ADVERTISEMENT

ಭಾರತೀಯ ವಿಮಾನಗಳಿಗೆ ಪಾಕ್‌ ವಾಯುಪ್ರದೇಶ ನಿಷೇಧ: 2019ರಲ್ಲಿ ಆಗಿತ್ತು; ಈಗೇನು?

ಏಜೆನ್ಸೀಸ್
Published 28 ಏಪ್ರಿಲ್ 2025, 10:37 IST
Last Updated 28 ಏಪ್ರಿಲ್ 2025, 10:37 IST
<div class="paragraphs"><p>ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   
2019ರಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲೂ ಭಾರತ ಬಾಲಾಕೋಟ್‌ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ರದ್ದುಗೊಳಿಸಿತ್ತು. ಈಗಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳ ಮುಂದಿರುವ ಆಯ್ಕೆಗಳೇನು..?

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ನಂತರ ರಾಜತಾಂತ್ರಿಕ ಸಂಬಂಧ ಕಳಚಿಕೊಂಡು ಭಾರತ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳಿಗೆ ನಿರ್ಬಂಧ ಹೇರಿರುವುದನ್ನೂ ಒಳಗೊಂಡು ಹಲವು ಕ್ರಮಗಳನ್ನು ಕೈಗೊಂಡಿದೆ.

ವಾಯುಪ್ರದೇಶ ನಿರ್ಬಂಧದಿಂದಾಗಿ ಪಶ್ಚಿಮದ ರಾಷ್ಟ್ರಗಳು ಭಾರತಕ್ಕೆ ತುಸು ದೂರವೇ ಆಗಿದೆ. ಇದರಿಂದ ಹೆಚ್ಚಿನ ಇಂಧನ, ಸಿಬ್ಬಂದಿಯ ದುಡಿಮೆ ಅವಧಿಯೂ ಹೆಚ್ಚಳವಾಗುವುದರಿಂದ, ಸಹಜವಾಗಿ ಅದರ ಹೊರೆ ಗ್ರಾಹಕರ ಮೇಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

2025ರ ಏ. 24ರಂದು ಪಾಕಿಸ್ತಾನ ಸರ್ಕಾರವು ಏರ್‌ಮೆನ್‌ಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ತನ್ನ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳು ಹಾರಾಟ ನಡೆಸದಂತೆ ನಿರ್ಬಂಧಿಸುವಂತೆ ಸೂಚಿಸಿತ್ತು. ನಿರ್ಬಂಧಕ್ಕೊಳಗಾದ ಸಂಸ್ಥೆಗಳಲ್ಲಿ ಭಾರತದಲ್ಲಿ ನೋಂದಣಿಯಾದ, ಭಾರತೀಯರು ನಿರ್ವಹಿಸುವ, ಮಾಲೀಕತ್ವ ಹೊಂದಿರುವ ಹಾಗೂ ಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ಭಾರತೀಯ ವಿಮಾನಗಳೂ ಒಳಗೊಂಡಿವೆ. 

ಇದರಿಂದಾಗಿ ಭಾರತದ ಇಂಡಿಗೊ ಮತ್ತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗಳು ತಾವು ನಿರ್ವಹಿಸುವ ಉತ್ತರ ಅಮೆರಿಕ, ಬ್ರಿಟನ್, ಯುರೋಪ್‌ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪರ್ಯಾಯ ಮಾರ್ಗದ ಮೂಲಕ ಪ್ರಯಾಣಿಸುವುದಾಗಿ ಹೇಳಿವೆ.

ಪರ್ಯಾಯ ಮಾರ್ಗಗಳು ಭಾರತೀಯರಿಗೆ ಹೊರೆಯೇ?

ಪಾಕಿಸ್ತಾನದ ವಾಯುಪ್ರದೇಶ ಬಳಸುವಂತಿಲ್ಲವೆಂದಾದರೆ, ಭಾರತೀಯ ಮೂಲದ ವಿಮಾನಗಳು ನೆರೆಯ ರಾಷ್ಟ್ರಗಳ ವಾಯುಪ್ರದೇಶಗಳನ್ನು ಬಳಸಿಕೊಳ್ಳುವತ್ತ ಚಿಂತನೆ ನಡೆಸಿವೆ. ಆದರೆ ಈ ಕ್ರಮವು ಜಗತ್ತಿನ ಅತಿ ಒತ್ತಡದ ವಾಯುಮಾರ್ಗದಲ್ಲಿ ಮತ್ತಷ್ಟು ದಟ್ಟಣೆ ಹೆಚ್ಚಿಸಿದೆ. ಇವೆಲ್ಲದರ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಾದ ದುಬೈ, ಅಬುಧಾಬಿ, ಶಾರ್ಜಾ ಪ್ರಯಾಣಿಸುವ ವಿಮಾನಗಳು ಈ ಮೊದಲು ಪಾಕಿಸ್ತಾನ ವಾಯುಪ್ರದೇಶವನ್ನೇ ಬಳಸುವುದು ಸಾಮಾನ್ಯವಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣಿಸುವುದು ತುಸು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ.

ಸಂಯುಕ್ತ ಅರಬ್‌ ರಾಷ್ಟ್ರಗಳತ್ತ ಪ್ರಯಾಣಿಸುವ ವಿಮಾನಗಳು ಅರಬ್ಬೀ ಸಮುದ್ರ ಅಥವಾ ಭಾರತದ ದಕ್ಷಿಣ ಭಾಗದಿಂದ ಪ್ರಯಾಣಿಸಬೇಕಿದೆ. ಇದು ಉತ್ತರ ಭಾರತಕ್ಕೆ ತುಸು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದು ನೇರವಾಗಿ ಪ್ರಯಾಣಿಕರಿಗೆ ಹೊರೆಯಾಗಿದ್ದು, ಟಿಕೆಟ್‌ ದರವು ಸುಮಾರು ಶೇ 8ರಿಂದ ಶೇ 12ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಲ ಕಂಪನಿಗಳು ಅಂದಾಜಿಸಿವೆ.

ಭಾರತೀಯ ವಿಮಾನಯಾನ ಸಂಸ್ಥೆಗಳು ಇಂಥ ಸಮಸ್ಯೆಯನ್ನು ಹಿಂದೆಯೂ ಎದುರಿಸಿದ್ದವೇ?

2019ರಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತ ಪ್ರತೀಕಾರ ತೆಗೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಐದು ತಿಂಗಳು ಮುಚ್ಚಿತ್ತು.

2019ರ ಫೆ. 14ರಂದು ಪುಲ್ವಾಮಾ ಬಳಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಬಾಲಾಕೋಟ್‌ನಲ್ಲಿದ್ದ ನಿಷೇಧಿತ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿ ಫೆ. 26ರಂದು ವಾಯುಸೇನೆ ದಾಳಿ ನಡೆಸಿ ನಾಶಪಡಿಸಿತು. ಈ ಅವಧಿಯಲ್ಲಿ 2019ರ ಜುಲೈ 26ರವರೆಗೆ ವಾಯುಮಾರ್ಗವನ್ನು ಭಾರತೀಯ ವಿಮಾನಗಳಿಗೆ ನಿರ್ಬಂಧಿಸಲಾಗಿತ್ತು.

ಇದರಿಂದಾಗಿ ಫೆ. 26ರಿಂದ ಜುಲೈ 2ರವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳು ಸುಮಾರು ₹540 ಕೋಟಿ ನಷ್ಟ ಅನುಭವಿಸಿದ್ದವು. ಈ ವಿಷಯವನ್ನು ರಾಜ್ಯಸಭೆಗೆ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಏರ್ ಇಂಡಿಯಾಗೆ ₹491 ಕೋಟಿ, ಸ್ಪೈಸ್‌ಜೆಟ್‌ಗೆ ₹30 ಕೋಟಿ, ಇಂಡಿಗೊ ಸಂಸ್ಥೆಗೆ ₹25 ಕೋಟಿ ಮತ್ತು ಗೊ ಫಸ್ಟ್‌ ₹2 ಕೋಟಿಯಷ್ಟು ನಷ್ಟವಾಗಿದೆ ಎಂದು ತಮ್ಮ ವರದಿಯಲ್ಲಿ ಹೇಳಿದ್ದರು.

ಆ ಅವಧಿಯಲ್ಲಿ ಏರ್‌ ಇಂಡಿಯಾದ ವಿಮಾನಗಳು ಅಮೆರಿಕಕ್ಕೆ ನಡೆಸುತ್ತಿದ್ದ ಹಾರಾಟ ಸಮಯ 90 ನಿಮಿಷಗಳಷ್ಟು ಹೆಚ್ಚಳವಾಗಿತ್ತು. ಅಮೆರಿಕದ ವಿಮಾನಗಳು ವಿಯನ್ನಾದಲ್ಲಿಳಿದು ಇಂಧನ ಮರುಪೂರಣ ಮಾಡಿಕೊಳ್ಳುತ್ತಿತ್ತು. ಜತೆಗೆ ಸಿಬ್ಬಂದಿಯೂ ಇಲ್ಲಿ ಬದಲಾಗುತ್ತಿದ್ದರು. ಇದರಿಂದಾಗಿ ಮೂರು ಗಂಟೆಗಳ ವಿಳಂಬವಾಗುತ್ತಿತ್ತು. ಇಂಥದ್ದೇ ಪರಿಸ್ಥಿತಿ ಈಗ ಎದುರಾಗುವ ಸಾದ್ಯತೆ ಇದೆ.

ಪಾಕಿಸ್ತಾನ ವಾಯುಪ್ರದೇಶ ನಿರ್ಬಂಧದಿಂದ ಅಮೆರಿಕ ಮತ್ತು ಯುರೋಪ್‌ಗೆ ಪ್ರಯಾಣಿಸುವ ವಿಮಾನಗಳ ನಿರ್ವಹಣಾ ವೆಚ್ಚವು ಪ್ರತಿ ಟ್ರಿಪ್‌ಗೆ ಕ್ರಮವಾಗಿ ₹20 ಲಕ್ಷ ಮತ್ತು ₹5ಲಕ್ಷ ಹೆಚ್ಚಳವಾಗಿತ್ತು ಎಂದು ಏರ್ ಇಂಡಿಯಾ ಹೇಳಿತ್ತು.

2019 ಮತ್ತು 2025ರಲ್ಲಿ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಒಂದೆಯೇ?

2019ರ ನಂತರದಲ್ಲಿ ಭಾರತದಿಂದ ಪಾಶ್ಚಾತ್ಯ ರಾಷ್ಟ್ರಗಳಿಗೆ ಸಾರಿಗೆ ಸೌಕರ್ಯ ಕಲ್ಪಿಸುವ ವಿಮಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರ್ಗದಲ್ಲಿನ ಈ ಬದಲಾದ ಪರಿಸ್ಥಿತಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದುಬಾರಿಯೇ ಆಗಲಿದೆ.

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಸದ್ಯ ಪ್ರತಿ ವಾರ 1,188 ವಿಮಾನಗಳನ್ನು ಅಂತರರಾಷ್ಟ್ರೀಯ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. 2019ಕ್ಕೆ ಹೋಲಿಸಿದಲ್ಲಿ ಇದು ಸುಮಾರು ಶೇ 56ರಷ್ಟು ಹೆಚ್ಚಳವಾಗಿದೆ. ಈ ನಿರ್ಬಂಧ ಒಂದು ವಾರ ಹೆಚ್ಚಳವಾದಲ್ಲಿ ಟಿಕೆಟ್ ಬೆಲೆಯು ಶೇ 5ರಿಂದ 10ರಷ್ಟು ಹೆಚ್ಚಳವಾಗಲಿದೆ. ಹಿಗೆಯೇ ಹಲವು ದಿನಗಳ ಕಾಲ ಮುಂದುವರಿದರೆ ಖರ್ಚು ವೆಚ್ಚ ಅಂದಾಜಿಸುವುದು ಈ ಹೊತ್ತಿಗೆ ಕಷ್ಟ ಎಂದು ವಿಮಾನಯಾನ ಸಂಸ್ಥೆಗಳ ಅಧಿಕಾರಿಗಳು ಹೇಳಿರುವುದು ವರಿಯಾಗಿದೆ. 

ಮಾರ್ಗ ಬದಲಾವಣೆಯಿಂದ ಉತ್ತರ ಭಾರತದ ಪ್ರದೇಶಗಳಿಗೆ ವಿಮಾನಗಳು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ದೆಹಲಿ, ಅಮೃತಸರ, ಶ್ರೀನಗರ, ಚಂಡೀಗಢ, ಅಹಮದಾಬಾದ್, ಕೋಲ್ಕತ್ತಾ, ಲಖನೌ, ಜೈಪುರ ಮತ್ತು ಪೂರ್ವ ರಾಜ್ಯಗಳಿಗೆ 30ಕ್ಕೂ ಹೆಚ್ಚು ನಿಮಿಷ ಹೆಚ್ಚುವರಿಯಾಗಿ ತೆಗೆದುಕೊಳ್ಳಲಿದೆ. 

ಏರ್ ಇಂಡಿಯಾ ವಿಮಾನಗಳು ಮುಂಬೈ ಮತ್ತು ಅಹಮದಾಬಾದ್‌ ಮೂಲಕ ಅರಬ್ಬೀ ಸಮುದ್ರದ ಮಾರ್ಗದಿಂದ ಮಸ್ಕತ್ ತಲುಪಲಿದೆ. ಅಲ್ಲಿಂದ ಪಶ್ಚಿಮದ ರಾಷ್ಟ್ರಗಳತ್ತ ಪ್ರಯಾಣಿಸಲಿವೆ. ಇದರಿಂದ ಯುರೋಪ್‌ಗೆ ಒಂದೂವರೆ ಗಂಟೆ ಮತ್ತು ದುಬೈಗೆ ಒಂದು ಗಂಟೆ ವಿಮಾನಗಳು ತಡವಾಗಲಿವೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಅಂತರರಾಷ್ಟ್ರೀಯ ಮಾರ್ಗದಲ್ಲಿ ಇಂಥ ಅಸಹಜ ಘಟನೆಗಳು ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲೂ ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಆದ್ಯತೆಯನ್ನು ವಿಮಾನಯಾನ ಸಂಸ್ಥೆಗಳು ನೀಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.