯಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ 2019ರಲ್ಲಿ ಭಾರತ ಆತಿಥ್ಯ ನೀಡಿತ್ತು. ಪ್ರಧಾನಿಯಾದ ಮೇಲೆ ಹಲವು ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ಭೇಟಿ ನೀಡಿರುವ ಮೋದಿ ಅವರು, ಅಲ್ಲಿನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ‘ಸೋದರ’ ಎಂದೇ ಕರೆಯುತ್ತಾರೆ.
ಭಾರತದ ವಿದೇಶಾಂಗ ನೀತಿ ಬದಲಾಗಿದ್ದು, ಇದಕ್ಕೆ ಚೀನಾ ಮತ್ತು ಪಾಕಿಸ್ತಾನ ಕಾರಣ ಎನ್ನುವುದು ತಜ್ಞರ ವಿಶ್ಲೇಷಣೆ. ಚೀನಾ ವಿರೋಧಿಸಲು ಅಮೆರಿಕಕ್ಕೆ, ಪಾಕ್ ಪ್ರೇರಿತ ಭಯೋತ್ಪಾದನೆ ಎದುರಿಸಲು ಇಸ್ರೇಲ್‌ಗೆ ಭಾರತ ಹತ್ತಿರವಾಗುತ್ತಿದೆ ಎನ್ನುವ ವಿಶ್ಲೇಷಣೆ ಇದೆ. ಅಮೆರಿಕದ ಜೊತೆಗೆ ಶಸ್ತ್ರಾಸ್ತ್ರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಹಿವಾಟಿನ ಜತೆಗೆ ಸಂಬಂಧವನ್ನೂ ವೃದ್ಧಿಸಿಕೊಂಡಿತು. ಇನ್ನೊಂದೆಡೆ, ಪಶ್ಚಿಮ ಏಷ್ಯಾದ ರಾಷ್ಟ್ರಗಳ ಜತೆಗೆ ಸಂಬಂಧ ಕಾಯ್ದುಕೊಳ್ಳುತ್ತಲೇ, ಇಸ್ರೇಲ್ ಜತೆಗೆ ಆಪ್ತವಾಗತೊಡಗಿತು. ಅಮೆರಿಕ ಮತ್ತು ಇಸ್ರೇಲ್‌ನ ಆಪ್ತತೆಯೂ ಇರಾನ್‌ನಂಥ ರಾಷ್ಟ್ರಗಳ ಜತೆಗೆ ಭಾರತ ಒಂದು ಅಂತರ ಕಾಯ್ದುಕೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ. 2018ರಲ್ಲಿ ಅಮೆರಿಕದ ಕಾರಣಕ್ಕೆ ಭಾರತವು ಇರಾನ್‌ನಿಂದ ಇಂಧನ ಆಮದು ಮಾಡಿಕೊಳ್ಳುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಪ್ರಸ್ತುತ, ಪಶ್ಚಿಮ ಏಷ್ಯಾದ ಹಲವು ದೇಶಗಳ ಜತೆಗಿನ ಭಾರತದ ಸಂಬಂಧವು ಕೇವಲ ವ್ಯವಹಾರಕ್ಕೆ ಸೀಮಿತವಾಗಿದೆ.
ಭಾರತದ ವಿದೇಶಾಂಗ ನೀತಿಯಲ್ಲಿನ ಬದಲಾವಣೆಯನ್ನು ಕೆಲವರು ಮೂರು ಮುಖ್ಯ ಅಂಶಗಳ ಮೂಲಕ ಗುರುತಿಸುತ್ತಾರೆ. ಒಂದನೆಯದಾಗಿ, ಜಾತ್ಯತೀತ, ಸಮಾಜವಾದಿ ರಾಷ್ಟ್ರವಾಗಿರುವ ಭಾರತವು ಸಾಂಪ್ರದಾಯಿಕ ರಾಜಮನೆತನಗಳ ಆಡಳಿತದ ಯುಎಇ ಜತೆಗೆ ಹಿಂದೆ ಅಂತರ ಕಾಯ್ದುಕೊಂಡಿತ್ತು. ಈಗ ಹೆಚ್ಚು ಸ್ನೇಹ ಸಂಬಂಧ ಹೊಂದಿದೆ. ಎರಡನೆಯದು, ಸಾಮ್ರಾಜ್ಯಶಾಹಿ ಧೋರಣೆಯ ಅಮೆರಿಕದೊಂದಿಗೆ ಹಿಂದಿಗಿಂತಲೂ ಈಗ ಉತ್ತಮವಾದ, ಹಲವು ಆಯಾಮಗಳ ಸಂಬಂಧ ಹೊಂದಿದೆ. ಮೂರನೆಯದಾಗಿ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವೆ ತಟಸ್ಥ ಧೋರಣೆ ಕೈಬಿಟ್ಟು, ಇಸ್ರೇಲ್ ಪರವಾಗಿ ಬಹಿರಂಗವಾಗಿಯೇ ಗುರುತಿಸಿಕೊಳ್ಳುತ್ತಿದೆ. ವಿದೇಶಾಂಗ ನೀತಿಯಲ್ಲಿನ ದೇಶದ ಸೂಕ್ಷ್ಮ ಬದಲಾವಣೆಯ ಜತೆಗೆ ಮೋದಿ ಅವರ ವೈಯಕ್ತಿಕ ನಿಲುವುಗಳೂ ಇವುಗಳ ಹಿಂದಿವೆ ಎನ್ನಲಾಗುತ್ತಿದೆ.
ಇರಾನ್ ಸಂಬಂಧ: ಉತ್ತುಂಗದಿಂದ ಪ್ರಪಾತಕ್ಕೆ
ಐತಿಹಾಸಿಕವಾಗಿ ಪುರಾತನ ಭಾರತ ಮತ್ತು ಇರಾನ್ (ಹಿಂದಿನ ಪರ್ಷಿಯಾ) ನಡುವೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಸಂಬಂಧ ಇದೆ. ರಾಜತಾಂತ್ರಿಕ ಸಂಬಂಧ ಆರಂಭವಾಗಿದ್ದು, 20ನೇ ಶತಮಾನದ ಮಧ್ಯಭಾಗದಲ್ಲಿ. 1950ರಲ್ಲಿ ಭಾರತ ಮತ್ತು ಇರಾನ್ ‘ಸ್ನೇಹ ಒಪ್ಪಂದ’ಕ್ಕೆ ಸಹಿ ಹಾಕಿದವು. 76 ವರ್ಷಗಳ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹಲವು ಮಗ್ಗುಲು ಬದಲಾಯಿಸಿದೆ.
ಸ್ನೇಹ ಒಪ್ಪಂದ ರೂಪುಗೊಂಡಾಗ ಇರಾನ್‌ನಲ್ಲಿ ಷಾ ರಾಜವಂಶಸ್ಥರ ಆಳ್ವಿಕೆ ಇತ್ತು. ಅಲ್ಲಿನ ರಾಜ ಅಮೆರಿಕದ ಪರವಾಗಿದ್ದರು. ಅಮೆರಿಕ ಪಾಕಿಸ್ತಾನದೊಂದಿಗೆ ಹೆಚ್ಚು ಒಡನಾಟ ಹೊಂದಿತ್ತು. ಹೀಗಾಗಿ ಭಾರತ–ಇರಾನ್ ಸಂಬಂಧ ಹೆಸರಿಗಷ್ಟೇ ಇತ್ತು. 1979ರಲ್ಲಿ ನಡೆದ ಕ್ರಾಂತಿಯಲ್ಲಿ ರಾಜರ ಆಡಳಿತ ಪತನಗೊಂಡು ಅಯಾತೊಲ್ಲಾ ರುಹೊಲ್ಲಾಹ್ ಖಮೇನಿ ನೇತೃತ್ವದ ‘ಧರ್ಮಾಧರಿತ’ ಸರ್ಕಾರದ ಆಡಳಿತ ಶುರುವಾದ ಮೇಲೆ ಭಾರತ ಮಾತ್ರವಲ್ಲದೇ ಪಶ್ಚಿಮ ಏಷ್ಯಾದೊಂದಿಗಿನ ಅದರ ಸಂಬಂಧ ಸುಧಾರಣೆಯತ್ತ ಹೆಜ್ಜೆ ಹಾಕಿತು. ಭಾರತದ ಅಲಿಪ್ತ ನೀತಿಗೆ ಅದು ಬೆಂಬಲವನ್ನೂ ವ್ಯಕ್ತಪಡಿಸಿತು.
ಅಮೆರಿಕದೊಂದಿಗೆ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ಇರಾನ್ ಪಾಕಿಸ್ತಾನದಿಂದ ದೂರ ಉಳಿದಿತ್ತು. ಇದರಿಂದ ಭಾರತಕ್ಕೆ ಅನುಕೂಲವಾಯಿತು. ವಿಶ್ವಸಂಸ್ಥೆ, ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ, ಭಾರತದ ವಿರುದ್ಧ ನಿರ್ಣಯ ಕೈಗೊಳ್ಳುವ ಪಾಕಿಸ್ತಾನದ ಹಲವು ಪ್ರಯತ್ನಗಳನ್ನು ಇರಾನ್ ವಿಫಲಗೊಳಿಸಿತ್ತು. ತೈಲ ಸಂಪದ್ಭರಿತ ರಾಷ್ಟ್ರವಾದ ಇರಾನ್‌ನಿಂದ ಭಾರತ ಮೊದಲಿನಿಂದಲೂ ಕಚ್ಚಾ ತೈಲ ಖರೀದಿಸುತ್ತಿತ್ತು. 1980ರ ದಶಕದಲ್ಲಿ ನಡೆದ ಇರಾನ್–ಇರಾಕ್ ಯುದ್ಧದ ಕಾರಣದಿಂದ ಭಾರತವು ತೈಲಕ್ಕಾಗಿ ಬೇರೆ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಬೇಕಾಯಿತು. ಶೀತಲ ಸಮರ ಅಂತ್ಯಗೊಂಡ ನಂತರ ಭಾರತ ಮತ್ತು ಇರಾನ್ ಇನ್ನಷ್ಟು ಹತ್ತಿರವಾದವು.
ನಾಯಕರ ಭೇಟಿ–ಒಪ್ಪಂದ: 1993ರಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್ ಟೆಹರಾನ್‌ಗೆ ಭೇಟಿ ನೀಡಿದ್ದರು. ಎರಡು ವರ್ಷಗಳ ನಂತರ ಇರಾನ್ ಅಧ್ಯಕ್ಷ ಅಕ್ಬರ್ ಹಶೆಮಿ ರಫ್ಸಂಜಾನಿ ಭೇಟಿ ಭಾರತಕ್ಕೆ ನೀಡಿದ್ದರು. ಈ ಸಂದರ್ಭದಲ್ಲಿ ಹಲವು ವ್ಯಾಪಾರ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿದ್ದವು. 2001ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಇರಾನ್‌ಗೆ ಭೇಟಿ ನೀಡಿದ್ದರೆ, ಎರಡು ವರ್ಷಗಳ ತರುವಾಯ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಖಟಮಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಎರಡೂ ಸಂದರ್ಭಗಳಲ್ಲಿ ಉಭಯ ನಾಯಕರು ಸುಸ್ಥಿರ, ಸುರಕ್ಷಿತ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಕಾರ ನೀಡುವ ಘೋಷಣೆಗಳಿಗೆ ಸಹಿ ಹಾಕಿದ್ದರು. ಬಂದರು, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಭರವಸೆಯನ್ನೂ ಭಾರತ ನೀಡಿತ್ತು. 2000ದ ದಶಕದಲ್ಲಿ ಭಾರತವು ಗರಿಷ್ಠ ಪ್ರಮಾಣಲ್ಲಿ ತೈಲ ಆಮದು ಮಾಡಿತ್ತು.
ವಿರುದ್ಧ ಮತ: ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡುವುದರ ವಿರುದ್ಧವಾಗಿದ್ದ ಅಮೆರಿಕವು 2005ರಲ್ಲಿ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಸಭೆಯಲ್ಲಿ ಇರಾನ್ ವಿರುದ್ಧ ನಿರ್ಣಯ ಅಂಗೀಕಾರವಾಗುವಂತೆ ನೋಡಿಕೊಂಡಿತ್ತು. ಆ ಸಮಯದಲ್ಲಿ ಅಮೆರಿಕದೊಂದಿಗೆ ಉತ್ತಮ ದ್ವಿಪಕ್ಷೀಯ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ದೃಷ್ಟಿ ನೆಟ್ಟಿದ್ದ ಅಂದಿನ ಯುಪಿಎ ಸರ್ಕಾರ, ಇರಾನ್ ವಿರುದ್ಧದ ನಿರ್ಣಯವನ್ನು ಬೆಂಬಲಿಸಿತ್ತು. ಅದೇ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಎರಡೂ ದೇಶಗಳು ನಾಗರಿಕ ಪರಮಾಣು ಸಹಕಾರ ಒಪ್ಪಂದದ ಘೋಷಣೆ ಮಾಡಿದವು. ಹಾಗಿದ್ದರೂ, ಉಭಯ ದೇಶಗಳ ನಡುವಿನ ತೈಲ ವ್ಯಾಪಾರ ಮುಂದುವರಿದಿತ್ತು.
2010–13ರ ನಡುವೆ ಬರಾಕ್ ಒಬಾಮ ನೇತೃತ್ವದ ಅಮೆರಿಕ ಆಡಳಿತ ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಪರಮಾಣು ಒಪ್ಪಂದ ಎಂದು ಕರೆಯಲಾಗುವ ‘ಜಂಟಿ ಸಮಗ್ರ ಕ್ರಿಯಾ ಯೋಜನೆ ಒಪ್ಪಂದ’ಕ್ಕೆ ಇರಾನ್ ಸಹಿ ಹಾಕಿದ ನಂತರ ಒಬಾಮ ಆಡಳಿತವು ನಿರ್ಬಂಧಗಳನ್ನು ವಾಪಸ್ ಪಡೆಯಿತು.
ಅಮೆರಿಕದ ಒತ್ತಡ: 2014ರಲ್ಲಿ ಅಧಿಕಾರಕ್ಕೆ ಬಂದ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇಸ್ರೇಲ್ ಜೊತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೆಚ್ಚು ಗಮನ ನೀಡಲು ಆರಂಭಿಸಿದರೂ, ಇರಾನ್ ಜೊತೆಗಿನ ಬಾಂಧವ್ಯವನ್ನು ಮುಂದುವರಿಸಿತ್ತು. 2016ರಲ್ಲಿ ಪ್ರಧಾನಿ ಮೋದಿ ಅವರು ಇರಾನ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಛಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಭಾರತ ಮುಂದಾಯಿತು.
2018–19ರವರೆಗೂ ಭಾರತವೂ ಇರಾನ್‌ನಿಂದ ಗಣನೀಯ ಪ್ರಮಾಣದಲ್ಲಿ ತೈಲ ಖರೀದಿಸುತ್ತಲೇ ಇತ್ತು. ಆದರೆ, ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಒಬಾಮ ಸರ್ಕಾರದ ಅವಧಿಯಲ್ಲಿ ಸಹಿ ಹಾಕಲಾಗಿದ್ದ ಇರಾನ್‌ನೊಂದಿಗಿನ ಅಣು ಒಪ್ಪಂದವನ್ನು ರದ್ದುಪಡಿಸಿ, ಅದರ ಮೇಲೆ ನಿರ್ಬಂಧ ಹೇರಿದರು. ಅಲ್ಲದೇ, ಅಲ್ಲಿಂದ ಯಾವುದೇ ರಾಷ್ಟ್ರ ತೈಲ ಖರೀದಿಸದಂತೆ ಒತ್ತಡ ಹೇರಿದರು. ಸ್ವಲ್ಪ ಸಮಯ ಭಾರತವು ಡಾಲರ್ ಬದಲಿಗೆ ರೂಪಾಯಿ ಕರೆನ್ಸಿಯಲ್ಲೇ ಹಣ ಪಾವತಿ ಮಾಡಿ ತೈಲ ಖರೀದಿಸುತ್ತಿತ್ತು. ಅಮೆರಿಕದ ಒತ್ತಡ ಜಾಸ್ತಿಯಾದ ಬಳಿಕ ಅಲ್ಲಿಂದ ತೈಲ ಖರೀದಿ ಬಹುತೇಕ ನಿಲ್ಲಿಸಿತು. ಇದರಿಂದ ಎರಡು ದೇಶಗಳ ನಡುವಿನ ಸರಕು ವ್ಯಾಪಾರ ಕಡಿಮೆ ಆಯಿತು.
ಆದಾಗ್ಯೂ, 2024ರ ಮೇ 13ರಂದು ಛಬಹಾರ್ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ಎರಡೂ ರಾಷ್ಟ್ರಗಳು 10 ವರ್ಷಗಳ ಗುತ್ತಿಗೆಗೆ ಸಹಿ ಹಾಕಿದ್ದವು. ಇರಾನ್ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಅದರ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ.
ಆಧಾರ: ರಾಯಿಟರ್ಸ್, ವಾಣಿಜ್ಯ ಸಚಿವಾಲಯದ ವೆಬ್‌ಸೈಟ್, ಸೌತ್ ಏಷ್ಯಾ ಜರ್ನಲ್, ಫಾರಿನ್ ಪಾಲಿಸಿ.ಕಾಮ್, ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.