
ಕರ್ನಾಟಕವೂ ಇತರೆ ರಾಜ್ಯಗಳನ್ನು ಅನುಸರಿಸಿ ಮನೆ ಬಾಡಿಗೆ ಕಾಯ್ದೆಯನ್ನು ಪರಿಷ್ಕರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿಗಳ ಅನ್ವಯ 1999ರ ಬಾಡಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆಯನ್ನು (2025) ಅಂಗೀಕರಿಸಲಾಗಿದೆ. ಮನೆ ಮಾಲೀಕ ಮತ್ತು ಬಾಡಿಗೆದಾರ ಇಬ್ಬರಿಗೂ ಕಾಯ್ದೆಯಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ, ಅಸ್ತಿತ್ವದಲ್ಲಿರುವ ಕಾಯ್ದೆಯಂತೆ ಹೊಸ ನಿಯಮಗಳೂ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳಲಿವೆ ಎನ್ನುವ ಅನುಮಾನವೂ ಇದೆ
ಬಾಡಿಗೆಯು ರಾಜ್ಯ ಪಟ್ಟಿಗೆ ಬರುವ ವಿಚಾರ. ರಾಜ್ಯವೇ ಈ ಸಂಬಂಧದ ನಿಯಮಗಳನ್ನು ರೂಪಿಸಬೇಕು. ಈ ದಿಸೆಯಲ್ಲಿ ಮಾದರಿ ಬಾಡಿಗೆದಾರರ ಕಾಯ್ದೆ (2021), ಮನೆ ಬಾಡಿಗೆ ನಿಯಮಗಳು (2025) ಆಧರಿಸಿ ಹಲವು ರಾಜ್ಯಗಳಲ್ಲಿ ಮನೆ ಬಾಡಿಗೆ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಅಸ್ಸಾಂನಂತಹ ಕೆಲವು ರಾಜ್ಯಗಳು ಬಾಡಿಗೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದವು. ಆದರೆ, ಕರ್ನಾಟಕದಲ್ಲಿ ಹಳೆಯ (1999) ಕಾಯ್ದೆಯೇ ಜಾರಿಯಲ್ಲಿತ್ತು.
ಇದೀಗ ಕರ್ನಾಟಕವು ಕೇಂದ್ರ ಸರ್ಕಾರ ಹೊರಡಿಸಿದ್ದ ಬಾಡಿಗೆ ನಿಯಂತ್ರಣ ಮಾರ್ಗಸೂಚಿಯ ಚೌಕಟ್ಟಿನ ಆಧಾರದಲ್ಲಿ ಕರ್ನಾಟಕ ಬಾಡಿಗೆ ಕಾಯ್ದೆ–1999 ಅನ್ನು ಬದಲಾವಣೆ ಮಾಡಿ, ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆ–2025 ಅನ್ನು ರೂಪಿಸಿದೆ. ವಿಧಾನ ಮಂಡಲದಲ್ಲಿ ಮಸೂದೆ ಅಂಗೀಕಾರವಾಗಿದೆ. ರಾಜ್ಯಪಾಲರ ಅಂಕಿತ ಪಡೆದ ನಂತರ ಇದು ಕಾಯ್ದೆಯಾಗಿ ಜಾರಿಯಾಗಲಿದೆ.
ಮಸೂದೆಯಲ್ಲಿ, ಕರ್ನಾಟಕ ಬಾಡಿಗೆ ಕಾಯ್ದೆಯಲ್ಲಿನ (1999) ಸೆಕ್ಷನ್ 53 (ನ್ಯಾಯಾಂಗ ಪ್ರಕ್ರಿಯೆ ಮತ್ತು ಶಿಕ್ಷೆ ವಿಧಿಸುವುದು) ಅನ್ನು ತೆಗೆದುಹಾಕಲಾಗಿದೆ. ಜತೆಗೆ, ಸೆಕ್ಷನ್ 24 (ನಿಯಂತ್ರಣಾಧಿಕಾರಿಯ ಅಧಿಕಾರ), ಸೆಕ್ಷನ್ 54 (ಅಪರಾಧಗಳು ಮತ್ತು ದಂಡ) ಮತ್ತು ಸೆಕ್ಷನ್ 55ಕ್ಕೆ (ಕಂಪನಿಗಳಿಂದ ಅಪರಾಧಗಳು) ತಿದ್ದುಪಡಿ ಮಾಡಲಾಗಿದೆ.
ಜನವಿಶ್ವಾಸ ಕಾಯ್ದೆ:
ಕೇಂದ್ರ ಸರ್ಕಾರದ 42 ಕಾಯ್ದೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸರಳಗೊಳಿಸಲು ಮತ್ತು ಸಣ್ಣಪುಟ್ಟ ಉಲ್ಲಂಘನೆಗಳನ್ನು ಅಪರಾಧ ವ್ಯಾಪ್ತಿಯಿಂದ ಹೊರತರಲು ಜನವಿಶ್ವಾಸ (ನಿಯಮಗಳ ತಿದ್ದುಪಡಿ) ಕಾಯ್ದೆ–2023 ಅನ್ನು ಜಾರಿಗೊಳಿಸಿತ್ತು. ಈ ಕಾಯ್ದೆಯ ಮೂಲಕ 19 ಇಲಾಖೆಗಳಿಗೆ ಸಂಬಂಧಿಸಿದ ಉಲ್ಲಂಘನೆಗಳನ್ನು ಅಪರಾಧಮುಕ್ತಗೊಳಿಸುವ ಉದ್ದೇಶದಿಂದ ಒಟ್ಟು 183 ನಿಯಮಗಳನ್ನು ರೂಪಿಸಲಾಗಿತ್ತು. ಸಣ್ಣಪುಟ್ಟ ಉಲ್ಲಂಘನೆಗಳಿಗೂ ಜೈಲುಶಿಕ್ಷೆ ವಿಧಿಸುವ ನಿಯಮ ತಿದ್ದುಪಡಿ ಮಾಡಿ ದಂಡ ವಿಧಿಸಲು ಅನುಕೂಲವಾಗುವ ನಿಯಮ ರೂಪಿಸಲಾಗಿತ್ತು. ಇದರಿಂದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಕೇಂದ್ರ ಪ್ರತಿಪಾದಿಸಿತ್ತು.
ಈ ಕಾಯ್ದೆಯ ಅನುಸಾರವೇ ಕರ್ನಾಟಕ ಬಾಡಿಗೆ (ತಿದ್ದುಪಡಿ) ಮಸೂದೆಯಲ್ಲಿ ಬಾಡಿಗೆಗೆ ಸಂಬಂಧಿಸಿದ ಕೆಲವು ಉಲ್ಲಂಘನೆಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರತರಲಾಗಿದೆ. ಆದರೆ, ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಏನೇನು ತಿದ್ದುಪಡಿ?
ಸೆಕ್ಷನ್ 24:ಮೂಲ ಕಾಯ್ದೆಯ ಸೆಕ್ಷನ್ 24 ನಿಯಂತ್ರಣಾಧಿಕಾರಿಯ ಅಧಿಕಾರದ ಬಗ್ಗೆ ವಿವರಿಸುತ್ತದೆ. ತಿದ್ದುಪಡಿ ಮಸೂದೆಯಲ್ಲಿ ಸೆಕ್ಷನ್ 24ರ ಉಪ ಸೆಕ್ಷನ್‌ನ ಬಳಿಕ 1–ಎ ಎಂಬ ಮತ್ತೊಂದು ಉಪ ಸೆಕ್ಷನ್ ಸೇರಿಸುವ ಪ್ರಸ್ತಾವವನ್ನು ಮಾಡಲಾಗಿದೆ.
ಸೆಕ್ಷನ್ 24 (1): 1908ರ ನಾಗರಿಕ ಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಸಿವಿಲ್ ನ್ಯಾಯಾಲಯಕ್ಕೆ ಇರುವಷ್ಟೇ ಅಧಿಕಾರ ಈ ಕೆಳಗಿನ ವಿಚಾರಗಳಲ್ಲಿ ನಿಯಂತ್ರಣಾಧಿಕಾರಿಯವರಿಗೆ ಇರುತ್ತದೆ.
ತಿದ್ದುಪಡಿ ಮಸೂದೆಯಲ್ಲಿ ಈ ಉಪ ಸೆಕ್ಷನ್ ನಂತರ ಉಪ ಸೆಕ್ಷನ್ (1–ಎ) ಸೇರಿಸಲಾಗಿದೆ.
ಹೊಸ ಉಪ ಸೆಕ್ಷನ್ ಪ್ರಕಾರ, 54ನೇ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ ದಂಡಗಳನ್ನು ನಿರ್ಧರಿಸುವುದಕ್ಕಾಗಿ ನ್ಯಾಯ ನಿರ್ಣಯ ಅಧಿಕಾರಗಳನ್ನು ನಿಯಂತ್ರಣಾಧಿಕಾರಿಯು ಹೊಂದಿರಬೇಕು
ಸೆಕ್ಷನ್ 53:ಈ ಸೆಕ್ಷನ್ ನ್ಯಾಯಾಂಗ ಪ್ರಕ್ರಿಯೆ ಮತ್ತು ಶಿಕ್ಷೆ ವಿಧಿಸುವ ಅಧಿಕಾರದ ಕುರಿತಾಗಿ ಇದೆ.
ಇದರಲ್ಲಿ ಮೂರು ಸೆಕ್ಷನ್‌ಗಳಿವೆ.
(1) ಮೊದಲ ದರ್ಜೆಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಶ್ರೇಣಿಗಿಂತ ಕೆಳಗಿನ ನ್ಯಾಯಾಲಯವು ನ್ಯಾಯಾಂಗ ಪ್ರಕ್ರಿಯೆ ನಡೆಸುವಂತಿಲ್ಲ ಮತ್ತು ಶಿಕ್ಷೆ ವಿಧಿಸುವಂತಿಲ್ಲ
(2) ಈ ಕಾಯ್ದೆಯ ಅಡಿಯಲ್ಲಿ ಪ್ರತಿಯೊಂದು ಅಪರಾಧವೂ ಜಾಮೀನಿಗೆ ಅರ್ಹವಾದದ್ದು ಮತ್ತು ಗಂಭೀರವಲ್ಲದ್ದು
(3) ನಿಯಂತ್ರಣಾಧಿಕಾರಿ ಅಥವಾ ರಾಜ್ಯ ಸರ್ಕಾರ ನೇಮಿಸುವ ಇತರ ಯಾವ ಅಧಿಕಾರಿಯೂ ಈ ಕಾಯ್ದೆಯ ಯಾವುದೇ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಯನ್ನು ದಂಡಿಸಬಹುದು
ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಕಂಪನಿ ನಿಯಮ ಬದಲು
ಕರ್ನಾಟಕ ಬಾಡಿಗೆ ಕಾಯ್ದೆ 1999ರ 55ನೇ ಸೆಕ್ಷನ್ ಕಂಪನಿಗಳಿಂದ ಘಟಿಸುವ ಅಪರಾಧಗಳಿಗೆ ಸಂಬಂಧಿಸಿದೆ. ಒಂದು ಕಂಪನಿಯಿಂದ ಅಪರಾಧ ನಡೆದಿದ್ದರೆ, ಅದರಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕನುಗುಣವಾಗಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಿಯಮ ಹೇಳುತ್ತದೆ. ಆದರೆ, ಆ ಅಪರಾಧವು ತನಗೆ ಗೊತ್ತಿಲ್ಲದಂತೆ ನಡೆದಿದೆ ಎಂದು ಕಂಪನಿಯ ಅಧಿಕಾರಿ ಸಾಬೀತುಪಡಿಸಿದರೆ, ಅವರಿಗೆ ಶಿಕ್ಷೆ ನೀಡಲಾಗುವುದಿಲ್ಲ.
ಉಪಸೆಕ್ಷನ್ 2(1)ರ ಪ್ರಕಾರ, ಅಪರಾಧದಲ್ಲಿ ಕಂಪನಿಯ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ/ ಇತರ ಅಧಿಕಾರಿಯ ಪ್ರತ್ಯಕ್ಷ/ ಪರೋಕ್ಷ ಪಾತ್ರ ಇರುವುದು ಸಾಬೀತಾದರೆ, ಅವರನ್ನು ನ್ಯಾಯಾಂಗ ಪ್ರಕ್ರಿಯೆಗೆ, ದಂಡನೆಗೆ ಒಳಪಡಿಸಬಹುದು .
ಏನು ಬದಲಾವಣೆ?:
1999ರ ಕಾಯ್ದೆಯ 55ನೇ ಸೆಕ್ಷನ್‌ನಲ್ಲಿ ‘ಅಪರಾಧಗಳು’ ಎಂದು ಇರುವ ಕಡೆ ‘ಉಲ್ಲಂಘನೆಗಳು’ ಎಂದು ಬದಲಾಯಿಸಲಾಗಿದೆ. ಉಲ್ಲಂಘನೆ ತನ್ನ ಅರಿವಿಗೆ ಬಾರದಂತೆ ನಡೆಯಿತೆಂದು ಅಥವಾ ಅದನ್ನು ತಡೆಯಲು ತಾನು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದೆನೆಂದು ಅಧಿಕಾರಿ ಸಾಬೀತುಪಡಿಸಿದರೆ, ಅವರಿಂದ ದಂಡ ಸಂಗ್ರಹಿಸಲಾಗುವುದಿಲ್ಲ ಎಂದು ಬದಲಿಸಲಾಗಿದೆ.
ಜತೆಗೆ, ಉಲ್ಲಂಘನೆಯಲ್ಲಿ ಕಂಪನಿಯ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರ ಇರುವುದು ಸಾಬೀತಾದರೆ ಅಥವಾ ಅವರ ನಿರ್ಲಕ್ಷ್ಯದಿಂದ ಉಲ್ಲಂಘನೆ ನಡೆದಿದೆ ಎಂದು ಸಾಬೀತಾದರೆ, ಅವರನ್ನು ಕೃತ್ಯಕ್ಕೆ ಹೊಣೆಗಾರನೆಂದು ಭಾವಿಸತಕ್ಕದ್ದು ಮತ್ತು ದಂಡ ವಿಧಿಸುವುದು ಎಂದು ಬದಲಾವಣೆ ಮಾಡಲಾಗಿದೆ.
ಜಾರಿಯಾಗುವುದೇ ನಿಯಮ?
ಕರ್ನಾಟಕ ಬಾಡಿಗೆ (ತಿದ್ದುಪಡಿ) ಕಾಯ್ದೆಯಿಂದ ಮನೆ ಮಾಲೀಕ ಮತ್ತು ಬಾಡಿಗೆದಾರ ಇಬ್ಬರಿಗೂ ಅನುಕೂಲವಾಗಲಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ, ಇದುವರೆಗೆ ಬಾಡಿಗೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಯಮಗಳು ಕಾಗದದ ಮೇಲಷ್ಟೇ ಇವೆ ಎನ್ನುವ ಭಾವನೆ ಇದೆ. ಬಾಡಿಗೆದಾರರು ಹಲವು ರೀತಿಯಲ್ಲಿ ಶೋಷಣೆಗೆ ಗುರಿಯಾಗುತ್ತಲೇ ಇದ್ದಾರೆ ಎನ್ನುವ ದೂರುಗಳಿವೆ. ಈ ಸ್ಥಿತಿಯಲ್ಲಿ ಹೊಸ ನಿಯಮಗಳು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತವೆ, ಮಾಲೀಕರು ಮತ್ತು ಬಾಡಿಗೆದಾರರ ಹಿತವನ್ನು ಎಷ್ಟರ ಮಟ್ಟಿಗೆ ಕಾಯುತ್ತವೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಬೆಂಗಳೂರಿಗರಿಗೆ ಅನುಕೂಲ?
ಅಂದಾಜು 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಬಾಡಿಗೆದಾರರು–ಮಾಲೀಕರ ಸಂಘರ್ಷ ಹೆಚ್ಚು. ಬಾಡಿಗೆದಾರರ ವಿರುದ್ಧ ಮಾಲೀಕರು, ಮಾಲೀಕರ ವಿರುದ್ಧ ಬಾಡಿಗೆದಾರರು ಆರೋಪ ಹೊರಿಸುವುದು ಸಾಮಾನ್ಯ. ಹತ್ತು ತಿಂಗಳ ಬಾಡಿಗೆ ಹಣ ಮುಂಗಡವಾಗಿ ಪಡೆಯುವುದು, ಮನೆ ಖಾಲಿ ಮಾಡುವಾಗ ಮುಂಗಡ ವಾಪಸ್ ನೀಡದಿರುವುದು, ಮನಸೋಇಚ್ಛೆ ಹಣ ಕಡಿತ ಮಾಡುವುದರಂಥ ದೂರುಗಳು ಮಾಲೀಕರ ವಿರುದ್ಧ ಕೇಳಿಬರುತ್ತವೆ. ಕೆಲವು ಮಾಲೀಕರು ಬಾಡಿಗೆಯನ್ನು ಬೇಕಾಬಿಟ್ಟಿ ಹೆಚ್ಚಿಸುತ್ತಾರೆ ಎಂದೂ ದೂರುಗಳಿವೆ. ಬಾಡಿಗೆ ಸರಿಯಾಗಿ ಪಾವತಿಸದಿರುವುದು, ಮನೆ ವ್ಯವಸ್ಥಿತವಾಗಿ ಇಡದಿರುವುದರಂಥ ದೂರುಗಳು ಬಾಡಿಗೆದಾರರ ವಿರುದ್ಧ ಕೇಳುಬರುತ್ತಿವೆ. ಬಾಡಿಗೆ ಸಂಬಂಧ ಘರ್ಷಣೆ, ವಿವಾದ ಉಂಟಾಗಿ ಪೊಲೀಸ್ ಸ್ಟೇಷನ್, ಕೋರ್ಟ್ ಮೊರೆ ಹೋಗುವುದು, ನ್ಯಾಯಕ್ಕಾಗಿ ವರ್ಷಾನುಗಟ್ಟಲೇ ಅಲೆಯುವುದು ಸಾಮಾನ್ಯ ವಿದ್ಯಮಾನವಾಗಿದೆ.
ಹೊಸ ಮಸೂದೆಯು ಕಾಯ್ದೆಯಾಗಿ ಸಮರ್ಪಕವಾಗಿ ಜಾರಿಯಾದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡದಂಥ ನಗರಗಳಲ್ಲಿ ವಾಸಿಸುವ ಜನರ ಇಂಥ ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.