ADVERTISEMENT

ನೋ ಕ್ಯಾಶ್.. ಓನ್ಲಿ ಡಿಜಿಟಲ್‌; ಏನಿದು ಟೋಲ್‌ ಪ್ಲಾಜಾದ ಹೊಸ ನಿಯಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2026, 12:23 IST
Last Updated 22 ಫೆಬ್ರುವರಿ 2026, 12:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ: ಎಐ

ದೇಶದಾದ್ಯಂತ ಡಿಜಿಟಲ್‌ನ ವಹಿವಾಟು ಹೆಚ್ಚುತ್ತಿದೆ. ತರಕಾರಿ ಅಂಗಡಿಯಿಂದ ದೇವಾಲಯದ ಹುಂಡಿಗಳ ವರೆಗೆ ಇಂದು ಯುಪಿಐ ಪಾವತಿ ಕಾರ್ಯನಿರ್ವಹಿಸುತ್ತಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಮುಂದೆ ಏನಿದ್ದರೂ ಟೋಲ್‌ ಶುಲ್ಕವನ್ನು ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು. ಏಪ್ರಿಲ್‌ 1ರಿಂದ ನಗದು ಪಾವತಿಗೆ ಅವಕಾಶ ಇರುವುದಿಲ್ಲ. ಹಾಗಾದರೆ ಏನಿದು ಹೊಸ  ಟೋಲ್‌ ನಿಯಮ? ಈ ಸೇವೆಯಿಂದ ಸವಾರರಿಗೆ ಆಗುವ ಲಾಭಗಳೇನು? ಎಂಬ ಮಾಹಿತಿ ಇಲ್ಲಿದೆ.

ADVERTISEMENT

ಏನಿದು ನಗದು ರಹಿತ ಸೇವೆ? 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದಾದ್ಯಂತ ಇರುವ ಟೋಲ್‌ ಪ್ಲಾಜಾಗಳಲ್ಲಿ ನಗದು ರಹಿತ ಸೇವೆಯನ್ನು ಇದೇ ಏಪ್ರಿಲ್‌ 1 ರಿಂದ ಜಾರಿಗೊಳಿಸಲಿದೆ. ಈ ಮೊದಲು ಟೋಲ್‌ ಶುಲ್ಕವನ್ನು ಫಾಸ್ಟ್‌ ಟ್ಯಾಗ್‌ , ಯುಪಿಐ ಅಥವಾ ನಗದು ರೂಪದಲ್ಲಿ ಟೋಲ್ ಶುಲ್ಕವನ್ನು ಪಾವತಿ ಮಾಡಲು ಅವಕಾಶವಿತ್ತು. ಆದರೆ ಇದೀಗ ಎನ್‌ಎಚ್‌ಎಐ ಶುಲ್ಕ ಪಾವತಿಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಟೋಲ್‌ಗಳಲ್ಲಿ ಯುಪಿಐ ಪಾವತಿ ಮತ್ತು ಫಾಸ್ಟ್‌ ಟ್ಯಾಗ್‌ ಮಾತ್ರ ಬಳಕೆಯಲ್ಲಿ ಇರಲಿವೆ. ನಗದು ಶುಲ್ಕ ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಪ್ರಾಧಿಕಾರ ಮುಂದಾಗಿದೆ. ನಗದು ಶುಲ್ಕ ಪಾವತಿಸಿದರೆ ದಂಡ ಬೀಳುವ ಸಾಧ್ಯತೆಯೂ ಇದೆ ಎಂದು ಪ್ರಾಧಿಕಾರ ತಿಳಿಸಿದೆ.

ಫಾಸ್ಟ್‌ ಟ್ಯಾಗ್‌ , ಯುಪಿಐ ಪಾವತಿಗೆ ಮಾತ್ರ ಅವಕಾಶ

ಪ್ರಾಧಿಕಾರ ಈ ಹಿಂದೆ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಹಾಗೂ ಅಡೆತಡೆಯಿಲ್ಲದ ಪ್ರಯಾಣಕ್ಕಾಗಿ ಫಾಸ್ಟ್‌ ಟ್ಯಾಗ್‌ ಸೇವೆಯನ್ನು ಪರಿಚಯಿಸಿತ್ತು. ಅಂಕಿ ‌ಅಂಶದ ಪ್ರಕಾರ ಫಾಸ್ಟ್‌ ಟ್ಯಾಗ್‌ ಸೇವೆಯನ್ನು ಶೇ 98ರಷ್ಟು ವಾಹನಗಳು ಬಳಕೆ ಮಾಡುತ್ತಿವೆ.  ಇದರ ಜತೆಗೆ  ಸಾಕಷ್ಟು ಚಾಲಕರು ಯುಪಿಐ ಹಾಗೂ ನಗದು ಮಾದರಿಯಲ್ಲಿಯೇ ಟೋಲ್‌ ಶುಲ್ಕವನ್ನು ಪಾವತಿಸುತ್ತಿದ್ದರು. ಟೋಲ್‌ ಪಾವತಿಗೆ ಸಂಬಂಧಿಸಿದಂತೆ ಈಗ ಇರುವ ನಿಯಮದ ಪ್ರಕಾರ, ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾ ಪ್ರವೇಶಿಸುವ ವಾಹನಗಳು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವುದಾದರೆ ಸಾಮಾನ್ಯ ಟೋಲ್ ಶುಲ್ಕದ ಎರಡು ಪಟ್ಟು ಹೆಚ್ಚು ಪಾವತಿಸಬೇಕು. ಆದರೆ, ಯುಪಿಐ ಮೂಲಕ ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೆ, ಸಾಮಾನ್ಯ ಟೋಲ್ ಶುಲ್ಕದ 1.25 ಪಟ್ಟು ಶುಲ್ಕ ಪಾವತಿ ಮಾಡಬೇಕು.

ನಗದು ರಹಿತ ಸೇವೆಯ ಅನುಕೂಲಗಳೇನು? 

ನಗದು ಪಾವತಿ ಅಥವಾ ಯು‍ಪಿಐ ಮೂಲಕ ಹಣ ಪಾವತಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ಸವಾರರ ಸಮಯದ ಉಳಿತಾಯವಾಗಲಿದೆ. ನಗದು ಪಾವತಿಸಿದಾಗ ಅವರಿಗೆ ಚಿಲ್ಲರೆ ಕೊಡುವ ಗೊಂದಲ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ. ಅಲ್ಲದೇ ಇಂಧನ ಉಳಿತಾಯಕ್ಕೂ ಸಹಕಾರಿಯಾಗಲಿದೆ. ಜತೆಗೆ ತಡೆ ರಹಿತ ಸಂಚಾರಕ್ಕೂ ಸಹಕಾರಿಯಾಗಲಿದೆ. ಟೋಲ್ ಶುಲ್ಕ ಪಾವತಿಯಲ್ಲಿ ಪಾರದರ್ಶಕ ವಹಿವಾಟನ್ನು ಜಾರಿಗೊಳಿಸುವುದು ಇದರ ಮುಖ್ಯ ಉದ್ದೇಶ ಎಂದು ಪ್ರಾಧಿಕಾರ ತಿಳಿಸಿದೆ.

1,150 ಕ್ಕೂ ಹೆಚ್ಚು ಟೋಲ್‌ ಪ್ಲಾಜಾಗಳಲ್ಲಿ ಜಾರಿ

ನಗದು ರಹಿತ ಸೇವೆಯನ್ನು ದೇಶದಾದ್ಯಂತ ಇರುವ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇ ಗಳಲ್ಲಿರುವ 1,550 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಜಾರಿಗೊಳಿಸಲಾಗುತ್ತದೆ. ‍ಪೂರ್ಣ ಡಿಜಿಟಲ್‌ ಪಾವತಿ ಮಾತ್ರ ಇರಲಿದ್ದು, ಒಂದು ವೇಳೆ ನಗದು ಶುಲ್ಕ ಪಾವತಿಸಿದರೆ, ನಿಗದಿತ ಶುಲ್ಕದ ಪಾವತಿಗಿಂತ ಹಲವು ಪಟ್ಟು ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. 

ವಾಹನ ಸವಾರರಿಗೆ ಸಲಹೆಗಳು 

  • ಈಗಾಗಲೇ ನೀವು ಬಳಕೆ ಮಾಡುತ್ತಿರುವ ವಾಹನದ ಪಾಸ್ಟ್‌ಟ್ಯಾಗ್‌ ಸಕ್ರಿಯವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

  • ಫಾಸ್ಟ್‌ ಟ್ಯಾಗ್‌ ಖಾತೆಯಲ್ಲಿ ಕನಿಷ್ಠ ಹಣ ಇರುವಂತೆ ನೋಡಿಕೊಳ್ಳಿ.

  • ಯುಪಿಐ ಸೇವೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ

ಕೆಲವೇ ದಿನಗಳಲ್ಲಿ ಫಾಸ್ಟ್‌ ಟ್ಯಾಗ್‌ ಕೂಡಾ ಅಳೆಯದಾಗಲಿದೆ . ಆ ಜಾಗಕ್ಕೆ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್)  ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.  ಇದು ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆಯಾಗಿದ್ದು, ವಾಹನಗಳಿಗೆ  (ಒಬಿಯು) ಎಂಬ ವಿಶೇಷ ಸಾಧನವನ್ನು ಅಳವಡಿಸಲಾಗುತ್ತದೆ. ಈ ಸಾಧನದ ಮೂಲಕ ವಾಹನದ ಚಲನ ವಲನಗಳು ಸ್ಯಾಟಲೈಟ್‌ನೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ವಾಹನ ಎಷ್ಟು ದೂರ ಟೋಲ್‌ ರಸ್ತೆಯಲ್ಲಿ ಕ್ರಮಿಸುತ್ತಿದೆಯೋ ಅದಕ್ಕೆ ತಕ್ಕಂತೆ  ಶುಲ್ಕ ನಿಗದಿ ಪಡಿಸಲಾಗುತ್ತದೆ. ನೇರವಾಗಿ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಇದು ಟೋಲ್‌ಗಳಲ್ಲಿ ಇನ್ನಷ್ಟು ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.