
ಕರ್ನೂಲ್ ಬಸ್ ದುರಂತ ಮತ್ತು ಅದರ ಹಿಂದೆಮುಂದೆ ನಡೆದ ಕೆಲವು ಅಪಘಾತಗಳು ಬಸ್ ಪ್ರಯಾಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ. ಹೆಚ್ಚಿನ ಅಪಘಾತಗಳಿಗೆ ನಿಯಮಗಳನ್ನು ಪಾಲಿಸದ ಬಸ್ ಸಿಬ್ಬಂದಿ ಮತ್ತು ಅವುಗಳ ಸ್ಥಿತಿಗತಿ ಸರಿಯಾಗಿ ನಿಭಾಯಿಸದ ಅಧಿಕಾರಿಗಳು ಕಾರಣಕರ್ತರಾಗಿದ್ದಾರೆ. ಹಲವು ದೇಶಗಳಲ್ಲಿ ಬಸ್ ಪ್ರಯಾಣವು ಅತ್ಯಂತ ಸುರಕ್ಷಿತ ಎಂದು ಹೆಸರಾಗಿದ್ದರೂ ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ.
ಅಕ್ಟೋಬರ್ 14. ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊರಟಿದ್ದ ಹವಾನಿಯಂತ್ರಿತ ಖಾಸಗಿ ಸ್ಲೀಪರ್ ಬಸ್‌ಗೆ ಮಾರ್ಗಮಧ್ಯೆ ಬೆಂಕಿ ಹತ್ತಿಕೊಂಡು, ಅದರಲ್ಲಿದ್ದ 57 ಮಂದಿ ಪೈಕಿ 20ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದರು. ಆ ಬಸ್‌ನಲ್ಲಿ ಮೂಲತಃ ಎ.ಸಿ ಸೌಲಭ್ಯ ಇರಲಿಲ್ಲ. ನಂತರ ಅನಧಿಕೃತವಾಗಿ ಬಸ್‌ನ ಎಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಿ, ಎ.ಸಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಎ.ಸಿ ಶಾರ್ಟ್ ಸರ್ಕಿಟ್‌ನಿಂದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಬಸ್ ತುಂಬಾ ವ್ಯಾಪಿಸಿತ್ತು. ಮುಚ್ಚಿದ್ದ ಬಾಗಿಲುಗಳು ಜಾಮ್ ಆಗಿ ತೆಗೆಯಲು ಸಾಧ್ಯವಾಗದೇ ಪ್ರಯಾಣಿಕರು ಸಾವಿಗೀಡಾಗಿದ್ದರು.
ಅ.24: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್ ಕರ್ನೂಲ್ ಬಳಿ ಅಪಘಾತಕ್ಕೀಡಾಯಿತು. ಕರ್ನೂಲ್‌ನ ಯುವಕನೊಬ್ಬ ಮದ್ಯ ಕುಡಿದು ಮಧ್ಯರಾತ್ರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಸತ್ತುಬಿದ್ದಿದ್ದ. ಸುಮಾರು 10 ನಿಮಿಷಗಳ ನಂತರ ಅದೇ ಮಾರ್ಗವಾಗಿ ಸಾಗುತ್ತಿದ್ದ ಬಸ್, ರಸ್ತೆಯಲ್ಲಿ ಬಿದ್ದಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಅದನ್ನು ಒಂದಷ್ಟು ದೂರ ಎಳೆದುಕೊಂಡು ಹೋಗಿತ್ತು. ಪರಿಣಾಮವಾಗಿ, ಬೆಂಕಿ ಕಾಣಿಸಿಕೊಂಡು, ಅದು ಬಸ್ ಅನ್ನು ವ್ಯಾಪಿಸಿ, ಬಾಗಿಲುಗಳು ಜಾಮ್ ಆಗಿ, 20 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಬೆಂಕಿ ಶರವೇಗದಲ್ಲಿ ವ್ಯಾಪಿಸಿ ಬಸ್ ಹತ್ತಿ ಉರಿಯಲು ಅದರಲ್ಲಿ ನಿಯಮಬಾಹಿರವಾಗಿ ಸಾಗಿಸುತ್ತಿದ್ದ ನೂರಾರು ಮೊಬೈಲ್ ಫೋನ್‌ಗಳೇ ಕಾರಣ ಎನ್ನಲಾಗುತ್ತಿದೆ. 7ನೇ ತರಗತಿ ಅಷ್ಟೇ ಓದಿದ್ದ ಆ ಬಸ್ ಚಾಲಕ, ನಕಲಿ ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ನೀಡಿ ವಾಹನ ಚಾಲನಾ ಪರವಾನಗಿ ಪಡೆದಿದ್ದ ಎನ್ನುವುದು ನಂತರ ತಿಳಿದುಬಂತು.
ಅ.28: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ನ ಮೇಲ್ಭಾಗದಲ್ಲಿ ಅಳತೆ ಮೀರಿ ಲಗೇಜ್ ಪೇರಿಸಲಾಗಿತ್ತು. ಅದರಲ್ಲಿದ್ದ ಸೈಕಲ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ತಂತಿಗಳಿಗೆ ತಗುಲಿ ಬಸ್‌ಗೆ ಬೆಂಕಿ ಹತ್ತಿಕೊಂಡು ಕನಿಷ್ಠ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರು. ಬಸ್‌ನಲ್ಲಿ ನಿಯಮಬಾಹಿರವಾಗಿ 15 ಸಿಲಿಂಡರ್‌ಗಳನ್ನು ಸಾಗಿಸಲಾಗುತ್ತಿತ್ತು. ಅವು ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರಸ್ವರೂಪ ಪಡೆದಿತ್ತು ಎಂದು ವರದಿಯಾಗಿದೆ.
ಎರಡು ವಾರಗಳ ಅಂತರದಲ್ಲಿ ನಡೆದಿರುವ ಈ ಮೂರು ಅವಘಡಗಳು, ಭಾರತದಲ್ಲಿ ಏಕೆ ಮತ್ತು ಹೇಗೆ ಬಸ್‌ಗಳು ಪದೇ ಪದೇ ಅಪಘಾತಗಳಿಗೆ ಕಾರಣವಾಗುತ್ತಿವೆ ಎನ್ನುವುದನ್ನು ವಿವರಿಸುತ್ತವೆ. ಬಸ್ ಅಪಘಾತಕ್ಕೆ ಮುಖ್ಯ ಕಾರಣ ಒಂದೇ ಆಗಿದ್ದರೂ, ಅದರ ತೀವ್ರತೆ ಹೆಚ್ಚಾಗಲು ಹಲವು ಭಿನ್ನ ಕಾರಣಗಳು ಇದ್ದವು.
ದೇಶದಲ್ಲಿ 2013ರಿಂದ ಕನಿಷ್ಠ ಏಳು ಬಸ್‌ಗಳು ಬೆಂಕಿಗಾಹುತಿಯಾಗಿದ್ದು, 130ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸಣ್ಣಪುಟ್ಟ ಅಪಘಾತಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇದ್ದು, ಸಾವುನೋವಿನ ಸಂಖ್ಯೆ ಲೆಕಕ್ಕಿಲ್ಲದಂತಾಗಿದೆ. ಬಹುತೇಕ ಸಂದರ್ಭಗಳಲ್ಲಿ ಅವು ವರದಿಯಾಗುವುದೇ ಇಲ್ಲ.
ಅವಘಡ ಸಂಭವಿಸಿ, ಸಾವುನೋವು ವರದಿಯಾದ ನಂತರ ಬಸ್‌ನಲ್ಲಿದ್ದ ದೋಷಗಳು, ಕೊರತೆಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ, ಬಸ್ ಮಾಲೀಕ, ಚಾಲಕರ ತಪ್ಪುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತದೆ. ಒಂದಷ್ಟು ದಿನಗಳ ನಂತರ (ಸಾವುನೋವಿಗೆ ಗುರಿಯಾದವರನ್ನು ಹೊರತುಪಡಿಸಿ) ಎಲ್ಲರೂ ಅದನ್ನು ಮರೆತುಬಿಡುತ್ತಾರೆ. ಮತ್ತೊಂದು ಅಘಫಾತ ನಡೆದ ನಂತರ ಅದೇ ಪುನರಾವರ್ತನೆಯಾಗುತ್ತದೆ.
ಈವರೆಗೆ ವರದಿಯಾದ ಅಗ್ನಿ ದುರಂತದ ಹೆಚ್ಚಿನ ಪ್ರಕರಣಗಳಲ್ಲಿ ಪ್ರಯಾಣಿಕರ ಪ್ರಾಣಕ್ಕೆ ಎರವಾಗಿದ್ದು ಸ್ಲೀಪರ್ ಬಸ್‌ಗಳೇ. ಈ ತಿಂಗಳಲ್ಲಿ ನಡೆದಿರುವ ನಾಲ್ಕು ದುರಂತಗಳೇ (ಕರ್ನೂಲ್, ರಾಜಸ್ಥಾನದಲ್ಲಿ ಎರಡು ಮತ್ತು ಮಧ್ಯಪ್ರದೇಶದಲ್ಲಿ ಒಂದು (ಅದೃಷ್ಟವಶಾತ್ ಇಲ್ಲಿ ಜೀವ ಹಾನಿಯಾಗಿಲ್ಲ) ಅದಕ್ಕೆ ಇತ್ತೀಚಿನ ನಿದರ್ಶನಗಳು. ಈ ಕಾರಣಕ್ಕೆ ಸ್ಲೀಪರ್ ಬಸ್‌ಗಳನ್ನು ಸಂಚರಿಸುವ ಶವಪೆಟ್ಟಿಗೆ ಎಂದು ಕರೆಯುವುದುಂಟು. ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳಲ್ಲಿ ಇಂತಹ ಬಸ್‌ಗಳ ಸಂಖ್ಯೆ ಹೆಚ್ಚು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸ್ಲೀಪರ್ ಬಸ್‌ಗಳ ಕಾರ್ಯಾಚರಣೆ ಹೆಚ್ಚಿಲ್ಲ.
ನಮ್ಮ ದೇಶದಲ್ಲಿ ಮೂರು ವರ್ಷಗಳಲ್ಲಿ ಸಂಭವಿಸಿದ ಪ್ರಮುಖ ಎಂಟು ಬಸ್‌ಗಳ ಅಗ್ನಿ ದುರಂತಗಳಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ದುರ್ಘಟನೆಗಳು ಬೆಳಗಿನ ಜಾವದಲ್ಲಿ ನಡೆದಿವೆ. ಸ್ಲೀಪರ್ ಬಸ್‌ಗಳ ವಿನ್ಯಾಸ ಮತ್ತು ಸುರಕ್ಷತಾ ಕ್ರಮಗಳ ಕೊರತೆಯು ಅಗ್ನಿ ಆಕಸ್ಮಿಕ ಸಂಭವಿಸಿದಾಗ ಹೆಚ್ಚು ಜೀವ ಹಾನಿಗೆ ಕಾರಣವಾಗುತ್ತಿದೆ.
ಬಸ್‌ನ ಮಧ್ಯೆ ಜನರ ಓಡಾಟಕ್ಕೆ ಜಾಗ ಕಡಿಮೆ ಇರುವುದು, ತ್ವರಿತವಾಗಿ ಬೆಂಕಿ ಹತ್ತಿಕೊಳ್ಳುವ ಮತ್ತು ಬಹುಬೇಗ ಹರಡುವುದಕ್ಕೆ ಅವಕಾಶ ನೀಡುವ ವಸ್ತುಗಳನ್ನು ಒಳಾಂಗಣ ವಿನ್ಯಾಸಕ್ಕೆ ಬಳಸುವುದು, ತುರ್ತು ಸಂದರ್ಭದಲ್ಲಿ ಹೊರ ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದು, ತುರ್ತು ಕಿಟಕಿಗಳ ಕೊರತೆ, ಅಗ್ನಿಶಾಮಕ ಸಲಕರಣೆಗಳು ಇಲ್ಲದಿರುವುದು, ಸಿಬ್ಬಂದಿಗೆ ತರಬೇತಿ ಇಲ್ಲದಿರುವುದು ಸೇರಿದಂತೆ ದುರಂತಕ್ಕೆ ಹಲವು ಕಾರಣಗಳನ್ನು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟ (IRF) ಪಟ್ಟಿ ಮಾಡಿದೆ.
ಶಾರ್ಟ್ ಸರ್ಕಿಟ್ ಆದ ಸಂದರ್ಭದಲ್ಲಿ ಬಾಗಿಲು ತನ್ನಿಂತಾನೆ ಜಾಮ್ ಆಗುವುದು ಕೂಡ ಹೆಚ್ಚು ಜೀವ ಹಾನಿ ಆಗಲು ಮತ್ತೊಂದು ಕಾರಣ. ಸ್ಲೀಪರ್ ಬಸ್‌ಗಳಲ್ಲಿ ಎರಡೂ ಬದಿಗಳಲ್ಲಿ ಕೆಳಗಡೆ ಮತ್ತು ಮೇಲ್ಗಡೆ ಆಸನಗಳಿರುತ್ತವೆ. ಮಲಗಲು ಅವಕಾಶ ಇರುವುದರಿಂದ ಪ್ರಯಾಣಿಕರು ಗಾಢ ನಿದ್ರೆಗೆ ಜಾರುತ್ತಾರೆ. ಅಗ್ನಿ ಅವಘಡ ಸಂಭವಿಸಿದಾಗ ನಿದ್ದೆಯಲ್ಲಿರುವವರಿಗೆ ಇದರ ಅರಿವೇ ಇರುವುದಿಲ್ಲ. ಒಂದು ವೇಳೆ ಗಮನಕ್ಕೆ ಬಂದರೂ, ಎರಡೂ ಬದಿಯ ಮಧ್ಯದಲ್ಲಿ ಕಿರಿದಾದ ಜಾಗ ಇರುವುದರಿಂದ ಪ್ರಯಾಣಿಕರಿಗೆ ಬೇಗ ಇಳಿಯುವುದಕ್ಕೆ ಆಗುವುದಿಲ್ಲ. ಕಿಟಕಿಗಳೂ ಕಿರಿದಾಗಿರುತ್ತವೆ. ಅದರಿಂದ ಹೊರಗಡೆ ಹಾರುವುದೂ ಸುಲಭವಿಲ್ಲ. ಇವೆಲ್ಲವೂ ಪ್ರಾಣ ಹಾನಿಯನ್ನು ಹೆಚ್ಚು ಮಾಡುತ್ತವೆ.
ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಬೇಕಾದರೆ ಬಸ್‌ನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು. ಬೆಂಕಿ ನಂದಿಸುವ ಸಲಕರಣೆಗಳ ಅಳವಡಿಕೆ, ತುರ್ತು ಬಾಗಿಲುಗಳ ವ್ಯವಸ್ಥೆ, ಕಡ್ಡಾಯ ಸ್ಪೀಡ್ ಗವರ್ನರ್ ಅಳವಡಿಕೆ ಮತ್ತು ಚಾಲಕರಿಗೆ ಹೆಚ್ಚು ಒತ್ತಡವಾಗದಂತೆ ಕರ್ತವ್ಯದ ಅವಧಿ ನಿಗದಿಯಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐಆರ್‌ಎಫ್ ಅಭಿಪ್ರಾಯ ಪಟ್ಟಿದೆ.
ಅಮೆರಿಕ, ಯುರೋಪ್‌ನಲ್ಲಿ ಬಸ್ ಪ್ರಯಾಣವು ಅತ್ಯಂತ ಸುರಕ್ಷಿತ ಎಂದು ಹೆಸರಾಗಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಸ್ ಪ್ರಯಾಣವು ಅಪಘಾತಗಳಿಂದ ಕುಖ್ಯಾತಿ ಗಳಿಸಿದೆ. 2023ರ ಅಧ್ಯಯನವೊಂದರ ಪ್ರಕಾರ, ನೇಪಾಳ, ಜಿಂಬಾಬ್ವೆ, ಥಾಯ್ಲೆಂಡ್, ತಾಂಜೇನಿಯಾ ಮತ್ತು ಭಾರತದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಚಾಲಕರ ನಿರ್ಲಕ್ಷ್ಯವೇ ಅದಕ್ಕೆ ಮುಖ್ಯ ಕಾರಣವಾಗಿದೆ. ಬಸ್ ಅಪಘಾತಗಳಿಗೆ ಪಾಕಿಸ್ತಾನವು ಕುಖ್ಯಾತಿ ಗಳಿಸಿದೆ ಎಂದೂ ವರದಿ ಹೇಳಿದೆ.
* ಹೆಚ್ಚಿನ ಅಪಘಾತಗಳಿಗೆ ಚಾಲಕರ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ ಕಾರಣವಾಗಿರುತ್ತದೆ. ರಾತ್ರಿ ಪ್ರಯಾಣದ ವೇಳೆ ಚಾಲಕರು ತೂಕಡಿಸುವುದು; ಒಬ್ಬನೇ ಚಾಲಕ ರಾತ್ರಿಪೂರಾ ಚಾಲನೆ ಮಾಡುವುದು, ಪರ್ಯಾಯ ಚಾಲಕನ ವ್ಯವಸ್ಥೆ ಇಲ್ಲದಿರುವುದು ಕೂಡ ಕಾರಣ
* ಬಸ್ ಹಳೆಯದಾಗಿರುವುದು, ತಾಂತ್ರಿಕ ದೋಷದಿಂದ ಕೂಡಿರುವುದು, ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು, ಸುರಕ್ಷತಾ ಕ್ರಮಗಳ ಕೊರತೆ
* ರಸ್ತೆ ಗುಂಡಿ, ಅವೈಜ್ಞಾನಿಕ ಕಾಮಗಾರಿ, ಬೆಳಕಿನ ಕೊರತೆ
* ಬಸ್‌ಗಳಲ್ಲಿ ಮೊಬೈಲ್ ಚಾರ್ಜಿಂಗ್, ಎ.ಸಿ, ಆಲಂಕಾರಿಕ ದೀಪ ಇತ್ಯಾದಿ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಎಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ಶಾರ್ಟ್ ಸರ್ಕಿಟ್‌ನಂಥ ಅವಘಡಗಳು ಉಂಟಾಗುತ್ತಿವೆ. ಕೆಲವು ಬಸ್‌ಗಳಲ್ಲಿ ಹೆಚ್ಚುವರಿ ಸೀಟ್‌ಗಳನ್ನೂ ಅಳವಡಿಸಿರುತ್ತಾರೆ
* ಹೆಚ್ಚಿನ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಶಾಶ್ವತವಾಗಿ ಮುಚ್ಚಲಾಗಿರುತ್ತದೆ. ಬಸ್‌ಗಳ ಚಾವಣಿಯಲ್ಲಿ ತುರ್ತು ರಕ್ಷಣೆಯ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿ
ರುತ್ತದೆ. ತುರ್ತು ಸಂದರ್ಭಗಳಲ್ಲಿ ಕಿಟಕಿ ಗಾಜುಗಳನ್ನು ಒಡೆಯಲು ಉಪಕರಣಗಳು ಲಭ್ಯವಿರುವುದಿಲ್ಲ
* ಅಗ್ನಿಶಾಮಕ ವ್ಯವಸ್ಥೆಯು ಬಹುತೇಕ ಬಸ್‌ಗಳಲ್ಲಿ ಇರುವುದಿಲ್ಲ. ಹೆಚ್ಚಿನ ಬಸ್‌ಗಳಲ್ಲಿ ಅವು ಖಾಲಿ ಇರುತ್ತವೆ ಇಲ್ಲವೇ ನಿಷ್ಕ್ರಿಯವಾಗಿರುತ್ತವೆ
* ಪ್ರಯಾಣಿಕ ವಾಹನಗಳಲ್ಲಿ ಸರಕು ಸರಂಜಾಮು ಸಾಗಣೆ ಮಾಡುವಂತಿಲ್ಲ. ಆದರೆ, ಬಹುತೇಕ ಬಸ್‌ಗಳಲ್ಲಿ ನಿಯಮಬಾಹಿರವಾಗಿ ಲಗೇಜ್ ಅನ್ನು ಸಾಗಿಸಲಾಗುತ್ತದೆ. ಅದರಲ್ಲೂ ತ್ವರಿತವಾಗಿ ಬೆಂಕಿ ಹತ್ತಿಕೊಳ್ಳುವಂಥ ಎಲೆಕ್ಟ್ರಾನಿಕ್ ಉಪಕರಣಗಳು, ಸಿಲಿಂಡರ್‌ಗಳು, ಪಟಾಕಿಗಳು ಮುಂತಾದ ವಸ್ತುಗಳನ್ನು ಸಾಗಣೆ ಮಾಡುವುದು ಎಗ್ಗಿಲ್ಲದೇ ನಡೆಯುತ್ತಿದೆ
* ಬಸ್‌ಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು; ಕಾಲದಿಂದ ಕಾಲಕ್ಕೆ ಅಗತ್ಯ ದುರಸ್ತಿ ಮಾಡಿಸುವುದು
* ರಾತ್ರಿ ಚಾಲನೆಗೆ, ದೂರ ಪ್ರಯಾಣಕ್ಕೆ ಅನುಭವಿಗಳಾದ ಇಬ್ಬರು ಚಾಲಕರನ್ನು ನೇಮಿಸುವುದು
* ಅಗ್ನಿಶಾಮಕ ವ್ಯವಸ್ಥೆ ಮತ್ತಿತರ ಸುರಕ್ಷತಾ ಕ್ರಮಗಳನ್ನು ಚಾಚೂತಪ್ಪದೇ ಅಳವಡಿಸಿಕೊಳ್ಳುವುದು
* ಅಪಘಾತ ಸಂಭವಿಸಿದಾಗ ತುರ್ತು ಕ್ರಮಗಳ ಬಗ್ಗೆ ಬಸ್ ಸಿಬ್ಬಂದಿಗೆ ತರಬೇತಿ ನೀಡುವುದು
* ಬಸ್‌ಗಳಲ್ಲಿ ಬೆಂಕಿನಿರೋಧಕ ಸೀಟುಗಳು, ಕರ್ಟನ್‌ಗಳು ಮುಂತಾದವನ್ನು ಬಳಸುವುದು
* ಎಲೆಕ್ಟ್ರಿಕ್ ಮತ್ತು ಇಂಧನ ವ್ಯವಸ್ಥೆಯನ್ನು ಆಗಿಂದಾಗ್ಗೆ ಪರೀಕ್ಷಿಸುತ್ತಿರಬೇಕು
* ಅಪಘಾತದ ಸುದ್ದಿ ಕ್ಷಿಪ್ರ ರವಾನೆಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಿಕೊಳ್ಳುವುದು
ಕರ್ನೂಲ್ ಬಸ್ ದುರಂತದ ಬೆನ್ನಲ್ಲೇ, ರಾಜ್ಯದ ಎಲ್ಲಾ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಖಾಸಗಿ ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು/ ಲಗೇಜ್ ಸಾಗಿಸುವ ಸಂದರ್ಭದಲ್ಲಿ ತ್ವರಿತವಾಗಿ ಉರಿಯುವ ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು. ಎಲ್ಲಾ ಹವಾ ನಿಯಂತ್ರಿತ (ಎಸಿ) ಬಸ್‌ಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ ಪರಿಶೀಲನೆ ನಡೆಸಬೇಕು ಮತ್ತು ಅನಧಿಕೃತವಾಗಿ ವಾಹನಗಳನ್ನು ಮಾರ್ಪಾಡು ಮಾಡಿರುವುದು ಕಂಡು ಬಂದರೆ ಕೂಡಲೇ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಯಾವುದೇ ನ್ಯೂನತೆ ಕಂಡು ಬಂದರೂ ನಿರ್ದಾಕ್ಷಿಣ್ಯವಾಗಿ, ಕಠಿಣ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿರುವ ಸಚಿವರು, ಬಸ್ ಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸುವಂತೆ ಸೂಚಿಸಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಸಾರಿಗೆ ನಿಯಮಗಳಿಗೂ ಪತ್ರ ಬರೆದಿರುವ ರಾಮಲಿಂಗಾ ರೆಡ್ಡಿ ಅವರು ನಿಗಮಗಳ ಎಲ್ಲ ಬಸ್‌ಗಳ ಸುರಕ್ಷತಾ ಆಡಿಟ್ ನಡೆಸುವಂತೆ ಹೇಳಿದ್ದಾರೆ.
ಆಧಾರ: ಪಿಟಿಐ, ಟೈಮ್ ಮ್ಯಾಗಜಿನ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.