ADVERTISEMENT

Explainer: ಓಮೈಕ್ರಾನ್ ಹರಡುವಿಕೆ ತೀವ್ರ; ಇದು ಕೋವಿಡ್ ಅಂತ್ಯಕ್ಕೆ ಮುನ್ನುಡಿಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2022, 12:05 IST
Last Updated 12 ಜನವರಿ 2022, 12:05 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ಜಗತ್ತಿನಾದ್ಯಂತ ತೀವ್ರಗೊಂಡಿದೆ. ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹಾಗೂ ಮರಣ ಪ್ರಮಾಣ ಕಡಿಮೆ ಇದ್ದರೂ ಓಮೈಕ್ರಾನ್ ಹರಡುವಿಕೆ ಹಿಂದಿನ ತಳಿಗಳಿಗಿಂತಲೂ ಹಲವು ಪಟ್ಟು ಹೆಚ್ಚು ಎಂದು ತಜ್ಞರು ತಿಳಿಸಿದ್ದಾರೆ. ಇದು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಆರಂಭವೇ? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಮಾಹಿತಿ;

ಕೋವಿಡ್ ಸಾಂಕ್ರಾಮಿಕ ಅಂತ್ಯಗೊಳ್ಳಲು ನೆರವಾಗಲಿದೆಯೇ ಓಮೈಕ್ರಾನ್?

ಓಮೈಕ್ರಾನ್ ತಳಿಯು ಕೋವಿಡ್‌ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನೆರವಾಗಬಹುದು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ತಜ್ಞೆ ಡಾ. ಮೋನಿಕಾ ಗಾಂಧಿ ಹೇಳಿದ್ದಾರೆ.

ADVERTISEMENT

‘ಓಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಲಸಿಕೆ ಪಡೆದವರಲ್ಲಿಯೂ ಸೋಂಕಿಗೆ ಕಾರಣವಾಗುತ್ತಿದೆ. ಆದರೆ, ಲಸಿಕೆ ಪಡೆಯದವರಲ್ಲಿ ಕೂಡ ಓಮೈಕ್ರಾನ್ ಸೌಮ್ಯ ಲಕ್ಷಣಗಳನ್ನಷ್ಟೇ ಉಂಟುಮಾಡಿದೆ ಎಂಬುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಈ ಕುರಿತು ಹಾಂಕಾಂಗ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ಗಳಲ್ಲಿ ಅಧ್ಯಯನಗಳು ನಡೆದಿವೆ. ಸೌಮ್ಯ ಲಕ್ಷಣಗಳು ಮಾತ್ರ ಕಂಡುಬರಲು ರೂಪಾಂತರ ತಳಿಯಿಂದಾಗಿ ಶ್ವಾಸಕೋಶದ ಕೋಶಗಳಿಗೆ ಹೆಚ್ಚು ಸೋಂಕು ತಗುಲದಿರುವುದು ಕಾರಣವಾಗಿರಬಹುದು. ಓಮೈಕ್ರಾನ್‌ನಿಂದಾಗಿ ಸೋಂಕು ತಗುಲುವುದರಿಂದ ಜನರಲ್ಲಿ ನಿರೋಧಕ ಶಕ್ತಿ ಸೃಷ್ಟಿಯಾಗಬಲ್ಲದು. ಈಗಾಗಲೇ ಲಸಿಕೆ ಪಡೆದವರಲ್ಲಿಯೂ ಮತ್ತಷ್ಟು ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಬಹುದು. ಲಸಿಕೆ ಪಡೆಯದವರ ದೇಹದಲ್ಲಿಯೂ ಕೋವಿಡ್ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಬಹುದು’ ಎಂದು ಮೋನಿಕಾ ಗಾಂಧಿ ಹೇಳಿದ್ದಾರೆ.

ಇನ್ನಷ್ಟು ಪ್ರಬಲ ರೂಪಾಂತರ ಅಥವಾ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಂಡು ಸೋಂಕು ಉಂಟುಮಾಡಬಲ್ಲ ರೂಪಾಂತರ ಸೃಷ್ಟಿಯಾಗದಿದ್ದರೆ ಈಗಾಗಲೇ ಹರಡಿರುವ ಕೊರೊನಾ ವೈರಸ್ ವಿರುದ್ಧ ಓಮೈಕ್ರಾನ್‌ ರಕ್ಷಣೆ ಒದಗಿಸಬಹುದು ಎಂದು ಮೋನಿಕಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ಎಲ್ಲ ತಜ್ಞರೂ ಈ ವಾದವನ್ನು ಒಪ್ಪುವುದಿಲ್ಲ. ಸಾಂಕ್ರಾಮಿಕವು ಅಂದುಕೊಂಡಷ್ಟು ಸುಲಭವಾಗಿ ದೂರವಾಗಲಾರದು. ವಿಶ್ವದ ಬಹುಸಂಖ್ಯೆಯ ಜನರಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗದ ಹೊರತು ಸಾಂಕ್ರಾಮಿಕ ಮರೆಯಾಗದು. ಜಗತ್ತಿನಾದ್ಯಂತ ಮಕ್ಕಳಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ. ಸದ್ಯದಲ್ಲೇ ಸಾಂಕ್ರಾಮಿಕ ಕೊನೆಗೊಳ್ಳಬಹುದು ಎಂಬುದಾಗಿ ಭಾವಿಸುವುದು ತಪ್ಪು ಲೆಕ್ಕಾಚಾರವಾಗುತ್ತದೆ ಎಂದು ಪುಣೆ ಮೂಲದ ರೋಗನಿರೋಧಕ ಶಾಸ್ತ್ರಜ್ಞೆ ಡಾ. ವಿನೀತಾ ಬಾಲ್ ಹೇಳಿದ್ದಾರೆ.

ಕಡಿಮೆ ತೀವ್ರತೆಯ ಕಾಯಿಲೆ ಎಂದು ನಿರ್ಧರಿಸುವುದೂ ಸರಿಯಲ್ಲ ಎನ್ನುತ್ತಾರೆ ದೆಹಲಿಯ ‘ವಿಮ್ಹಾನ್ಸ್ ನಿಯತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ. ಶಂಶೇರ್ ದ್ವಿವೇದಿ.

ಕೋವಿಡ್ ಕಡಿಮೆ ತೀವ್ರತೆಯದ್ದಾಗಿರಲಿ ಹೆಚ್ಚು ತೀವ್ರತೆಯದ್ದಾಗಿರಲಿ ಅದು ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯುವಿಗೆ ಕೂಡ ಕಾರಣವಾಗಬಹುದು ಎಂಬುದನ್ನು ನಿರಾಕರಿಸುವಂತಿಲ್ಲ ಎನ್ನುತ್ತಾರೆ ಅವರು.

ಚಳಿಗಾಲದಲ್ಲಿ ಹೃದಯಾಘಾತ ಸಹಜ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಅಪಾಯ ಹೆಚ್ಚಿದೆ ಎಂದೂ ಅವರು ಹೇಳಿದ್ದಾರೆ.

ಮಾಸ್ಕ್ ಕಡ್ಡಾಯದ ಅಗತ್ಯವೇನು?

ಓಮೈಕ್ರಾನ್ ಕಡಿಮೆ ತೀವ್ರತೆಯದ್ದಾದರೂ ಮಾಸ್ಕ್ ಧರಿಸುವುದು ಅತೀ ಅಗತ್ಯ. ಇದು ಸೋಂಕು ಹರಡುವುದನ್ನು ತಡೆಯಲು ಇರುವ ಸರಳ ವಿಧಾನ ಎಂದು ಡಾ. ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ.

ಓಮೈಕ್ರಾನ್ ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದು ಮುಂದುವರಿಯುತ್ತದೆ ಎಂಬ ವಾಸ್ತವದ ಹೊರತಾಗಿಯೂ, ಮಾಸ್ಕ್ ಧರಿಸುವುದರಿಂದ ಗಾಳಿಯಲ್ಲಿ ವೈರಸ್ ಲೋಡ್ ಹರಡುವಿಕೆ ಕಡಿಮೆ ಮಾಡಬಹುದು. ಸೋಂಕು ಹರಡುವಿಕೆಯ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಓಮೈಕ್ರಾನ್‌, ಇತರ ರೂಪಾಂತರಗಳಿಗೆ ಲಸಿಕೆ ಪರಿಣಾಮಕಾರಿಯೇ?

ಡಾ. ಮೋನಿಕಾ ಗಾಂಧಿ ಅವರ ಪ್ರಕಾರ, ಓಮೈಕ್ರಾನ್‌ ಹಾಗೂ ಇತರ ಯಾವುದೇ ರೂಪಾಂತರ ವಿರುದ್ಧವೂ ಲಸಿಕೆ ಪರಿಣಾಮಕಾರಿ. ಒಂದು ವೇಳೆ ಸೋಂಕು ತಗುಲಿದರೂ ಲಸಿಕೆ ಪಡೆದವರಲ್ಲಿ ಅದರ ತೀವ್ರತೆ ಕಡಿಮೆಯಾಗಿರಲಿದೆ ಎನ್ನುತ್ತಾರವರು.

ಈಗಾಗಲೇ ಸೋಂಕಿತರಾದವರಲ್ಲಿ ಮತ್ತು ಲಸಿಕೆ ಪಡೆದವರಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯಗಳು ವೈರಸ್‌ಗಳಿಂದ ರಕ್ಷಣೆ ಒದಗಿಸಲಿವೆ ಎಂದು ಡಾ. ವಿನೀತಾ ಬಾಲ್ ಕೂಡ ಹೇಳಿದ್ದಾರೆ.

ಲಾಕ್‌ಡೌನ್ ಪರಿಣಾಮಕಾರಿಯೇ?

ಡೆಲ್ಟಾಗೆ ಹೋಲಿಸಿದರೆ ಓಮೈಕ್ರಾನ್‌ ಅಲೆಯ ಸಂದರ್ಭ ಐಸಿಯು, ಆಕ್ಸಿಜನ್ ಬೆಡ್‌ಗಳಿಗೆ ಬೇಡಿಕೆ ಕಡಿಮೆ ಇದೆ. ಆದರೂ ಹೆಚ್ಚು ಜನರಿಗೆ ಸೋಂಕು ಹರಡುತ್ತಿರುವುದು ಹಲವೆಡೆ ಆಸ್ಪತ್ರೆಗಳ ಮಾನವ ಸಂಪನ್ಮೂಲದ ಮೇಲೆ ಒತ್ತಡ ಸೃಷ್ಟಿಸುತ್ತಿದೆ. ಇಂಥ ಸಂದರ್ಭಗಳಲ್ಲಿ ಮಾನವ ಸಂಪನ್ಮೂಲವೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ ಎಂದು ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ.

ಓಮೈಕ್ರಾನ್ ವೇಗವಾಗಿ ಹರಡುತ್ತಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಲಿದೆ. ಹಾಗೆಂದು ಲಾಕ್‌ಡೌನ್‌ ಮಾಡುವುದರಿಂದ ಪ್ರಯೋಜನವಿಲ್ಲ. ಲಾಕ್‌ಡೌನ್‌ಗೆ ವೈಜ್ಞಾನಿಕ ಹಿನ್ನೆಲೆಯಿಲ್ಲ. ಲಾಕ್‌ಡೌನ್‌ನಂಥ ಕ್ರಮಗಳು ಏನಿದ್ದರೂ ಸೋಂಕಿನ ಹರಡುವಿಕೆಯ ವೇಗವನ್ನು ತುಸು ಕಡಿಮೆಗೊಳಿಸಿ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದಷ್ಟೆ ಎಂದು ಡಾ. ದ್ವಿವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.