ಕುಣಿಗಲ್ ತಾಲ್ಲೂಕಿನ ಕಲ್ಲನಾಯಕನಹಳ್ಳಿಯ ಹಿರೇಕೆರೆ ಬಳಿ ನಡೆಯುತ್ತಿರುವ ಶ್ರೀರಂಗ ಏತ ನೀರಾವರಿ ಯೋಜನೆಯ ಪಂಪ್‌ಪೌಸ್ ಕಾಮಗಾರಿ
ಹೇಮಾವತಿ ನದಿ ನೀರು ಹಂಚಿಕೆ ವಿವಾದ ತುಮಕೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ‘ಹಂಚಿಕೆ’ ರಾಜಕೀಯ ಸ್ವರೂಪ ಪಡೆದುಕೊಂಡ ನಂತರ ಹಲವು ಮಗ್ಗಲು ದಾಟಿ ಸಾಗುತ್ತಿದೆ. ನೀರು ಹರಿಸುವ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದ್ದಂತೆಯೇ ಪ್ರತಿಷ್ಠೆ, ದ್ವೇಷದ ಕಿಚ್ಚು ಹೆಚ್ಚಾಗಿದೆ. ‘ನೀ ಕೊಡೆ, ನಾ ಬಿಡೆ’ ಎಂಬ ಪರಿಸ್ಥಿತಿ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರ ಬೆಟ್ಟದಂತೆ ಎದ್ದು ನಿಂತಿದೆ. ಸಣ್ಣ ಕಿಡಿಯು ಜ್ವಾಲೆಯ ರೂಪ ಪಡೆದುಕೊಂಡಿದ್ದು, ಅಣ್ಣ–ತಮ್ಮಂದಿರಂತೆ ಇದ್ದ ತುಮಕೂರಿನ ಅಕ್ಕಪಕ್ಕದ ತಾಲ್ಲೂಕುಗಳು ಮತ್ತು ಎರಡೂ ಜಿಲ್ಲೆಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ
‘ಹೇಮಾವತಿ ನೀರಿನ ಮೇಲೆ ನಮಗೂ ಹಕ್ಕಿದೆ. ಬರಡು ಭೂಮಿ ಮಾಗಡಿಗೆ ಮುಕ್ಕಾಲು ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ನಮ್ಮ ಪಾಲಿನ ನೀರು ಪಡೆಯಲು ಬೇರೆಯವರ ಹಂಗ್ಯಾಕೆ? ಜನರ ಬದುಕಿಗೆ ಸಂಬಂಧಿಸಿದ ಇಂತಹ ವಿಷಯದಲ್ಲಿ ಯಾರೂ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಬಾರದು. ನಮ್ಮ ಹಕ್ಕಿನ ನೀರನ್ನು ನಮಗೆ ಬಿಡಲಿ...’
– ವಿವಾದದ ಸ್ವರೂಪ ತಳೆದಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಬಗ್ಗೆ ಬೆಂಗಳೂರು ದಕ್ಷಿಣ (ಹಿಂದಿನ ರಾಮನಗರ) ಜಿಲ್ಲೆಯ ಮಾಗಡಿಯ ರೈತ ಲೋಕೇಶ್ ಹೊಸಪಾಳ್ಯ ಅವರ ಕೆಚ್ಚಿನ ನುಡಿಗಳಿವು.
ಯೋಜನೆ ಆರಂಭವಾದಾಗಿನಿಂದ ಬೆಂಗಳೂರು ದಕ್ಷಿಣ ಮತ್ತು ತುಮಕೂರು ಜಿಲ್ಲೆಗಳ ನಡುವೆ ‘ಶೀತಲ ಸಮರ’ ನಡೆಯುತ್ತಲೇ ಇದೆ. ತುಮಕೂರು ಭಾಗದಲ್ಲಿ ಯೋಜನೆಗೆ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಮಾಗಡಿಯಲ್ಲೂ ಯೋಜನೆ ಪರವಾದ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ. ಎರಡೂ ಕಡೆ ನಡೆಯುತ್ತಿರುವ ಪರ–ವಿರೋಧದ ಹೋರಾಟದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆ, ನಾಗರಿಕ ಸಂಘಟನೆಗಳು ಪಾಲ್ಗೊಂಡಿರುವುದರಿಂದ ಹೋರಾಟದ ಕಾವು ಹೆಚ್ಚಾಗಿದೆ.
83 ಕೆರೆಗೆ ನೀರು: ಕಾವೇರಿ ನ್ಯಾಯಮಂಡಳಿ ಆದೇಶದಂತೆ ತುಮಕೂರಿನ ಹೇಮಾವತಿ ನಾಲಾ ವಲಯಕ್ಕೆ ಒಟ್ಟು 25.31 ಟಿಎಂಸಿ ಅಡಿ ನೀರು ನಿಗದಿಯಾಗಿದೆ. ಅದರಂತೆ ನಾಲಾ ವಲಯದಲ್ಲಿರುವ ಹಾಸನ, ಮಂಡ್ಯ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ 14 ತಾಲ್ಲೂಕುಗಳಿಗೆ ನೀರು ಹಂಚಿಕೆಯಾಗಿದೆ. ಈ ಪೈಕಿ ಮಾಗಡಿ ತಾಲ್ಲೂಕಿನ 62 ಕೆರೆಗಳು ಮತ್ತು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ 21 ಕೆರೆಗಳು ಸೇರಿದಂತೆ ಒಟ್ಟು 83 ಕೆರೆಗಳಿಗೆ ನೀರು ತುಂಬಿಸುವುದು ಯೋಜನೆ ಉದ್ದೇಶವಾಗಿದೆ.
ಹೇಮಾವತಿ ನೀರಿಗಾಗಿ ತಾಲ್ಲೂಕಿನಲ್ಲಿ ಹಿರಿಯ ರಾಜಕಾರಣಿ ದಿವಂಗತ ಟಿ.ಎ. ರಂಗಯ್ಯ ಸೇರಿದಂತೆ ರೈತರು, ನಾಗರಿಕರು ನಡೆಸಿದ ಹೋರಾಟದ ಫಲವಾಗಿ 83 ಕೆರೆಗಳಿಗೆ ನೀರು ಹರಿಸುವ ₹327 ಕೋಟಿ ಮೊತ್ತದ, ‘ಶ್ರೀರಂಗ ಏತ ನೀರಾವರಿ ಯೋಜನೆ’ಗೆ 2016ರಲ್ಲಿ ಕಾವೇರಿ ನೀರಾವರಿ ನಿಗಮ ಚಾಲನೆ ಕೊಟ್ಟಿತ್ತು. ಇದೀಗ, ಕಾಮಗಾರಿ ಪ್ರಗತಿಯಲ್ಲಿದ್ದು, ದಶಕಗಳ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ.
ಶ್ರೀರಂಗ ಕೆರೆ ತುಂಬಿಸುವ ಯೋಜನೆಗೆ ನೀರನ್ನು ಖಾತರಿ ಪಡಿಸುವ ಸಲುವಾಗಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳುತ್ತದೆ ಕಾವೇರಿ ನೀರಾವರಿ ನಿಗಮ.
‘ಲಿಂಕ್ ಕೆನಾಲ್ ಯೋಜನೆಗೆ ಮರುಜೀವ ಸಿಗುತ್ತಿದ್ದಂತೆಯೇ ತುಮಕೂರು ಭಾಗದಲ್ಲಿ ವಿರೋಧ ವ್ಯಕ್ತವಾಯಿತು. ಒಂದೆಡೆ ಶ್ರೀರಂಗ ಯೋಜನೆ ಪೂರ್ಣವಾಗುವ ಹಂತದಲ್ಲಿದ್ದರೆ, ಮತ್ತೊಂದೆಡೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಡಪ ಬಳಿಯ ಡಿ.ರಾಂಪುರ ಸಮೀಪ ಲಿಂಕ್ ಕೆನಾಲ್ ಕಾಮಗಾರಿ ಶುರುವಾಯಿತು. ನಮಗೆ ಹಂಚಿಕೆಯಾಗಿರುವ ನೀರೇ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ. ಹೀಗಿರುವಾಗ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ, ನಮ್ಮ ಪಾಲಿನ ನೀರನ್ನೇ ಮಾಗಡಿಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ ಎಂದು ಅಲ್ಲಿನವರು ಹೇಳುತ್ತಿದ್ದಾರೆ. ಆದರೆ, ಇದು ಸುಳ್ಳು. ನಾವು ನಮ್ಮ ಪಾಲಿನ ನೀರನ್ನಷ್ಟೇ ಕೇಳುತ್ತಿದ್ದೇವೆಯೇ ವಿನಾ, ಬೇರೆಯವರದ್ದಲ್ಲ. ಅದಕ್ಕೆ ವಿರೋಧ ಸಲ್ಲದು. ಸರ್ಕಾರ ಎರಡೂ ಕಡೆಯವರನ್ನು ಕರೆದು ಗೊಂದಲ ಬಗೆಹರಿಸಬೇಕಿದೆ’ ಎಂದು ಲೋಕೇಶ್ ಹೊಸಪಾಳ್ಯ ಒತ್ತಾಯಿಸಿದರು.
ಪಕ್ಷಾತೀತ ಬೆಂಬಲ: ಯೋಜನೆಗೆ ಮಾಗಡಿಯಲ್ಲಿ ಆರಂಭದಿಂದಲೂ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ‘ನಮ್ಮ ನೀರು, ನಮ್ಮ ಹಕ್ಕು’ ಘೋಷಣೆಯಡಿ ಜೂನ್ 5ರಂದು ಮರೂರು ಹ್ಯಾಂಡ್ ಪೋಸ್ಟ್‌ನಲ್ಲಿ ರಸ್ತೆ ತಡೆ ಹೋರಾಟ ಹಮ್ಮಿಕೊಂಡಿರುವ ಸ್ಥಳೀಯ ಶಾಸಕ ಕಾಂಗ್ರೆಸ್ ಎಚ್.ಸಿ. ಬಾಲಕೃಷ್ಣ, ‘ತಾಲ್ಲೂಕಿನಲ್ಲಿ ರೈತರು ಜೀವಂತವಿದ್ದರೆ ಹೋರಾಟದಲ್ಲಿ ಭಾಗವಹಿಸಿ’ ಎಂದು ಕರೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಮಟ್ಟದ ಅಧ್ಯಕ್ಷ ಎಚ್.ಎಂ.ರೇವಣ್ಣ, ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಸೇರಿದಂತೆ ತಾಲ್ಲೂಕಿನ ಬಿಜೆಪಿ ಮುಖಂಡರು, ರೈತ ಸಂಘ, ಕನ್ನಡಪರ ಸೇರಿದಂತೆ ಹಲವು ಸಂಘಟನೆಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಈ ಯೋಜನೆಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ನಿವೃತ್ತ ಎಂಜಿನಿಯರ್ ನೀರಾವರಿ ಕ್ಷೇತ್ರದ ಪರಿಣತ ಟಿ.ಜಿ.ವೆಂಕಟೇಶ್ ಅವರು ‘ಹೇಮಾವತಿ ನೀರಿಗಾಗಿ ಗೊರೂರು ಜಲಾಶಯದಿಂದ ಕುಣಿಗಲ್ ತಾಲ್ಲೂಕಿನ ಬೇಗೂರು ಕೆರೆವರೆಗೆ 191 ಕಿ.ಮೀ. ಉದ್ದದ ಕಾಲುವೆ ಇದೆ. ನೀರು ಪೂರೈಸುವ ಜಾಕ್‌ವೆಲ್ ಇರುವುದೂ ಇಲ್ಲೇ. ಆದರೆ ಇಷ್ಟು ಉದ್ದಕ್ಕೂ ಸರಾಗವಾಗಿ ನೀರು ಬರುತ್ತಿಲ್ಲ. ಹಾಗಾಗಿ ಕಾಲುವೆಯ 70 ಕಿ.ಮೀ.ನಿಂದ 165 ಕಿ.ಮೀ. ನಡುವೆ 34.5 ಕಿ.ಮೀ. ಉದ್ದದ ಪೈಪ್‌ಲೈನ್ ಕೊಳವೆ ಮಾರ್ಗದಲ್ಲಿ ನೀರು ಪೂರೈಸಲು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ರೂಪಿಸಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದರು.
‘ಇದರಿಂದಾಗಿ ನೀರು ಕುಣಿಗಲ್ ತಲುಪುವ ಅಂತರ 70 ಕಿ.ಮೀ. ಕಡಿಮೆಯಾಗುತ್ತದೆ. ಅಲ್ಲದೆ ಸೋರಿಕೆಯೂ ತಪ್ಪಲಿದೆ. ಅಲ್ಲಿಂದ ಏತ ನೀರಾವರಿ ಮೂಲಕ ಮಾಗಡಿ ಮತ್ತು ಕುಣಿಗಲ್‌ನ 83 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಮಾಗಡಿಯಲ್ಲಿ ಮುಖ್ಯವಾಗಿ ಕುಡಿಯುವುದಕ್ಕೆ ಬಳಸಲಾಗುತ್ತದೆ. ಇದಕ್ಕಾಗಿ ಕುಣಿಗಲ್‌ನ ಹಿರೆಕೆರೆ ಬಳಿ ಶ್ರೀರಂಗ ಏತ ನೀರಾವರಿ ಯೋಜನೆ ರೂಪುಗೊಂಡಿದೆ. ಕೃಷ್ಣಾ ಜಲಾನಯನ ಪ್ರದೇಶದ ತಾಲ್ಲೂಕುಗಳಿಗೆ ನೀರು ಕೊಟ್ಟರೂ ಸುಮ್ಮನಿರುವ ತುಮಕೂರಿನವರು ಕಾವೇರಿ ಜಲಾನಯನ ಪ್ರದೇಶವಾದ ಮಾಗಡಿಗೆ ನೀರು ಪೂರೈಸುವ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳಿದರು.
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು ಸುಳ್ಳು. ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ. ಕುಣಿಗಲ್ ತಾಲ್ಲೂಕಿಗೆ ಹೇಮಾವತಿಯ 3.37 ಟಿಎಂಸಿ ಅಡಿ ನೀರು ಪಾಲು ಸಿಕ್ಕಿದೆ. ಆದರೂ 10-12 ವರ್ಷಗಳಿಂದ ತಾಲ್ಲೂಕಿಗೆ ತನ್ನ ಪಾಲಿನ ನೀರು ತಲುಪಿಲ್ಲ. ಅಲ್ಲಿನ ಜನರಿಗೆ ಶೇ 92ರಷ್ಟು ನೀರು ನಷ್ಟವಾಗಿದೆ. ಹೀಗಾಗಿ ಯೋಜನೆ ಕೈಗೊಂಡಿದ್ದೇವೆ.–ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಇದು ನಮ್ಮ ನೀರು ನಮ್ಮ ಹಕ್ಕಿನ ವಿಷಯ. ನಮ್ಮ ನೀರಿಗಾಗಿ ಯಾವ ಮಟ್ಟದ ಹೋರಾಟಕ್ಕೂ ಸಿದ್ದ. ನೀರಿಗಾಗಿ ನಡೆಯುವ ಹೋರಾಟದಲ್ಲಿ ತಾಲ್ಲೂಕಿನ ಸಮಸ್ತರೂ ಭಾಗವಹಿಸಬೇಕು–ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ವಿವಾದ ಬಗೆಹರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕೂಡಲೇ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ರೈತ ಮುಖಂಡರು ಹಾಗೂ ನೀರಾವರಿ ತಜ್ಞರ ಸಭೆ ಕರೆದು ಚರ್ಚಿಸಬೇಕು–ಡಾ.ಸಿ.ಎನ್. ಮಂಜುನಾಥ್, ಸಂಸದ (ಸಿ.ಎಂಗೆ ಬರೆದ ಪತ್ರದಲ್ಲಿ)
ಹಲವು ವರ್ಷಗಳ ಹೋರಾಟದ ಫಲವಾಗಿ ಯೋಜನೆ ಮಂಜೂರಾಗಿ ಕಾಮಗಾರಿಯೂ ಶುರುವಾಗಿದೆ. ಆರಂಭದಲ್ಲಿ ಸುಮ್ಮನಿದ್ದವರು ಈಗ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ–ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ಕುಡಿಯುವುದಕ್ಕಾಗಿ ಹಂಚಿಕೆಯಾಗಿರುವ ನಮ್ಮ ಪಾಲಿನ ನೀರನ್ನು ನಾವು ಪಡೆದೇ ಪಡೆಯುತ್ತೇವೆ. ನಾವು ನಮ್ಮ ಹಕ್ಕಿನ ನೀರು ಕೇಳುತ್ತಿದ್ದೆಯೇ ಹೊರತು ಬೇರೆಯವರ ಹಕ್ಕಿನ ನೀರನ್ನಲ್ಲ.–ಎ.ಮಂಜುನಾಥ್, ಜೆಡಿಎಸ್ ಮಾಜಿ ಶಾಸಕ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.