
ಅವತ್ತು ಲಂಡನ್‌ನ ಓವಲ್ ಮೈದಾನದಲ್ಲಿ ಮಳೆ ಸುರಿದಿತ್ತು. ಭಾರತ –ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಾಟ ಆರಂಭವಾಗಲು ಜನರು ಕಾಯುತ್ತಿದ್ದರು. ಅದೇ ಮೈದಾನದ ಕಟ್ಟಡದ ಬಾಲ್ಕನಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಕೌಂಟಿ ಕ್ರಿಕೆಟ್ ಮಾರುಕಟ್ಟೆ ಕಾರ್ಯ ನಿರ್ವಾಹಕ ಸ್ಟುವರ್ಟ್ ರಾಬರ್ಟ್ಸನ್ ನಿಂತಿದ್ದರು. ಆಗಲೇ ಅವರ ದೃಷ್ಟಿ ಮೈದಾನದ ಒಂದು ಮೂಲೆಯಲ್ಲಿದ್ದ ಫುಡ್ ಟ್ರಕ್‌ನತ್ತ ಹೊರಳಿತು. ಅದರ ಮುಂದೆ ದೊಡ್ಡ ಸರದಿ ಸಾಲಿನಲ್ಲಿ ಜನರು ನಿಂತಿದ್ದರು. ಅದನ್ನು ನೋಡಿದ ಸ್ಟುವರ್ಟ್ ಮತ್ತು ಸ್ನೇಹಿತರು ನಗುತ್ತ ‘ಮಳೆ ಬರ್ತಿದ್ದರೂ ಇಷ್ಟು ಜನ ಇದ್ದಾರೆ. ಇವರಿಗಾಗಿ ಕೊನೆಗೆ 20 ಓವರ್ ಪಂದ್ಯ ಆಡಿಸಬೇಕಾ’ ಎಂದು ಚಟಾಕಿ ಹಾರಿಸಿದ್ದರು. ಎಲ್ಲರೂ ಗೊಳ್ಳೆಂದು ನಕ್ಕರು.
ಆದರೆ ಸ್ಟುವರ್ಟ್ ಮನದಲ್ಲಿ 20 ಓವರ್ ಎಂಬುದು ಬೀಜವಾಗಿ ಉಳಿಯಿತು. ಕೆಲವು ದಿನಗಳ ನಂತರ ಟ್ವೆಂಟಿ–20 ಕ್ರಿಕೆಟ್ ಪರಿಕಲ್ಪನೆಯು ಮೊಳಕೆಯೊಡೆಯಿತು. ಅದಕ್ಕೊಂದು ಚೌಕಟ್ಟು ರೂಪಿಸಿದ ಸ್ಟುವರ್ಟ್, ಕೌಂಟಿ ಕ್ರಿಕೆಟ್‌ನಲ್ಲಿ ಆಡಿಸಲು ಪ್ರಸ್ತಾವ ಇಟ್ಟಾಗ ಎದುರಾದ ಟೀಕೆಗಳು ಒಂದೆರಡಲ್ಲ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾತ್ರ ನಡೆಯುತ್ತಿದ್ದ ಆ ಕಾಲಘಟ್ಟದಲ್ಲಿ ಚುಟುಕು ಕ್ರಿಕೆಟ್ ಪರಿಕಲ್ಪನೆಯನ್ನು ಸ್ವೀಕರಿಸಲು ಶೇ 90ರಷ್ಟು ಕ್ರಿಕೆಟಿಗರು ಒಪ್ಪಲಿಲ್ಲ. ಆದರೂ ಸ್ಟುವರ್ಟ್ ಅವರ ನಿರಂತರ ಪ್ರಯತ್ನದ ಫಲವಾಗಿ 2003ರಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಟಿ20 ಪಂದ್ಯಗಳ ಪ್ರಯೋಗ ಆರಂಭವಾಯಿತು. ಕೇವಲ ಮೂರು ತಾಸುಗಳ ಪಂದ್ಯವು ಯುವ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ರೀತಿ, ಅದರಲ್ಲಿದ್ದ ಮನರಂಜನೆಯ ಅಂಶಗಳು ಮತ್ತು ಆರ್ಥಿಕ ಸಾಧ್ಯತೆಗಳು ಗಮನ ಸೆಳೆದವು. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೂಡ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಮಾದರಿ ಆರಂಭಿಸಲು ಒಲವು ತೋರಿತು. ಆದರೆ ಸಾಂಪ್ರದಾಯಿಕ ಕ್ರಿಕೆಟ್ ಪ್ರತಿಪಾದಕರು ವಿರೋಧಿಸುತ್ತಲೇ ಇದ್ದರು. ಅದರಲ್ಲಿ ಭಾರತದ ಹಲವು ದಿಗ್ಗಜರೂ ಇದ್ದರು. ಆರಂಭಿಕ ಕೆಲವು ವರ್ಷಗಳಲ್ಲಿ ಟಿ20 ಪಂದ್ಯಗಳನ್ನು ಆಡಲು ಆ ಕಾಲಘಟ್ಟದ ಖ್ಯಾತನಾಮ ಅಟಗಾರರೇ ಹಿಂಜರಿದರು. ಇದೀಗ ಅವರಲ್ಲಿಯೇ ಹಲವರು ಟಿ20 ತಂಡಗಳು ಮತ್ತು ಫ್ರ್ಯಾಂಚೈಸಿಗಳ ಮೆಂಟರ್‌ಗಳಾಗಿದ್ದಾರೆ. ಅಷ್ಟೇ ಅಲ್ಲ. ಇವತ್ತು ಟಿ20 ಮಾದರಿಯ ಯಶಸ್ಸು ಉತ್ತುಂಗಕ್ಕೆ ಏರಲೂ ಭಾರತವೇ ಕಾರಣವೆಂಬುದರಲ್ಲಿ ಅನುಮಾನವೇ ಇಲ್ಲ
ಭಾರತವೇ ಮೆಂಟರ್..
ಟಿ20 ಕ್ರಿಕೆಟ್ ಜನಿಸಿದ್ದು ಇಂಗ್ಲೆಂಡಿನಲ್ಲಿ. ಆದರೆ ಅದನ್ನು ಪೋಷಿಸಿ, ಬೆಳೆಸಿ ‘ಲಾಭದಾಯಕ’ ಮಾದರಿಯನ್ನಾಗಿ ಮಾಡಿದ ಶ್ರೇಯ ಭಾರತಕ್ಕೇ ಸಲ್ಲಬೇಕು. 2000ನೇ ಇಸವಿಯ ನಂತರದ ಕಾಲಘಟ್ಟದಲ್ಲಿ ಬೆಳೆದ ಕ್ರೀಡೆ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಟಿ20 ಮಾದರಿಯೂ ಒಂದು. 2007ರಲ್ಲಿ ಭಾರತ ತಂಡವು ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ್ದು ಕೂಡ ಮಹತ್ವದ ಬೆಳವಣಿಗೆ. ಅದಾಗಿ ಒಂದು ವರ್ಷ ಕಳೆಯುವಷ್ಟರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇಡೀ ಕ್ರಿಕೆಟ್ ಲೋಕವನ್ನೇ ಪ್ರಭಾವಿಸಿಬಿಟ್ಟಿತು. ಹಣದ ಹೊಳೆ, ಮನರಂಜನೆಯ ಮಹಾಪೂರವೇ ಹರಿಯುತ್ತಿದೆ. ಲಲಿತ್ ಮೋದಿಯ ಪರಿಕಲ್ಪನೆ ಐಪಿಎಲ್ ಇವತ್ತು ಶ್ರೀಮಂತ ಲೀಗ್ ಆಗಿದೆ. ಅಷ್ಟೇ ಏಕೆ; ಕ್ರಿಕೆಟ್ ಎಂದರೆ ಮೂಗುಮುರಿಯುತ್ತಿದ್ದ ಇಟಲಿ, ಕೆನಡಾ, ಅಮೆರಿಕ, ನೆದರ್ಲೆಂಡ್ಸ್, ಸ್ಕಾಟ್ಲೆಂಡ್‌ನಂತಹ ದೇಶಗಳೂ. ಪ್ರಸಕ್ತ ಟೂರ್ನಿಯಲ್ಲಿ ಆಡುತ್ತಿವೆ.
ಟಿ20 ಮಾದರಿಯ ಬೆಳವಣಿಗೆಯ ರಭಸಕ್ಕೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಕೊಚ್ಚಿಹೋಗುವ ಭೀತಿ ಎದುರಿಸಿದವು. ಅದಕ್ಕಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾಯಿತು. ದೀರ್ಘ ಮಾದರಿಗಳಲ್ಲಿಯೂ ಆಟಗಾರರ ಶೈಲಿಯಲ್ಲಿ ಚುಟುಕು ಕ್ರಿಕೆಟ್ ಆಟದ ಕೌಶಲಗಳು ಈಗ ಢಾಳಾಗಿ ಕಾಣುತ್ತಿವೆ.
ಐಪಿಎಲ್‌ನಲ್ಲಿ ಆಡಲು ದೇಶ, ವಿದೇಶಗಳ ಆಟಗಾರರು ಹಾತೊರೆಯುತ್ತಿದ್ದಾರೆ. ಅದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಆಟಗಾರರೂ ಇದ್ದಾರೆ. ಅಷ್ಟೇ ಏಕೆ; ಐಸಿಸಿಗೆ ಸಿಗುವ ಆದಾಯದಲ್ಲಿ ಭಾರತದ್ದೇ ಸಿಂಹಪಾಲು.
ಹತ್ತು ವರ್ಷಗಳ ನಂತರ ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆ ನಡೆಯುತ್ತಿದೆ. ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದೆ.
ಈ ಸಲದ ವಿಶೇಷವೆಂದರೆ, ಆತಿಥೇಯ ಭಾರತವು ‘ಹಾಲಿ ಚಾಂಪಿಯನ್’ ಕೂಡ ಹೌದು. 2024ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟ್ರೋಫಿ ಜಯಿಸಿತ್ತು. ಆ ಟೂರ್ನಿಯ ಫೈನಲ್‌ನಲ್ಲಿ ಗೆದ್ದ ನಂತರ ಆಧುನಿಕ ಕ್ರಿಕೆಟ್ ದಿಗ್ಗಜರಾದ ರೋಹಿತ್, ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಟಿ20 ಮಾದರಿಗೆ ವಿದಾಯ ಹೇಳಿದ್ದರು. ಆದ್ದರಿಂದ ಈ ಸಲ ಅವರಿಲ್ಲದೇ ತಂಡವು ಕಣಕ್ಕಿಳಿಯಲಿದೆ. ಅದರಲ್ಲೂ ರೋಹಿತ್ ಅವರು 2007ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಆಡಿದ್ದರು.
ಅಂದಹಾಗೆ, ಆ ತಂಡದಲ್ಲಿ ಆಡಿದ್ದ ಗೌತಮ್ ಗಂಭೀರ್ ಇವತ್ತು ಭಾರತ ತಂಡದ ಮುಖ್ಯ ಕೋಚ್. ಆಲ್‌ರೌಂಡರ್ ಅಜಿತ್ ಅಗರ್ಕರ್ ಪ್ರಸಕ್ತ ತಂಡವನ್ನು ಆಯ್ಕೆ ಮಾಡಿರುವ ಸಮಿತಿಯ ಮುಖ್ಯಸ್ಥ. ಎರಡು ವರ್ಷಗಳ ಹಿಂದೆ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಮಾಡಿದ್ದ ಸಾಧನೆಯನ್ನು ಸರಿಗಟ್ಟುವ ಸವಾಲು ಗಂಭೀರ್ ಎದುರಿಗೆ ಇದೆ. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಅವರು ನಾಯಕರಾಗಿ ಮಾಡಿದ ಸಾಧನೆಯ ಎತ್ತರಕ್ಕೆ ಏರುವ ಅವಕಾಶ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಇದೆ.
20: ಟೂರ್ನಿಯಲ್ಲಿ ಆಡಲಿರುವ ಒಟ್ಟು ತಂಡಗಳು
₹ 113 ಕೋಟಿ: ಟೂರ್ನಿಯ ಒಟ್ಟು ಬಹುಮಾನ ಮೊತ್ತ
55: ಒಟ್ಟು ಪಂದ್ಯಗಳು
26: ಟೂರ್ನಿ ನಡೆಯಲಿರುವ ದಿನಗಳ ಸಂಖ್ಯೆ
8: ಪಂದ್ಯಗಳು ನಡೆಯಲಿರುವ ಒಟ್ಟು ತಾಣಗಳು, ಭಾರತದಲ್ಲಿ 5 ಮತ್ತು ಶ್ರೀಲಂಕಾದಲ್ಲಿ 3 ಕ್ರೀಡಾಂಗಣಗಳು
‘ಮಿಸ್ಟರ್ 360 ಡಿಗ್ರಿ‘ ಸೂರ್ಯ
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರು ತಮ್ಮ ಬ್ಯಾಟಿಂಗ್ ಶೈಲಿಯಿಂದ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತರಾದವರು. ಅವರಂತೆಯೇ ಕ್ರೀಸ್‌ನಲ್ಲಿ ಎಲ್ಲ ಆಯಾಮಗಳಲ್ಲಿ ಕುಂತು, ನಿಂತು, ಎದ್ದು ಬಿದ್ದು ಬ್ಯಾಟ್ ಬೀಸುವ ಆಟಗಾರ ಸೂರ್ಯಕುಮಾರ್ ಯಾದವ್.
ಮುಂಬೈ ಆಟಗಾರ ಸೂರ್ಯ ಅವರಿಗೆ ಭಾರತ ತಂಡದಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಸಿಕ್ಕಿದ್ದು 2021ರಲ್ಲಿ. ಅದಕ್ಕಿಂತ ಮುನ್ನ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಬಹಳಷ್ಟು ರನ್‌ಗಳ ಹೊಳೆ ಹರಿಸಿದ್ದರು. ದೇಶಿ ಕ್ರಿಕೆಟ್ ನಲ್ಲಂತೂ ಮುಂಬೈ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಐಪಿಎಲ್ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ‘ಜಟಾಪಟಿ’ ಬಹಳ ಸುದ್ದಿ ಮಾಡಿತ್ತು. ನಂತರ ಅವರಿಬ್ಬರೂ ಭಾರತ ತಂಡದಲ್ಲಿ ಜೊತೆಯಾಗಿದ್ದರು.
104 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ನಾಲ್ಕು ಶತಕಗಳು ಅವರ ಖಾತೆಯಲ್ಲಿವೆ. ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಗುಳಿದ ಕಾರಣ ಸೂರ್ಯ ಅವರಿಗೆ ಹೋದ ವರ್ಷ ನಾಯಕತ್ವದ ಪಟ್ಟ ಲಭಿಸಿತ್ತು. ತಂಡವು ಅವರ ನಾಯಕತ್ವದಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು.
ಆದರೆ ಕಳೆದ ಒಂದು ವರ್ಷದಿಂದ ಅವರ ಬ್ಯಾಟಿನಿಂದ ರನ್‌ಗಳು ಹರಿಯಲಿಲ್ಲ. ಆದರೆ ನ್ಯೂಜಿಲೆಂಡ್ ಎದುರಿನ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಅವರು ಲಯಕ್ಕೆ ಮರಳಿದರು. ಇದು ತಂಡದಲ್ಲಿ ಆತ್ಮವಿಶ್ವಾಸ ಇಮ್ಮಡಿಸುವಂತೆ ಮಾಡಿದೆ.
ತವರಿನಲ್ಲಿ ಟಿ20 ವಿಶ್ವಕಪ್ ಜಯಿಸಿದ ನಾಯಕ ಎನಿಸಿಕೊಳ್ಳುವ ಅವಕಾಶ ಅವರಿಗೆ ಇದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಸಡ್ಡು ಹೊಡೆಯಬಲ್ಲ ತಂಡದ ಬಲ ಅವರಿಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.