ADVERTISEMENT

ಪಾಕಿಸ್ತಾನದ ಕ್ಷಿಪಣಿಗಳ ಪುಡಿಗಟ್ಟುತ್ತಿರುವ S-400 ಭಾರತೀಯ ಸೇನೆ ಸೇರಿದ ರೋಚಕ ಕಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮೇ 2025, 11:34 IST
Last Updated 10 ಮೇ 2025, 11:34 IST
<div class="paragraphs"><p>ಎಸ್‌–400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆ</p></div>

ಎಸ್‌–400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆ

   
Operation Sindoor: ‘ಪಾಕಿಸ್ತಾನದ ಕ್ಷಿಪಣಿಗಳನ್ನು ಸಮರ್ಥವಾಗಿ ನಾಶ ಮಾಡುತ್ತಿರುವ ಭಾರತದ ಸುದರ್ಶನ ಚಕ್ರ ಎಸ್–400 ಕ್ಷಿಪಣಿ ವ್ಯವಸ್ಥೆ ಭಾರತೀಯ ಸೇನೆ ಸೇರಿದ ಕಥೆಯಿದು

‘ರಷ್ಯಾ ನಿರ್ಮಿತ ಎಸ್‌–400 ಟ್ರಯಂಫ್‌ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದರೆ ಭಾರತದ ಮೇಲೆ ಕಠಿಣ ನಿರ್ಬಂಧ ಹೇರಲಾಗುವುದು’ ಎಂದು 2018ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುಡುಗಿದ್ದರು.

ಆದರೆ ಅಂದಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರ ದಿಟ್ಟ ನಿರ್ಧಾರದಿಂದ ಭಾರತ ಖರೀದಿಸಿದ ಈ ಶಸ್ತ್ರ ಇಂದು ಪಾಕಿಸ್ತಾನದ ಅಪ್ರಚೋದಿತ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿರುವುದು ಮಾತ್ರವಲ್ಲ, ‘ಸುದರ್ಶನ ಚಕ್ರ’ವಾಗಿ ಅವುಗಳನ್ನು ಪುಡಿಗಟ್ಟುತ್ತಿರುವುದು ವರದಿಯಾಗುತ್ತಿದೆ.

ADVERTISEMENT

ಏ. 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಪಾಕಿಸ್ತಾನ ನೆಲೆಯ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ‘ವನ್ನು ಮೇ 7ರಿಂದ ಆರಂಭಿಸಿ, ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆ ಮತ್ತು ನಾಗರಿಕರನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸುತ್ತಿದೆ. ಆದರೆ ಎಸ್‌–400 ಟ್ರಯಂಫ್‌ ಎಂಬ ಸುದರ್ಶನ ಚಕ್ರವು ಗಡಿಯಲ್ಲಿ ನಿಂತು ಶತ್ರುಗಳ ಅಸ್ತ್ರಗಳು ತನ್ನ ನೆಲದೊಳಕ್ಕೆ ಬಾರದಂತೆ ತಡೆಗೋಡೆಯಾಗಿದೆ.

2018ರಲ್ಲೇ ಎಸ್‌–400 ಖರೀದಿಯಾಗಿದ್ದರೂ, ಅದರ ನೈಜ ಬಳಕೆ 2025ರಲ್ಲಾಗುತ್ತಿದೆ. ಹೀಗಾಗಿ ಇದನ್ನು ಪೂರೈಕೆ ಮಾಡಿದ ರಷ್ಯಾ, ಖರೀದಿಸಬೇಡಿ ಎಂದಿದ್ದ ಅಮೆರಿಕ, ಇದೇ ಅಸ್ತ್ರವನ್ನು ಖರೀದಿಸಲು ಪೈಪೋಟಿ ನಡೆಸಿದ್ದ ಚೀನಾ ಮತ್ತು ಟರ್ಕಿ ಸಹಿತ ಜಗತ್ತಿನ ಹಲವು ರಾಷ್ಟ್ರಗಳು ಈಗ ಭಾರತದಲ್ಲಿ ಬಳಕೆಯಾಗುತ್ತಿರುವ ಸುದರ್ಶನ ಚಕ್ರವನ್ನು ಬೆರಗಿನಿಂದ ನೋಡುತ್ತಿವೆ.

ಪಾಕಿಸ್ತಾನಿ ಸೈನಿಕರು ಸೇನಾ ನೆಲೆ ಮತ್ತು ನಾಗರಿಕರನ್ನೇ ಗುರಿಯಾಗಿಸಿ ಜಮ್ಮು, ಉಧಮ್‌ಪುರ ಹಾಗೂ ಪಠಾಣ್‌ಕೋಟ್‌ ಮೇಲೆ ಕಳೆದ ಮೂರು ದಿನಗಳಿಂದ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. ಆದರೆ ಎಸ್‌–400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆಯ ಬಲದಿಂದ ಕೆಲವೇ ಕ್ಷಣಗಳಲ್ಲಿ ಅವೆಲ್ಲವೂ ನೆಲಕಚ್ಚಿ ಬೂದಿಯಾಗುತ್ತಿವೆ. 

ಇಂಥ ಶಕ್ತಿಶಾಲಿ ಅಸ್ತ್ರವನ್ನು ಭಾರತದ ರಕ್ಷಣಾ ವ್ಯವಸ್ಥೆಯ ಬತ್ತಳಿಕೆಗೆ ಸೇರಿಸಿದವರು ಮಾಜಿ ರಕ್ಷಣಾ ಸಚಿವ ದಿ. ಮನೋಹರ ಪರಿಕ್ಕರ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್. ಈ ಇಬ್ಬರ ಪ್ರಯತ್ನದ ಫಲವಾಗಿ ಭಾರತವು ಜಗತ್ತಿನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದುವಂತಾಯಿತು. ಜತೆಗೆ ರಾಜತಾಂತ್ರಿಕ ಸಂಬಂಧವನ್ನೂ ಉಳಿಸಿಕೊಂಡ ಇವರ ಚಾಣಾಕ್ಷ ರೀತಿ ಪ್ರಶಂಸೆಗೂ ಕಾರಣವಾಗಿದೆ.

ಎಸ್.ಜೈಶಂಕರ್ ಮತ್ತು ಮನೋಹರ ಪರಿಕ್ಕರ್

ಪರಿಕ್ಕರ್ ಅವರ ದೂರದೃಷ್ಟಿಯ ಫಲ

ಮನೋಹರ ಪರಿಕ್ಕರ್ ಅವರು 2014ರಿಂದ 2017ರವರೆಗೆ ದೇಶದ ರಕ್ಷಣಾ ಸಚಿವರಾಗಿದ್ದರು. ಐಐಟಿಯಿಂದ ಬಿ.ಟೆಕ್. ಪದವಿ ಹೊಂದಿದ್ದ ಪರಿಕ್ಕರ್‌, ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವಲ್ಲಿ ದೂರದೃಷ್ಟಿ ಹೊಂದಿದ್ದರು. ಅದೇ ಸಂದರ್ಭದಲ್ಲಿ ಶಕ್ತಿಶಾಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ನಿರ್ಧರಿಸಿತ್ತು. ಇಂಥ ಸಂದರ್ಭದಲ್ಲಿ ಭವಿಷ್ಯದ ದೃಷ್ಟಿಕೋನದಲ್ಲಿ ಪರಿಣಾಮಕಾರಿ ಶಸ್ತ್ರವನ್ನು ಹೊಂದುವ ಯೋಜನೆಯನ್ನು ಇವರು ರೂಪಿಸಿದರು. 

ಒಂದೇ ಬಗೆಯ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಯ ಬದಲು, ಹಲವು ಬಗೆಯ ಮತ್ತು ಸಾಮರ್ಥ್ಯದ ಸಾಧನಗಳನ್ನು ಖರೀದಿಸುವ ಯೋಜನೆಯನ್ನು ಪರಿಕ್ಕರ್‌ ರೂಪಿಸಿದರು. ಆ ಮೂಲಕ ಎಂಥದ್ದೇ ವಾಯುದಾಳಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶ ಅವರದ್ದಾಗಿತ್ತು. ಹೀಗಾಗಿ ರಹಸ್ಯ ಹೋರಾಟ ನಡೆಸುವ ವಾಹನಗಳು, ಶಕ್ತಿಶಾಲಿ ಕ್ಷಿಪಣಿಗಳು, ಡ್ರೋನ್‌ ಹಾಗೂ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಖರೀದಿಗೆ ಯೋಜನೆ ರೂಪಿಸಿದರು. ಅದರ ಭಾಗವಾಗಿ ರಷ್ಯಾದ ಎಸ್‌–400 ಟ್ರಯಂಫ್‌ ಭಾರತದ ರಕ್ಷಣಾ ವ್ಯವಸ್ಥೆಯನ್ನು ಸೇರಿತು.

ಕೇವಲ ಶಸ್ತ್ರಾಸ್ತ್ರ ಖರೀದಿಯಷ್ಟೇ ಪರಿಕ್ಕರ್ ಅವರ ಯೋಜನೆಯಾಗಿರಲಿಲ್ಲ. ಹೆಚ್ಚು ಖರ್ಚಿಲ್ಲದ ಮತ್ತು ದೀರ್ಘ ಬಾಳಿಕೆಯ ಸಾಧನವನ್ನು ಹೊಂದುವುದು ಅವರ ಉದ್ದೇಶವಾಗಿತ್ತು. ಹೀಗಾಗಿ, ಚೀನಾ ಮತ್ತು ಟರ್ಕಿ ಖರೀದಿಸಲು ಸಿದ್ಧತೆ ನಡೆಸಿದ್ದ ಎಸ್‌–400 ಅನ್ನು ₹49,300 ಕೋಟಿ ಖರ್ಚು ಮಾಡಿ ಭಾರತಕ್ಕೆ ತರುವಲ್ಲಿ ಸಫಲರಾದರು.

2019ರಲ್ಲಿ ಪರಿಕ್ಕರ್ ಅವರು ಅನಾರೋಗ್ಯದಿಂದ ನಿಧನರಾದರು. ಆದರೆ ಅವರ ಅವಧಿಯಲ್ಲಿ ನಡೆದ ಎಸ್‌–400 ಟ್ರಯಂಫ್ ಖರೀದಿಯ ಭಾಗವಾಗಿ ಶಸ್ತ್ರಾಸ್ತ್ರಗಳು ಭಾರತ ಸೇನೆ ಸೇರಿದವು. ಅದು 2025ರಲ್ಲಿ ಬಳಕೆಯಾಗುತ್ತಿರುವುದು ಮಾತ್ರವಲ್ಲ, ಪರಿಕ್ಕರ್‌ ಅವರ ಕಾರ್ಯವನ್ನು ದೇಶದ ಜನತೆ ಇಂದು ಸ್ಮರಿಸುತ್ತಿದೆ.

ರಾಜತಾಂತ್ರಿಕ ಒತ್ತಡ ನಿಭಾಯಿಸಿದ ಜೈಶಂಕರ್

ಎಸ್‌–400 ಖರೀದಿಗೆ ಭಾರತವು ರಷ್ಯಾದೊಂದಿಗೆ 2018ರಲ್ಲಿ 5.4 ಶತಕೋಟಿ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ಅಮೆರಿಕದಿಂದ ರಾಜತಾಂತ್ರಿಕ ಒತ್ತಡ ಹೆಚ್ಚಾಯಿತು. ರಷ್ಯಾದ ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆ ಖರೀದಿಸಿದರೆ, ಭಾರತದ ಮೇಲೆ ನಿಷೇಧ ಹೇರುವ ಬೆದರಿಕೆಯನ್ನು ಅಮೆರಿಕ ಒಡ್ಡಿತು. ಭಾರತದ ಈ ಖರೀದಿಯ ಹಿಂದೆ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವಿದೆಯೇ ಹೊರತು, ಇತರರ ಮೇಲೆ ಪ್ರಯೋಗಕ್ಕಲ್ಲ ಎಂಬ ಅಂಶವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅಮೆರಿಕಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾದರು.

ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಎಸ್‌–400 ತಂದ ಬದಲಾವಣೆ

ಎಸ್‌–400 ಎನ್ನುವುದು ಕ್ಷಿಪಣಿ ಉಡಾವಣಾ ವಾಹನವೂ ಹೌದು, ಶಕ್ತಿಯನ್ನು ದ್ವಿಗುಣಗೊಳಿಸಿಕೊಂಡು ಶತ್ರುಗಳ ಕ್ಷಿಪಣಿಯನ್ನು ನಾಶಪಡಿಸುವ ಸಾಧನವೂ ಹೌದು. 600 ಕಿ.ಮೀ. ವರೆಗೂ ಗುರಿಯನ್ನು ಬೆನ್ನಟ್ಟಬಲ್ಲದು ಹಾಗೂ ಶತ್ರುಗಳ ಕ್ಷಿಪಣಿಯನ್ನು 400 ಕಿ.ಮೀ. ದೂರದಲ್ಲೇ ಹೊಡೆದುರುಳಿಸಬಲ್ಲದು. ಏಕಕಾಲಕ್ಕೆ 80 ಗುರಿಯನ್ನು ತಲುಪಬಲ್ಲಷ್ಟು ಶಕ್ತಿಶಾಲಿ ಇದು. ಹೀಗಾಗಿ ವಾಯು ಮಾರ್ಗದ ಮೂಲಕ ಎದುರಾಗುವ ಯಾವುದೇ ದಾಳಿಯನ್ನು ಇದು ಸಮರ್ಥವಾಗಿ ಎದುರಿಸಬಲ್ಲದು.

ಮೇ 7, 8 ಹಾಗೂ 9ರಂದು ಪಾಕಿಸ್ತಾನ ಸೇನೆ ನೆಡಸಿದ ಅಪ್ರಚೋದಿತ ಡ್ರೋನ್ ದಾಳಿಯನ್ನು ಸಮ‌ರ್ಥವಾಗಿ ಎದುರಿಸಿದ್ದು ಇದೇ ಎಸ್‌–400 ಟ್ರಯಂಫ್. ಇದರಿಂದಾಗಿ ಭಾರತದ ಗಡಿ ಪ್ರದೇಶಗಳು ಹೆಚ್ಚಿನ ಹಾನಿಗೊಳಗಾಗುವುದು ತಪ್ಪಿತು. ಸೇನಾಧಿಕಾರಿಗಳೂ ಇದನ್ನು ಸ್ಪಷ್ಟಪಡಿಸಿದ್ದು, ಶತ್ರುರಾಷ್ಟ್ರದ ಯಾವುದೇ ದಾಳಿಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದಿರುವುದೇ ಇದಕ್ಕೆ ಸಾಕ್ಷಿ.

ಎಸ್‌–400 ಅನ್ನು ಗಡಿಯಲ್ಲಿ ನಿಲ್ಲಿಸುವುದರ ಜತೆಗೆ, ಭಾರತದ ಏರ್‌ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗೂ ಈ ಸಾಧನವನ್ನು ಅಳವಡಿಸಲಾಗಿದೆ. ರಾಡಾರ್‌ನ ಮಾಹಿತಿಯನ್ನು ಪಡೆಯುವ ಈ ಸಾಧನ, ಅದಕ್ಕೆ ತಕ್ಕಂತೆ ಕ್ಷಿಪಣಿಯನ್ನು ಉಡಾಯಿಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದೆ. ಭಾರತದ ಈ ರಕ್ಷಣಾ ಸಾಧನ ಪಾಕಿಸ್ತಾನ ಮತ್ತು ಚೀನಾಕ್ಕೂ ಭೀತಿ ಹುಟ್ಟಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಎಸ್ 400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ

ಎಸ್‌–400ನಿಂದ ಭಾರತಕ್ಕಾದ ಲಾಭ

  • ನಿರ್ದಿಷ್ಟ ಗುರಿಯನ್ನು ತಲುಪುವ ಇದ ಸಾಮರ್ಥ್ಯದಿಂದಾಗಿ ಶತ್ರು ರಾಷ್ಟ್ರದ ಕ್ಷಿಪಣಿಯನ್ನು ಆಗಸದಲ್ಲೇ ಹೊಡೆದುರುಳಿಸುತ್ತಿದೆ

  • ಶತ್ರುರಾಷ್ಟ್ರದ ವಾಯು ಪ್ರದೇಶವನ್ನು ಪ್ರವೇಶಿಸದೆ, ತನ್ನ ನೆಲದಲ್ಲೇ ನಿಂತು ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಬಹುದಾಗಿದೆ

  • ರಷ್ಯಾದ ಎಸ್‌–400 ಬಳಕೆಯ ಮೂಲಕ ಭಾರತದ ವಿಜ್ಞಾನಿಗಳು ಮತ್ತು ರಕ್ಷಣೆಯ ಯೋಜನೆ ರೂಪಿಸುವವರು ದೀರ್ಘ ಶ್ರೇಣಿಯ ರಾಡಾರ್‌ಗಳ ಅಭಿವೃದ್ಧಿ, ಕ್ಷಿಪಣಿಯ ವೇಗ, ಸಾಮರ್ಥ್ಯವನ್ನು ತ್ವರಿತವಾಗಿ ಅರಿಯುವ ತಂತ್ರಜ್ಞಾನ ಮತ್ತು ವಿವಿಧ ಹಂತಗಳ ರಕ್ಷಣಾ ಸಾಧನಗಳ ಅಭಿವೃದ್ಧಿ ಸಾಧ್ಯವಾಗಿದೆ. ಇದರ ಫಲವಾಗಿ ಸ್ವದೇಶಿ ನಿರ್ಮಿತ ಹೆಚ್ಚು ದೂರ ಕ್ರಮಿಸುವ ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ಅಭಿವೃದ್ಧಿ ಸಾಧ್ಯವಾಗಿದೆ.

2025ರ ಮೇ 8ರ ಬೆಳಿಗ್ಗೆ ಭಾರತದ ಈ ದೈತ್ಯ ವಾಯು ರಕ್ಷಣಾ ವ್ಯವಸ್ಥೆ ಎಸ್–400 ಅಖಾಡಕ್ಕೆ ಇಳಿಯುತ್ತಿದ್ದಂತೆ ಶತ್ರುಪಾಳಯದಲ್ಲಿ ನಡುಕ ಹುಟ್ಟಿಸಿತು. ಡ್ರೋನ್‌ ವಿರುದ್ಧ ಕ್ಷಿಪಣಿಯ ವಿಜಯ ಮಾತ್ರವಲ್ಲ, ಭಾರತದ ದೂರದೃಷ್ಟಿಯ ಚಿಂತನೆ ಮತ್ತು ಯೋಜನೆ ಯಶಸ್ಸೂ ಹೌದು. ದಿ. ಮನೋಹರ ಪರಿಕ್ಕರ್ ಅವರು ಈಗಿಲ್ಲ. ಎಸ್. ಜೈಶಂಕರ್ ಅವರು ರಾಡಾರ್‌ ಕೊಠಡಿಯಲ್ಲಿಲ್ಲ. ಹೀಗಿದ್ದರೂ ಅವರ ಅಂದಿನ ಆ ಪ್ರಯತ್ನ ಭಾರತದ ಇಂದಿನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಯಶಸ್ಸು ಸಾಧಿಸಿದೆ. 

ಮನೋಹರ ಪರಿಕ್ಕರ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಎಸ್‌–400 ಕ್ಷಿಪಣಿ ವ್ಯವಸ್ಥೆ, ರಫೆಲ್ ಯುದ್ಧ ವಿಮಾನ ಖರೀದಿ, ಸೈನಿಕರಿಗೆ ಜಾಕೆಟ್‌ಗಳು ಮತ್ತು ಅತ್ಯಾಧುನಿಕ ಹೆಲ್ಮೆಟ್‌ಗಳ ಖರೀದಿಯಂತ ಮಹತ್ವದ ನಿರ್ಧಾರವನ್ನು ಸ್ಮರಿಸಿ, ತಮ್ಮ ತವರಾದ ಗೋವಾದಲ್ಲಿ ಅವರಿಗೆ ಶನಿವಾರ ಗೌರವ ಸಮರ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.