ADVERTISEMENT

ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಕುಸಿಯುತ್ತಿರುವ ಸಂತಾನೋತ್ಪತ್ತಿ: UN ವರದಿ

ಪಿಟಿಐ
Published 10 ಜೂನ್ 2025, 11:12 IST
Last Updated 10 ಜೂನ್ 2025, 11:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

Fertility Decline: ಭಾರತೀಯ ಮಹಿಳೆಯ ಫಲವತ್ತತೆ 1.9ಕ್ಕೆ ಕುಸಿದಿದ್ದು, ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು UN ವರದಿ ಹೇಳಿದೆ.

ನವದೆಹಲಿ: ಭಾರತದ ಜನಸಂಖ್ಯೆಯು 2025ರ ಅಂತ್ಯದ ಹೊತ್ತಿಗೆ 146 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆ ಮೂಲಕ ಜಗತ್ತಿನಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ರಾಷ್ಟ್ರ ಎಂದೆನಿಸಿಕೊಳ್ಳಲಿರುವ ಭಾರತದಲ್ಲಿ ಸರಿಪಡಿಸಲಾಗದಷ್ಟು ಹಂತಕ್ಕೆ ಫಲವತ್ತತೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವರದಿ ಹೇಳಿದೆ.

ADVERTISEMENT

UNFPA 2025ರ ವಿಶ್ವ ಜನಸಂಖ್ಯೆಯ ಸ್ಥಿತಿ (SOWP) ವರದಿಯಡಿ ನೈಜ ಸಂತಾನೋತ್ಪತ್ತಿ ಸಮಸ್ಯೆ ದಾಖಲಿಸಲಾಗಿದೆ. ಫಲವತ್ತತೆ ಕುಸಿತ ಭೀತಿ ಮೂಡಿಸಿದ್ದು, ಇದನ್ನು ಬದಲಿಸುವುದು ಅತ್ಯಗತ್ಯ ಎಂದು ವರದಿಯಲ್ಲಿ ಹೇಳಲಾಗಿದೆ. ಲಕ್ಷಾಂತರ ಜನರಿಗೆ ನಿಜವಾದ ಫಲವತ್ತತೆಯ ಗುರಿಗಳು ಏನು ಎಂಬುದನ್ನು ಅರ್ಥೈಸಿಕೊಳ್ಳಲು ಆಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಇದು ನಿಜವಾದ ಬಿಕ್ಕಟ್ಟಾಗಿದೆ. ಇದು ಕಡಿಮೆ ಜನಸಂಖ್ಯೆ ಅಥವಾ ಅಧಿಕ ಜನಸಂಖ್ಯೆ ಎಂಬುದು ಲೆಕ್ಕಕ್ಕೆ ಬಾರದು. ಆದರೆ ಇರುವ ಜನರ ಫಲವತ್ತತೆಯೇ ಇಲ್ಲಿ ಪ್ರಧಾನವಾಗುತ್ತದೆ. ಲೈಂಗಿಕತೆ, ಗರ್ಭನಿರೋಧಕ ಹಾಗೂ ಕುಟುಂಬವನ್ನು ಹೊಂದುವುದು ಪ್ರತಿವ್ಯಕ್ತಿಗೆ ಇರುವ ಮುಕ್ತ ಸ್ವಾತಂತ್ರ್ಯ ಹಾಗೂ ಸಾಮರ್ಥ್ಯ. ಆದರೆ ಫಲವತ್ತತೆ, ಜೀವಿತಾವಧಿ ಎಂಬ ಅಂಶಗಳು ಬದಲಾಗುತ್ತಿರುವ ಜಗತ್ತಿನ ಮುನ್ಸೂಚನೆ ನೀಡುವಂತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಸರಾಸರಿ 2.1ರಿಂದ ಇನ್ನಷ್ಟು ಕುಸಿದ ಫಲವತ್ತತೆ

‘ಭಾರತದಲ್ಲಿ ಪ್ರತಿ ಮಹಿಳೆಯ ಸರಾಸರಿ ಫಲವತ್ತತೆ 2.1 ಇದೆ. ಆದರೆ ಅದು ಈಗ 1.9ಕ್ಕೆ ಕುಸಿದಿದೆ. ಅಂದರೆ, ತಲೆಮಾರಿನಿಂದ ತಲೆಮಾರಿಗೆ ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಸದ್ಯ ಇರುವ ಯುವಶಕ್ತಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದಾರೆ. ಇದರಲ್ಲಿ 0–14ರ ವಯೋಮಾನದವರ ಸಂಖ್ಯೆ ಶೇ 24ರಷ್ಟಿದೆ. 10ರಿಂದ 19ರ ವಯೋಮಾನದವರು ಶೇ 17ರಷ್ಟು ಮತ್ತು 10ರಿಂದ 24 ವರ್ಷದವರು ಶೇ 26ರಷ್ಟಿದೆ’ ಎಂದು ವರದಿ ಹೇಳಿದೆ.

ಭಾರತದಲ್ಲಿ ಸರಿಯಾದ ಉದ್ಯೋಗಾವಕಾಶ ಮತ್ತು ಸರ್ಕಾರದ ನೀತಿಗಳು ಬೆಂಬಲಿಸಿದ್ದೇ ಆದಲ್ಲಿ ಈಗಲೂ 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ 68ರಷ್ಟಿದೆ. 65ಕ್ಕಿಂತ ಮೇಲಿನವರ ಸಂಖ್ಯೆ ಶೇ 7ರಷ್ಟಿದೆ. ಇದು ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಜತೆಗೆ ಜನರ ಜೀವಿತಾವಧಿಯೂ ಹೆಚ್ಚಳವಾಗಲಿದೆ. 2025ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿಯಾಗಿ ಪುರುಷರಲ್ಲಿ 71 ವರ್ಷ ಹಾಗೂ ಮಹಿಳೆಯರಲ್ಲಿ 74 ವರ್ಷಕ್ಕೆ ಹೆಚ್ಚಳವಾಗಿದೆ.

‘ವಿಶ್ವಸಂಸ್ಥೆಯ ವರದಿಯನ್ವಯ ಭಾರತದ ಜನಸಂಖ್ಯೆ 170 ಕೋಟಿ ತಲುಪುವ ಮೊದಲೇ ಇದರ ಕುಸಿತವೂ (40 ವರ್ಷಗಳ ನಂತರ) ಆರಂಭವಾಗಲಿದೆ. ಈ ಸಂಖ್ಯೆಗಳ ಹಿಂದೆ ಕುಟುಂಬವನ್ನು ಹೊಂದುವ ಅಥವಾ ವಿಸ್ತರಿಸುವ ಆಲೋಚನೆಯುಳ್ಳ ಲಕ್ಷಾಂತರ ದಂಪತಿಗಳ ಕಥೆಗಳು ಅಡಗಿವೆ. ಇದು ಕುಟುಂಬ ಬೇಕೇ ಅಥವಾ ಬೇಡವೇ, ಬೇಕಾದರೆ ಎಂದು ಅಥವಾ ಎಷ್ಟು ಬಾರಿ ಗರ್ಭಧರಿಸಬಹುದು ಎಂಬುದನ್ನು ನಿರ್ಧರಿಸುತ್ತದೆ’ ಎಂಬುದನ್ನೂ ಈ ವರದಿ ಹೇಳಿದೆ.

1960ರಲ್ಲಿ ಪ್ರತಿ ಮಹಿಳೆಗೆ 6 ಮಕ್ಕಳು, ಈಗ 2, ಮುಂದೆ...?

‘1960ರಲ್ಲಿ ಭಾರತದ ಜನಸಂಖ್ಯೆಯು 43.6 ಕೋಟಿ ಇತ್ತು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಾಮಾನ್ಯವಾಗಿ 6 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಮಹಿಳೆಯರಿಗೆ ಅವರ ದೇಹ ಮತ್ತು ಬದುಕಿನ ಕುರಿತು ಕಡಿಮೆ ಹಕ್ಕುಗಳನ್ನು ಹೊಂದಿದ್ದರು. ಕೆಲವರು ಮಾತ್ರ ಅಂದರೆ ಪ್ರತಿ ನಾಲ್ವರಲ್ಲಿ ಒಬ್ಬರು ಗರ್ಭನಿರೋಧಕ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪ್ರತಿ ಇಬ್ಬರಲ್ಲಿ ಒಬ್ಬರು ಪ್ರಾಥಮಿಕ ಶಾಲೆಗಳಿಗೆ ದಾಖಲಾಗುತ್ತಿದ್ದರು’ ಎಂಬ ಅಂಶವನ್ನೂ ವಿಶ್ವಸಂಸ್ಥೆಯ ಈ ವರದಿ ದಾಖಲಿಸಿದೆ.

ಆದರೆ ನಂತರದ ದಿನಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಯಿತು. ಅದರ ಜತೆಯಲ್ಲೇ ಗರ್ಭನಿರೋಧಕ ಆರೋಗ್ಯ ವ್ಯವಸ್ಥೆಯೂ ಉತ್ತಮವಾಯಿತು. ಕುಟುಂಬದ ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರಿಗೂ ಪ್ರಮುಖ ಸ್ಥಾನ ದೊರೆಯಲಾರಂಭಿಸಿತು. ಅದು ಅವರ ಜೀವನಕ್ರಮದ ಮೇಲೂ ಪರಿಣಾಮ ಬೀರಿತು. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಪ್ರತಿ ಮಹಿಳೆ ಸರಾಸರಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆಧುನಿಕ ಭಾರತದಲ್ಲಿ ತಮ್ಮ ತಾಯಿ ಅಥವಾ ಅಜ್ಜಿಯರಿಗೆ ಹೋಲಿಸಿದಲ್ಲಿ ಇಂದಿನ ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳು ಮತ್ತು ಆಯ್ಕೆಗಳಿವೆ. ಎಷ್ಟು ಮಕ್ಕಳನ್ನು ಹೆರಬೇಕು? ಯಾವಾಗ ಮಕ್ಕಳು ಬೇಕು? ಎಂಬುದರ ಆಯ್ಕೆಯ ಸ್ವಾತಂತ್ರ್ಯವೂ ಅವರಿಗೆ ಇದೆ’ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ತ್ವರಿತವಾಗಿ ಜನಸಂಖ್ಯಾ ಬದಲಾವಣೆ ಎದುರಿಸುತ್ತಿರುವ ಮಧ್ಯಮ ಆದಾಯದ ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರಿಸಿದೆ. ಇದು ಕಳೆದ 79 ವರ್ಷಗಳ ಜನಸಂಖ್ಯೆಯ ದಾಖಲೆಗಳನ್ನು ಆಧರಿಸಿದೆ.

ಪ್ರಗತಿ ಸಾಧಿಸಿದರೂ ಉಳಿದಿರುವ ಜಾತಿ, ಆರ್ಥಿಕ ಅಸಮಾನತೆ

‘ಭಾರತವು ಜನಸಂಖ್ಯೆಯ ನಿಯಂತ್ರಣದಲ್ಲಿ ಗಮನಾರ್ಹ ಸಾಧನೆ ಮಾಡಿದೆ. 1970ರಲ್ಲಿ ಪ್ರತಿ ಮಹಿಳೆ ಸರಾಸರಿ 5 ಮಕ್ಕಳನ್ನು ಹೆರುತ್ತಿದ್ದರೆ, ಅದು ಈಗ 2ಕ್ಕೆ ಇಳಿದಿದೆ. ಇದಕ್ಕೆ ಶಿಕ್ಷಣ ಮತ್ತು ಸಂತಾನೋತ್ಪತ್ತಿ ಆರೋಗ್ಯ ಬಹುತೇಕರನ್ನು ತಲುಪಿದ್ದೂ ಕಾರಣ’ ಎಂದು UNFPA ಭಾರತದ ಪ್ರತಿನಿಧಿಯಾದ ಆ್ಯಂಡ್ರೆ ಎಂ. ವೋಜ್ನಾರ್‌ ತಿಳಿಸಿದ್ದಾರೆ.

‘ಈ ಉತ್ತಮ ಕ್ರಮಗಳಿಂದ ಶಿಶುಮರಣ ಪ್ರಮಾಣ ಗಣನೀಯವಾಗಿ ಇಳಿದಿದೆ. ಜತೆಗೆ ಲಕ್ಷಾಂತರ ಮಹಿಳೆಯರು ಬದುಕುಳಿದಿದ್ದಾರೆ. ಆ ಮೂಲಕ ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ ಮತ್ತು ಸಮುದಾಯವನ್ನು ಕಟ್ಟಿದ್ದಾರೆ. ಹೀಗಿದ್ದರೂ ಸಮಾಜದಲ್ಲಿ ಜಾತಿ ಮತ್ತು ಆದಾಯ ವಿಷಯದಲ್ಲಿ ಅಸಮಾನತೆ ಉಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಸಂತಾನೋತ್ಪತ್ತಿಯ ಆಯ್ಕೆಗಳು ಪ್ರತಿಯೊಬ್ಬರಿಗೂ ಮುಕ್ತವಾಗಿ ಲಭಿಸಿದಾಗ ಮಾತ್ರ ಜನಸಂಖ್ಯೆಯ ಲಾಭಾಂಶ ಸಿಗಲಿದೆ. ಸಂತಾನೋತ್ಪತ್ತಿಯ ಹಕ್ಕುಗಳು ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ಒಟ್ಟಿಗೆ ಸಾಧಿಸಬಹುದು ಎಂಬುದನ್ನು ತೋರಿಸಲು ಭಾರತಕ್ಕೆ ಅನನ್ಯ ಅವಕಾಶವಿದೆ’ ಎಂದು ಆ್ಯಂಡ್ರೆ ಎಂ. ವೋಜ್ನಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.