ADVERTISEMENT

ಆಳ-ಅಗಲ | India-USA Trade Deal: ಟ್ರಂಪ್‌ ಒತ್ತಡ ತಂತ್ರಕ್ಕೆ ಮಣಿಯಿತೇ ಭಾರತ?

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ; ಹಲವು ಅಂಶಗಳಿಗೆ ಆಕ್ಷೇಪ, ಕೃಷಿ ವಲಯ ಅತಂತ್ರವಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
<div class="paragraphs"><p>ಪ್ರಾತಿನಿಧಿಕ ಎಐ ಚಿತ್ರ: ಬಡಿಗೇರ</p></div>

ಪ್ರಾತಿನಿಧಿಕ ಎಐ ಚಿತ್ರ: ಬಡಿಗೇರ

   
ಭಾರತ ಮತ್ತು ಅಮೆರಿಕದ ನಡುವೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತದ ರಫ್ತುದಾರರಿಗೆ ವಿಶಾಲ ಮಾರುಕಟ್ಟೆ ಒದಗಿಸಲಿದೆ ಎಂದು ಹೇಳಲಾಗುತ್ತಿದೆಯಾದರೂ, ಅದರಲ್ಲಿನ ಕೆಲವು ಅಂಶಗಳಿಗೆ ಆಕ್ಷೇಪವೂ ವ್ಯಕ್ತವಾಗಿದೆ. ಅಮೆರಿಕದಿಂದ ಆಮದು ಮಾಡಲಾಗುವ ಕೆಲವು ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಪಶುಆಹಾರಕ್ಕೆ ಬಳಸುವ ಗೋವಿನ ಜೋಳ, ಸೋಯಾಬೀನ್‌ ಎಣ್ಣೆಯ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಿದರೆ, ಭಾರತದ ರೈತರಿಗೆ, ಪಶು ಆಹಾರ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ರೈತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ರಷ್ಯಾದಿಂದ ತೈಲ ಖರೀದಿ ಸ್ಥಗಿತ, ಐದು ವರ್ಷಗಳಲ್ಲಿ ಅಮೆರಿಕದಿಂದ 50 ಸಾವಿರ ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಟ್ರಂಪ್‌ ಅವರ ಒತ್ತಡಕ್ಕೆ ಮಣಿದು, ಅವರ ಷರತ್ತುಗಳಿಗೆ ಒಪ್ಪಿದಂತೆ ಕಾಣುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ

ದೀರ್ಘ ಸಮಯದ ನಂತರ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮವಾಗಿದೆ. ಮಧ್ಯಂತರ ಒಪ್ಪಂದದ ಚೌಕಟ್ಟನ್ನೂ ರೂಪಿಸಲಾಗಿದೆ. ಆದರೆ, ಉಭಯ ರಾಷ್ಟ್ರಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿನ ಕೆಲವು ಅಂಶಗಳು ಮತ್ತು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಪ್ರತಿಯಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ 25ರಷ್ಟು ಹೆಚ್ಚುವರಿ ತೆರಿಗೆಯನ್ನು ವಾ‍‍‍ಪಸ್‌ ಪಡೆದು ಟ್ರಂಪ್‌ ಹೊರಡಿಸಿರುವ ಕಾರ್ಯಾದೇಶದಲ್ಲಿ ಪ್ರಸ್ತಾಪಿಸಿರುವ ಹಲವು ಅಂಶಗಳನ್ನು ಗಮನಿಸಿದರೆ ಭಾರತಕ್ಕಿಂತಲೂ ಹೆಚ್ಚಾಗಿ ಅಮೆರಿಕಕ್ಕೆ ಬೇಕಾದ ರೀತಿಯಲ್ಲೇ ಒಪ್ಪಂದ ರೂಪುಗೊಂಡಂತೆ ಕಾಣುತ್ತದೆ ಎಂಬ ಮಾತು ಕೇಳಿಬಂದಿದೆ. ಜತೆಗೆ, ಒಪ್ಪಂದ ದಿಂದ ಹಲವು ಕೃಷಿ ಉತ್ಪನ್ನಗಳ ಬೆಲೆ ಕುಸಿಯಲಿದ್ದು, ಪಶು ಆಹಾರ ಉದ್ಯಮವು ಅಮೆರಿಕದ ಹಿಡಿತಕ್ಕೆ ಹೋಗಲಿದೆ. ಜತೆಗೆ, ಕುಲಾಂತರಿ ಬೀಜಗಳು ಮತ್ತು ಉತ್ಪನ್ನಗಳು ಪರೋಕ್ಷವಾಗಿ ದೇಶದೊಳಗೆ ಬರಲು ಒಪ್ಪಂದ ದಾರಿ ಮಾಡಿಕೊಟ್ಟಿದೆ ಎನ್ನುವ ಆಕ್ಷೇಪಣೆಯೂ ವ್ಯಕ್ತವಾಗಿದೆ.

ಜಂಟಿ ಹೇಳಿಕೆಯಲ್ಲಿನ 11ನೇ ಅಂಶವು ಭಾರತವು ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ ಇಂಧನ ಉತ್ಪನ್ನಗಳು, ವಿಮಾನಗಳು, ಅದರ ಬಿಡಿಭಾಗಗಳು, ಬೆಲೆಬಾಳುವ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು, ಕಲ್ಲಿದ್ದಲು ಸೇರಿದಂತೆ 50,000 ಕೋಟಿ ಡಾಲರ್‌ ಅಂದರೆ, ಅಂದಾಜು ₹45.29 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲು ಉದ್ದೇಶಿಸಿದೆ ಎಂದು ಹೇಳುತ್ತದೆ. ಭಾರತವು ಅಮೆರಿಕದಿಂದ 50 ಸಾವಿರ ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಟ್ರಂಪ್‌ ಅವರು ಆರಂಭದಿಂದಲೂ ಹೇಳುತ್ತಲೇ ಬಂದಿದ್ದರು.

ADVERTISEMENT

ಭಾರತ ಮತ್ತು ಅಮೆರಿಕದ ನಡುವೆ ಕಳೆದ ವರ್ಷ ಒಟ್ಟು 13,220 ಕೋಟಿ ಡಾಲರ್‌ ಮೌಲ್ಯದ ( ₹11.45 ಲಕ್ಷ ಕೋಟಿ) ಸರಕು ವ್ಯಾಪಾರ ನಡೆದಿದೆ. ಇದರಲ್ಲಿ ಅಮೆರಿಕವು ಭಾರತದಿಂದ ₹7.42 ಲಕ್ಷ ಕೋಟಿ ಮೌಲ್ಯದ ಸರಕು ಖರೀದಿಸಿದೆ. ಭಾರತ ಖರೀದಿಸಿದ್ದು ₹4.01 ಲಕ್ಷ ಕೋಟಿ ಮೌಲ್ಯದ್ದು. ಅಂದರೆ, ಭಾರತದೊಂದಿಗೆ ಅಮೆರಿಕದ ವ್ಯಾಪಾರ ಕೊರತೆ ಹೆಚ್ಚಿದೆ. ಐದು ವರ್ಷಗಳಲ್ಲಿ ಭಾರತ ₹45.29ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಖರೀದಿಸಬೇಕು ಎಂದಾದರೆ ಭಾರತವು ವರ್ಷಕ್ಕೆ ಸರಾಸರಿ ₹9.05 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಬೇಕು. ಹಾಗಾದರೆ, ಈಗಿನದ್ದಕ್ಕಿಂತ ದುಪ್ಪಟ್ಟು ಸರಕುಗಳನ್ನು ಖರೀದಿಸ ಬೇಕಾಗುತ್ತದೆ. ಅಮೆರಿಕವು ಭಾರತದಿಂದ ಹೆಚ್ಚು ಸರಕು ಖರೀದಿಸದೇ ಇದ್ದಲ್ಲಿ ಭಾರತದ ವ್ಯಾಪಾರ ಕೊರತೆ ಹೆಚ್ಚಲಿದೆ.

‘ಟ್ರಂಪ್‌ ಅವರು ಜಪಾನ್‌, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾಗಳೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವಾಗಲೂ ಆ ರಾಷ್ಟ್ರಗಳು ಅಮೆರಿಕದಲ್ಲಿ ಕ್ರಮವಾಗಿ‌ 55,000 ಕೋಟಿ ಡಾಲರ್‌, 35,000 ಕೋಟಿ ಡಾಲರ್‌ ಮತ್ತು 7,000 ಕೋಟಿ ಡಾಲರ್‌ ಬಂಡವಾಳ ಹೂಡಿಕೆ ಮಾಡುವುದನ್ನು ಖಾತರಿ ಪಡಿಸಿಕೊಂಡಿದ್ದರು. ಭಾರತದೊಂದಿಗಿನ ಒಪ್ಪಂದದಲ್ಲೂ ಟ್ರಂ‍ಪ್‌ ಅವರು ಅದನ್ನೇ ಮಾಡಿದ್ದಾರೆ’ ಎಂದು ಅಂತರರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಕ ಬ್ರಹ್ಮ ಚಲೆನಿ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್

ಕಾರ್ಯಾದೇಶದಲ್ಲೇನಿದೆ?:

ಇದಲ್ಲದೇ ಭಾರತದ ಮೇಲೆ ಹೇರಲಾಗಿದ್ದ ಹೆಚ್ಚುವರಿ ಸುಂಕವನ್ನು ವಾಪಸ್‌ ಪಡೆಯುವ ಸಂಬಂಧ ಡೊನಾಲ್ಡ್‌ ಟ್ರಂಪ್‌ ಹೊರಡಿಸಿರುವ ಕಾರ್ಯಾದೇಶದಲ್ಲಿರುವ ಕೆಲವು ಅಂಶಗಳಿಗೂ ಆಕ್ಷೇಪ ವ್ಯಕ್ತವಾಗಿದೆ.

ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕವನ್ನು ಟ್ರಂಪ್‌ ಹೇರಿದ್ದರು. ಮೊನ್ನೆ, ಒಪ್ಪಂದ ಅಂತಿಮವಾಗಿದೆ ಎಂದು ‘ಟ್ರುತ್‌’ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ನಲ್ಲೂ ಅವರು, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಹೇಳಿದ್ದರು.

ಎರಡೂ ದೇಶಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಪ್ರಸ್ತಾಪ ಇಲ್ಲದಿದ್ದರೂ, ಇದೇ 6ರಂದು ಶೇ 25ರಷ್ಟು ಹೆಚ್ಚುವರಿ ಸುಂಕ ಹೇರಿಕೆ ವಾಪಸ್‌ ಪಡೆಯುವ ಸಂಬಂಧ ಹೊರಡಿಸಲಾಗಿರುವ ಕಾರ್ಯಾದೇಶದಲ್ಲಿ, ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ವಿಚಾರಗಳಲ್ಲಿ ಭಾರತವು ಅಮೆರಿಕದ ಜೊತೆಯಾಗಲಿದೆ ಎಂದು ಹೇಳಲಾಗಿದ್ದು ಭಾರತ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದು ಉಲ್ಲೇಖಿಸಲಾಗಿದೆ.

ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆಗಳ ವಕ್ತಾರ ರಣಧೀರ್ ಜೈಸ್ವಾಲ್‌ ಅವರು, ‘ದೇಶದ ಇಂಧನ ಭದ್ರತೆ ವಿಚಾರದಲ್ಲಿ ಸರ್ಕಾರ ಈಗಾಗಲೇ ಹಲವು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ಸರ್ಕಾರ ಆದ್ಯತೆ. ಮಾರುಕಟ್ಟೆಯ ಸ್ಥಿತಿಗತಿ, ಅಂತರರಾಷ್ಟ್ರೀಯ ಬೆಳವಣಿಗೆಗಳನ್ನು ಗಮನಿಸಿ ತೈಲ ಖರೀದಿಸಲಾಗುತ್ತದೆ’ ಎಂದು ಹೇಳಿದ್ದರು.

ಟ್ರಂಪ್‌ ಅವರು ಈ ಹಿಂದೆ ಭಾರತವು ರಷ್ಯಾದ ಬದಲಿಗೆ ಅಮೆರಿಕ, ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂದು ಹೇಳಿದ್ದರು. ಕಾರ್ಯಾದೇಶದಲ್ಲಿ ವೆನೆಜುವೆಲಾದ ಪ್ರಸ್ತಾಪ ಇಲ್ಲ. ಬದಲಿಗೆ ಭಾರತವು ಅಮೆರಿಕದಿಂದ ಇಂಧನದ ಉತ್ಪನ್ನಗಳನ್ನು ಖರೀದಿಸಲು ಬದ್ಧತೆ ತೋರಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತು ಮುಂದಿನ 10 ವರ್ಷಗಳವರೆಗೆ ರಕ್ಷಣಾ ಕ್ಷೇತ್ರದ ಸಹಕಾರ ವನ್ನು ವಿಸ್ತರಿಸಲೂ ಒಪ್ಪಿದೆ ಎಂದೂ ಹೇಳಲಾಗಿದೆ.

ಒಪ್ಪಂದ ನಂತರ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆಯೇ ಎಂಬುದರ ಮೇಲ್ವಿಚಾರಣೆ ನಡೆಸಲು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವೂ ಕಾರ್ಯಾದೇಶದಲ್ಲಿದೆ. ಮತ್ತು ಒಂದು ವೇಳೆ ಖರೀದಿ ಮುಂದುವರಿಸಿದರೆ ಮತ್ತೆ ಸುಂಕ ಹೇರಲಾಗುವುದು ಎಂದೂ ಹೇಳಲಾಗಿದೆ.

ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ವಿಚಾರದಲ್ಲಿ ಸರ್ಕಾರ ಅಧಿಕೃತವಾಗಿ ಏನೂ ಹೇಳಿಕೆ ನೀಡಿಲ್ಲ. ಟ್ರಂಪ್‌ ಹೊರಡಿಸಿರುವ ಕಾರ್ಯಾದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿಲ್ಲ. ಅವುಗಳನ್ನು ಅಲ್ಲಗಳೆದೂ ಇಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ. ಡೊನಾಲ್ಡ್ ಟ್ರಂ‍ಪ್‌ ಹೇಳಿದ್ದಕ್ಕೆಲ್ಲ ಒಪ್ಪಿಗೆ ಸೂಚಿಸುವ ಮೂಲಕ ಕೇಂದ್ರ ಸರ್ಕಾರ ಅವರಿಗೆ ಶರಣಾಗಿದೆ ಎಂದು ಆರೋಪಿಸಿವೆ.

ತೈಲ ಖರೀದಿ ಇಳಿಕೆ

ಭಾರತದ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಿವೆ. ಮಾರ್ಚ್‌–ಏಪ್ರಿಲ್‌ ಅವಧಿಗೆ ತೈಲ ಖರೀದಿಗೆ ಮುಂದಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ. ಸದ್ಯ ಪ್ರತಿದಿನ ಐದು ಲಕ್ಷದಿಂದ ಆರು ಲಕ್ಷ ಬ್ಯಾರೆಲ್‌ಗಳಷ್ಟು ತೈಲ ರಷ್ಯಾದಿಂದ ಬರುತ್ತಿದೆ ಎಂದು ವರದಿ ತಿಳಿಸಿದೆ. ಅತ್ತ ರಷ್ಯಾವು ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದೆ.

ಕೃಷಿ ಕ್ಷೇತ್ರದ ಮೇಲೆ ಕರಿನೆರಳು?

ಒಪ್ಪಂದದಲ್ಲಿ ಕೃಷಿ ಮತ್ತು ಹೈನು ಉತ್ಪನ್ನಗಳಿಗೆ ರಕ್ಷಣೆ ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಪ್ಪಂದದಿಂದ ಭಾರತದ ಕೆಲವು ವಲಯಗಳಿಗೆ ಲಾಭವಾಗುತ್ತದೆ. ಆದರೆ, ಕೆಲವು ವಲಯಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.

ಪಶುಸಂಗೋಪನೆಯಲ್ಲಿ ಬಳಸುವ ಧಾನ್ಯಗಳು (ಡಿಸ್ಟಿಲ್ಲರ್ಸ್ ಡ್ರೈಡ್ ಗ್ರೈನ್ಸ್ ವಿಥ್ ಸಾಲ್ಯುಬಲ್ಸ್‌– ಡಿಡಿಜಿಎಸ್‌), ಪಶು ಆಹಾರಕ್ಕೆ ಬಳಸುವ ಗೋವಿನ ಜೋಳ, ಡ್ರೈ ಫ್ರೂಟ್ಸ್, ಕೆಲವು ತಾಜಾ ಮತ್ತು ಸಂಸ್ಕರಿತ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್, ಸ್ಪಿರಿಟ್ ಮತ್ತು ಇತರ ಉತ್ಪನ್ನಗಳಿಗೆ ಶೂನ್ಯ ಸುಂಕ ಅಥವಾ ಕಡಿಮೆ ಸುಂಕ ವಿಧಿಸುವ ಅಂಶವು ಒಪ್ಪಂದದಲ್ಲಿರುವುದು ರೈತ ಸಮುದಾಯದ ಆತಂಕಕ್ಕೆ ಕಾರಣವಾಗಿದೆ.

ಪಶುಸಂಗೋಪನಾ ವಲಯದ ಬೇಡಿಕೆ ಆಧರಿಸಿ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಡಿಡಿಜಿಎಸ್ ಅನ್ನು ಆಮದು ಮಾಡಿಕೊಳ್ಳಲಾಗುವುದು. ಇದರಿಂದ ಕುಕ್ಕಟೋದ್ಯಮಕ್ಕೆ ಸಹಾಯವಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಡ್ರೈ ಫ್ರೂಟ್ಸ್‌ ಸೇರಿದಂತೆ ಕೆಲವು ಉತ್ಪನ್ನಗಳ ಮೇಲಿನ ಸುಂಕ ಕಡಿತ ಅಥವಾ ಶೂನ್ಯ ಸುಂಕದ ಕ್ರಮವು ಭಾರತದ ಕೃಷಿ ವಲಯದ ಮೇಲೆ ಹೆಚ್ಚೇನೂ ಪರಿಣಾಮ ಬೀರದು. ಭಾರತದಲ್ಲಿ ಅವುಗಳನ್ನು ಹೆಚ್ಚು ಬೆಳೆಯುವುದಿಲ್ಲ. ಆದರೆ, ಮುಸುಕಿನ ಜೋಳ, ಸೋಯಾಬೀನ್ ಮತ್ತು ಪಶು ಆಹಾರದಲ್ಲಿ ಬಳಸುವ ಇತರ ಕೃಷಿ ಉತ್ಪನ್ನಗಳ ಬೆಲೆಯ ಮೇಲೆ ಒಪ್ಪಂದವು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ರೈತ ಮುಖಂಡರ ಅಭಿಪ್ರಾಯ. ಇತ್ತೀಚಿನ ವರ್ಷಗಳಲ್ಲಿ ಸೋಯಾಬೀನ್ ಬೆಲೆ ಕುಸಿದಿದ್ದು, ಮಧ್ಯಪ್ರದೇಶ, ಮಹಾರಾಷ್ಟ್ರ ತೆಲಂಗಾಣ ಮತ್ತು ರಾಜಸ್ಥಾನದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಈಗ ಸೋಯಾಬೀನ್ ಎಣ್ಣೆ ಆಮದು ಮಾಡಿಕೊಂಡರೆ, ಬೆಲೆಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುವ ಆತಂಕ ವ್ಯಕ್ತವಾಗಿದೆ.

ಗೋವಿನ ಜೋಳದ ಜತೆಗೆ ಮುಸುಕಿನ ಜೋಳವನ್ನು ಡಿಡಿಜಿಎಸ್ ವಿಭಾಗದ ಅಡಿಯಲ್ಲೇ ಮಾರಲಾಗುತ್ತದೆ. ಅಮೆರಿಕದಿಂದ ಮುಸುಕಿನ ಜೋಳ, ಸೋಯಾಬೀನ್, ಹತ್ತಿ ಈಗಾಗಲೇ ಭಾರತಕ್ಕೆ ರಫ್ತಾಗುತ್ತಿದ್ದು, ಗೋಧಿಯನ್ನು ಕೆ.ಜಿಗೆ ₹18.50ಕ್ಕೆ ರಫ್ತು ಮಾಡಲಾಗುತ್ತಿದೆ. ಇದು ಭಾರತದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದರೆ, ಅದು ಭಾರತದ ರೈತರ ಪಾಲಿಗೆ ಮರಣಶಾಸನವಾಗಲಿದೆ; ಭಾರತದ ಪಶು ಆಹಾರ ಕ್ಷೇತ್ರವು ಅಮೆರಿಕದ ಹಿಡಿತಕ್ಕೆ ಹೋಗಲಿದೆ ಎಂದು ‘ಕಿಸಾನ್ ಸಂಯುಕ್ತ ಮೋರ್ಚಾ’ (ಎಸ್‌ಕೆಎಂ) ಹೇಳಿದೆ.

ಅಮೆರಿಕದಲ್ಲಿ ಕೃಷಿ ಕ್ಷೇತ್ರವು ಭಾರಿ ಮುಂದುವರಿದಿದೆ. ಕುಲಾಂತರಿ ತಳಿಗಳ ಬೀಜಗಳನ್ನು ಬಳಸಿ, ಬೃಹತ್ ಪ್ರಮಾಣದಲ್ಲಿ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಸೂಕ್ತ ನಿಯಮಗಳನ್ನು ರೂಪಿಸಿ, ಅವುಗಳ ಮೂಲಕ ರೈತರಿಗೆ ಲಾಭ ತರುವಂತೆ ಕೃಷಿ ಮಾರುಕಟ್ಟೆಯನ್ನು ನಿಯಂತ್ರಿಸಲಾಗುತ್ತಿದೆ. ಕುಲಾಂತರಿ ಬೀಜಗಳು, ತಾಂತ್ರಿಕತೆ ಮತ್ತಿತರ ಕಾರಣಗಳಿಂದ ಅಲ್ಲಿ ಇಳುವರಿ ಪ್ರಮಾಣವು ಭಾರತಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಆ ರೈತರು ಉತ್ಪಾದಿಸಿದ ಬೃಹತ್ ಉತ್ಪನ್ನಗಳೊಂದಿಗೆ ಭಾರತದ ರೈತರು ಸ್ಪರ್ಧಿಸುವುದು ಅಸಾಧ್ಯದ ಮಾತು. ಅಮೆರಿಕದ ಅಗ್ಗದ ವಸ್ತುಗಳು ಭಾರತಕ್ಕೆ ಪ್ರವಾಹದಂತೆ ಹರಿದು ಬರಲಿದ್ದು, ಭಾರತದ ಸಣ್ಣ ರೈತರು ಆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

ಕುಲಾಂತರಿ ಬೀಜಗಳ ಅಪಾಯ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದ 24 ಬೆಳೆಗಳು ಕುಲಾಂತರಿ ಮುಕ್ತ ಪ್ರಮಾಣ ಪತ್ರ ಹೊಂದಿದ್ದರೆ ಮಾತ್ರವೇ ಅವು ಭಾರತಕ್ಕೆ ಆಮದಾಗಲು ಅರ್ಹವಾಗುತ್ತವೆ. ಆದರೆ, ಅಮೆರಿಕದ ಡಿಡಿಜಿಎಸ್‌ನಲ್ಲಿ ಕುಲಾಂತರಿ ಧಾನ್ಯಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಕುಲಾಂತರಿ ಉತ್ಪನ್ನಗಳು ಭಾರತ ಪ್ರವೇಶಿಸಲಿವೆ.

ಭಾರತವು ಕುಲಾಂತರಿ ಬೀಜಗಳಿಗೆ ನಿರ್ಬಂಧ ವಿಧಿಸಿರುವುದರ ಬಗ್ಗೆ ಅಮೆರಿಕ ಆಕ್ಷೇಪಣೆ ಎತ್ತುತ್ತಲೇ ಬಂದಿದೆ. ಈಗ ಪರೋಕ್ಷವಾಗಿ ಅವುಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಲಾಂತರಿ ತಳಿಗಳ ಬೀಜಗಳು ಮತ್ತು ಆಹಾರ ಉತ್ಪನ್ನಗಳು ನಮ್ಮ ಕೃಷಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿ, ಧಾನ್ಯ, ಬೇಳೆಕಾಳು ಮತ್ತು ಎಣ್ಣೆಬೀಜಗಳ ಮಾರುಕಟ್ಟೆಗೆ ಹಾನಿ ಮಾಡಲಿವೆ ಎಂದು ‌ಎಸ್‌ಕೆಎಂ ಎಚ್ಚರಿಕೆ ನೀಡಿದೆ.

12ರಂದು ಮುಷ್ಕರಕ್ಕೆ ಕರೆ

ಭಾರತ – ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ. ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಇದೇ12ರಂದು ಮುಷ್ಕರಕ್ಕೆ ಕರೆ ನೀಡಿವೆ. ಅದರಲ್ಲಿ ರೈತ ಸಂಘಟನೆಗಳೂ ಭಾಗಿಯಾಗಲಿವೆ. ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್), ಕ್ರಾಂತಿಕಾರಿ ಕಿಸಾನ್ ಯೂನಿಯನ್ (ಪಂಜಾಬ್), ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಂತಾದ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

ಆಧಾರ: ವ್ಯಾಪಾರ ಒಪ್ಪಂದದ ಬಗ್ಗೆ ಭಾರತ– ಅಮೆರಿಕ ಜಂಟಿ ಹೇಳಿಕೆ, ಕಾರ್ಯಾದೇಶ, ರಾಯಿಟರ್ಸ್, ಪಿಟಿಐ, ‘ಎಕ್ಸ್‌’ ಪೋಸ್ಟ್, ಡೌನ್‌ ಟು ಅರ್ಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.