US India Trade: ಬಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿರುವ ಈ ಕ್ರಮದಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.
ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಹಾಗೂ ಸೇನಾ ಸಾಮಗ್ರಿಗಳನ್ನು ಖರೀದಿ ಮಾಡುತ್ತಿರುವುದಕ್ಕೆ ದಂಡ ವಿಧಿಸುತ್ತಿರುವ ಅಮೆರಿಕದ ಈ ಕ್ರಮವು ಆಗಸ್ಟ್ 1ರಿಂದಲೇ ಜಾರಿಗೆ ಬರುತ್ತಿದೆ. ಅಮೆರಿಕ ಹಾಗೂ ಭಾರತ ವ್ಯಾಪಾರ ಒಪ್ಪಂದದ ಚರ್ಚೆ ನಡೆಯುತ್ತಿರುವ ಹೊತ್ತಿಗೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ.
ಯಾವುದೇ ರಾಷ್ಟ್ರದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಬಕಾರಿ ಅಥವಾ ಆಮದು ಸುಂಕ ಹೇರಲಾಗುತ್ತದೆ. ಆಮದು ಮಾಡಿಕೊಳ್ಳುವವರು ಸರ್ಕಾರಕ್ಕೆ ಈ ಸುಂಕವನ್ನು ಭರಿಸಬೇಕು. ಅಂತಿಮವಾಗಿ, ಈ ಸುಂಕದ ಹೊರೆಯನ್ನು ಆಮದುದಾರರು ಗ್ರಾಹಕರ ಮೇಲೆ ಹೋರಿಸುವುದು ಸಾಮಾನ್ಯ.
ಭಾರತದ ಉತ್ಪನ್ನಗಳ ಮೇಲೆ ಅಮೆರಿಕವು ಶೇ 25ರಷ್ಟು ಸುಂಕ ವಿಧಿಸಿದೆ. ಇದರೊಂದಿಗೆ ರಷ್ಯಾದಿಂದ ಕಚ್ಚಾ ತೈಲ ಹಾಗೂ ಸೇನಾ ಉಪಕರಣಗಳ ಖರೀದಿಗಾಗಿ ಭಾರತಕ್ಕೆ ಅಮೆರಿಕ ದಂಡ ವಿಧಿಸಿದೆ. ಆದರೆ ಈ ದಂಡದ ಪ್ರಮಾಣ ಎಷ್ಟು ಎಂಬುದು ಶ್ವೇತ ಭವನದಿಂದ ಕಾರ್ಯಾದೇಶ ಹೊರಬಿದ್ದ ನಂತರವೇ ತಿಳಿಯಲಿದೆ.
ಭಾರತದಿಂದ ಆಮದಾಗುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಶೇ 50ರಷ್ಟು ಸುಂಕ ಹಾಗೂ ವಾಹನ ಮತ್ತು ವಾಹನಗಳ ಬಿಡಿ ಭಾಗಗಳ ಮೇಲೆ ಶೇ 25ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ. ಉದಾಹರಣೆಗೆ ಜವಳಿ ಉತ್ಪನ್ನಗಳ ಮೇಲೆ ಶೇ 6ರಿಂದ 9ರಷ್ಟು ತೆರಿಗೆ ಸದ್ಯ ಇದೆ. ಈಗ ವಿಧಿಸಿರುವ ಶೇ 25ರಷ್ಟು ಸುಂಕವನ್ನು ಸೇರಿಸಿದಲ್ಲಿ ಅಮೆರಿಕದಲ್ಲಿ ಲಭ್ಯವಾಗುವ ಭಾರತದಲ್ಲಿ ತಯಾರಾದ ಜವಳಿ ಉತ್ಪನ್ನಗಳಿಗೆ ಆ. 1ರಿಂದ ಶೇ 31ರಿಂದ 34ರಷ್ಟು ಸುಂಕ ವಿಧಿಸಲಾಗುತ್ತದೆ. ಇದಕ್ಕೆ ದಂಡವೂ ಹೆಚ್ಚುವರಿಯಾಗಿ ಸೇರಲಿದೆ.
ಭಾರತದಿಂದಾಗಿ ಸಾಕಷ್ಟು ವ್ಯಾಪಾರ ನಷ್ಟ ಅನುಭವಿಸುತ್ತಿರುವುದಾಗಿ ಅಮೆರಿಕ ಹೇಳಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಉತ್ಪನ್ನಗಳ ಮೇಲೆ ನವದೆಹಲಿ ಹೇರುತ್ತಿರುವ ಹೆಚ್ಚಿನ ಸುಂಕವಾಗಿದ್ದು, ಇದು ಭಾರತೀಯ ಮಾರುಕಟ್ಟೆಗೆ ಅಮರಿಕದ ಉತ್ಪನ್ನಗಳ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ವಾಷಿಂಗ್ಟನ್ ಹೇಳಿದೆ.
2021ರಿಂದ 2025ರವರೆಗೆ ಅಮೆರಿಕವು ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಭಾರತದ ಒಟ್ಟು ರಫ್ತಿನ ಶೇ 18ರಷ್ಟು ಪಾಲನ್ನು ಭಾರತ ಹೊಂದಿದೆ. ಜತೆಗೆ ಆಮದು ಪ್ರಮಾಣವು ಶೇ 6.22ರಷ್ಟಿದೆ ಹಾಗೂ ದ್ವಿಪಕ್ಷೀಯ ವ್ಯಾಪಾರ ಪ್ರಮಾಣವು ಶೇ 10.73ರಷ್ಟಿದೆ. 2024–25ರಲ್ಲಿ ದ್ವಿಪಕ್ಷೀಯ ವ್ಯಾಪಾರವು ₹16.30 ಲಕ್ಷ ಕೋಟಿ ಮೀರಿದೆ.
ವರ್ಷದಿಂದ ವರ್ಷಕ್ಕೆ ಅಮೆರಿಕದಿಂದ ಭಾರತದ ವ್ಯಾಪಾರ ವೃದ್ಧಿಸುತ್ತಲೇ ಇದೆ. 2022–23ರಲ್ಲಿ ಇದು ₹2.40 ಲಕ್ಷ ಕೋಟಿ ಇದ್ದ ವಹಿವಾಟು, 2023–24ರಲ್ಲಿ ₹3.06 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2024–25ರಲ್ಲಿ ಇದು ₹3.51 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಭಾರತದ ರಫ್ತು ಪ್ರಮಾಣವು ₹2.51 ಲಕ್ಷ ಕೋಟಿ ಇದ್ದು, ಆಮದು ಪ್ರಮಾಣ ₹2.23 ಲಕ್ಷ ಕೋಟಿ ಇದೆ. ಇದು ₹28 ಸಾವಿರ ಕೋಟಿಯಷ್ಟು ಹೆಚ್ಚುವರಿಯಾಗಿದೆ. ಒಟ್ಟಾರೆಯಾಗಿ ಭಾರತವು ಅಮೆರಿಕದೊಂದಿಗೆ ₹3.88 ಲಕ್ಷ ಕೋಟಿಯಷ್ಟು ಹೆಚ್ಚುವರಿ ವಹಿವಾಟು ಹೊಂದಿದೆ.
ಶಿಕ್ಷಣ, ಡಿಜಿಟಲ್ ಸೇವೆಗಳು, ಆರ್ಥಿಕ ಚಟುವಟಿಕೆ, ರಾಯಧನ ಹಾಗೂ ಶಸ್ತ್ರಾಸ್ತ್ರಗಳ ಮಾರಾಟದಿಂದ ಅಮೆರಿಕವು ಭಾರತದೊಂದಿಗೆ ₹3 ಲಕ್ಷ ಕೋಟಿಯಿಂದ ₹3.5 ಲಕ್ಷ ಕೋಟಿವರೆಗಿನ ಹೆಚ್ಚುವರಿ ವಹಿವಾಟು ಹೊಂದಿದೆ.
2024ರಲ್ಲಿ ಔಷಧ ಹಾಗೂ ಜೈವಿಕ ಉತ್ಪನ್ನಗಳು ಭಾರತದಿಂದ ಅತಿ ಹೆಚ್ಚು (₹70 ಸಾವಿರ ಕೋಟಿ) ರಫ್ತಾಗುತ್ತಿತ್ತು. ದೂರ ಸಂಪರ್ಕ ಸಾಧನಗಳು (₹57 ಸಾವಿರ ಕೋಟಿ), ಬೆಲೆಬಾಳುವ ಹಾಗೂ ಭಾಗಶಃ ಬೆಲೆಬಾಳುವ ಹರಳುಗಳು (₹46 ಸಾವಿರ ಕೋಟಿ), ಪೆಟ್ರೋಲಿಯಂ ಉತ್ಪನ್ನಗಳು (₹36 ಸಾವಿರ ಕೋಟಿ), ವಾಹನ ಮತ್ತು ವಾಹನಗಳ ಬಿಡಿ ಭಾಗಗಳು (₹24 ಸಾವಿರ ಕೋಟಿ), ಚಿನ್ನ ಮತ್ತು ಇತರ ಬೆಲೆಬಾಳುವ ಲೋಹಗಳ ಆಭರಣಗಳು (₹28 ಸಾವಿರ ಕೋಟಿ), ಹತ್ತಿಯಿಂದ ತಯಾರಿಸಿದ ಸಿದ್ಧ ಉಡುಪುಗಳು (₹23 ಸಾವಿರ ಕೋಟಿ) ಹಾಗೂ ಕಬ್ಬಿಣ ಮತ್ತು ಉಕ್ಕು (₹23 ಸಾವಿರ ಕೋಟಿ) ಅಮೆರಿಕಕ್ಕೆ ರಫ್ತಾಗುತ್ತಿದ್ದವು.
ಅಮೆರಿಕದಿಂದ ಆಮದಾಗುತ್ತಿರುವುದರಲ್ಲಿ ಕಚ್ಚಾ ತೈಲ (₹39 ಸಾವಿರ ಕೋಟಿ), ಪೆಟ್ರೋಲಿಯಂ ಉತ್ಪನ್ನಗಳು (₹31 ಸಾವಿರ ಕೋಟಿ), ಕೋಲಾ, ಕೋಕ್ (₹30 ಸಾವಿರ ಕೋಟಿ), ಕತ್ತರಿಸಿದ ಹಾಗೂ ಪಾಲಿಶ್ ಮಾಡಿದ ವಜ್ರ (₹22.7 ಸಾವಿರ ಕೋಟಿ), ಎಲೆಕ್ಟ್ರಿಕ್ ಯಂತ್ರಗಳು (₹12 ಸಾವಿರ ಕೋಟಿ), ವಿಮಾನ, ಬಾಹ್ಯಾಕಾಶ ನೌಕೆ ಹಾಗೂ ಅವುಗಳ ಬಿಡಿಭಾಗಗಳು (₹11 ಸಾವಿರ ಕೋಟಿ) ಹಾಗೂ ಚಿನ್ನ (₹11 ಸಾವಿರ ಕೋಟಿ).
ಆಮದು ಸುಂಕ ಹೆಚ್ಚಳದಿಂದ ಉತ್ಪನ್ನಗಳ ಬೆಲೆಯೂ ಏರುತ್ತದೆ. ಇದರೊಂದಿಗೆ ಭಾರತದೊಂದಿಗೆ ವ್ಯಾಪಾರದಲ್ಲಿ ಪ್ರತಿಸ್ಪರ್ಧೆ ಒಡ್ಡುತ್ತಿರುವ ರಾಷ್ಟ್ರಗಳ ಉತ್ಪನ್ನಗಳನ್ನೇ ಆಮದು ಮಾಡಿಕೊಳ್ಳುವ ರಾಷ್ಟ್ರದ ವ್ಯಾಪಾರಸ್ಥರು ಬಯಸಬಹುದು. ಉದಾಹರಣೆಗೆ ಬಾಂಗ್ಲಾದೇಶ (ಶೇ 35), ವಿಯಟ್ನಾಂ (ಶೇ 20) ಹಾಗೂ ಥಾಯ್ಲೆಂಡ್ (ಶೇ 36) ಹಾಗೂ ಗುಣಮಟ್ಟವೂ ಇಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ರಫ್ತುದಾರರ ಪ್ರಕಾರ, ಕಾರ್ಮಿಕರೇ ಹೆಚ್ಚು ಇರುವ ಜವಳಿ, ಚರ್ಮ ಹಾಗೂ ಇತರ ವಸ್ತುಗಳ ಪಾದರಕ್ಷೆಗಳು, ಬೆಲೆಬಾಳುವ ಹರಳು ಮತ್ತು ಆಭರಣಗಳು, ಕಾರ್ಪೆಟ್ ಮತ್ತು ಕರಕುಶಲ ವಸ್ತುಗಳ ತಯಾರಿಕೆ ಮೇಲೆ ಪ್ರಭಾವ ಬೀರಲಿದೆ.
ದೂರಸಂಪರ್ಕ(ಶೇ 25)
ಹರಳು ಮತ್ತು ಆಭರಣಗಳು– ಶೇ 30ರಿಂದ ಶೇ 38.5 (ಸದ್ಯ ಇರುವುದು ಶೇ 5ರಿಂದ ಶೇ 13.5)
ಆಹಾರ ಮತ್ತು ಕೃಷಿ ಉತ್ಪನ್ನ– ಶೇ 29ರಿಂದ ಶೇ 30 (ಶೇ 14ರಿಂದ ಶೇ 15)
ಸಿದ್ಧ ಉಡುಪುಗಳು ಶೇ 12
ಇವೆಲ್ಲದಕ್ಕೂ ದಂಡ ಪ್ರಮಾಣವೂ ಆ. 1ರಿಂದ ಸೇರಲಿದೆ.
ಹೈನು ಉತ್ಪನ್ನಗಳ ಮೇಲೆ ಅಧಿಕ ಸುಂಕವನ್ನು (ಶೇ 188) ಅಮೆರಿಕ ವಿಧಿಸುತ್ತಿದೆ. ಹಣ್ಣು ಹಾಗೂ ತರಕಾರಿ (ಶೇ 132 ರಷ್ಟು), ಕಾಫಿ ಮತ್ತು ಟೀ, ಕೊಕೊ ಮತ್ತು ಮಸಾಲೆ ಪದಾರ್ಥಗಳು (ಶೇ 53), ಆಹಾರ ಪದಾರ್ಥಗಳು (ಶೇ 193), ಎಣ್ಣೆಕಾಳುಗಳು, ಕೊಪ್ಪ ಮತ್ತು ಎಣ್ಣೆ (ಶೇ 164), ಪಾನೀಯ ಮತ್ತು ತಂಬಾಕು (ಶೇ 150), ಖನಿಜ ಮತ್ತು ಲೋಹ (ಶೇ 187) ಹಾಗೂ ರಾಸಾಯನಿಕ (ಶೇ 56) ಸುಂಕ ವಿಧಿಸಲಾಗುತ್ತಿದೆ.
ಭಾರತದ ಸರಾಸರಿ ಸುಂಕ ದರ ಶೇ 17ರಷ್ಟಿದ್ದು ಇದು ಅಮೆರಿಕದ ಸುಂಕಕ್ಕಿಂತ ಶೇ 3.3ರಷ್ಟಿದೆ. ಪ್ರಮುಖ ಆರ್ಥಿಕತೆ ಹೊಂದಿರುವ ದಕ್ಷಿಣ ಕೊರಿಯಾ (ಶೇ 13.4) ಹಾಗೂ ಚೀನಾ (ಶೇ 7.5) ಸುಂಕ ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.