ADVERTISEMENT

ನೇಪಾಳ | ಸರ್ಕಾರದ ವಿರುದ್ಧ Gen Z ಕಿಡಿ; ಬಡವರ ಮಕ್ಕಳು ಬೆಳೀಬಾರ್ದಾ ಅಂದ ಯುವಜನತೆ

ಏಜೆನ್ಸೀಸ್
Published 9 ಸೆಪ್ಟೆಂಬರ್ 2025, 6:12 IST
Last Updated 9 ಸೆಪ್ಟೆಂಬರ್ 2025, 6:12 IST
<div class="paragraphs"><p>ನೇಪಾಳದ ಕಠ್ಮಂಡುವಿನಲ್ಲಿ ಪ್ರತಿಭಟನಾ ನಿರತ ಯುವಜನತೆ</p></div>

ನೇಪಾಳದ ಕಠ್ಮಂಡುವಿನಲ್ಲಿ ಪ್ರತಿಭಟನಾ ನಿರತ ಯುವಜನತೆ

   

ರಾಯಿಟರ್ಸ್ ಚಿತ್ರ

ನವದೆಹಲಿ: ಪ್ರಧಾನಿ ಕೆಪಿ ಶರ್ಮ ಒಲಿ ಸರ್ಕಾರವು 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದರ ಪರಿಣಾಮ ನೇಪಾಳ ಅಕ್ಷರಶಃ ಅಗ್ನಿಕುಂಡವಾಗಿದೆ. 19 ಜನರ ಜೀವ ಹೋಗಿದೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣಕ್ಕಾಗಿ ಜನರು ರೊಚ್ಚಿಗಿದ್ದೇಕೆ..? ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವಷ್ಟೇ ಕಾರಣವೇ...?

ADVERTISEMENT

ಸದಾ ಮಂಜಿನಂತೆ ಶಾಂತವಾಗಿರುವ ಹಿಮಾಲಯದ ತಪ್ಪಲಿನ ನೇಪಾಳದ ಹೊತ್ತಿ ಉರಿಯುತ್ತಿದೆ. ಸರ್ಕಾರದ ವಿರುದ್ಧ ಜನರು ರೊಚ್ಚಿಗೆದ್ದು, ಬೀದಿಗಿಳಿದಿದ್ದಾರೆ. ಇದರ ಪರಿಣಾಮ ಹಲವರು ಜೀವ ಕಳೆದುಕೊಂಡಿದ್ದಾರೆ. ಕರ್ಫ್ಯೂ ಹೇರಲಾಗಿದೆ. ಇವೆಲ್ಲವೂ ಆರಂಭಗೊಂಡಿದ್ದು, ಫೇಸ್‌ಬುಕ್‌, ಯುಟ್ಯೂಬ್, ಎಕ್ಸ್ ಸಹಿತ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ನಿಷೇಧ ಹೇರಿದ್ದರಿಂದಾಗಿದೆ. ಇದಕ್ಕೆ ತೀವ್ರ ಅಸಮಾಧಾನಗೊಂಡ ಯುವಜನರು ಬಾಣೇಶ್ವರ, ಸಿಂಗದರ್ಬಾರ್, ನಾರಾಯಣಹಿತಿ ಸಹಿತ ಹಲವು ಪ್ರದೇಶಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ರಬ್ಬರ್‌ ಗುಂಡುಗಳು ಮತ್ತು ಅಶ್ರುವಾಯುವನ್ನು ಸಿಡಿಸಿದರು. ಪೊಲೀಸರ ಎಚ್ಚರಿಕೆಗೆ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಹಿಂದೆ ಸರಿಯಿತು. ಪರಿಸ್ಥಿತಿಯ ಲಾಭ ಪಡೆಯುವ ಮತ್ತೊಂದು ಗುಂಪು ಈ ಗಲಾಟೆಯಲ್ಲಿ ಸೇರಿಕೊಂಡಿದೆ ಎಂದು ಎಚ್ಚರಿಕೆ ನೀಡಿದರು. ಅದು ತೀವ್ರವಾಗುತ್ತಿದ್ದಂತೆ ನೇಪಾಳದಲ್ಲಿ ಸೇನೆಯನ್ನೂ ನಿಯೋಜಿಸಲಾಯಿತ್ತು. 

ಕಠ್ಮಂಡುವಿನಲ್ಲಿರುವ ಸಂಸತ್‌ಭವನದ ಎದುರು ‘ಜೆನ್‌ ಝೀ’ ತಲೆಮಾರಿನವರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಒಲಿ ನೇತೃತ್ವದ ಸರ್ಕಾರವು ತುರ್ತು ಸಂಪುಟ ಸಭೆ ನಡೆಸಿದ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಹಿಂಪಡೆಯಿತು. 

ನೇಪಾಳದಲ್ಲಿ ಯುವಕನ ಆಕ್ರೋಶ

ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ಏಕೆ?

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸಹಿತ ಸುಮಾರು 26 ಸಾಮಾಜಿಕ ಮಾಧ್ಯಮಗಳು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸದ ಕಾರಣ ಸರ್ಕಾರ ಅವುಗಳನ್ನು ನಿಷೇಧಿಸಲು ಮುಂದಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕಾಗಿ ಸರ್ಕಾರವು ವಾರದ ಗಡುವು ನೀಡಿತ್ತು. ಆದರೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಮಾಲೀಕತ್ವ ಹೊಂದಿರುವ ಮೆಟಾ, ಯುಟ್ಯೂಬ್‌ನ ಆಲ್ಪಬೆಟ್‌, ಎಕ್ಸ್‌, ರೆಡ್‌ಡಿಟ್‌ ಮತ್ತು ಲಿಂಕ್‌ಡಿನ್‌ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿದ್ದವು.

ಸುಪ್ರೀಂ ಕೋರ್ಟ್‌ನ ಆದೇಶದಂತೆ ಸಂಪರ್ಕ ಸಂಖ್ಯೆ ಮತ್ತು ಸ್ಥಾನಿಕ ದೂರು ಸ್ವೀಕರಿಸುವ ಅಧಿಕಾರಿಯನ್ನು ನೇಮಿಸುವ ಷರತ್ತನ್ನೂ ಸರ್ಕಾರ ಈ ಕಂಪನಿಗಳಿಗೆ ನೀಡಿತ್ತು.

ಟಿಕ್‌ಟಾಕ್‌, ವೈಬರ್‌, ವಿಟ್ಕ್‌, ನಿಂಬಜ್‌ ಮತ್ತು ಪೊಪೊ ಲೈವ್‌ ಈಗಾಗಲೇ ನೋಂದಾಯಿಸಿದ್ದರಿಂದ ಅವುಗಳ ಮೇಲೆ ನಿಷೇಧ ಹೇರಿರಲಿಲ್ಲ. ಟೆಲಿಗ್ರಾಂ ಮತ್ತು ಗ್ಲೋಬಲ್ ಡೈರಿ ಅರ್ಜಿಗಳು ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಪಾಳದಲ್ಲಿ ಬೀದಿಗಿಳಿದ ಯುವಜನರು

ಹಾಗಿದ್ದರೆ ಪ್ರತಿಭಟನೆ ನಡೆದದ್ದೇಕೆ?

ನೇಪಾಳದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 1.3 ಕೋಟಿ ಇದೆ. ಇನ್‌ಸ್ಟಾಗ್ರಾಂ ಬಳೆದಾರರ ಸಂಖ್ಯೆ 36 ಲಕ್ಷ ಇದೆ. ದೇಶದ ಹಲವರು ತಮ್ಮ ವ್ಯವಹಾರಗಳಿಗಾಗಿ ಸಾಮಾಜಿಕ ಮಾಧ್ಯಮಗಳನ್ನೇ ನೆಚ್ಚಿಕೊಂಡಿದ್ದಾರೆ. ಸರ್ಕಾರ ನಿಷೇಧ ಹೇರಿದ್ದರಿಂದ ಅದು ನೇರವಾಗಿ ಹಲವರ ವ್ಯಾಪಾರ ವಹಿವಾಟಿಗೂ ತೊಂದರೆ ಉಂಟು ಮಾಡಿತ್ತು. ಇದರಿಂದ ಅವರು ಪ್ರತಿಭಟನೆಗೆ ಮುಂದಾದರು. ಹೀಗೆ ಆರಂಭವಾದ ಪ್ರತಿಭಟನೆ ನಂತರ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ತಿರುಗಿದ್ದು, ತೀವ್ರ ಸ್ವರೂಪ ಪಡೆಯಿತು ಎಂದು ಅಲ್ಲಿನ ಮೂಲಗಳು ಹೇಳಿವೆ.

‘ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ನಮ್ಮ ಅಸಮಾಧಾನಕ್ಕೆ ಕಾರಣ. ಆದರೆ ನಮ್ಮ ಆಕ್ರೋಶ ಅದಷ್ಟಕ್ಕೇ ಅಲ್ಲ. ನೇಪಾಳದಲ್ಲಿ ಸಾಂಸ್ಥಿಕಗೊಳಿಸಲಾಗಿರುವ ಭ್ರಷ್ಟಾಚಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ. ನಮಗೆ ಬದಲಾವಣೆ ಬೇಕಿದೆ. ಇದು ನಮ್ಮ ತಲೆಮಾರಿಗೇ ಕೊನೆಯಾಗಬೇಕಿದೆ’ ಎಂದು ಯುವತಿಯೊಬ್ಬರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

‘ನಾಯಕರ ಮಕ್ಕಳು ಉಜ್ವಲ ಭವಿಷ್ಯ ಕಂಡುಕೊಳ್ಳಬಹುದಾದರೆ, ಬಡವರ ಮಕ್ಕಳು ಬೆಳೆಯಬಾರದೇ. ನಮಗೂ ಉತ್ತಮ ಭವಿಷ್ಯ ಬೇಕು’ ಎಂಬ ವಿಡಿಯೊ ನೇಪಾಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನೇಪಾಳದ ಕಠ್ಮಂಡುವಿನಲ್ಲಿ ಕರ್ಫ್ಯೂ ಹೇರಲಾಗಿದ್ದು ಪೊಲೀಸರು ಭಿಗಿ ಬಂದೋಬಸ್ತ್ ವಹಿಸಿದ್ದಾರೆ

ಸರ್ಕಾರ ಹೇಳಿದ್ದೇನು?

‘ಜನರ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿದೆ. ಜನರ ರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮಗಳ ಅನಿಯಂತ್ರಿತ ಬಳಕೆಗೆ ಮುಕ್ತ ವಾತಾವರಣ ಕಲ್ಪಿಸಲಾಗುವುದು’ ಎಂದಿದೆ.

ಇದಕ್ಕೂ ಮೊದಲು ಆನ್‌ಲೈನ್‌ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೆಲ ಕಾಲ ಟೆಲಿಗ್ರಾಂ ಆ್ಯಪ್‌ ಬಳಕೆಯನ್ನು ನೇಪಾಳ ಸರ್ಕಾರ ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.