
ಎಐ ಚಿತ್ರ: ಕಣಕಾಲಮಠ
ಬೆಂಗಳೂರು: 30 ವರ್ಷದ ರೋಹನ್‌ಗೆ (ಹೆಸರು ಬದಲಾಯಿಸಲಾಗಿದೆ) ಉಸಿರಾಟದ ಸೋಂಕು ಕಾಣಿಸಿಕೊಂಡಿತು. ವೈದ್ಯರನ್ನು ಭೇಟಿ ಮಾಡಿದಾಗ, ಅವರು ಸಿಪ್ರೊಫ್ಲಾಕ್ಸಾಸಿನ್ ಎಂಬ ಆ್ಯಂಟಿಬಯೋಟಿಕ್ ನೀಡಿದರು. ವೈದ್ಯರ ಶಿಫಾರಸಿನಂತೆ 7 ದಿನಗಳ ಕಾಲ ಈ ಆ್ಯಂಟಿಬಯೋಟಿಕ್ ತೆಗೆದುಕೊಂಡರೂ ಸೋಂಕು ಕಡಿಮೆಯಾಗಲಿಲ್ಲ. ಆಗ ರೋಹನ್ ಮತ್ತೊಬ್ಬ ವೈದ್ಯರ ಬಳಿ ಹೋದಾಗ ಅವರು ಅಜಿತ್ರೊಮೈಸಿನ್ ಎಂಬ ಬೇರೆ ಆ್ಯಂಟಿಬಯೋಟಿಕ್ ಶಿಫಾರಸು ಮಾಡಿದರು. ಆಗಲೂ ಕೂಡ ರೋಹನ್ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ.
ಬಳಿಕ, ರೋಹನ್ ಅವರ ಕಫವನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಉಸಿರಾಟದ ಸೋಂಕಿಗೆ ಕಾರಣವಾಗಿದ್ದ ಬ್ಯಾಕ್ಟೀರಿಯಾ ಈ ಎರಡೂ ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಅಂಶ ಪ್ರಯೋಗಾಲಯದ ವರದಿಯಿಂದ ಗೊತ್ತಾಯಿತು.
ರೋಹನ್ ಪ್ರಕರಣ ಅವಲೋಕಿಸಿದಾಗ, ಬ್ಯಾಕ್ಟೀರಿಯಾಗಳು ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡ ಕಾರಣ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಆಗ ಆವರಿಗೆ ಇನ್ನೂ ಪ್ರಬಲ ಆ್ಯಂಟಿಬಯೋಟಿಕ್‌ಗಳನ್ನು ನೀಡಬೇಕಾಯಿತು ಎಂಬುದು ಅರಿವಾಯಿತು. ಸಮಯಕ್ಕೆ ಸರಿಯಾಗಿ ಹೆಚ್ಚಿನ ಪರೀಕ್ಷೆಗಳು ಮತ್ತು ಶಕ್ತಿಯುತ ಆ್ಯಂಟಿಬಯೋಟಿಕ್‌ನಿಂದಾಗಿ ಜೀವ ಉಳಿಯಿತು.
ಇಂತಹ ಪ್ರಕರಣಗಳಲ್ಲಿ ಚಿಕಿತ್ಸೆಗೆ ತಗಲುವ ವೆಚ್ಚ ಹೆಚ್ಚಾಗುತ್ತದೆ. ಸಾಮಾನ್ಯ ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾಗಳು ಬೇರೆಯವರಿಗೂ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಾಗಲಿದೆ.
ಈ ಪ್ರಕರಣ ಒಂದು ಉದಾಹರಣೆ ಮಾತ್ರ. ಒಬ್ಬ ವ್ಯಕ್ತಿಯನ್ನು ಬಾಧಿಸುವ ಈ ತೊಂದರೆ ಕ್ರಮೇಣ ಸಮುದಾಯ ಮಟ್ಟದ ಸಮಸ್ಯೆಯಾಗಿ ಪರಿವರ್ತನೆಗೊಳ್ಳುವುದು ಖಚಿತ ಎಂದು ತಜ್ಞರು ಎಚ್ಚರಿಸುತ್ತಾರೆ.
ನಮ್ಮ ಪರಿಸರದಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ. ಅವುಗಳಲ್ಲಿ ಕೆಲವು ಮಾರಕ ಹಾಗೂ ಇನ್ನೂ ಕೆಲವು ಒಳ್ಳೆಯ ಬ್ಯಾಕ್ಟೀರಿಯಾಗಳೂ ಇವೆ. ತಜ್ಞರ ಶಿಫಾರಸು ಇಲ್ಲದೆ ಆ್ಯಂಟಿಬಯೋಟಿಕ್‌ಗಳ ಅಸಮರ್ಪಕ ಬಳಕೆಯಿಂದ ಒಂದೆಡೆ ಬ್ಯಾಕ್ಟೀರಿಯಾಗಳು ಕೆಲ ಸಾಮಾನ್ಯ ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮನುಷ್ಯನ ಪಾಲಿಗೆ ಒಳ್ಳೆಯವು ಎನಿಸಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತಿವೆ. ಈ ಎರಡೂ ಸಂದರ್ಭಗಳಲ್ಲಿ ತೊಂದರೆ ತಪ್ಪಿದ್ದಲ್ಲ. ಇದು ಈಗ ಜಗತ್ತನ್ನೇ ಕಾಡುತ್ತಿರುವ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, ಆ್ಯಂಟಿಬಯೊಟಿಕ್‌ಗಳ ದುರುಪಯೋಗ ಮತ್ತು ಅತಿಯಾದ ಬಳಕೆಯಿಂದ ಉಂಟಾಗುವ ಅತ್ಯಂತ ಗಂಭೀರ ಪರಿಣಾಮವೆಂದರೆ ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟನ್ಸ್ (Anti-Microbial Resistance -AMR).
ಆ್ಯಂಟಿಬಯೋಟಿಕ್‌ಗಳು ಒಂದು ರೀತಿಯ ಆ್ಯಂಟಿಮೈಕ್ರೊಬಿಯಲ್‌ಗಳಾಗಿದ್ದು, ಬ್ಯಾಕ್ಟೀರಿಯಾದಿಂದ ಬರುವ ಸೋಂಕನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಬಳಸುವ ಔಷಧಿಗಳಾಗಿವೆ. ಆ್ಯಂಟಿಬಯೋಟಿಕ್‌ಗಳನ್ನು ಪದೇ ಪದೇ ಬಳಸಿದಾಗ, ಬ್ಯಾಕ್ಟೀರಿಯಾಗಳು ಆ ಔಷಧಿಗಳಿಗೆ ಒಗ್ಗಿಕೊಂಡು, ಅವುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತವೆ. ಹೀಗೆ, ಔಷಧಿಗಳಿಗೆ ಪ್ರತಿಕ್ರಿಯಿಸದ ಬ್ಯಾಕ್ಟೀರಿಯಾಗಳನ್ನು ‘ಸೂಪರ್‌ಬಗ್‌ಗಳು’ ಎಂದು ಕರೆಯಲಾಗುತ್ತದೆ.
ರೋಗಕಾರಕ ಸೂಕ್ಷಾಣುಜೀವಿಗಳಾದ ಬ್ಯಾಕ್ಟೀರಿಯಾಗಳು, ಪರಾವಲಂಬಿ ಜೀವಿಗಳು, ವೈರಸ್‌ಗಳು ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕುಗಳ ಚಿಕಿತ್ಸೆಗೆ ಈ ಸೂಗರ್ ಬಗ್‌ಗಳು ಪ್ರತಿರೋಧ ಒಡ್ಡುತ್ತವೆ. ಇದನ್ನು ಆ್ಯಂಟಿಮೈಕ್ರೊಬಿಯಲ್ ಅಥವಾ ಆ್ಯಂಟಿಬಯೋಟಿಕ್ ಪ್ರತಿರೋಧ (ಎಎಂಆರ್) ಎನ್ನಲಾಗುತ್ತದೆ.
ಆ್ಯಂಟಿಬಯೋಟಿಕ್ ಪ್ರತಿರೋಧ ಕಂಡುಬಂದಾಗ ಇಲ್ಲವೇ ಹೆಚ್ಚಾದಾಗ, ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಇದರಿಂದ ರೋಗ ಹರಡುವಿಕೆ, ತೀವ್ರ ಅನಾರೋಗ್ಯ ಮತ್ತು ಸಾವು– ನೋವು ಹೆಚ್ಚಾಗುತ್ತದೆ. ಸೋಂಕುಗಳು ದೇಹದಲ್ಲೇ ಉಳಿದು, ಇತರರಿಗೆ ಹರಡುವ ಅಪಾಯ ಸಹ ಹೆಚ್ಚುತ್ತದೆ.
ಆ್ಯಂಟಿಬಯೋಟೆಕ್‌ಗಳ ಅತಿಯಾದ ಇಲ್ಲವೇ ಅಜಾಗರೂಕ ಬಳಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ಒ) ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದೆ. 2018 ರಿಂದ 2023ರ ವರೆಗಿನ ದತ್ತಾಂಶಗಳನ್ನು ವಿಶ್ಲೇಷಿಸಿ, ಸಮಗ್ರ ವರದಿಯೊಂದನ್ನು ಸಿದ್ಧಪಡಿಸಿದೆ.
ಆ್ಯಂಟಿಬಯೋಟಿಕ್ ಪ್ರತಿರೋಧಕ್ಕೆ(ಎಎಂಆರ್) ಸಂಬಂಧಿಸಿ 100ಕ್ಕೂ ಅಧಿಕ ದೇಶಗಳಿಂದ ಸಂಗ್ರಹಿಸಿರುವ ದತ್ತಾಂಶವನ್ನು ‘ಗ್ಲೋಬಲ್ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟನ್ಸ್ ಆ್ಯಂಡ್ ಯೂಸ್ ಸರ್ವೆಲನ್ಸ್ ಸಿಸ್ಟಮ್ (ಜಿಎಲ್‌ಎಎಸ್‌ಎಸ್)ನಲ್ಲಿ ಅಳವಡಿಸಿದೆ.
ಎಎಂಆರ್ ಇಂದು ಜಾಗತಿಕ ಆರೋಗ್ಯಕ್ಕೆ ಎದುರಾಗಿರುವ 10 ಅಗ್ರ ಬೆದರಿಕೆಗಳಲ್ಲಿ ಒಂದಾಗಿದೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ, ಸಾಮಾನ್ಯ ಸೋಂಕುಗಳು ಮತ್ತು ಸಣ್ಣ ಗಾಯಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. 2050ರ ವೇಳೆಗೆ, ಎಎಂಆರ್‌ನಿಂದಾಗಿ ವಿಶ್ವದಾದ್ಯಂತ ವಾರ್ಷಿಕ 1 ಕೋಟಿ ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ಸೋಂಕುಗಳ ಚಿಕಿತ್ಸೆ ಕಷ್ಟಕರ ಮತ್ತು ಹೆಚ್ಚು ವೆಚ್ಚದಾಯಕವಾಗುತ್ತದೆ. ರೋಗಿಗಳು ಆಸ್ಪತ್ರೆಗಳಲ್ಲಿ ಇರಬೇಕಾದ ಅವಧಿ ಹೆಚ್ಚುತ್ತದೆ. ಅಂಗಾಂಗ ಕಸಿ ಮತ್ತು ಕಿಮೊಥೆರಪಿಯಂತಹ ಚಿಕಿತ್ಸೆಗಳು ಹೆಚ್ಚು ಅಪಾಯಕಾರಿಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
2025ರ ಕೊನೆಯ ‘ಮನದ ಮಾತು’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆ್ಯಂಟಿಬಯೋಟಿಕ್‌ಗಳ ಬಳಕೆ ಕುರಿತು ಪ್ರಸ್ತಾಪಿಸಿದ್ದರು.
‘ಅನೇಕ ಬ್ಯಾಕ್ಟೀರಿಯಾಗಳು ಪ್ರತಿಜೀವಕಗಳಿಗೆ ಪ್ರತಿರೋಧ ಬೆಳೆಸಿಕೊಂಡಿವೆ. ಹೀಗಾಗಿ, ಆ್ಯಂಟಿಬಯೋಟಿಕ್‌ಗಳ ಬಳಕೆ ಬಗ್ಗೆ ಜನರು ಎಚ್ಚರ ವಹಿಸಬೇಕು. ಅವುಗಳನ್ನು ವೈದ್ಯರ ಸೂಚನೆಯಂತೆ ಮಾತ್ರ ಬಳಸಬೇಕು’ ಎಂದು ಡಿಸೆಂಬರ್ 28ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಮೋದಿ ಸಲಹೆ ನೀಡಿದ್ದರು.
ಆ್ಯಂಟಿಬಯೋಟಿಕ್‌ಗಳ ಅಜಾಗರೂಕ ಬಳಕೆ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಇತ್ತೀಚಿನ ವರದಿಯಲ್ಲಿನ ಅಂಶಗಳನ್ನು ಕೂಡ ಅವರು ಉಲ್ಲೇಖಿಸಿದ್ದರು.
ಹಲವಾರು ಬ್ಯಾಕ್ಟೀರಿಯಾಗಳು ಅನೇಕ ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ವೃದ್ಧಿಸಿಕೊಂಡಿದ್ದು, ಚಿಕಿತ್ಸೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ‘ಎನ್‌ಡಿಎಂ–1’ ಎಂಬುದು ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಪ್ರಮುಖ ಬ್ಯಾಕ್ಟೀರಿಯಾ. ಇದು 2009ರಲ್ಲಿ ಪತ್ತೆಯಾಗಿದೆ. ಆಗ, ನವದೆಹಲಿಗೆ ಭೇಟಿ ನೀಡಿದ್ದ ಸ್ವೀಡನ್ ಪ್ರಜೆಯೊಬ್ಬರಲ್ಲಿ ಈ ಬ್ಯಾಕ್ಟೀರಿಯಾ ಕಾಣಸಿಕೊಂಡಿತ್ತು. ಹೀಗಾಗಿ ಈ ಬ್ಯಾಕ್ಟೀರಿಯಾಕ್ಕೆ ‘ಎನ್‌ಡಿಎಂ–1’ ಎಂದು ಕರೆಲಾಗುತ್ತದೆ.
ಇ–ಕೊಲಿ (Enterobacteriaceae), ಕ್ಲೆಬ್‌ಸಿಯೆಲ್ಲಾ (Klebsiella) ಕರುಳಿನಲ್ಲಿ ಕಂಡು ಬರುವ ಬ್ಯಾಕ್ಟೀರಿಯಾಗಳು. ವಿಆರ್‌ಇ (Enterococcus) ಬ್ಯಾಕ್ಟೀರಿಯಾ ಸೋಂಕಿನಿಂದ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಬ್ಯಾಕ್ಟೀರಿಯಾಗಳು ಬಹುತೇಕ ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳಸಿಕೊಂಡಿವೆ. ಚರ್ಮದ ಸೋಂಕಿಗೆ ಕಾರಣವಾಗುವ (ಎಂಆರ್‌ಎಸ್‌ಎ) ಬ್ಯಾಕ್ಟೀರಿಯಾ ಕೂಡ ಪ್ರತಿರೋಧ ಬೆಳೆಸಿಕೊಂಡಿವೆ ಎಂದು ಬೆಂಗಳೂರಿನಲ್ಲಿ ಅಪೊಲೊ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೃಂದಾವನ್ ಏರಿಯಾನ್ ಆಸ್ಪತ್ರೆಯಲ್ಲಿ ಕನ್ಸಲ್ಟಿಂಗ್ ಫಿಜಿಶಿಯನ್ ಆಗಿರುವ ಡಾ.ಮಧು ಮುದ್ದಯ್ಯ ಹೇಳುತ್ತಾರೆ.
‘ಅನೇಕ ಸೋಂಕುಗಳ ಚಿಕಿತ್ಸೆಯಲ್ಲಿ ಸಿಪ್ರೊಫ್ಲಾಕ್ಸಾಸಿನ್, ಅಮಾಕ್ಸಿಲಿನ್, ಆ್ಯಂಪಿಸಿಲಿನ್, ಅಜಿತ್ರೊಮೈಸಿನ್‌ನಂತಹ ಆ್ಯಂಟಿಬಯೋಟಿಕ್‌ಗಳನ್ನು ಬಳಸಲಾಗುತ್ತದೆ. ಆದರೆ, ಕೆಲ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಂಡಿರುವ ಕಾರಣ ಈ ಆ್ಯಂಟಿಬಯೋಟಿಕ್‌ಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ’ ಎಂದು ವಿವರಿಸುತ್ತಾರೆ.
‘ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಆಸ್ಪತ್ರೆಯ ಐಸಿಯು ಹಾಗೂ ಜನರಲ್ ವಾರ್ಡ್‌ಗಳಲ್ಲಿ ಕಂಡುಬರುತ್ತವೆ. ಒಂದು ಪ್ರದೇಶದಲ್ಲಿ ಕಂಡುಬರುವ ಆ್ಯಂಟಿಬಯೋಟಿಕ್‌ಗೆ ಪ್ರತಿರೋಧ ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾಗಳ ಕುರಿತ ಮಾಹಿತಿಯನ್ನು ಆಯಾ ಪ್ರದೇಶದ ಆಸ್ಪತ್ರೆಗಳು ಇತರ ಆರೋಗ್ಯ ಕೇಂದ್ರಗಳೊಂದಿಗೆ ಹಂಚಿಕೊಳ್ಳುವುದು ಮುಖ್ಯ’ ಎಂದು ಡಾ.ಮಧು ಮುದ್ದಯ್ಯ ಪ್ರತಿಪಾದಿಸುತ್ತಾರೆ.
‘ಎಎಂಆರ್ ಎಂಬುದು ಈಗ ಸಮುದಾಯ ಮಟ್ಟದ ಸಮಸ್ಯೆಯಾಗಿದೆ. ಇಂತಹ ಬ್ಯಾಕ್ಟೀರಿಯಾಗಳ ಕುರಿತು ಮಾಹಿತಿ ಹಂಚಿಕೊಳ್ಳುವ ಹಾಗೂ ನಿರಂತರವಾಗಿ ದಾಖಲೆ ನಿರ್ವಹಿಸುವುದು ಅಗತ್ಯ. ಇದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ರೂಪಿಸಬೇಕು. ನಾನು ಸಿಂಗಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಇಂತಹ ವ್ಯವಸ್ಥೆ ಇತ್ತು. ನಮ್ಮ ದೇಶದಲ್ಲಿಯೂ ಇದನ್ನು ಜಾರಿಗೊಳಿಸಬೇಕು’ ಎನ್ನುವರು.
ಎಎಂಆರ್ ಕಾರ್ಯತಂತ್ರ: ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿ ಪ್ರಕಾರ, ‘ಭಾರತವು ಸೂಪರ್ ಬಗ್‌ಗಳ ಸ್ಫೋಟದ ಕೇಂದ್ರಬಿಂದುವಾಗಲಿದೆ’ ಎಂದು ಎಚ್ಚರಿಸಲಾಗಿದೆ. ದೇಶದ ಶೇ 83ರಷ್ಟು ರೋಗಿಗಳಲ್ಲಿ ಬಹು ಔಷಧಗಳಿಗೆ ಪ್ರತಿರೋಧ ವೃದ್ಧಿಸಿಕೊಂಡಿರುವ ಸೂಕ್ಷ್ಮಾಣುಜೀವಿಗಳು ಕಂಡುಬಂದಿವೆ ಎಂದು ಇದೇ ವರದಿಯಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟನ್ಸ್(ಎಎಂಆರ್) ಕುರಿತು ಸಲಹೆ ನೀಡುವುದಕ್ಕಾಗಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಾ.ಶ್ವೇತವಲ್ಲಿ ರಾಘವನ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿದೆ.
ಡಾ.ಶ್ವೇತವಲ್ಲಿ ನೇತೃತ್ವದ ತಂಡವು ರಾಜ್ಯದ 11 ಜಿಲ್ಲೆಗಳಲ್ಲಿ ಕ್ಷೇತ್ರ ಅಧ್ಯಯನ ಕೈಗೊಂಡಿದ್ದು, ಎಎಂಆರ್ ತಡೆಗಟ್ಟುವ ಕುರಿತು ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಗೆ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ ಎಂದು ಮೂಲಗಳು ಹೇಳಿವೆ.
ಕಾನೂನುಗಳಲ್ಲಿ ಸುಧಾರಣೆ ಅಗತ್ಯ: ‘ಆ್ಯಂಟಿಬಯೋಟಿಕ್‌ಗಳ ದುರ್ಬಳಕೆ ತಡೆಯಲು ಕಾನೂನಿನ ಬಲವೂ ಬೇಕು. ಇದಕ್ಕಾಗಿ, ವಕೀಲ ಭೈರವ ಕುಟ್ಟಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ಕ್ಕೆ ಕೆಲ ತಿದ್ದುಪಡಿಗಳನ್ನು ಶಿಫಾರಸು ಮಾಡಿರುವೆ’ ಎಂದು ಡಾ.ಶ್ವೇತವಲ್ಲಿ ಹೇಳುತ್ತಾರೆ.
‘ಆ್ಯಂಟಿಬಯೋಟಿಕ್‌ಗಳ ತಯಾರಿಕೆ, ಮಾರಾಟ ಹಾಗೂ ಬಳಕೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ರಾಜ್ಯದ ಔಷಧ ನಿಯಂತ್ರಕರಿಗೆ ಸಲ್ಲಿಸಲಾಗಿದೆ. ಅವರ ಮೂಲಕ ಭಾರತೀಯ ಔಷಧ ಮಹಾನಿಯಂತ್ರಕರಿಗೂ (ಡಿಸಿಜಿಐ) ಈ ಶಿಫಾರಸುಗಳನ್ನು ಸಲ್ಲಿಸಲಾಗಿದೆ’ ಎಂದು ಹೇಳುತ್ತಾರೆ.
ವೈದ್ಯರ ಶಿಫಾರಸು ಇಲ್ಲದೆ ಆ್ಯಂಟಿಬಯೋಟಿಕ್‌ಗಳನ್ನು ಔಷಧ ಅಂಗಡಿಗಳಲ್ಲಿ ಮಾರಾಟ ಮಾಡುವುದಕ್ಕೆ ಕಡಿವಾಣ ಬೀಳದಿದ್ದರೆ ಸಾಮಾನ್ಯವಾದ ಸೋಂಕು ಅಥವಾ ರೋಗಗಳಿಗೆ ಪ್ರಬಲ ಔಷಧಗಳನ್ನು ಸೇರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.
* 2023ರಲ್ಲಿ ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳ ಪೈಕಿ ಪ್ರತಿ 6ರಲ್ಲಿ 1 ಪ್ರಕರಣದಲ್ಲಿ ಪ್ರತಿರೋಧ ಕಂಡುಬಂದಿದೆ
* ರೋಗಕಾರಕಗಳು ಹಾಗೂ ಆ್ಯಂಟಿಬಯೋಟಿಕ್‌ಗಳು ಒಟ್ಟುಗೂಡಿದ ಪರಿಣಾಮ ಪ್ರತಿರೋಧದ ಪ್ರಮಾಣದಲ್ಲಿ ಶೇ 40ರಷ್ಟು ಹೆಚ್ಚಳ
* ಜಗತ್ತಿನಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಪ್ರಮಾಣದಲ್ಲಿ ಪ್ರತಿವರ್ಷ ಶೇ5ರಿಂದ ಶೇ15ರಷ್ಟು ಹೆಚ್ಚಳ ಕಂಡುಬರುತ್ತಿದೆ
* ಆ್ಯಂಟಿಬಯೋಟಿಕ್ ಪ್ರತಿರೋಧದಿಂದಾಗಿ ಜಗತ್ತಿನಲ್ಲಿ 2021ರಲ್ಲಿ 14 ಲಕ್ಷ ಜನರು ಮೃತಪಟ್ಟಿದ್ದಾರೆ
* ಮನುಷ್ಯ ಮತ್ತು ಪ್ರಾಣಿಗಳ ಕರುಳಿನಲ್ಲಿ ಇ–ಕೊಲಿ ಎಂಬ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ಪೈಕಿ ಕೆಲ ತಳಿಗಳು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ. ಇವುಗಳ ಪೈಕಿ ಶೇ 40ಕ್ಕೂ ಹೆಚ್ಚು ಬ್ಯಾಕ್ಟೀರಿಯಾಗಳನ್ನು ಸಾಮಾನ್ಯ ಆ್ಯಂಟಿಬಯೋಟಿಕ್‌ನಿಂದ ನಾಶ ಮಾಡಲು ಸಾಧ್ಯವೇ ಇಲ್ಲ
ಆ್ಯಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರುವ ಸೂಕ್ಷ್ಮಾಣುಜೀವಿಗಳು ಆಸ್ಪತ್ರೆಗಳ ಪರಿಸರದಲ್ಲಿ ಮಾತ್ರ ಕಂಡುಬರುವುದಿಲ್ಲ. ಇವು ಸಮುದಾಯದ ಮಟ್ಟದಲ್ಲಿ ಹಾಗೂ ನಮ್ಮ ಸುತ್ತಲಿನ ಪರಿಸರದಲ್ಲಿಯೂ ಕಂಡುಬರುತ್ತವೆ. ಈ ಸಮಸ್ಯೆಯನ್ನು ಎದುರಿಸುವುದಕ್ಕೆ ಭಾರತವು ರಾಜ್ಯಗಳ ಮಟ್ಟದಲ್ಲಿ ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ವಾಸ್ತವಿಕ ಸಂಗತಿಗಳ ಆಧಾರದಲ್ಲಿ ರೂಪಿಸುವ ಜನಕೇಂದ್ರಿತ ಕಾರ್ಯತಂತ್ರ ಅಗತ್ಯ’ ಎಂದು ವೈಜ್ಞಾನಿಕ ನಿಯತಕಾಲಿಕೆ ‘ಲ್ಯಾನ್ಸೆಟ್’ ನಡೆಸಿದ ಅಧ್ಯಯನ ಹೇಳುತ್ತದೆ.
‘ಈ ಅಧ್ಯಯನದಲ್ಲಿ ಹೇಳಿರುವ ಅಂಶಗಳಿಗೆ ಅನುಗುಣವಾದ ಸಮಗ್ರ ಕಾರ್ಯತಂತ್ರವನ್ನು ರೂಪಿಸುವ ಮೂಲಕ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ’ ಎಂದು ಡಾ.ಶ್ವೇತವಲ್ಲಿ ರಾಘವನ್ ಹೇಳುತ್ತಾರೆ. ‘ವೈಜ್ಞಾನಿಕ ತಳಹದಿ ಮಾತ್ರವಲ್ಲ ಜನರು–ಸಮುದಾಯ–ಪರಿಸರದ ಬಗ್ಗೆ ಸಹಾನುಭೂತಿ ಹೊಂದಿರುವಂತಹ ಕಾರ್ಯತಂತ್ರ ಮಾತ್ರ ನಿರೀಕ್ಷಿತ ಬದಲಾವಣೆ ತರಬಲ್ಲದು. ಇದು ಆರೋಗ್ಯ ವಲಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಇದು ಹಲವು ವ್ಯವಸ್ಥೆಗಳಿಗೆ ಅಗತ್ಯವಿರುವ ಕಾರ್ಯತಂತ್ರವಾಗಿದೆ’ ಎಂದೂ ಅವರು ಹೇಳುತ್ತಾರೆ.
‘ಸಿದ್ಧ ಮಾದರಿಯನ್ನು ಇಟ್ಟುಕೊಂಡು ಸಾಮಾನ್ಯ ಕಾರ್ಯತಂತ್ರದ ವರದಿಯನ್ನು ತಯಾರಿಸುವ ಬದಲು ಕರ್ನಾಟಕದ ಜನತೆ ಎಎಂಆರ್ ವಿಚಾರವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ಯೋಜನೆಯನ್ನು ಸಿದ್ಧಪಡಿಸಿರುವೆ. ಜನರ ಅನುಭವಗಳನ್ನು ಇಲ್ಲಿನ ಆರೋಗ್ಯ ವ್ಯವಸ್ಥೆಗಳ ಆಧಾರದಲ್ಲಿ ಸಲಹೆಗಳನ್ನು ನೀಡಲಾಗಿದೆ’ ಎಂದೂ ಹೇಳುತ್ತಾರೆ. ಜನ ಕೇಂದ್ರಿತ ವಿಧಾನ ಆ್ಯಂಟಿಬಯೋಟಿಕ್‌ಗಳ ಲಭ್ಯತೆ ಕೇಂದ್ರಿತ ಹಾಗೂ ಕಾನೂನಿನಲ್ಲಿ ಸುಧಾರಣೆ ತರುವುದು– ಹೀಗೆ ಮೂರು ವಿಧಾನಗಳನ್ನು ಆಧರಿಸಿ ಶಿಫಾರಸುಗಳನ್ನು ಮಾಡಲಾಗಿದೆ ಎನ್ನುತ್ತಾರೆ. ‘ಜಿಲ್ಲೆಗಳಲ್ಲಿ ಕೈಗೊಂಡ ಕ್ಷೇತ್ರ ಅಧ್ಯಯನ ವೇಳೆ 400ಕ್ಕೂ ಹೆಚ್ಚು ಭಾಗೀದಾರರೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಗಿದೆ. ಫಾರ್ಮಾಸಿಸ್ಟ್‌ಗಳು ವೈದ್ಯರು ಔಷಧಗಳ ತಯಾರಕರು ರೋಗಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ’ ಎಂದೂ ಅವರು ಹೇಳುತ್ತಾರೆ.
‘ವಿವಿಧ ಭಾಗೀದಾರರೊಂದಿಗೆ ನಡೆಸಿದ ಸಮಾಲೋಚನೆ ವೇಳೆ ಆ್ಯಂಟಿಬಯೋಟಿಕ್‌ಗಳ ಅಧಿಕ ಬಳಕೆ ಹಾಗೂ ಅಗತ್ಯದ ಸಂದರ್ಭಗಳಲ್ಲಿ ಈ ಔಷಧ ಸಿಗುತ್ತಿಲ್ಲ ಎಂಬ ಪ್ರಮುಖ ಸಂಗತಿಗಳನ್ನು ಗುರುತಿಸಲಾಯಿತು. ಈ ಸಮಸ್ಯೆಗಳನ್ನು ನಿವಾರಿಸಲು ಎರಡು ಪ್ರಮುಖ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದು ನಮ್ಮ ತಂಡಕ್ಕೆ ಮನವರಿಕೆಯಾಯಿತು. ಹೀಗಾಗಿ ಈ ಕುರಿತು ಎರಡು ಸಲಹೆಗಳನ್ನು ಸರ್ಕಾರದ ಮುಂದಿಡಲಾಗಿದೆ’ ಎಂದು ಡಾ.ಶ್ವೇತವಲ್ಲಿ ಹೇಳುತ್ತಾರೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲಾಗುವ ಔಷಧಗಳ ಪಟ್ಟಿಯೊಂದು ಇರಲಿದ್ದು ಇದಕ್ಕೆ ‘ಅಗತ್ಯ ಔಷಧಗಳ ಪಟ್ಟಿ’ ಎನ್ನಲಾಗುತ್ತದೆ. ಆ್ಯಂಟಿಬಯೋಟಿಕ್‌ಗಳನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಬೇಕು. ಇದರಿಂದ ಜಿಲ್ಲೆಯಲ್ಲಿನ ಎಲ್ಲ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಆ್ಯಂಟಿಬಯೋಟಿಕ್‌ಗಳು ಅಗತ್ಯ ಪ್ರಮಾಣದಲ್ಲಿ ಸಿಗುವಂತಾಗುವುದು. ಎಲ್ಲ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಔಷಧಾಲಯಗಳಿಗೆ ಅಗತ್ಯವಿರುವ ಆ್ಯಂಟಿಬಯೋಟಿಕ್‌ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆಗಳ ನಿಗಮ ನಿಯಮಿತವೇ (ಕೆಎಸ್ಎಂಎಸ್‌ಸಿಎಲ್) ಖರೀದಿಸಿ ಸರಬರಾಜು ಮಾಡಬೇಕು ಎಂಬ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಹೇಳುತ್ತಾರೆ.
ಆ್ಯಂಟಿಬಯೋಟಿಕ್‌ಗಳ ಖರೀದಿ ಹಾಗೂ ಅವುಗಳ ಬಳಕೆ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿ ‘ಡಿಜಿಟಲ್ ಡ್ಯಾಶ್‌ಬೋರ್ಡ್’ ರೂಪಿಸಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ ಎಂದೂ ಅವರು ಹೇಳುತ್ತಾರೆ. ಆ್ಯಂಟಿಬಯೋಟಿಕ್‌ಗಳ ವಿಲೇವಾರಿ ಕೂಡ ಮುಖ್ಯ. ಸಮರ್ಪಕವಾಗಿ ವಿಲೇವಾರಿ ಮಾಡದಿದ್ದಾಗ ಸೂಪರ್ ಬಗ್‌ಗಳ ಉತ್ಪತ್ತಿಗೆ ಇವು ಕಾರಣವಾಗುತ್ತವೆ. ಇದು ಮತ್ತೊಂದು ತೆರನಾದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಡಾ.ಶ್ವೇತವಲ್ಲಿ ಹೇಳುತ್ತಾರೆ.
ಆ್ಯಂಟಿಬಯೋಟಿಕ್‌ಗಳ ದುರ್ಬಳಕೆ ಹಾಗೂ ಆ ಮೂಲಕ ಅವುಗಳಿಗೆ ಪ್ರತಿರೋಧ ಬೆಳೆಯುವುದಕ್ಕೆ (ಎಎಂಆರ್) ಹಲವು ಕಾರಣಗಳಿವೆ ಎಂದು ಹಿರಿಯ ವೈದ್ಯ ಡಾ.ಶಂಕರ್ ಸಿರಾ ಹೆಳುತ್ತಾರೆ. ಅದರಲ್ಲೂ ವೈದ್ಯರ ಚೀಟಿ ಇಲ್ಲದೆಯೇ ಈ ಆ್ಯಂಟಿಬಯೋಟಿಕ್‌ಗಳನ್ನು (ಓವರ್–ದಿ–ಕೌಂಟರ್) ಔಷಧ ಅಂಗಡಿಯವರು ನೀಡುತ್ತಿರುವುದು ಪ್ರಮುಖ ಕಾರಣಗಳಲ್ಲೊಂದು. ವಿದೇಶಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಯಾವುದೇ ಔಷಧಗಳನ್ನು ಅಂಗಡಿಯವರು ನೀಡುವುದಿಲ್ಲ ಎಂದು ಸಮಸ್ಯೆಯ ಮತ್ತೊಂದು ಮುಖವನ್ನು ಅವರು ತೆರೆದಿಡುತ್ತಾರೆ. ಓವರ್–ದಿ–ಕೌಂಟರ್ (ಒಟಿಸಿ) ಆ್ಯಂಟಿಬಯೋಟಿಕ್‌ಗಳ ಮಾರಾಟಕ್ಕೆ ಕಡಿವಾಣ ಹಾಕುವುದು ಅಗತ್ಯ. ಸರ್ಕಾರವು ಈ ಸಂಬಂಧ ಸೂಕ್ತವಾದ ನೀತಿ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಪರಿಹಾರ ಎಂದು ಡಾ.ಶಂಕರ್ ಹೇಳುತ್ತಾರೆ. ‘ಎಷ್ಟೊ ಔಷಧ ಮಾರಾಟಗಾರರಿಗೆ ಯಾವ ಔಷಧಗಳನ್ನು ವೈದ್ಯರ ಚೀಟಿ ಇಲ್ಲದೆಯೇ ಕೊಡಬಾರದು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಇನ್ನೊಂದೆಡೆ ನೈತಿಕ ಪ್ರಶ್ನೆಗಳನ್ನೂ ಇದು ಒಳಗೊಂಡಿದೆ’ ಎನ್ನುತ್ತಾರೆ. ‘ನಕಲಿ ವೈದ್ಯರ ಹಾವಳಿ ಗುಣಮಟ್ಟ ರಹಿತ ಔಷಧಗಳು ಕೂಡ ಎಎಂಆರ್ ಸಮಸ್ಯೆ ತೀವ್ರಗೊಳ್ಳುವುದಕ್ಕೆ ಕಾರಣವಾಗುತ್ತಿದೆ’ ಎಂದೂ ಹೇಳಲು ಮರೆಯುವುದಿಲ್ಲ.
ಬ್ಯಾಕ್ಟೀರಿಯಾಗಳು ಪ್ರತಿಜೀವಕಗಳಿಗೆ ಪ್ರತಿರೋಧ ಬೆಳೆಸಿಕೊಂಡಿವೆ ಎಂಬುದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿ ರಕ್ತ ಪರೀಕ್ಷೆ ಮಾಡಿಸುವುದಕ್ಕೆ ವೈದ್ಯರು ಸಲಹೆ ನೀಡುತ್ತಾರೆ. ಅಂದರೆ ವ್ಯಕ್ತಿಯಲ್ಲಿ/ರೋಗಿಯಲ್ಲಿ ಸೆಪ್ಸಿಸ್ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ರಕ್ತ ಪರೀಕ್ಷೆ ಅಗತ್ಯ. ರಕ್ತ ಅಥವಾ ಇತರ ಅಂಗಾಂಶಗಳಲ್ಲಿ ಹಾನಿಕಾರಕ ಸೂಕ್ಷ್ಮಾಣುಜೀವಿಗಳ ಉಪಸ್ಥಿತಿ ಮತ್ತು ಅವುಗಳ ಉಪಸ್ಥಿತಿಗೆ ದೇಹದ ಪ್ರತಿಕ್ರಿಯೆಯಿಂದ ಉಂಟಾಗುವ ಗಂಭೀರ ಸ್ಥಿತಿಯನ್ನು ಸೆಪ್ಸಿಸ್ ಎಂದು ಕರೆಯಲಾಗುತ್ತದೆ. ಇದು ಉಲ್ಬಣಗೊಂಡಾಗ ಕೆಲ ಸಂದರ್ಭಗಳಲ್ಲಿ ಆಘಾತ ಮತ್ತು ಸಾವಿಗೆ ಕಾರಣವಾಗಬಹುದು. ವ್ಯಕ್ತಿ/ರೋಗಿಯ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ವಿವಿಧ ಆ್ಯಂಟಿಬಯೋಟಿಕ್‌ಗಳನ್ನು ಬಳಸಿ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಬ್ಯಾಕ್ಷೀರಿಯಾ ಬೆಳವಣಿಗೆ ಮುಂಧುವರಿದಲ್ಲಿ ಆ ನಿರ್ದಿಷ್ಟ ಆ್ಯಂಟಿಬಯೋಟಿಕ್‌ಗೆ ಅದು ಪ್ರತಿರೋಧ ಬೆಳೆಸಿಕೊಂಡಿದೆ ಎಂದು ನಿರ್ಧರಿಸಲಾಗುತ್ತದೆ.
1928ರ ಅವಧಿ. ಸ್ಕಾಟ್ಲೆಂಡ್‌ನ ವೈದ್ಯವಿಜ್ಞಾನಿ ಹಾಗೂ ಸೂಕ್ಷ್ಮಜೀವಿಶಾಸ್ತ್ರಜ್ಞ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು ಸ್ಟ್ಯಾಫೆಲೊಕಾಕಸ್ ಎಂಬ ಬ್ಯಾಕ್ಷೀರಿಯಾ ಕುರಿತು ಸಂಶೋಧನೆ ನಡೆಸುತ್ತಿದ್ದರು. ಸಂಶೋಧನೆಗಾಗಿ ಬಳಸುತ್ತಿದ್ದ ಗಾಜಿನ ತುಂಡಿನಲ್ಲಿ ಶಿಲೀಂಧ್ರವೊಂದು ಸ್ಟ್ಯಾಫೆಲೊಕಾಕಸ್ ಬ್ಯಾಕ್ಷೀರಿಯಾ ಬೆಳವಣಿಗೆಗೆ ತಡೆ ಒಡ್ಡಿದ್ದನ್ನು ಗಮನಿಸಿ ಅಚ್ಚರಿಗೊಂಡರು. ಪೆನ್ಸಿಲಿಯಮ್ ನೋಟೆಟಮ್ ಎಂಬ ಶಿಲೀಂಧ್ರವು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆದಿತ್ತು. ನಂತರ ಶಿಲೀಂಧ್ರವನ್ನು ಪ್ರತ್ಯೇಕಿಸಿ ಔಷಧದಂತೆ ಬಳಕೆ ಮಾಡಿದರು. ಅದಕ್ಕೆ ಪೆನ್ಸಿಲಿನ್ ಎಂದೂ ಕರೆದರು. ಇದೇ ಜಗತ್ತಿನ ಮೊಟ್ಟ ಮೊದಲ ಆ್ಯಂಟಿಬಯೋಟಿಕ್ (ಪ್ರತಿಜೀವಕ) ಎಂದೆನಿಸಿತು. ಆಕಸ್ಮಿಕವಾಗಿ ಸಂಶೋಧನೆಯಾದ ಪೆನ್ಸಿಲಿನ್‌ನಿಂದಾಗಿ ವೈದ್ಯಕೀಯ ಲೋಕದಲ್ಲಿ ಹೊಸ ಶಕೆಯೇ ಆರಂಭವಾಯಿತು. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿನ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂತು. ಪೆನ್ಸಿಲಿನ್ ಅನ್ನು ಎಲ್ಲ ಸೋಂಕುಗಳಿಗೆ ‘ರಾಮ ಬಾಣ’ ಎಂದೇ ಕರೆಯಲಾಗುತ್ತಿತ್ತು. ಈ ಪ್ರತಿಜೀವಕದ ಸಂಶೋಧನೆಗಾಗಿ ಫ್ಲೆಮಿಂಗ್ ಅವರಿಗೆ 1945ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪಾರಿತೋಷಕ ಕೂಡ ಲಭಿಸಿತು.
ಇದೇ ಮೊದಲ ಬಾರಿಗೆ ಭಾರತದಲ್ಲಿ ಎಎಂಆರ್ ಕುರಿತ ಸಮಗ್ರ ಕಾರ್ಯತಂತ್ರ ರೂಪಿಸಲಾಗಿದೆ. ಸಹಾನುಭೂತಿ ಹಾಗೂ ವಾಸ್ತವಿಕತೆಯೇ ಈ ಕಾರ್ಯತಂತ್ರದ ಬುನಾದಿಯಾಗಿದೆ.–ಡಾ.ಶ್ವೇತವಲ್ಲಿ ರಾಘವನ್, ಸಲಹೆಗಾರ್ತಿ ಎಎಂಆರ್ ಕುರಿತ ಕಾರ್ಯತಂತ್ರ ಕರ್ನಾಟಕ
ದಿನದಿಂದ ದಿನಕ್ಕೆ ಆಹಾರದ ಕಲಬೆರಕೆ ಹೆಚ್ಚುತ್ತಿದೆ. ಇದರಿಂದ ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಆ್ಯಂಟಿಬಯೋಟಿಕ್‌ಗಳಿಗೆ ಬ್ಯಾಕ್ಟೀರಿಯಾಗಳು ಪ್ರತಿರೋಧ ಬೆಳೆಸಿಕೊಂಡಾಗ ಚಿಕಿತ್ಸೆ ಕಠಿಣವಾಗುವುದು. ರೋಗಿಗಳಿಗೆ ಹೆಚ್ಚು ಶಕ್ತಿಶಾಲಿ ಆ್ಯಂಟಿಬಯೋಟಿಕ್‌ಗಳನ್ನು ನೀಡಬೇಕಾಗುತ್ತದೆ. ಇದು ಆರ್ಥಿಕ ಹೊರೆಯನ್ನೂ ಹೆಚ್ಚಿಸುತ್ತದೆ.–ಡಾ.ಶಂಕರ್ ಸಿರಾ, ಹಿರಿಯ ವೈದ್ಯಾಧಿಕಾರಿ ಬೆಂಗಳೂರು ಆಸ್ಪತ್ರೆ
ಜಗತ್ತಿನಾದ್ಯಂತ ಕೋವಿಡ್ ಅವಧಿಯಲ್ಲಿ ಮೃತಪಟ್ಟ ಜನರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಪ್ರತಿ ವರ್ಷ ಆ್ಯಂಟಿಬಯೋಟಿಕ್ ಪ್ರತಿರೋಧ ಬೆಳೆಸಿಕೊಳ್ಳುವುದರಿಂದ ಸಾಯುತ್ತಿದ್ದಾರೆ. ಇತ್ತೀಚೆಗೆ ಸಮುದಾಯದಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಾಗುತ್ತಿದೆ. ಒಂದು ರೀತಿ ಗಂಡಾಂತರ ಎದುರಿಸುತ್ತಿದ್ದೇವೆ. ಕುಕ್ಕುಟೋದ್ಯಮ, ಪಶು ಸಂಗೋಪನೆ ಕ್ಷೇತ್ರದಲ್ಲೂ ಆ್ಯಂಟಿಬಯೋಟಿಕ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಮನುಷ್ಯರ ಜೊತೆಗೆ, ಪರಿಸರದ ಮೇಲೂ ದುಷ್ಪರಿಣಾಮಬೀರುತ್ತಿದೆ. ಔಷಧ ಕಂಪನಿಗಳು ಜಾಹಿರಾತಿನ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಇದಕ್ಕೆ ಪರಿಹಾರವೆಂದರೆ, ಕಂಪನಿಗಳ ಆ್ಯಂಟಿಬಯೋಟಿಕ್ ಬಳಕೆಯ ಉತ್ತೇಜನದ ಪ್ರಚಾರದ (ಜಾಹಿರಾತು) ಮೇಲೆ ಸರ್ಕಾರ ನಿಯಂತ್ರಣ ಹೇರಬೇಕು. ‘ಪ್ರಚಾರ’ದಲ್ಲಿ ಕೇವಲ ವೈಜ್ಞಾನಿಕ ಅಂಶಗಳಷ್ಟೇ ಇರಬೇಕೆಂಬ ನಿಬಂಧನೆ ವಿಧಿಸಬೇಕು. ಮುಖ್ಯವಾಗಿ, ಆ್ಯಂಟಿಬಯೋಟಿಕ್ ಕುರಿತು ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು.-ಡಾ. ಗೋಪಾಲ ದಾಬಡೆ, ಅಧ್ಯಕ್ಷರು, ಡ್ರಗ್ ಆಕ್ಷನ್ ಫೋರಂ – ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.