ADVERTISEMENT

ಹೆದ್ದಾರಿ ಶುಲ್ಕ ಪಾವತಿ: FASTag ಬದಲು 2026ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಡಿಸೆಂಬರ್ 2025, 6:30 IST
Last Updated 19 ಡಿಸೆಂಬರ್ 2025, 6:30 IST
<div class="paragraphs"><p>ಉಪಗ್ರಹ ಆಧಾರಿತ ಹೆದ್ದಾರಿ ಶುಲ್ಕ ಸಂಗ್ರಹದ ಕಾಲ್ಪನಿಕ ಚಿತ್ರ</p></div>

ಉಪಗ್ರಹ ಆಧಾರಿತ ಹೆದ್ದಾರಿ ಶುಲ್ಕ ಸಂಗ್ರಹದ ಕಾಲ್ಪನಿಕ ಚಿತ್ರ

   

ಗೂಗಲ್ ಜೆಮಿನಿ ಎಐ ಚಿತ್ರ

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯು 2026ರ ಅಂತ್ಯದ ಹೊತ್ತಿಗೆ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಆ ಮೂಲಕ ಕೆಲವೇ ವರ್ಷಗಳ ಹಿಂದೆ ಜಾರಿಗೆ ಬಂದಿದ್ದ ರೇಡಿಯೊ ತರಂಗಾಂತರ (RFID) ಐಆರ್‌ಎಫ್‌ಐಡಿ ತಂತ್ರಜ್ಞಾನ ಇನ್ನೇನು ಇತಿಹಾಸ ಸೇರುವ ದಿನಗಳು ಹತ್ತಿರದಲ್ಲೇ ಇವೆ.

ADVERTISEMENT

ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಗೆ ಜಿಎನ್‌ಎಸ್‌ಎಸ್‌ಯನ್ನು ಗ್ಲೋಬಲ್ ನ್ಯಾವಿಗೇಷನ್ ಸೆಟಲೈಟ್‌ ಸಿಸ್ಟಂ (GNSS) ಎಂದೂ ಕರೆಯಲಾಗುತ್ತದೆ. ಬಹಳಷ್ಟು ಮುಂದುವರಿದ ರಾಷ್ಟ್ರಗಳು ಹೆದ್ದಾರಿ ಸುಂಕವನ್ನು ಇದೇ ಮಾದರಿಯಲ್ಲಿ ಸಂಗ್ರಹಿಸುತ್ತಿವೆ. ಟೋಲ್‌ ಕೇಂದ್ರಗಳನ್ನು ನಿರ್ಮಿಸಿ, ಅಲ್ಲಿ ವಾಹನಗಳನ್ನು ನಿಲ್ಲಿಸಿ ಬಿಡುವುದಕ್ಕಿಂತ ತಡೆರಹಿತವಾಗಿ ವಾಹನಗಳು ಇರುವ ಸ್ಥಳವನ್ನು ಆಧರಿಸಿ ಟೋಲ್‌ ಸಂಗ್ರಹಿಸುವುದೇ ಇದರ ಮುಖ್ಯ ಉದ್ದೇಶ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಲಿದೆ. ಹೆದ್ದಾರಿ ಬಳಸಿದಷ್ಟು ಸುಂಕ ಮಾತ್ರ ವಾಹನ ಸವಾರರಿಂದ ಸಂಗ್ರಹಿಸಲಾಗುತ್ತದೆ ಎಂಬುದು ಇದರ ವಿಶೇಷ.

ಏನಿದು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ?

ಸುಂಕ ವಿರುವ ಹೆದ್ದಾರಿಯಲ್ಲಿ ಸಾಗುವ ವಾಹನಗಳ ನಿಖರ ಸ್ಥಳವನ್ನು ಆಧರಿಸಿ ಮತ್ತು ಕ್ರಮಿಸಿದ ದೂರವನ್ನು ಅಳೆದು ಸುಂಕ ವಿಧಿಸುವ ವ್ಯವಸ್ಥೆಯೇ ಗ್ಲೋಬಲ್ ನ್ಯಾವಿಗೇಷನ್ ಸೆಟಲೈಟ್‌ ಸಿಸ್ಟಂ. ಹಾಲಿ ಇರುವ ವ್ಯವಸ್ಥೆಯಲ್ಲಿ ಪ್ರತಿ ವಾಹನಗಳಲ್ಲೂ ಫಾಸ್‌ಟ್ಯಾಗ್‌ನಲ್ಲಿ ನೀಡಿರುವ ಪಟ್ಟಿಯಂತೆಯೇ ಒಂದು ಆನ್‌ ಬೋರ್ಡ್‌ ಯೂನಿಟ್‌ (OBU) ಅಳವಡಿಸಲಾಗುತ್ತದೆ. ವಾಹನದ ಇರುವಿಕೆಯ ಕುರಿತು ಉಪಗ್ರಹಕ್ಕೆ ನಿರಂತರವಾಗಿ ಈ ಸಾಧನ ಮಾಹಿತಿ ರವಾನಿಸುತ್ತಿರುತ್ತದೆ. ಐರೋಪ್ಯ ರಾಷ್ಟ್ರಗಳಲ್ಲಿ ಗೆಲಿಲಿಯೊ ಎಂಬ ಸಾಧನವನ್ನು ಅಥವಾ ಭಾರತದಲ್ಲಿ ಗಗನ್‌ ಮತ್ತು ಐಆರ್‌ಎನ್‌ಎಸ್‌ ಎಂಬ ವ್ಯವಸ್ಥೆಯನ್ನು ಬಳಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಾರೆ.

ಯಾವುದೇ ಟೋಲ್‌ನ ಗಡಿಯನ್ನು ವಾಹನ ಪ್ರವೇಶಿಸುವ ಅಥವಾ ನಿರ್ಗಮಿಸುವ ಸಮಯವನ್ನು ಇದು ದಾಖಲಿಸಿಕೊಳ್ಳುತ್ತದೆ ಮತ್ತು ಎಷ್ಟು ದೂರ ಆ ಹೆದ್ದಾರಿಯಲ್ಲಿ ಕ್ರಮಿಸಿದಿರಿ ಎಂಬುದೂ ಇಲ್ಲಿ ದಾಖಲಾಗುತ್ತದೆ. ಈ ಮಾಹಿತಿಯು ಮೊಬೈಲ್ ಸಂಪರ್ಕ ಜಾಲದ ಮೂಲಕ ಕೇಂದ್ರೀಕೃತ ವ್ಯವಸ್ಥೆಗೆ ರವಾನೆಯಾಗುತ್ತದೆ. ಅದು ಸುಂಕದ ಪ್ರಮಾಣವನ್ನು ಲೆಕ್ಕ ಹಾಕಿ, ಆ ವಾಹನ ಸಂಖ್ಯೆಗೆ ಜೋಡಿಸಿರುವ ವ್ಯಾಲೆಟ್‌ ಅಥವಾ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸುತ್ತದೆ. ಹೀಗಾಗಿ ಟೋಲ್‌ ಬಳಿ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ. 

ಪ್ರಾಯೋಗಿಕವಾಗಿ ಈ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಅನುಷ್ಠಾನ: ಪಾವತಿ ಖಾತೆಗೆ ವಾಹನಗಳಲ್ಲಿ ಅಳವಡಿಸಲಾದ OBU ಲಿಂಕ್ ಆಗಿರುತ್ತದೆ

ಟ್ರ್ಯಾಕಿಂಗ್‌: ಸ್ಥಳವನ್ನು ನಿರ್ಧರಿಸಲು OBU ನಿರಂತರವಾಗಿ ಉಪಗ್ರಹ ಸಂಕೇತಗಳನ್ನು ಪಡೆಯುತ್ತದೆ

ಕ್ರಮಿಸಿದ ದೂರ ಲೆಕ್ಕಾಚಾರ: ಟೋಲ್ ವಿಧಿಸಲಾದ ರಸ್ತೆಗಳಲ್ಲಿ ಪ್ರವೇಶ ಮತ್ತು ನಿರ್ಗಮನದ ಸ್ಥಳಗಳನ್ನು ದಾಖಲಿಸಿಕೊಳ್ಳುತ್ತದೆ

ಬಿಲ್ಲಿಂಗ್‌: ವಾಹನ ಕ್ರಮಿಸಿದ ದೂರವನ್ನು ಆಧರಿಸಿ ಟೋಲ್ ಶುಲ್ಕವನ್ನು ಲೆಕ್ಕ ಹಾಕಲಾಗುತ್ತದೆ ಮತ್ತು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ

ವಿಚಕ್ಷಣೆಗೆ: ಹೆದ್ದಾರಿಯ ಅಲ್ಲಲ್ಲಿ ಕ್ಯಾಮೆರಾ ಅಳವಡಿಕೆ ಮತ್ತು ನಿರಂತರ ವೀಕ್ಷಣೆ ಮೂಲಕ ವಾಹನಗಳ ಚಲನವಲನದ ಮೇಲೆ ಕಣ್ಣಿಡಲಾಗುತ್ತದೆ

ಜಾಗತಿಕ ಮಟ್ಟದಲ್ಲಿ ಅನುಷ್ಠಾನ: ಐರೋಪ್ಯ ರಾಷ್ಟ್ರಗಳು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ಜರ್ಮನಿಯು ಜಿಎನ್‌ಎಸ್‌ಎಸ್‌ ಅನ್ನು 2005ರಿಂದ ಬಳಸುತ್ತಿದೆ. 3.5 ಟನ್‌ ಸಾಮರ್ಥ್ಯ ಮೀರಿದ ಟ್ರಕ್‌ಗಳಿಗೆ ಇದನ್ನು ಅಳವಡಿಸಲಾಗಿದೆ. ಬೆಲ್ಜಿಯಂನಲ್ಲಿ 2016ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಚೆಕ್ ರಿಪಬ್ಲಿಕ್, ಹಂಗೇರಿ, ಸ್ಲೊವಾಕಿಯಾ, ಪೊಲೆಂಡ್ ಮತ್ತು ಬಲ್ಗೇರಿಯಾದಲ್ಲೂ ಇದೇ ಸಮಯದಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮೈಕ್ರೊವೇವ್‌ ಅಥವಾ ಗ್ಯಾಂಟ್ರಿ ಆಧಾರಿತ ತಂತ್ರಜ್ಞಾನ ಹೊಂದಿದ್ದ ಪೊಲೆಂಡ್‌ನಲ್ಲಿ 2021ರಲ್ಲಿ ಜಿಎನ್‌ಎಸ್‌ಎಸ್‌ ಜಾರಿಗೆ ಬಂದಿತು. ಸ್ವಿಟ್ಜರ್ಲೆಂಡ್‌ನಲ್ಲಿ ಉಪಗ್ರಹ ಆಧಾರಿತ ಟೋಲ್ ಶುಲ್ಕ ಪಡೆಯುವ ವಿಧಾನವನ್ನು ಭಾರಿ ವಾಹನಗಳಿಗೆ ಕಡ್ಡಾಯಗೊಳಿಸಲಾಗಿದೆ. 

ಯುರೋಪ್‌ ಆಚೆಗೆ ಇಂಡೊನೇಷ್ಯಾ ಹಾಗೂ ಸಿಂಗಪೂರದಲ್ಲೂ ಉಪಗ್ರಹ ಆಧಾರಿತ ರಸ್ತೆ ಶುಲ್ಕ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದಿದೆ. 

ಭಾರತದ GNSS ಪಯಣ: ಕರ್ನಾಟಕದಿಂದಲೇ ಆರಂಭ

ಭಾರತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಡಿಯಲ್ಲಿ ರಾಷ್ಟ್ರವ್ಯಾಪಿ GNSS-ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಯೋಜಿಸಿದೆ. ದೇಶದ 1.5 ಲಕ್ಷ ಕಿಲೋ ಮೀಟರ್‌ನಷ್ಟಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿ ಇರುವ ಟೋಲ್ ಪ್ಲಾಜಾ ಮತ್ತು ಫಾಸ್‌ಟ್ಯಾಗ್ ಅನ್ನು ಈ ನೂತನ ವ್ಯವಸ್ಥೆ ಬದಲಿಸಲಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ರೀತಿಯ ಆಯ್ದ ಪ್ರದೇಶಗಳಲ್ಲಿ GNSS ಟೋಲಿಂಗ್ ಅನ್ನು FASTag ಖಾತೆಗಳೊಂದಿಗೆ ಸಂಯೋಜಿಸುವ ಪ್ರಸ್ತಾವನೆಗಳೊಂದಿಗೆ ಪೈಲಟ್ ಯೋಜನೆ ಘೋಷಿಸಲಾಗಿತ್ತು. ಕಡಿಮೆ ದೂರದ ಶುಲ್ಕ ರಹಿತ (20 ಕಿ.ಮೀ.ಗಿಂಥ ಕಡಿಮೆ) ದೈನಂದಿನ ಪ್ರಯಾಣಗಳಿಗೆ ಹಾಗೂ ಹಲವು ಬಾರಿ ಒಂದೇ ರಸ್ತೆಯಲ್ಲಿರು ಸಂಚರಿಸುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಸ್ತೆಗಳಲ್ಲಿ ಮೊದಲ ಪ್ರಯೋಗ ನಡೆದಿದೆ.

ಆದಾಗ್ಯೂ, 2024ರಲ್ಲಿ ಪೈಲಟ್ ಯೋಜನೆಗಳು ಪ್ರಾರಂಭವಾದರೂ, ಮೇ 2025ರ ವೇಳೆಗೆ ಪೂರ್ಣ ಪ್ರಮಾಣದ ಅನುಷ್ಠಾನವು ಕಾರ್ಯರೂಪಕ್ಕೆ ಬಂದಿಲ್ಲ. ತಾಂತ್ರಿಕ ಪರಿಷ್ಕರಣೆಗಳು, ನಿಖರತೆಯ ಪರಿಶೀಲನೆ, ಜಾರಿ ಕಾರ್ಯವಿಧಾನಗಳು ಮತ್ತು ಸಾರ್ವಜನಿಕ ಸಿದ್ಧತೆ ಪ್ರಗತಿಯನ್ನು ನಿಧಾನಗೊಳಿಸಿವೆ. ಇದರಿಂದಾಗಿ ರಾಷ್ಟ್ರವ್ಯಾಪಿ ಅನುಷ್ಠಾನವಾಗಬೇಕಾದ ಯೋಜನೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಉಪಗ್ರಹ ಆಧಾರಿತ ಟೋಲ್‌ ಸಂಗ್ರಹದಿಂದ ಆಗುವ ಲಾಭಗಳೇನು?

ಟೋಲ್ ಪ್ಲಾಜಾಗಳಿಲ್ಲ: ದಟ್ಟಣೆ ಮತ್ತು ಸರತಿ ಸಾಲುಗಳು ಇರುವುದಿಲ್ಲ

ನ್ಯಾಯಯುತ ಬೆಲೆ ನಿಗದಿ: ಬಳಕೆದಾರರು ತಾವು ಪ್ರಯಾಣಿಸುವ ದೂರಕ್ಕೆ ಮಾತ್ರ ಪಾವತಿಸಬೇಕು

ಕಡಿಮೆ ಮೂಲಸೌಕರ್ಯ ವೆಚ್ಚಗಳು: ಭೌತಿಕ ಬೂತ್‌ಗಳು ಮತ್ತು ಗ್ಯಾಂಟ್ರಿಗಳ ಅಗತ್ಯವಿಲ್ಲ

ಸ್ಕೇಲೆಬಿಲಿಟಿ: ವಿಶಾಲವಾದ ರಸ್ತೆ ಸಂಪರ್ಕ ಜಾಲಗಳಲ್ಲಿ ಸುಲಭವಾಗಿ ವಿಸ್ತರಿಸಬಹುದು.

ಪರಿಸರ ಲಾಭಗಳು: ವಾಹನಗಳು ನಿಲ್ಲುವ ಸಮಯ ಇಲ್ಲದಿರುವುದರಿಂದ ಇಂಧನ ಉಳಿತಾಯ ಹಾಗೂ ವಾತಾವರಣಕ್ಕೆ ಹೊರಸೂಸುವ ಇಂಗಾಲದ ಪ್ರಮಾಣವೂ ಕಡಿಮೆಯಾಗಲಿದೆ.

ಉಪಗ್ರಹ ಆಧಾರಿತ ಟೋಲ್ ಶುಲ್ಕಕ್ಕಿರುವ ಸವಾಲುಗಳು

ಹಲವು ಸೌಲಭ್ಯಗಳನ್ನು ಹೊಂದಿರುವ GNSS ಅನುಷ್ಠಾನಕ್ಕೆ ಸವಾಲುಗಳೂ ಅಷ್ಟೇ ಇವೆ. ವಾಹನದ ಚಲನವಲನದ ಪ್ರತಿಕ್ಷಣದ ಮಾಹಿತಿ ನಿರಂತರವಾಗಿ ದಾಖಲಾಗುವುದರಿಂದ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ. ಸುರಮಗ ಮಾರ್ಗ, ಕಣಿವೆ ಪ್ರದೇಶ ಅಥವಾ ನೆಟ್‌ವರ್ಕ್‌ ಇಲ್ಲದಿರುವ ಸ್ಥಳಗಳಲ್ಲಿ ಇದರ ಉಪಯೋಗ ಹೇಗೆ ಎಂಬ ಪ್ರಶ್ನೆಯೂ ಎದುರಾಗಲಿದೆ.

ದೇಶದಲ್ಲಿರುವ ಎಲ್ಲಾ ವಾಹನಗಳಲ್ಲೂ ಒಬಿಯು ಸಾಧನ ಅಳವಡಿಸಲಾಗಿದೆಯೇ ಎಂಬುದರ ಕಡ್ಡಾಯ ಪರಿಶೀಲನೆ ನಡೆಸುವುದು ಬಹುದೊಡ್ಡ ಸವಾಲು. ಜತೆಗೆ ಭೌತಿಕವಾಗಿ ಕಾಣುವ ಟೋಲ್ ಪ್ಲಾಜಾ ಬದಲು, ಅಗೋಚರ ಟೋಲ್ ಪ್ಲಾಜಾ ಅಥವಾ ಸುಂಕದ ಗಡಿಯನ್ನು ಜನರು ಗುರುತಿಸುವುದು ಹಾಗೂ ನಂಬುವಂತೆ ಮಾಡುವುದು ಮತ್ತೊಂದು ಸವಾಲು. 

ಸರ್ಕಾರಗಳು ಮತ್ತು ಇವುಗಳನ್ನು ನಿರ್ವಹಿಸುವವರು ಸುರಕ್ಷಿತ ಡೇಟಾ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು. ಎನ್‌ಕ್ರಿಪ್ಶನ್, ಸೀಮಿತ ಮಾಹಿತಿ ಹಂಚಿಕೊಳ್ಳುವಿಕೆ ಮತ್ತು ಹೈಬ್ರಿಡ್ ಜಾರಿ ವ್ಯವಸ್ಥೆಗಳ ಮೂಲಕ ಇವುಗಳನ್ನು ಪರಿಹರಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.