ADVERTISEMENT

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 7:55 IST
Last Updated 15 ಅಕ್ಟೋಬರ್ 2025, 7:55 IST
ಪಿಂಚಣಿದಾರರು
ಪಿಂಚಣಿದಾರರು   
ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲಿದೆ.

ಬೆಂಗಳೂರು: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು (DoPPW) 4ನೇ ಆವೃತ್ತಿಯ ಅಭಿಯಾನಕ್ಕೆ ಅಂತಿಮ ಸಿದ್ಧತೆ ನಡೆಸಿದೆ. ನ. 1ರಿಂದ 30ರವರೆಗೆ ರಾಷ್ಟ್ರವ್ಯಾಪಿ ನಡೆಯಲಿರುವ ಈ ಅಭಿಯಾನದ ಮೂಲಕ ಪಿಂಚಣಿದಾರರು ನೀಡಬೇಕಾದ ಜೀವನ ಪ್ರಮಾಣಪತ್ರಕ್ಕೆ ಡಿಜಿಟಲ್‌ ಸ್ವರೂಪ ನೀಡಲಾಗುತ್ತಿದೆ. ಇದರಿಂದ ಸುಮಾರು 2 ಕೋಟಿ ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. 

ಇದರ ಕುರಿತ ಮಾಹಿತಿ ಇಲ್ಲಿದೆ...`

ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ ಪ್ರಮಾಣಪತ್ರ (DLC) ಅಭಿಯಾನ 4.0 ಎಂದರೇನು ಮತ್ತು ಆರಂಭ ಯಾವಾಗಿಂದ?

ADVERTISEMENT

ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ ಪ್ರಮಾಣಪತ್ರ (DLC) ಅಭಿಯಾನ 4.0ವು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಬೃಹತ್ ಕಾರ್ಯಕ್ರಮವಾಗಿದ್ದು, ಇದರ ಮೂಲಕ ಪಿಂಚಣಿದಾರರು ಡಿಜಿಟಲ್ ಸ್ವರೂಪದ ಜೀವನ ಪ್ರಮಾಣಪತ್ರ ಸಲ್ಲಿಸಲು ಸಾಧ್ಯ. ಇದು 2025ರ ನ. 1ರಿಂದ ನ. 30ರವರೆಗೆ ನಡೆಯಲಿದೆ.

ಪಿಂಚಣಿದಾರರು ಪ್ರತಿ ನವೆಂಬರ್‌ನಲ್ಲೇ ಏಕೆ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕು?

ಸದ್ಯ ಇರುವ ನಿಯಮಗಳ ಪ್ರಕಾರ ಪಿಂಚಣಿದಾರರಿಗೆ ಪಿಂಚಣಿ ಮುಂದುವರಿಯಬೇಕಾದರೆ ಅವರು ಪ್ರತಿ ನವೆಂಬರ್‌ನಲ್ಲಿ ತಾವು ಬದುಕಿರುವ ಕುರಿತು ಜೀವನ ಪ್ರಮಾಣಪತ್ರ ಸಲ್ಲಿಸಬೇಕು

ಈ ಹಿಂದಿನ DLC 3.0 ಅಭಿಯಾನದಲ್ಲಿ ಎಷ್ಟು ದಾಖಲೆಗಳು ಸಲ್ಲಿಕೆಯಾಗಿತ್ತು?

ಈ ಹಿಂದಿನ DLC 3.0 ಅಭಿಯಾನ ಅಂದರೆ 2024ರ ನವೆಂಬರ್‌ನಲ್ಲಿ 1.62 ಕೋಟಿ ದಾಖಲೆಗಳು ಸಲ್ಲಿಕೆಯಾಗಿದ್ದವು. 

ಈ ಹಿಂದಿನ ಅಭಿಯಾನಕ್ಕೆ DLC 4.0 ಹೇಗೆ ಭಿನ್ನವಾಗಿರಲಿದೆ?

ಈ ಬಾರಿ ಅಭಿಯಾನವು 1,850 ಹೆಚ್ಚು ಜಿಲ್ಲೆ, ನಗರ ಹಾಗೂ ಪಟ್ಟಣಗಳ ಸುಮಾರು 2,500 ಕ್ಯಾಂಪ್‌ಗಳಲ್ಲಿ ನಡೆಯಲಿದೆ. ಇದು ಹಿಂದೆಂದಿಗಿಂತಲೂ ದೊಡ್ಡದು ಎಂದೆನ್ನಲಾಗಿದ್ದು, ದೇಶದ ಮೂಲೆಮೂಲೆಯಲ್ಲಿರುವ ಪಿಂಚಣಿದಾರರನ್ನು ತಲುಪುವ ಪ್ರಯತ್ನವಾಗಿದೆ ಎಂದು ಇಲಾಖೆ ಹೇಳಿದೆ.

ಈ ಅಭಿಯಾನದಲ್ಲಿ ಅತಿಮುಖ್ಯವಾದ ಯಾವ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ?

ಈ ಅಭಿಯಾನದ ಮೂಲಕ ಪಿಂಚಣಿದಾರರ ಮುಖ ಚಹರೆಯನ್ನು ಡಿಜಿಟಲ್ ದಾಖಲೆಯಾಗಿ ಬಳಸಿಕೊಳ್ಳುವುದರ ಮೂಲಕ ಪಿಂಚಣಿದಾರರಿಗೆ ಹೆಚ್ಚಿನ ಅನುಕೂಲ ಮತ್ತು ಡಿಜಿಟಲ್ ಸಬಲೀಕರಣವನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ ಎಂದು ಇಲಾಖೆ ಹೇಳಿದೆ.

ಈ ಬಾರಿ ಎಷ್ಟು ಡಿಜಿಟಲ್ ಜೀವನ ಪ್ರಮಾಣಪತ್ರ ದಾಖಲೆ ಸಂಗ್ರಹಿಸುವ ಗುರಿ ಹೊಂದಲಾಗಿದೆ?

ನವೆಂಬರ್‌ನಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಒಟ್ಟು 2 ಕೋಟಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.

ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಇತರ ಇಲಾಖೆಗಳು ಯಾವುವು?

DLC 4.0 ಅಭಿಯಾನದಲ್ಲಿ ಪಿಂಚಣಿ ವಿತರಿಸುವ ಬ್ಯಾಂಕ್‌ಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ (IPPB), ಪಿಂಚಣಿದಾರರ ಕಲ್ಯಾಣ ಸಂಸ್ಥೆ, ರಕ್ಷಣಾ ಲೆಕ್ಕಪತ್ರಗಳ ನಿಯಂತ್ರಣ ಮಹಾಲೇಖಪಾಲರು (CGDA), ದೂರಸಂಪರ್ಕ ಇಲಾಖೆ, ಭಾರತೀಯ ರೈಲ್ವೆ, ಅಂಚೆ ಇಲಾಖೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), UIDAI ಮತ್ತು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯ.

ಅಂಚೆ ಇಲಾಖೆ ಪೇಮೆಂಟ್ ಬ್ಯಾಂಕ್‌ (IPPB) ಹೇಗೆ ಇದರಲ್ಲಿ ನೆರವಾಗುತ್ತಿದೆ?

IPPBಯು 1,600 ಜಿಲ್ಲೆಗಳಲ್ಲಿ ಮತ್ತು ಉಪ ವಿಭಾಗೀಯ ಅಂಚೆ ಇಲಾಖೆಗಳಲ್ಲಿ ಈ ಶಿಬಿರ ಆಯೋಜಿಸುತ್ತಿದೆ. ಈ ಅಭಿಯಾನಕ್ಕಾಗಿ 1.8 ಲಕ್ಷ ಅಂಚೆ ನೌಕರರನ್ನು ಮತ್ತು ಗ್ರಾಮೀಣ ಡಾಕ್‌ ಸೇವಕ್‌ರನ್ನು ನಿಯೋಜಿಸುತ್ತಿದೆ. ಇವರು ಕಚೇರಿಯೊಳಗೆ ಹಾಗೂ ಪಿಂಚಣಿದಾರರ ಮನೆಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಲಿದ್ದಾರೆ.

ಯಾವ ರಾಜ್ಯದಲ್ಲಿ ಅತಿ ಹೆಚ್ಚು ಶಿಬಿರಗಳು ನಡೆಯಲಿವೆ ಮತ್ತು ಯಾವ ಬ್ಯಾಂಕ್‌ನ ಉಪಸ್ಥಿತಿ ಹೆಚ್ಚಿರಲಿದೆ?

ಉತ್ತರ ಪ್ರದೇಶದಲ್ಲಿ ಗರಿಷ್ಠ 170 ಶಿಬಿರಗಳು ನಡೆಯಲಿವೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿವೆ. ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಅತಿ ಹೆಚ್ಚು 82 ನಗರಗಳಲ್ಲಿ ಶಿಬಿರಗಳನ್ನು ಆಯೋಜಿಸುತ್ತಿದೆ.

DLC 4.0 ಅಭಿಯಾನದ ಪ್ರಮುಖ ಗುರಿ ಏನು?

ದೇಶದ ಅತ್ಯಂತ ಮೂಲೆಯಲ್ಲಿರುವ ಪಿಂಚಣಿದಾರರನ್ನೂ ಈ ಅಭಿಯಾನದ ಮೂಲಕ ತಲುಪಿ ಅವರ ದಾಖಲೆಗಳನ್ನು ಸಂಗ್ರಹಿಸುವುದನ್ನೂ ಒಳಗೊಂಡು ಗರಿಷ್ಠ ಸಂಖ್ಯೆಯ ಪಿಂಚಣಿದಾರರ ಡಿಜಿಟಲ್ ಜೀವನ ಪ್ರಮಾಣಪತ್ರ ದಾಖಲಿಸುವುದು ಮತ್ತು ಆ ಮೂಲಕ ತಡೆರಹಿತ ಪಿಂಚಣಿ ಪಾವತಿ ಖಾತ್ರಿ ಈ ಅಭಿಯಾನದ ಪ್ರಮುಖ ಗುರಿಯಾಗಿದೆ.

DLC 4.0 ಅಭಿಯಾನಕ್ಕೆ ಪಿಂಚಣಿದಾರರು ಯಾವೆಲ್ಲಾ ಮಾಹಿತಿ ಹೊಂದಿರಬೇಕು?

ಆಧಾರ್ ಸಂಖ್ಯೆ: ಪಿಂಚಣಿದಾರರು ಅಧಿಕೃತ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು

ಮೊಬೈಲ್ ಸಂಖ್ಯೆ: ಪಿಂಚಣಿದಾರರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಅಧಿಕೃತ ಮೊಬೈಲ್ ಸಂಖ್ಯೆ ಹೊಂದಿರಬೇಕು

ಪಿಂಚಣಿ ವಿತರಣಾ ಸಂಸ್ಥೆಯಲ್ಲಿ ಆಧಾರ್ ಜೋಡಣೆ: ಪಿಂಚಣಿದಾರರ ಆಧಾರ್ ಸಂಖ್ಯೆಯು ಪಿಂಚಣಿ ವಿತರಿಸುವ ಬ್ಯಾಂಕ್‌, ಅಂಚೆ ಇಲಾಖೆ ಅಥವಾ ಇತರ ಅಧಿಕೃತ ಪಾವತಿ ಏಜೆನ್ಸಿಯಲ್ಲಿ ಜೋಡಣೆಯಾಗಿರಬೇಕು. 

ಪಿಂಚಣಿ ಮಾಹಿತಿ: ಯಾವ ರೀತಿಯ ಪಿಂಚಣಿ, ಮಂಜೂರು ಮಾಡುವ ಪ್ರಾಧಿಕಾರ, ಪಾವತಿಸುವ ಬ್ಯಾಂಕ್ ಅಥವಾ ಇತರ ಸಂಸ್ಥೆ, ಪಿಂಚಣಿ ಪಾವತಿ ಆದೇಶ (PPO) ಮತ್ತು ಪಿಂಚಣಿ ಖಾತೆ ಸಂಖ್ಯೆ

ಬೆರಳಚ್ಚು ಅಥವಾ ಮುಖ ಚಹರೆ ದೃಢೀಕರಣ: ಬೆರಳಚ್ಚು ದಾಖಲಿಸುವ ಸಾಧನ ಅಥವಾ ಅತ್ಯಾಧುನಿಕ ಮುಖ ಚಹರೆ ದೃಢೀಕರಣ ತಂತ್ರಜ್ಞಾನ ಬಳಸಿ ಪಿಂಚಣಿದಾರರ ಜೀವನ ಪ್ರಮಾಣಪತ್ರ ಸಂಗ್ರಹಿಸಬಹುದು.

ಇದಕ್ಕೆ ಅಗತ್ಯವಿರುವ ಸಾಧನ: ಅಂತರ್ಜಾಲ ಸಂಪರ್ಕ, ಸೂಕ್ತ ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ ಅಥವಾ ಆ್ಯಂಡ್ರಾಯ್ಡ್‌ ಫೋನ್‌ (ಕನಿಷ್ಠ ಕಾರ್ಯನಿರ್ವಹಾ ವ್ಯವಸ್ಥೆ ಹೊಂದಿರಬೇಕು) ಮತ್ತು ಮುಖ ಚಹರೆ ದೃಢೀಕರಣ ಅದರಲ್ಲಿ ಸಾಧ್ಯವಿರಬೇಕು. ಕನಿಷ್ಠ 13 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇರುವ ಮೊಬೈಲ್‌ ಇರಬೇಕು

ಹಿಂದಿನ DLC ಮಾಹಿತಿ: ಕಳೆದ ವರ್ಷ ಮಾಹಿತಿ ಸಲ್ಲಿಸಿದ್ದರೆ ಅವೆಲ್ಲವೂ ಈ ಬಾರಿಯ ಸ್ವಯಂ ಚಾಲಿತವಾಗಿ ದಾಖಲಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.