ADVERTISEMENT

ಮಹಿಳಾ ಮತ: ಮಹಿಳೆ ಮೇಲೆ ದೌರ್ಜನ್ಯ ನಡೆಯುವುದು ಕುಟುಂಬದಿಂದಲೇ ಹೆಚ್ಚು!

ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಾದ ದೂರುಗಳ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 2:06 IST
Last Updated 5 ಮೇ 2025, 2:06 IST
<div class="paragraphs"><p>ಮಹಿಳಾ ಮತ: ಮಹಿಳೆ ಮೇಲೆ ದೌರ್ಜನ್ಯ ನಡೆಯುವುದು ಕುಟುಂಬದಿಂದಲೇ ಹೆಚ್ಚು!</p></div>

ಮಹಿಳಾ ಮತ: ಮಹಿಳೆ ಮೇಲೆ ದೌರ್ಜನ್ಯ ನಡೆಯುವುದು ಕುಟುಂಬದಿಂದಲೇ ಹೆಚ್ಚು!

   

ಭಾರತದಲ್ಲಿ ಈಗಲೂ ಮಹಿಳೆಯರ ವಿರುದ್ಧದ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ಅತ್ಯಂತ ಸಾಮಾನ್ಯ ಎಂಬಂತೆ ನಡೆಯುತ್ತಿದ್ದು, ಗಮನಾರ್ಹ ಪ್ರಮಾಣದಲ್ಲಿ ವರದಿಯಾಗುತ್ತಲೇ ಇವೆ. ಅವುಗಳಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಅಗ್ರಸ್ಥಾನ ಪಡೆದಿವೆ. ಈ ದಿಸೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಂಕಿಅಂಶಗಳು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಿವೆ. ಮಹಿಳೆಯರು ಅನೇಕ ರಂಗಗಳಲ್ಲಿ ದಾಪುಗಾಲಿಡುತ್ತಾ ಸಾಗುತ್ತಿರುವಾಗ, ಮನೆಯಲ್ಲೇ ಆಕೆಯ ಮೇಲೆ ಹಿಂಸೆ, ದೌರ್ಜನ್ಯ, ಹಲ್ಲೆಗಳು ಅತಿ ಸಾಮಾನ್ಯ ಎಂಬಂತೆ ನಡೆಯುತ್ತಿರುವುದು ಕಳವಳಕಾರಿಯಾದ ವಿಚಾರವಾಗಿದೆ.

––––––––––

ADVERTISEMENT

ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಾದ ದೂರುಗಳ ಪೈಕಿ ಕೌಟುಂಬಿಕ ಹಿಂಸೆ, ಹಲ್ಲೆ, ಕ್ರಿಮಿನಲ್ ಬೆದರಿಕೆ ಅಗ್ರ ಸ್ಥಾನ ಪಡೆದಿವೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ  (ಮೇ 2ರವರೆಗೆ) ಆಯೋಗದಲ್ಲಿ 7,698 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,594 ದೂರುಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ.

ಮಹಿಳೆಯರ ವಿರುದ್ಧ ಅತಿ ಸಾಮಾನ್ಯ ಎನ್ನುವಂತೆ ದೌರ್ಜನ್ಯ, ಹಲ್ಲೆಗಳು ನಡೆಯುತ್ತಿವೆ. ಈ ವರ್ಷದ ಮೊದಲ ನಾಲ್ಕು ತಿಂ‌ಗಳಲ್ಲಿ ಆಯೋಗದಲ್ಲಿ ದಾಖಲಾಗಿರುವ ದೂರುಗಳಲ್ಲಿ ಕೌಟುಂಬಿಕ ಹಿಂಸೆಯ ಪ್ರಮಾಣ ಶೇ 20ರಷ್ಟು ಇದೆ. ಎರಡನೆಯ ಸ್ಥಾನದಲ್ಲಿ ಕ್ರಿಮಿನಲ್ ಬೆದರಿಕೆ, ಮೂರನೇ ಸ್ಥಾನದಲ್ಲಿ ಹಲ್ಲೆ ಪ್ರಕರಣಗಳು ಇವೆ.

ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಅತ್ಯಾಚಾರ ಯತ್ನ, ಸೈಬರ್ ಅಪರಾಧಗಳು ನಂತರದ ಸ್ಥಾನಗಳಲ್ಲಿವೆ. ಇವುಗಳಲ್ಲದೇ, ದ್ವಿಪತ್ನಿತ್ವ, ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಪೀಡನೆಯ ದೂರುಗಳೂ ದಾಖಲಾಗಿವೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು: ಮಹಿಳೆಯರ ಶೋಷಣೆ, ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳಲ್ಲಿ ಉತ್ತರ ಪ್ರದೇಶ (3,921) ಮೊದಲ ಸ್ಥಾನದಲ್ಲಿದೆ. ಒಟ್ಟು ದೂರುಗಳ ಪೈಕಿ ಶೇ 50ರಷ್ಟು ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ದಾಖಲಾಗಿವೆ. ದೆಹಲಿ ನಂತರದ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮೂರನೇ ಸ್ಥಾನ ಪಡೆದಿದೆ. ಮಧ್ಯಪ್ರದೇಶ, ಬಿಹಾರ, ಹರಿಯಾಣದಲ್ಲಿಯೂ ಹೆಚ್ಚಿನ ಸಂಖ್ಯೆಯ ದೂರುಗಳು ಸಲ್ಲಿಕೆಯಾಗಿವೆ.

ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಕಳೆದ ವರ್ಷ (2024) 25,743 ದೂರುಗಳು ದಾಖಲಾಗಿದ್ದವು. ಇವುಗಳ ಪೈಕಿ ಘನತೆಯಿಂದ ಜೀವಿಸುವ ಹಕ್ಕು (ಶೇ 28) ಮತ್ತು ಕೌಟುಂಬಿಕ ಹಿಂಸೆಗೆ (ಶೇ 24) ಸಂಬಂಧಿಸಿದ ದೂರುಗಳೇ ಅಧಿಕವಾಗಿದ್ದವು. ವರದಕ್ಷಿಣೆಗೆ ಸಂಬಂಧಿಸಿದ ದೂರುಗಳ ಪ್ರಮಾಣ 4,383 (ಶೇ 17ರಷ್ಟು). ವರದಕ್ಷಿಣೆ ಸಾವಿನ ಸಂಬಂಧ 292 ದೂರುಗಳು ಸಲ್ಲಿಕೆಯಾಗಿದ್ದವು. ಕಳೆದ ವರ್ಷವೂ ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರದಿಂದ ಹೆಚ್ಚು ದೂರುಗಳು ದಾಖಲಾಗಿವೆ.

2023ಕ್ಕೆ ಹೋಲಿಸಿದರೆ, 2024ರಲ್ಲಿ ದೂರುಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ, ಕೋವಿಡ್‌ಗೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ದೂರುಗಳ ಸಂಖ್ಯೆ ಹೆಚ್ಚೇ. ಕೋವಿಡ್‌ ನಂತರದ ವರ್ಷಗಳಲ್ಲಿ ದೂರುಗಳ ಪ್ರಮಾಣದಲ್ಲಿ ವಿಪರೀತ ಏರಿಕೆಯಾಗಿತ್ತು. 2019ರಲ್ಲಿ 19,730 ದೂರುಗಳು ದಾಖಲಾಗಿದ್ದರೆ, 2020ರಲ್ಲಿ 23,722, 2021ರಲ್ಲಿ 30,865, 2022ರಲ್ಲಿ 30,957 ದೂರುಗಳು ಸಲ್ಲಿಕೆಯಾಗಿದ್ದವು. ಭಾರತದಲ್ಲಿ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಕೋವಿಡ್ ವೇಳೆ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದವು.

ಮಹಿಳಾ ಪೀಡನೆ ಎಂಬ ಸಾಂಕ್ರಾಮಿಕ

ಮಹಿಳೆಯರ ಮೇಲಿನ ಹಿಂಸೆಯು ಜಗತ್ತಿನಾದ್ಯಂತ ಸಾಂಕ್ರಾಮಿಕದಂತೆ ಹರಡಿದ್ದು, ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಮೂರರಲ್ಲಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ಹಿಂಸೆ ಅನುಭವಿಸುತ್ತಾಳೆ. ಪ್ರತಿ ನಾಲ್ವರು ಬಾಲಕಿಯರಲ್ಲಿ ಒಬ್ಬಳು ತನ್ನ ಪರಿಚಿತರಿಂದಲೇ ನಿಂದನೆ ಅನುಭವಿಸುತ್ತಿದ್ದಾಳೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಮಹಿಳೆಯರು ಎಲ್ಲಿಯವರೆಗೆ ಹಿಂಸೆಯ ಭಯದಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಲಿಂಗ ಸಮಾನತೆ (ಸುಸ್ಥಿರ ಅಭಿವೃದ್ಧಿ ಗುರಿ 5) ಸಾಧಿಸುವುದು ಸಾಧ್ಯವಿಲ್ಲ ಎಂದು ಅದು ಪ್ರತಿಪಾದಿಸಿದೆ.

ದುಡಿಯುವವರ ಮೇಲೆ ಹೆಚ್ಚು ಹಿಂಸೆ

ದುಡಿಯುವ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ಹಲ್ಲೆಗಳು ಹೆಚ್ಚು ನಡೆಯುತ್ತಿವೆ ಎಂದು ಅಧ್ಯಯನಗಳು ಹೇಳುತ್ತವೆ. ದುಡಿಯುವ ಮಹಿಳೆಯು ಆರ್ಥಿಕವಾಗಿ ಸ್ವಾವಲಂಬಿ ಆಗಿರುತ್ತಾಳೆ. ತನ್ನ ಹಕ್ಕುಗಳ ಬಗ್ಗೆ ಆಕೆಗೆ ಒಂದು ಮಟ್ಟದ ತಿಳಿವಳಿಕೆ ಇರುತ್ತದೆ. ಇಂಥವೇ ಕಾರಣಗಳಿಂದ ಆಕೆಯು ತನ್ನ ಗಂಡ ಸೇರಿದಂತೆ ಆತನ ಮನೆಯ ಸದಸ್ಯರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಸ್ಥ ಮಹಿಳೆಯ ಮೇಲೆ ಸಂಗಾತಿಯಿಂದ ನಡೆಯುವ ಹಿಂಸೆ ಪ್ರಕರಣಗಳು ಹೆಚ್ಚು ಎಂದು ಅಧ್ಯಯನಗಳು ತಿಳಿಸಿವೆ.

ಸ್ವಯಂಪ್ರೇರಿತ ಪ್ರಕರಣ

ಕೆಲವು ಗಂಭೀರ ಪ್ರಕರಣಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತದೆ. ಸಂಬಂಧಿಸಿದ ಇಲಾಖೆಗಳಿಂದ ಕ್ರಮ ಕೈಗೊಂಡ ವರದಿಯನ್ನೂ ಪಡೆಯುತ್ತದೆ. ಅಪರೂಪದ ಪ್ರಕರಣಗಳಲ್ಲಿ ಸತ್ಯ ಶೋಧನಾ ಸಮಿತಿಯನ್ನೂ ರಚಿಸುತ್ತದೆ. 2023–24ರಲ್ಲಿ 273 ಪ್ರಕರಣಗಳನ್ನು ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು. 132 ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದರೆ, 19 ಸತ್ಯಶೋಧನಾ ಸಮಿತಿ ರಚಿಸಿತ್ತು. 

ನೆರವಿಗೆ ಸಹಾಯವಾಣಿ

ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆನ್‌ಲೈನ್‌ನಲ್ಲಿ ನೆರವಾಗುವುದಕ್ಕಾಗಿ ಮಹಿಳಾ ಆಯೋಗವು 2021ರ ಜಲೈ 27ರಂದು ವಾರದ ಏಳೂ ದಿನಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು (7827170170) ಆರಂಭಿಸಿತ್ತು. ನೆರವಿಗಾಗಿ ಕರೆ ಮಾಡುವ ಮಹಿಳೆಯರಿಗೆ ಆಪ್ತಸಮಾಲೋಚನೆ ಒದಗಿಸಲಾಗುತ್ತದೆ. ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳು, ಆಸ್ಪತ್ರೆಗಳು ಮತ್ತು ಕಾನೂನು ಸೇವೆ ಪಡೆಯಲು ನೆರವಾಗುತ್ತದೆ. 2023–24ರಲ್ಲಿ ಈ ಸಹಾಯವಾಣಿಗೆ 2,37,322 ಕರೆಗಳು ಬಂದಿವೆ. 

ದೂರು ನೀಡುವುದು ಹೇಗೆ?

* ಆಯೋಗದ ಅಧಿಕೃತ ವೆಬ್‌ಸೈಟ್‌ ncwapps.nic.in ಮೂಲಕ ದೂರು ನೀಡಬಹುದು. ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ದೂರು ಸಲ್ಲಿಕೆಗೆ ಪ್ರತ್ಯೇಕ ವಿಭಾಗವೇ ಇದೆ

* ಲಿಖಿತ ದೂರುಗಳನ್ನು (ಪೂರಕ ದಾಖಲೆಗಳು ಇದ್ದರೆ ಅವುಗಳನ್ನೂ ಸೇರಿಸಿ) ಅಂಚೆ ಮೂಲಕ / ನೇರವಾಗಿ ಕಚೇರಿಗೆ ಹೋಗಿ ನೀಡಬಹುದು

* ದೂರು ನೀಡುವ ಮಹಿಳೆಯರು ಆ ದೂರಿನಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ನೀಡಬೇಕು. ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ವೈಯಕ್ತಿಕ ವಿವರಗಳನ್ನೂ ನೀಡಬೇಕು

* ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಘನತೆಯ ಬದುಕಿನ ಹಕ್ಕಿಗೆ ಧಕ್ಕೆ ತರುವುದೂ ಸೇರಿದಂತೆ 19 ರೀತಿಯ ಪ್ರಕರಣಗಳಲ್ಲಿ ಮಹಿಳೆಯರು ಆಯೋಗಕ್ಕೆ ದೂರು ನೀಡಬಹುದು

* ದೂರಿಗೆ ಸಂಬಂಧಿಸಿದ ವಿಚಾರಣೆಗಳಿಗಾಗಿ 011-26944880 / 26944883 ಸಂಖ್ಯೆಗೆ ಕರೆಯನ್ನೂ ಮಾಡಬಹುದು

ಆಧಾರ: ಪಿಟಿಐ, ವಿಶ್ವಸಂಸ್ಥೆ ವೆಬ್‌ಸೈಟ್‌, ಮಹಿಳಾ ಆಯೋಗದ ವಾರ್ಷಿಕ ವರದಿಗಳು

–––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.