ADVERTISEMENT

ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಂತೋಷ್‌ ಎಚ್‌. ಡಿ.
Published 24 ಜನವರಿ 2026, 12:30 IST
Last Updated 24 ಜನವರಿ 2026, 12:30 IST
<div class="paragraphs"><p>ಚುನಾವಣೆ(ಸಾಂದರ್ಭಿಕ ಚಿತ್ರ)</p></div>

ಚುನಾವಣೆ(ಸಾಂದರ್ಭಿಕ ಚಿತ್ರ)

   
ಚುನಾವಣೆಯಲ್ಲಿ ಭಾಗಿಯಾಗಲು ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನೂ ಇದನ್ನು ಉಚಿತವಾಗಿ ಪಡೆಯಬಹುದು. ಇದು ಕೇವಲ ಮತ ಚಲಾಯಿಸಲು ಮಾತ್ರವಲ್ಲ, ಭಾರತೀಯನೆಂಬುದರ ಅಧಿಕೃತ ಗುರುತಾಗಿದೆ.

ಚುನಾವಣೆಗಳನ್ನು ಕಾನೂನು ಬದ್ಧವಾಗಿ ನಡೆಸಲು ಚುನಾವಣಾ ಆಯೋಗವನ್ನು ರಚಿಸಲಾಗಿದೆ. ಈ ಆಯೋಗ‌ದ ಸಂಸ್ಥಾಪನಾ ದಿನವಾದ ಜನವರಿ 25ರಂದು ಪ್ರತಿ ವರ್ಷ ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲಾಗುತ್ತದೆ.

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವವೆಂಬ ವ್ಯಾಖ್ಯಾನವಿದೆ. ಇಲ್ಲಿ ಪ್ರಜೆಯೇ ಸಾರ್ವಭೌಮ. ಅವನ ಆಯ್ಕೆಯೇ ಅಂತಿಮ. ಮತದಾರನಿಗಿರುವ ದೊಡ್ಡ ಅಸ್ತ್ರವೇ ಮತದಾನ. ಆದರೆ ಪ್ರಜೆಯೊಬ್ಬ ಮತದಾರನಾಗಬೇಕೆಂದರೆ ಸಂವಿಧಾನ ಬದ್ದವಾಗಿ ಒಂದಷ್ಟು ರೂಪುರೇಷೆಗಳನ್ನು ರೂಪಿಸಲಾಗಿದೆ. ಚುನಾವಣಾ ಆಯೋಗವು ಇದನ್ನು ನಿರ್ವಹಿಸುತ್ತದೆ. ಹಾಗಾದರೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಮಾಡಲು ಇರಬೇಕಾದ ಅರ್ಹತೆಗಳೇನು? ಜೊತೆಗೆ ಮತದಾರನ ವಿಳಾಸ ಬದಲಾವಣೆ ಸೇರಿದಂತೆ ಇತರೆ ಆಕ್ಷೇಪಣೆಗಳನ್ನು ಸಲ್ಲಿಸುವುದು ಹೇಗೆ, ಭರ್ತಿ ಮಾಡಬೇಕಾದ ನಮೂನೆಗಳು ಯಾವುವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.  ‍

ADVERTISEMENT

ಎಪಿಕ್ ಕಾರ್ಡ್‌; ಭಾರತೀಯರ ಗುರುತು

ಚುನಾವಣಾ ಆಯೋಗವು ನಡೆಸುವ ಯಾವುದೇ ಚುನಾವಣೆಯಲ್ಲಿ ಭಾಗವಹಿಸಲು ಮತದಾರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್‌) ಹೊಂದಿರುವುದು ಕಡ್ಡಾಯವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನೂ ಇದನ್ನು ಉಚಿತವಾಗಿ ಪಡೆಯಬಹುದು.

ಮತದಾರರ ಗುರುತಿನ ಚೀಟಿ ಅಥವಾ ವೋಟರ್‌ ಐಡಿಯಲ್ಲಿ ಮುಖ್ಯವಾಗಿ ಮತದಾರರ ಹೆಸರು, ಲಿಂಗ, ಮತದಾರರ ಗುರುತಿನ ಸಂಖ್ಯೆ, ಭಾವಚಿತ್ರ, ತಂದೆ ಹೆಸರು, ಜನ್ಮ ದಿನಾಂಕ, ವಿಳಾಸ, ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹೆಸರು, ಪೂರ್ಣ ವಿಳಾಸ ಹಾಗೂ ಚುನಾವಣಾ ಅಧಿಕಾರಿಯ ಅಧಿಕೃತ ಸಹಿಯನ್ನು ಒಳಗೊಂಡಿರುತ್ತದೆ. ಈಗ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್ ಮೂಲಕ ಮನೆ ಬಾಗಿಲಿಗೇ ಬರುವಂತೆ ಮಾಡಬಹುದಾಗಿದೆ. 

ವಿಳಾಸ ಬದಲಾವಣೆ ಮಾಡುವುದು ಹೇಗೆ? 

ಉದ್ಯೋಗ ಅಥವಾ ಇತರೆ ಕಾರಣಗಳಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದು ಸಾಮಾನ್ಯ. ಆಗ ನಾವು ಈ ಹಿಂದೆ ವಾಸವಿದ್ದ ವಿಳಾಸ, ಪುರಾವೆಗಳನ್ನು ಹೊಂದಿರುತ್ತೇವೆ. ಈಗ ನಾವು ಹೊಸ ಸ್ಥಳದಲ್ಲಿ ನೆಲೆಸಿರುವುದರಿಂದ ಆ ಸ್ಥಳದಲ್ಲಿಯೇ ಮತದಾನ ಮಾಡಬೇಕಾದರೆ, ಮತದಾರರ ಗುರುತಿನ ಚೀಟಿಯಲ್ಲಿ ಸ್ಥಳೀಯ ವಿಳಾಸ ಅಥವಾ ಆ ಕ್ಷೇತ್ರದ ವಿಳಾಸವಿರಬೇಕಾಗುತ್ತದೆ. ಹಾಗಾದರೆ ಈಗಾಗಲೇ ಇರುವಂತಹ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಬದಲಿಸುವುದು ಹೇಗೆ ಅಥವಾ ಹೊಸ ವಿಳಾಸವನ್ನು ಸೇರ್ಪಡೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಇದಕ್ಕೆ ನಮೂನೆ 8ರ ಭರ್ತಿ ಕಡ್ಡಾಯವಾಗಿದೆ.

ಅಗತ್ಯ ದಾಖಲೆಗಳು

  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

  • ವಿಳಾಸದ ಪುರಾವೆಯಾಗಿ ದಾಖಲೆ ಇರಬೇಕು ಉದಾಹರಣೆಗೆ ಆಧಾರ್, ರೇಷನ್ ಕಾರ್ಡ್ ಇತ್ಯಾದಿ.

ವೆಬ್‌ಸೈಟ್‌ನಲ್ಲಿ ವಿಳಾಸ ಬದಲಾವಣೆ ಹೇಗೆ? 

  • https://voters.eci.gov.in/homepage, ಗುರುತಿನ ಚೀಟಿ ಸಂಖ್ಯೆ / ಮೊಬೈಲ್ ನಂಬರ್ / ಇ-ಮೇಲ್ ಐಡಿ ಮೂಲಕ ನೋಂದಾಯಿಸಿಕೊಳ್ಳಿ.

  • ಬಳಿಕ 'Shift to other place' ಎನ್ನುವ ಆಯ್ಕೆಗೆ ಕ್ಲಿಕ್ ಮಾಡಿ. ಅಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿ. ತಕ್ಷಣ ನಿಮ್ಮ ವಿವರಗಳು ಕಾಣಿಸಿಕೊಳ್ಳುತ್ತದೆ. ಯಾವ ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ನಮೂದಿಸಿ. ನಂತರ ಹೊಸ ವಿಳಾಸ ನಮೂದಿಸಿ.

  • ಈಗ ಹೊಸ ವಿಳಾಸದ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಬಳಿಕ Submit ಬಟನ್ ಒತ್ತಿ. ರೆಫರೆನ್ಸ್ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ಭವಿಷ್ಯದಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಈ ರೆಫರೆನ್ಸ್ ಸಂಖ್ಯೆ ಬೇಕಾಗುತ್ತದೆ (ನೆನಪಿಡಿ). ಒಂದು ವೇಳೆ ವಿಧಾನಸಭೆ ಕ್ಷೇತ್ರದ ಪರಿಧಿಯಲ್ಲೇ ವಿಳಾಸ ಬದಲಾಯಿಸುವುದಿದ್ದರೆ, Shifted within Assembly Constituency ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಆ್ಯಪ್ ಮೂಲಕ ಹೇಗೆ?

ಆ್ಯಪ್ ಮೂಲಕ ಈ ಪ್ರಕ್ರಿಯೆ ಮಾಡಲು 'Voter Helpline' ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಮೂನೆ 8 (Form 8) ಆಯ್ಕೆ ಮಾಡಿಕೊಂಡು, ಅದರಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು. ನಿಮ್ಮ ದಾಖಲೆಗಳು ಮಾನ್ಯವಾಗಿದ್ದರೆ ಒಂದು ವಾರದೊಳಗೆ ವಿಳಾಸ ಬದಲಾಗುತ್ತದೆ. 

ಮೃತಪಟ್ಟ ಮತದಾರನ ಹೆಸರನ್ನು ಅಳಿಸುವುದು ಹೇಗೆ..?

ಭಾರತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರೆ ಅವನಿಗೆ ಅಧಿಕೃತವಾಗಿ ನೀಡಿದ ಗುರುತಿನ ಪುರಾವೆಗಳು ರದ್ದುಗೊಳ್ಳುತ್ತವೆ. ಆದರೆ ಅದಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಬಹುದು. ಮೊದಲಿಗೆ ನಮೂನೆ 8 ಅನ್ನು ಭರ್ತಿ ಮಾಡಬೇಕು. ಇದರಲ್ಲಿ ಮತದಾರನ ಎಪಿಕ್‌ ಸಂಖ್ಯೆ, ಡಿಲೀಟ್‌ ಮಾಡಲು ಕಾರಣ ಮತ್ತು ಅರ್ಜಿದಾರರ ವಿವರ ಹಾಗೂ ಮೃತಪಟ್ಟ ವ್ಯಕ್ತಿಯ ಮರಣ ಪ್ರಮಾಣ ಪತ್ರ ಇರಬೇಕಾಗುತ್ತದೆ. ಮತದಾರ ಬೇರೆ ಕ್ಷೇತ್ರಕ್ಕೆ ಶಾಶ್ವತವಾಗಿ ಸ್ಥಳಾಂತರಗೊಂಡರೆ, ಮರಣ ಹೊಂದಿದ್ದರೆ, ಒಂದೇ ಹೆಸರು ಎರಡು ಬಾರಿ ಮತದಾರರ ಪಟ್ಟಿಯಲ್ಲಿ ಇದ್ದರೆ ಅಥವಾ ಭಾರತೀಯ ಪ್ರಜೆಯಲ್ಲದಿದ್ದರೆ ಮಾತ್ರ ಮತದಾರರ ಹೆಸರನ್ನು ಪಟ್ಟಿಯಿಂದ ಸಂಪೂರ್ಣವಾಗಿ ಅಳಿಸಬಹುದು.

ವಿವಾಹವಾದ ವಧು ತಮ್ಮ ವಿಳಾಸ ಬದಲಿಸಿಕೊಳ್ಳುವುದು ಹೇಗೆ..?

ನಮೂನೆ 8ರಲ್ಲಿ ಈ ಹಿಂದೆ ಇದ್ದ ವಿಳಾಸ ಹಾಗೂ ಈಗ ಬದಲಿಯಾಗಬೇಕಾದ ವಿಳಾಸವನ್ನು ನಮೂದಿಸಬೇಕು. ಜೊತೆಗೆ ಪತಿಯ ಗುರುತಿನ ಚೀಟಿಯ ವಿಳಾಸದ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಚುನಾವಣಾ ಆಯೋಗದ ವಿವಿಧ ನಮೂನೆಗಳು

ಚುನಾವಣಾ ಆಯೋಗದ ನಿಯಮದ ಪ್ರಕಾರ ಮತದಾರರ ಗುರುತಿನ ಚೀಟಿಯಲ್ಲಿ ಬದಲಾವಣೆ, ತಿದ್ದುಪಡಿ ಅಥವಾ ಯಾವುದೇ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಪರಿಹರಿಸಿಕೊಳ್ಳಲು ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗಾದರೆ ಯಾವೆಲ್ಲಾ ನಮೂನೆಗಳಿವೆ, ಅವುಗಳ ಉಪಯೋಗವೇನು ಎಂಬುದನ್ನು ತಿಳಿಯೋಣ.

ಮೊದಲ ಬಾರಿ ಮತದಾರ ಪಟ್ಟಿಗೆ ಸೇರುವವರಿಗಾಗಿ...

18 ವರ್ಷ ಪೂರ್ಣಗೊಂಡವರು ಮೊದಲ ಬಾರಿಗೆ ಮತದಾರರಾಗಲು ನಮೂನೆ–6 ಮೂಲಕ ನೋಂದಾಯಿಸಿಕೊಳ್ಳಬಹುದು.

ಬೇಕಾದ ಅಗತ್ಯ ದಾಖಲೆಗಳು: ಹೆಸರು, ಉಪನಾಮ, ವಯಸ್ಸು, ಜನ್ಮ ದಿನಾಂಕ, ಲಿಂಗ, ಸಂಪೂರ್ಣ ವಿಳಾಸ, ಭಾವಚಿತ್ರದ ಜೊತೆಗೆ ವಯಸ್ಸಿನ ಪುರಾವೆಗಳಾದ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ 10ನೇ, 8ನೇ ಅಥವಾ 5ನೇ ತರಗತಿಯ ಅಂಕಪಟ್ಟಿ (ಇವುಗಳಲ್ಲಿ ಯಾವುದಾದರೂ ಒಂದು) ವಾಸಸ್ಥಳದ ಪುರಾವೆಗಾಗಿ ಬ್ಯಾಂಕ್ ಖಾತೆ, ಕಿಸಾನ್ ಅಥವಾ ಅಂಚೆ ಕಚೇರಿ ಪಾಸ್ ಪುಸ್ತಕ ಅಥವಾ ಪಡಿತರ ಚೀಟಿ ಹಾಗೂ ವಿದ್ಯುತ್‌ ಬಿಲ್‌. (ಇವುಗಳಲ್ಲಿ ಯಾವುದಾದರೂ ಒಂದು)

ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗಾಗಿ...

ಭಾರತದ ಮೂಲ ನಿವಾಸಿಯಾಗಿದ್ದು , ಉದ್ಯೋಗ ಅಥವಾ ಇತರೆ ಕಾರಣಗಳಿಗೆ ವಿದೇಶದಲ್ಲಿ ನೆಲೆಸಿರುವವರಿಗೆ ನಮೂನೆ –6ಎ ಮೂಲಕ ನೋಂದಾಯಿಸಿಕೊಳ್ಳಬಹುದು.

ಬೇಕಾದ ಅಗತ್ಯ ದಾಖಲೆಗಳು: ಹೆಸರು, ಉಪನಾಮ, ವಯಸ್ಸು, ಜನ್ಮ ದಿನಾಂಕ, ಲಿಂಗ, ಸಂಪೂರ್ಣ ವಿಳಾಸ, ಭಾವಚಿತ್ರದ ಜೊತೆಗೆ ವೀಸಾದ ವಿವರ, ವಿದೇಶದ ವಿಳಾಸ, ಪಾಸ್‌ ಪೋರ್ಟ್‌ ವಿವರ ಹಾಗೂ ಭಾರತದಲ್ಲಿ ವಾಸಿಸುವ ಖಾಯಂ ವಿಳಾಸದ ಪುರಾವೆಗಳು ಇತ್ಯಾದಿ.

ಮತದಾರರ ಗುರುತಿನ ಚೀಟಿಯಲ್ಲಿ ಬದಲಾವಣೆ ಮಾಡಲು..

ಹೆಸರಿನ ಬದಲಾವಣೆ, ಅಕ್ಷರಗಳ ತಿದ್ದುಪಡಿ, ಅಂಕಿತನಾಮ ಸೇರ್ಪಡೆ, ಆಕ್ಷೇಪಣೆ ಸಲ್ಲಿಸುವವರು ನಮೂನೆ –7 ಮೂಲಕ ನೋಂದಾಯಿಸಿಕೊಳ್ಳಬಹುದು.

ಬೇಕಾದ ಅಗತ್ಯ ದಾಖಲೆಗಳು: ಹೆಸರು, ವಿಳಾಸ, ಮತದಾರ ಗುರುತಿನ ಚೀಟಿಯ ಸಂಖ್ಯೆ, ಮೊಬೈಲ್‌ ಸಂಖ್ಯೆ ಅಗತ್ಯ. ಮತದಾರರ ಪಟ್ಟಿಯಿಂದ ಹೆಸರು ಅಳಿಸಬೇಕಾದರೆ, ಮರಣ ಹೊಂದಿದ ವ್ಯಕ್ತಿಯ ಮರಣ ಪ್ರಮಾಣಪತ್ರದ ನಕಲು ಪ್ರತಿ. ಸ್ಥಳ ವಿಳಾಸ ಬದಲಾವಣೆಯಾಗಬೇಕಾದರೆ, ಸ್ಥಳಾಂತರದ ಬಗ್ಗೆ ಪುರಾವೆಗಳಾದ ಹೊಸ ವಿಳಾಸದ ದಾಖಲೆ ಅಥವಾ ಆಧಾರ್‌ ಇತ್ಯಾದಿ ಸಲ್ಲಿಸುವುದು ಅಗತ್ಯ.

ಮತದಾರರ ವಿಳಾಸ ಬದಲಾವಣೆ ಮಾಡಲು..

ಮತದಾರರ ನಿವಾಸ ಬದಲಾವಣೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿ, ಮತ್ತೊಂದು ಮತದಾರರ ಗುರುತಿನ ಚೀಟಿ ಪಡೆಯಲು ಅಥವಾ ಅಂಗವಿಕಲ ವ್ಯಕ್ತಿಯನ್ನು ಗುರುತಿಸುವುದಕ್ಕೆ ನಮೂನೆ –8 ಮೂಲಕ ನೋಂದಾಯಿಸಿಕೊಳ್ಳಬಹುದು.

ಬೇಕಾದ ಅಗತ್ಯ ದಾಖಲೆಗಳು: ಹೆಸರು, ಮತದಾರರ ಗುರುತಿನ ಚೀಟಿಯ ಸಂಖ್ಯೆ, ಆಧಾರ್‌ ಸಂಖ್ಯೆ, ಮನೆ ವಿಳಾಸ, ಹುಟ್ಟಿದ ದಿನಾಂಕ ಹಾಗೂ ಭಾವಚಿತ್ರ. ಮತದಾರರ ಗುರುತಿನ ಚೀಟಿ ಕಳೆದು ಹೋಗಿದ್ದು, ಹೊಸದನ್ನು ಪಡೆಯಲು ಪೊಲೀಸರಿಂದ ಎಫ್‌ಐಆರ್‌ ಪ್ರತಿಯನ್ನು ಲಗತ್ತಿಸಬೇಕು. 

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ದೃಢೀಕರಣಕ್ಕಾಗಿ..

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡಲು ನಮೂನೆ–6ಬಿ ಮೂಲಕ ನೋಂದಾಯಿಸಿಕೊಳ್ಳಬಹುದು. ಆದರೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ. 

ಬೇಕಾದ ಅಗತ್ಯ ದಾಖಲೆಗಳು: ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಇರಬೇಕು. ವಾಸಸ್ಥಳದ ಪುರಾವೆಗಳಾದ ಪಡಿತರ ಚೀಟಿ, ಬ್ಯಾಂಕ್‌ ಖಾತೆ, ವಿದ್ಯುತ್‌ ಬಿಲ್ ಇವುಗಳಲ್ಲಿ ಯಾವುದಾದರೂ ಒಂದು ಇದ್ದರೆ ಸಾಕು.

ಪ್ರಾತಿನಿಧಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.