
ಬೆಂಗಳೂರು: ಭಾರಿ ವಿರೋಧದ ಕಾರಣಕ್ಕೆ ಸ್ತಬ್ಧಗೊಂಡ ಬಸವೇಶ್ವರ ವೃತ್ತ–ಹೆಬ್ಬಾಳವರೆಗಿನ ‘ಸ್ಟೀಲ್ ಬ್ರಿಡ್ಜ್’, ಇದೇ ಮಾರ್ಗದಲ್ಲಿ ನಿರ್ಮಿಸಲು ಆಶಿಸಿ, ಅನುಷ್ಠಾನವಾಗದೇ ಹೋದ ‘ಸುರಂಗ ರಸ್ತೆ’ಯ ಯೋಜನೆಗಳ ನೆನಪು ಮರೆಯಾಗುವ ಮುನ್ನವೇ, ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲು ತಯಾರಿ ನಡೆಸುತ್ತಿರುವ ಮಹತ್ವಾಕಾಂಕ್ಷೆಯ ‘ಸುರಂಗ ರಸ್ತೆ’ ಯೋಜನೆ ವಿವಾದದ ತರಂಗದಲ್ಲಿ ಸಿಲುಕಿಕೊಂಡಿದೆ.
2013–2018ರ ಅವಧಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ (ಉಕ್ಕಿನ ಸೇತುವೆ) ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಬಸವೇಶ್ವರ ವೃತ್ತ–ಹೆಬ್ಬಾಳದವರೆಗಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇದೊಂದೇ ಪರ್ಯಾಯ ಮಾರ್ಗ ಎಂದು ಸರ್ಕಾರ ಪ್ರತಿಪಾದಿಸಿತ್ತು. ಸಾರ್ವಜನಿಕರು, ಪರಿಸರವಾದಿಗಳ ವಿರೋಧದ ಕಾರಣಕ್ಕೆ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿತು.
ಎಚ್.ಡಿ. ಕುಮಾರಸ್ವಾಮಿ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಮಾರ್ಗದಲ್ಲಿ ಸುರಂಗ ರಸ್ತೆಯನ್ನು ನಿರ್ಮಿಸುವ ಯೋಜನೆಯ ಕನಸು ಕಂಡಿದ್ದರು. ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡಿದ್ದರಿಂದಾಗಿ, ಯೋಜನೆ ದಡ ಹತ್ತಲಿಲ್ಲ. ಈಗಿನ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಂತಹದೇ ಮತ್ತೊಂದು ಯೋಜನೆಯ ಮಹಾಕನಸನ್ನು ಹೊತ್ತುಕೊಂಡಿದ್ದಾರೆ.
ಅವೈಜ್ಞಾನಿಕ ಹಾಗೂ ದೋಷಯುಕ್ತ ಸಮಗ್ರ ಯೋಜನಾ ವರದಿ(ಡಿಪಿಆರ್), ಸುರಂಗ ರಸ್ತೆಯ ಧಾರಣಾ ಸಾಮರ್ಥ್ಯಕ್ಕೆ ಹೊಂದುತ್ತದೆಯೇ ಎಂಬುದನ್ನು ದೃಢಪಡಿಸಲು ಮಣ್ಣು ಪರೀಕ್ಷೆ ನಡೆಸದೇ, ಪಾರಿಸಾರಿಕ ಹಾನಿಯ ಅಂದಾಜು ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
‘ಎಲ್ಲವನ್ನೂ ಸರಿಪಡಿಸಿಯೇ ಯೋಜನೆ ಅನುಷ್ಠಾನ ಮಾಡುತ್ತೇವೆ’ ಎಂದು ಶಿವಕುಮಾರ್ ಅವರು ಪ್ರತಿಪಾದಿಸುತ್ತಿದ್ದರೂ, ಅವರ ಸ್ಪಂದನೆ ಸಮಾಧಾಕರವಾಗಿಲ್ಲ ಎಂದು ಸುರಂಗ ರಸ್ತೆಯ ವಿರೋಧಿಗಳು ತಕರಾರು ಎತ್ತಿದ್ದಾರೆ. ಹೀಗಾಗಿ, ಸುರಂಗ ರಸ್ತೆ ಯೋಜನೆ ಗೊಂದಲಕ್ಕೆ ಸಿಲುಕಿದೆ.
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹತ್ತಾರು ವರ್ಷಗಳಲ್ಲಿ ₹30 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬೆಂಗಳೂರಿನ ರಸ್ತೆಗಳಿಗೆ ಸುರಿಯಲಾಗಿದ್ದರೂ ವಾಹನ ಸವಾರರಿಗೆ ರಸ್ತೆಯ ನರಕಯಾತನೆ ತಪ್ಪಿಲ್ಲ. ಸಂಚಾರ ದಟ್ಟಣೆಯಲ್ಲಿ ಸಿಲುಕಿ, ಬಿಸಿಲು, ಮಳೆಯಲ್ಲಿ ಹೈರಾಣಾಗುವುದರಿಂದ ಜನರನ್ನು ಪಾರು ಮಾಡಲು ಈವರೆಗೆ ಆಳಿದವರಿಗೆ ಸಾಧ್ಯವೂ ಆಗಿಲ್ಲ.
‘ಇದಕ್ಕೆಲ್ಲ ಪರಿಹಾರ ನೀಡುತ್ತೇವೆ’ ಎಂಬ ಏಕವಾದದಡಿ ‘ಸುರಂಗ ರಸ್ತೆ’ಯನ್ನು ತೋರಿಸಲಾಗುತ್ತಿದೆ.
‘ಮಣ್ಣು ಪರೀಕ್ಷೆ ಮಾಡದೇ ಭೂಗರ್ಭವನ್ನೇ ಸೀಳುವ ಯೋಜನೆ ಇದಾಗಿದೆ. ಅಂತರ್ಜಲದ ಬುಡವನ್ನೇ ಕೊರೆಯುವ ಸುರಂಗ, ಕೆರೆ, ಉದ್ಯಾನಗಳನ್ನೂ ಆಪೋಶನ ತೆಗೆದುಕೊಳ್ಳಲು ಮುಂದಾಗಲಿದೆ. ಭೂವೈಜ್ಞಾನಿಕ ಪರೀಕ್ಷೆ, ಪರಿಸರಸೂಕ್ಷ್ಮಗಳ ಗೊಂದಲದಲ್ಲಿರುವ ಸುರಂಗ ರಸ್ತೆ ಯೋಜನೆ, ಸುಗಮ ಸಂಚಾರದ ತರಂಗಗಳನ್ನು ಮೀಟುವುದೇ ಎಂಬ ಯಕ್ಷಪ್ರಶ್ನೆಗೆ ಉತ್ತರವೆಲ್ಲಿ’ ಎಂದು ಯೋಜನೆಯನ್ನು ವಿರೋಧಿಸುತ್ತಿರುವ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಭೂಗರ್ಭದಲ್ಲಿ ಕೊರೆಯುವ ಸುರಂಗ ರಸ್ತೆ ಯೋಜನೆಗೆ ಮೊದಲು ಮಾಡಬೇಕಾದ ಕೆಲಸವೆಂದರೆ ಭೂತಳದ ಮಣ್ಣಿನ ಪದರ ಹಾಗೂ ಶಿಲಾ ಸಾಮರ್ಥ್ಯದ ಅಧ್ಯಯನ. ಈ ಬಗ್ಗೆ ಸಾಮಾನ್ಯ ಜ್ಞಾನವಿಲ್ಲದ ಎಂಜಿನಿಯರ್‌ಗಳು ಅರ್ಧ ಶತಕೋಟಿಗೂ ಹೆಚ್ಚು ವೆಚ್ಚದ ಸುರಂಗ ರಸ್ತೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಿ, ಟೆಂಡರ್ ಅನ್ನೂ ಆಹ್ವಾನಿಸಿದ್ದಾರೆ. ಅಷ್ಟೇ ಅಲ್ಲ, ಭೂಮಿ ಮೇಲ್ಭಾಗ ಹಾಗೂ ಅದರ ಒಳಗೆ ನಡೆಯುವ ಸುರಂಗ ರಸ್ತೆಯ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನವನ್ನೂ (ಇಐಎ) ಮಾಡದೆ ಯೋಜನೆ ಮಾಡುತ್ತೇವೆ ಎನ್ನುತ್ತಿರುವುದು ಜನರನ್ನು ಮೂರ್ಖರನ್ನಾಗಿಸುವ ಕ್ರಮ ಎಂಬುದು ಹೋರಾಟಗಾರರ ವಾದ.
ಸುರಂಗ ರಸ್ತೆಯ ಸಂಪೂರ್ಣ ವಿನ್ಯಾಸ, ಯಾವ ರೀತಿಯ ಅನುಕೂಲಗಳಾಗುತ್ತವೆ, ಯಾವುದರಿಂದ ತೊಂದರೆ ಇದೆ ಅಥವಾ ಸಮಸ್ಯೆ ನಿವಾರಿಸಲಾಗುತ್ತದೆ ಎಂಬುದೂ ಸೇರಿದಂತೆ ಯಾವ ಮಾಹಿತಿಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಸುರಂಗ ರಸ್ತೆ ಯೋಜನೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ (ಬಿ–ಸ್ಮೈಲ್), ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿಕೊಂಡಿದ್ದರೂ, ತಳಮಟ್ಟದಲ್ಲಿ ಆಗಬೇಕಾದಂತಹ ಕೆಲಸಗಳನ್ನೇ ಮಾಡಿಲ್ಲ. ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ತಜ್ಞರ ಸಲಹೆ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆದಿಲ್ಲ ಎನ್ನುತ್ತಾರೆ ಅವರು.
ಐದಾರು ಕೋಟಿ ರೂಪಾಯಿ ವೆಚ್ಚ ಮಾಡಿ ಡಿಪಿಆರ್ ಅನ್ನೂ ತಯಾರಿಸಲಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಸುರಂಗ ರಸ್ತೆಯ ಡಿಪಿಆರ್‌ನಲ್ಲಿ ಮುಂಬೈನ ಪ್ರದೇಶಗಳು ಸೇರಿಕೊಂಡಿದ್ದವು. ಬೇರೊಂದು ಯೋಜನೆಯ ವಿವರಗಳನ್ನು ‘ಕಟ್ ಆ್ಯಂಡ್ ಪೇಸ್ಟ್’ ಮಾಡಿದ್ದರಿಂದ ಇಂತಹ ಪ್ರಮಾದವಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ಡಿಪಿಆರ್ ಸಿದ್ಧಪಡಿಸಿದವರಿಗೆ ಹಿಂದಿನ ಬಿಬಿಎಂಪಿ ಆಯುಕ್ತರು ₹5 ಲಕ್ಷ ದಂಡವನ್ನಷ್ಟೇ ವಿಧಿಸಿದರು. ಜನಾಕ್ರೋಶ ಹೆಚ್ಚಾದಾಗ ಸರ್ಕಾರ, ಸುರಂಗ ರಸ್ತೆಯ ಡಿಪಿಆರ್ ಅನ್ನು ಪರಿಶೀಲಿಸಲು ‘ತಜ್ಞರ ಸಮಿತಿ’ಯನ್ನು ರಚಿಸಿತು. ಮಣ್ಣಿನ ಪರೀಕ್ಷೆ, ಭೂವೈಜ್ಞಾನಿಕ ಪರೀಕ್ಷೆಗಳೇ ಆಗಿಲ್ಲ ಎಂದು ಆ ತಜ್ಞರ ಸಮಿತಿಯೇ ಹೇಳಿದೆ.
ಬೆಂಗಳೂರಿನ ‘ಕಿರೀಟ’ದಂತಿರುವ ಲಾಲ್‌ಬಾಗ್‌ನಲ್ಲಿ ಆರು ಎಕರೆ ಜಾಗವನ್ನು ಸುರಂಗ ರಸ್ತೆ ಕಬಳಿಸಲಿರುವುದು ಪರಿಸರ ಕಾರ್ಯಕರ್ತರನ್ನು ಕೆರಳಿಸಿದೆ. ಸ್ಯಾಂಕಿ ಕೆರೆಯ ದಡದಲ್ಲಿ ಸುರಂಗ ರಸ್ತೆಯ ರ‍್ಯಾಂಪ್ ಹಾಗೂ ಹೆಬ್ಬಾಳ ಕೆರೆಯ ದಡದಲ್ಲಿ ರಾಜಕಾಲುವೆಯನ್ನೇ ಪಕ್ಕಕ್ಕೆ ಸರಿಸಿ ನಿರ್ಮಿಸಲಾಗುವ ‘ಎಕ್ಸಿಟ್ ರ್‍ಯಾಂಪ್’ಗಳ ನಿರ್ಮಾಣದ ಮಾಹಿತಿಗಳು ಹೋರಾಟಗಾರರ ಕೋಪಕ್ಕೆ ಕಾರಣ.
‘ನಮ್ಮ ಮೆಟ್ರೊ’ ರೈಲುಗಳ ಸುರಂಗ ಮಾರ್ಗದ ಬಹುಪಾಲು ಹಾಲಿ ಇರುವ ರಸ್ತೆಯ ತಳಭಾಗದಲ್ಲಿ ಇದೆ. ಉದ್ದೇಶಿತ ಸುರಂಗ ರಸ್ತೆಯು ಹಾಲಿ ರಸ್ತೆಯ ಕೆಳಭಾಗದಲ್ಲಿ ಮಾತ್ರ ಸಾಗುವುದಿಲ್ಲ. ಮುಖ್ಯ ಟನಲ್‌ಗಳಿಂದ (ಎರಡು ಟ್ಯೂಬ್) ಪ್ರವೇಶ ಮತ್ತು ನಿರ್ಗಮನದ ರ್‍ಯಾಂಪ್‌ಗಳು ಸುಮಾರು ಒಂದೂವರೆ ಕಿಲೋ ಮೀಟರ್ ಸಾಗಿ ನೆಲಮಟ್ಟದ ರಸ್ತೆಯ ಜಂಕ್ಷನ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ತಲಾ 45 ಮೀಟರ್ ಸುತ್ತಳತೆ ಇರುವ ಮುಖ್ಯವಾದ ಎರಡು ಟ್ಯೂಬ್‌ಗಳು ಭೂಮೇಲ್ಮೈನಿಂದ ಭೂಗರ್ಭದ 100 ಅಡಿ ಕೆಳಗೆ ಕಟ್ಟಡ, ಸಂಕೀರ್ಣ, ಅಪಾರ್ಟ್‌ಮೆಂಟ್ ಸೇರಿದಂತೆ ಬೃಹತ್ ನಿರ್ಮಾಣಗಳ ಕೆಳಗೇ ಹಾದುಹೋಗಲಿವೆ. ಇಷ್ಟು ದೊಡ್ಡ ಅಳತೆಯಲ್ಲಿ ಸುರಂಗ ಕೊರೆದಾಗ ಅದರ ಮೇಲಿನ ಕಟ್ಟಡಗಳಿಗೆ ಹಾನಿಯಾಗುವುದಲ್ಲದೆ, ಕನಿಷ್ಠ 300 ಅಡಿ ಆಳಕ್ಕೆ ಕೊರೆಯಲಾಗಿರುವ ಕೊಳವೆಬಾವಿಗಳಿಗೆ ಹರಿಯುವ ನೀರಿಗೆ ತಡೆ ಉಂಟು ಮಾಡಲಿದೆ. ಸುರಂಗ ರಸ್ತೆಗಾಗಿ ಕೊರೆಯುವ ಪ್ರಕ್ರಿಯೆಯು, ಅಂತರ್ಜಲದ ಹರಿವಿಗೆ ಅಡ್ಡಿ ಉಂಟು ಮಾಡುವ ಬಗ್ಗೆ ಅಧ್ಯಯನ ಮಾಡದೇ ಸುರಂಗ ರಸ್ತೆಯ ಡಿಪಿಆರ್ ತಯಾರಿಸಿರುವುದು ಸರಿಯಲ್ಲ ಎನ್ನುತ್ತಾರೆ ತಜ್ಞರು.
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗಿನ ಸುರಂಗ ರಸ್ತೆಯ ಡಿಪಿಆರ್ ಬಗ್ಗೆ ಸರ್ಕಾರವೇ ರಚಿಸಿರುವ ತಜ್ಞರ ಸಮಿತಿ 89 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ 121 ಲೋಪ–ದೋಷಗಳನ್ನು ಗುರುತಿಸಿದೆ.
ಯೋಜನೆಯ ಪ್ರದೇಶ, ಅಲೈನ್‌ಮೆಂಟ್, ಭೂಲಭ್ಯತೆ, ಸಂಚಾರ, ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಮಗ್ರ ಭೂವೈಜ್ಞಾನಿಕ, ಭೂತಾಂತ್ರಿಕ ಅಧ್ಯಯನಗಳಾಗಿಲ್ಲ.
ಸುರಂಗ ರಸ್ತೆ ಯೋಜನೆಯನ್ನು ರೂಪಿಸಿರುವವರು, ತಜ್ಞರ ಸಮಿತಿಯ ಗಂಭೀರ ಪ್ರಶ್ನೆಗಳಿಗೆ ಸರಿಯಾದ ವಿವರಣೆಯನ್ನೂ ನೀಡಿಲ್ಲ. ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ತಪಾಸಣೆಗಳನ್ನು ಡಿಪಿಆರ್ ತಯಾರಿಸಿರುವ ಸಮಯದಲ್ಲಿ ನಡೆಸಿಲ್ಲ. ಇದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ.
ಪ್ರಮುಖವಾದ ಮಣ್ಣಿನ ಪರೀಕ್ಷೆಗೆ ಸಂಬಂಧಿಸಿದ ತಜ್ಞರ ಸಮಿತಿ ಪ್ರಶ್ನೆಗೆ, ‘ಗುತ್ತಿಗೆದಾರರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಕಾಲಕಾಲಕ್ಕೆ ಅದನ್ನು ನಡೆಸುತ್ತಾರೆ’ ಎಂದು ಬಿ–ಸ್ಮೈಲ್ ಎಂಜಿನಿಯರ್‌ಗಳು ಉತ್ತರ ನೀಡಿದ್ದಾರೆ. ಇದು ಸುರಂಗ ರಸ್ತೆಯ ವಿನ್ಯಾಸಕಾರರು ಎಷ್ಟು ಗಂಭೀರ ಹಾಗೂ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಯೋಜನೆ ಅನುಷ್ಠಾನವಾಗುವ ಶೇ 90ರಷ್ಟು ಪ್ರದೇಶದಲ್ಲಿ ಎಲ್ಲ ರೀತಿಯ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿರಬೇಕು. ಇದರಿಂದ ಸಮಯ ಹಾಗೂ ವೆಚ್ಚ ಹೆಚ್ಚಾಗುವುದನ್ನು ತಪ್ಪಿಸಬಹುದು. ಆದರೆ, ಸುರಂಗ ರಸ್ತೆಯ ಯೋಜನೆಯಲ್ಲಿ ಈ ಪ್ರಕ್ರಿಯೆ ಬಗ್ಗೆ ಸ್ಪಷ್ಟತೆ ಇಲ್ಲ.
ನಮ್ಮ ಮೆಟ್ರೊ ಸುರಂಗ ಮಾರ್ಗ ಕೊರೆಯುವ ಸಂದರ್ಭದಲ್ಲಿ ಉಂಟಾಗಿರುವ ವಿಳಂಬದಿಂದ ಪಾಠ ಕಲಿತು, ಸುರಂಗ ರಸ್ತೆ ಯೋಜನೆ ರೂಪಿಸುವ ಸಂದರ್ಭದಲ್ಲೇ ಬಗ್ಗೆ ಹೆಚ್ಚು ನಿಖರತೆ ಇರಬೇಕಾಗಿತ್ತು. ಅದನ್ನು ಮಾಡದೇ ಇದ್ದುದರಿಂದ ವೆಚ್ಚವೂ ಶೇ 10ರಿಂದ ಶೇ 15ರಷ್ಟು ಹೆಚ್ಚಾಗಲಿದೆ.
ಅಂತರ್ಜಲ ಸೇರಿದಂತೆ ಪರಿಸರದ ಮೇಲಾಗುವ ಪರಿಣಾಮದ ಮಾಹಿತಿ ಲಭ್ಯವಿಲ್ಲ. ಭೂಸ್ವಾಧೀನ, ಸೌಲಭ್ಯ ವರ್ಗಾವಣೆ, ಉಪಕರಣ, ಶುಲ್ಕ ಸಂಗ್ರಹ ವ್ಯವಸ್ಥೆ ಇತ್ಯಾದಿಗೆ ಒಟ್ಟಾರೆ ತಗಲುವ ವೆಚ್ಚವನ್ನು ಅಂದಾಜಿಸಿ, ಒದಗಿಸುವುದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ.
‘ಬೆಂಗಳೂರಿನ ಸಂಚಾರ ದಟ್ಟಣೆಗೆ ಸುರಂಗ ರಸ್ತೆಗಿಂತ ಪರ್ಯಾಯ ಯೋಜನೆ ಇಲ್ಲ. ರಾಜಕೀಯ ಕಾರಣಕ್ಕಾಗಿ ಯೋಜನೆಗೆ ವಿರೋಧ ಮಾಡುವುದು ಸರಿಯಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸುರಂಗ ರಸ್ತೆ ಉತ್ತಮ ಯೋಜನೆ ಎಂದು ಹೇಳಿದ್ದಾರೆ. ಅವರೇ ಮಾಡುತ್ತೇವೆ ಎಂದಿದ್ದರು. ಹಾಗಾದಲ್ಲಿ ಸುರಂಗ ರಸ್ತೆ ಪ್ರದೇಶದ ಆಸ್ತಿ ಮಾಲೀಕತ್ವವೆಲ್ಲ ಕೇಂದ್ರದ ಅಧೀನಕ್ಕೆ ಹೋಗಿ ರಾಜ್ಯದ ನಿಯಂತ್ರಣವೇ ಇರುವುದಿಲ್ಲ. ಹೀಗಾಗಿ ನಾವೇ ಮಾಡುತ್ತಿದ್ದೇವೆ. ಮುಂಬೈನಲ್ಲಿ ಸುರಂಗ ರಸ್ತೆ ಮಾಡಿಲ್ಲವೇ? ನಾವು ಮಾಡಿದರಷ್ಟೇ ಸರಿ ಇರುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.
‘ಬಿಜೆಪಿಯ ಎಲ್ಲ ಶಾಸಕರೊಂದಿಗೂ ಸುರಂಗ ರಸ್ತೆ ಬಗ್ಗೆ ಚರ್ಚಿಸಿದ್ದೇನೆ. ಎಲ್ಲರೂ ಒಪ್ಪಿದ್ದಾರೆ. ಒಬ್ಬ ಸಂಸದ ಕೆಲವರಷ್ಟೇ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ’ ಎಂದೂ ಅವರು ಹೇಳಿದರು. ‘ಸುರಂಗ ರಸ್ತೆಯಿಂದ ಕೊಳವೆಬಾವಿ ಅಂತರ್ಜಲ ಸೇರಿದಂತೆ ಕೆಲವು ‘ಯುಟಿಲಿಟಿ’ಗೆ ಸಮಸ್ಯೆ ಆಗುವ ಸಂಭವವಿದೆ. ಅದನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ. ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಮಾತ್ರ ಭೂಮಿ ಬಳಸಲಾಗುತ್ತದೆ. ಅಲ್ಲಿನ ವಾಣಿಜ್ಯ ಕೇಂದ್ರವನ್ನು ಬೇಕಾದರೆ ಬದಲಿಸುತ್ತೇವೆ. ಸುಮಾರು ಅರ್ಧ ಎಕರೆಯಷ್ಟು ಪ್ರದೇಶ ಮಾತ್ರ ರ‍್ಯಾಂಪ್‌ಗೆ ಬಳಸಲಾಗುತ್ತದೆ’ ಎಂದು ಹೇಳಿದರು.
‘ಯೋಜನೆಯಿಂದ ಐಟಿ–ಬಿಟಿ ವರ್ಗದವರಿಗೆ ಹೆಚ್ಚು ಅನುಕೂಲವಾಗುತ್ತದೆ. ಸಮಯವೇ ಸಂಪತ್ತು ಆಗಿರುವ ಈ ಕಾಲದಲ್ಲಿ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ಗೆ ಈಗಿನ ರಸ್ತೆಯಲ್ಲೇ ಹೋದರೆ ಸುಮಾರು ಎರಡು ಗಂಟೆ ಬೇಕಾಗುತ್ತದೆ. ಅಷ್ಟು ಸಮಯವನ್ನು ಉದ್ಯಮಿಗಳು ವ್ಯಯ ಮಾಡಲು ಬಯಸುವುದಿಲ್ಲ. ಹೀಗಾಗಿ ಸುರಂಗ ರಸ್ತೆಯಿಂದ ಅವರಿಗೆಲ್ಲ ಅನುಕೂಲವಾಗುತ್ತದೆ’ ಎಂದು ಶಿವಕುಮಾರ್ ವಿವರಿಸಿದರು.
ಉತ್ತರ–ದಕ್ಷಿಣ, ಪೂರ್ವ–ಪಶ್ಚಿಮ ಎಂಬ ಎರಡು ಕಾರಿಡಾರ್‌ಗಳಲ್ಲಿ 33.490 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ, ಶೇ 10ರಿಂದ 15ರಷ್ಟು ವೆಚ್ಚ ಹೆಚ್ಚಾಗಬಹುದೆಂಬ ಲೆಕ್ಕಾಚಾರವನ್ನು ಹೊರಗಿಟ್ಟು, ₹40 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಗೆ ರಾಜ್ಯ ಸಚಿವ ಸಂಪುಟ ಜೂನ್ 9ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಹುಡ್ಕೊ ಸಂಸ್ಥೆಯಿಂದ ವಾರ್ಷಿಕ ಶೇ 8.95ರಷ್ಟು ಬಡ್ಡಿದರಲ್ಲಿ ₹27 ಸಾವಿರ ಕೋಟಿ ಸಾಲ ಪಡೆಯಲು ಅನುಮತಿ ನೀಡಿದೆ. ₹19 ಸಾವಿರ ಕೋಟಿ ಸಾಲಕ್ಕೆ ಸರ್ಕಾರ ಗ್ಯಾರಂಟಿಯನ್ನೂ ನೀಡಿದೆ.
2030ರ ವೇಳೆಗೆ ನಿರ್ಮಾಣವಾಗಲಿರುವ ಸುರಂಗ ರಸ್ತೆಯಿಂದಾಗಿ ಹೆಬ್ಬಾಳ– ಸಿಲ್ಕ್‌ಬೋರ್ಡ್ ನಡುವಿನ ಸಂಚಾರ ಸಮಯ ಅರ್ಧದಷ್ಟು ಕಡಿಮೆಯಾಗಲಿದೆ. ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಪ್ರತಿ ಕಿ.ಮೀಗೆ ₹19 ಪಾವತಿಸಬೇಕಾಗುತ್ತದೆ.
ಸುರಂಗ ರಸ್ತೆ BOT (ಅಭಿವೃದ್ಧಿ, ಕಾರ್ಯಾಚರಣೆ, ಹಸ್ತಾಂತರ) ಆಧಾರದಲ್ಲಿ ನಿರ್ಮಾಣವಾಗಲಿದೆ. ಸುರಂಗ ರಸ್ತೆಯಲ್ಲಿ ಪೂರ್ಣವಾಗಿ ಒಂದು ಬಾರಿ ಸಂಚರಿಸಲು ಸುಮಾರು ₹317 ಶುಲ್ಕ ಪಾವತಿಸಬೇಕಾಗುತ್ತದೆ.
ಸುರಂಗ ರಸ್ತೆ ನಿರ್ಮಾಣ ಯೋಜನೆ ರೂಪಿಸುವ ಸಂದರ್ಭದಲ್ಲಿ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ (ಇಐಎ) ಈವರೆಗೆ ಆಗಿಲ್ಲ.
ಲಾಲ್‌ಬಾಗ್ ಉದ್ಯಾನ, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆಯ ಮೂಲ ಸೇರಿದಂತೆ ಜೀವವೈವಿಧ್ಯಕ್ಕೆ ಸುರಂಗ ಕೊರೆತದಿಂದ ಧಕ್ಕೆಯಾಗಲಿದೆ.
ನಗರದ ವಾತಾವರಣಕ್ಕೆ ಹಸಿರ ಹಾಸು ಹೊಂದಿರುವ ಲಾಲ್‌ಬಾಗ್ ಕೆಳಗೆ ಹತ್ತು ಸುರಂಗ ರಸ್ತೆಗಳು ಹಾದುಹೋಗುವ ಜೊತೆಗೆ, ಲಾಲ್‌ಬಾಗ್‌ನೊಳಗಿನ ಎಂಟು ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ, ಬಸ್–ಟ್ಯಾಕ್ಸಿ ನಿಲ್ದಾಣ ಹಾಗೂ ಹೈಟೆಕ್ ಮಾಲ್‌ಗಳ ನಿರ್ಮಾಣಕ್ಕೆ ಎಂಟು ಎಕರೆ ಭೂಮಿಯನ್ನು ಬಳಸಿಕೊಳ್ಳಲು ಡಿಪಿಆರ್‌ನಲ್ಲಿ ಉಲ್ಲೇಖಿಸಿರುವುದಕ್ಕೆ ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಲಾಲ್‌ಬಾಗ್ ಸಿದ್ದಾಪುರ ಮುಖ್ಯರಸ್ತೆಯಲ್ಲಿ ಲಾಲ್‌ಬಾಗ್ ದಕ್ಷಿಣ ಗೇಟ್ (ಸಿದ್ದಾಪುರ ಗೇಟ್) ಪ್ರವೇಶದ್ವಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಂಗ ಮಾರ್ಗದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕೊಡಲಾಗುತ್ತದೆ. ಹಲವು ಸೌಲಭ್ಯಗಳನ್ನು ಒಳಗೊಂಡ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವೂ ಇಲ್ಲಿ ನಿರ್ಮಾಣವಾಗಲಿದೆ. ಕಸಬಾ ಹೋಬಳಿಯ ಲಾಲ್‌ಬಾಗ್, ಅಣ್ಣಿಪುರ, ಅರೆಕೆಂಪನಹಳ್ಳಿ, ಸಿದ್ದಾಪುರ ಗ್ರಾಮಗಳು ಬರುವ ವಿಶ್ವೇಶ್ವರ ಪುರ ವಾರ್ಡ್‌ನಲ್ಲಿ 2.56 ಲಕ್ಷಕ್ಕೂ ಹೆಚ್ಚು ಚದರಡಿ (ಸುಮಾರು 6 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಸಮಗ್ರ ಯೋಜನಾ ವರದಿಯಲ್ಲಿ(ಡಿಪಿಆರ್) ‘ಅಲೈನ್‌ಮೆಂಟ್’ ಅನ್ನು ಗುರುತಿಸಲಾಗಿದೆ.
ಅಂತಿಮ ಡಿಪಿಆರ್‌ನಲ್ಲಿ ಇಲ್ಲದ ಹೊಸ ನಿರ್ಗಮನ ಪಥ ಸ್ಯಾಂಕಿ ಕೆರೆಯ ಸಮೀಪ ತೆರೆದುಕೊಳ್ಳುವುದರಿಂದ ಈಗಾಗಲೇ ಒತ್ತುವರಿಯಿಂದ ಬಳಲುತ್ತಿರುವ ಕೆರೆಗೆ ಕಂಟಕ ಎದುರಾಗಿದೆ. ಮೇಖ್ರಿ ವೃತ್ತದಿಂದ ಸಿ.ವಿ. ರಾಮನ್ ರಸ್ತೆ ಕಡೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ, ನಿರ್ಗಮನ ರ್‍ಯಾಂಪ್ ರದ್ದುಗೊಳಿಸಿ, ಗಾಲ್ಫ್ ಮೈದಾನ ಕೆಳಭಾಗದಿಂದ ಸ್ಯಾಂಕಿ ಕೆರೆಯವರೆಗೆ ಹೊಸದಾಗಿ ನಿರ್ಗಮನ ರ‍್ಯಾಂಪ್ ನಿರ್ಮಿಸುವಂತೆ, ಡಿಪಿಆರ್ ಮಾಡಿದ್ದ ರೊಡಿಕ್ ಕನ್ಸಲ್ಟೆಂಟ್ಸ್‌ನಿಂದ ಬಿ–ಸ್ಮೈಲ್ ತಾಂತ್ರಿಕ ನಿರ್ದೇಶಕರಿಗೆ ಅ.9ರಂದು ‘ಬದಲಾದ ಅಲೈನ್‌ಮೆಂಟ್ ಅನುಬಂಧ’ಗಳೊಂದಿಗೆ ವರದಿ ಸಲ್ಲಿಸಲಾಗಿದೆ.
ಹೆಬ್ಬಾಳ – ಎಸ್ಟೀಮ್ ಮಾಲ್ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯ ಪ್ರವೇಶ– ನಿರ್ಗಮನ ಟ್ಯೂಬ್‌ಗಳಿರಲಿವೆ. ಅಂತಿಮ ಡಿಪಿಆರ್‌ನಲ್ಲಿರುವ ಈ ಜಂಕ್ಷನ್‌ನಲ್ಲಿ ಶಾಫ್ಟ್ ನಿರ್ಮಾಣ ಪ್ರದೇಶದಲ್ಲಿ ಹೆಚ್ಚು ಸ್ಥಳವನ್ನು ಪಡೆದುಕೊಳ್ಳಲು ಉದ್ದೇಶಿಸಿರುವುದರಿಂದ ಹೆಬ್ಬಾಳ ಕೆರೆ ಅಂಗಳ ಹಾಗೂ ರಾಜಕಾಲುವೆ ಮಾರ್ಗವನ್ನು ಬದಲಿಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಆಕ್ಷೇಪ ವ್ಯಕ್ತವಾಗಿದೆ.
ಹೆಬ್ಬಾಳ ಕೆರೆ ಹಾಗೂ ಸ್ಯಾಂಕಿ ಕೆರೆಯ ಬಫರ್ ವಲಯದಲ್ಲಿ ಟನಲ್ ರ‍್ಯಾಂಪ್‌ಗಳು ನಿರ್ಮಿಸಲು ಯೋಜಿಸಲಾಗಿದೆ. ಆದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಕೆಟಿಸಿಡಿಎ) ಬಿಬಿಎಂಪಿ, ಜಿಬಿಎ, ಬಿ–ಸ್ಮೈಲ್ ಅಥವಾ ಡಿಪಿಆರ್ ತಯಾರಿಸಿದ ಸಂಸ್ಥೆ ಅನುಮತಿಯನ್ನು ಪಡೆದಿಲ್ಲದಿರುವುದು ಪ್ರಮುಖ ಲೋಪವೆಂದೇ ಪರಿಗಣಿಸಲಾಗಿದೆ.
ಸುರಂಗ ರಸ್ತೆ ಹಾದುಹೋಗುವ ಮಾರ್ಗದಲ್ಲಿ ಅಂತರ್ಜಲ, ಜಲಮೂಲ ಹಾಗೂ ಕೊಳವೆಬಾವಿಗಳಿಗೆ ಸಮಸ್ಯೆಯಾಗಲಿದ್ದು, ಇದಕ್ಕೆ ಯಾವುದೇ ರೀತಿಯ ಪರಿಹಾರ ಕ್ರಮಗಳನ್ನು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸೂಚಿಸಿಲ್ಲ.
‘ಅಂತರ್ಜಲ, ಜಲಮೂಲಗಳನ್ನು ಯಾವುದೇ ವರದಿಯಲ್ಲೂ ಪರಿಗಣಿಸಿಲ್ಲ. ಇದು ಸುರಂಗ ರಸ್ತೆ ತಂದೊಡ್ಡುವ ಅತ್ಯಧಿಕ ಅಪಾಯವಾಗಿದೆ. ಜಲಮೂಲಗಳನ್ನು ಗುರುತಿಸಲು ‘ಎಲೆಕ್ಟ್ರಿಕಲ್ ರೆಸಿಸ್ಟಿವಿಟಿ ಟೊಮೊಗ್ರಫಿ’ಯನ್ನು (ಇಆರ್‌ಟಿ) ಏಕೆ ಬಳಸಿಲ್ಲ’ ಎಂದು ರಾಜ್ಯ ಸರ್ಕಾರ ರಚಿಸಿರುವ ‘ತಜ್ಞರ ಸಮಿತಿ’ಯ ಪ್ರಶ್ನೆಗೆ ಡಿಪಿಆರ್ ತಯಾರಿಸುವವರಲ್ಲಿ ಉತ್ತರವಿಲ್ಲ.
‘ನಮ್ಮ ಮೆಟ್ರೊ’ ಸುರಂಗ ರಸ್ತೆಯಲ್ಲೂ ಸಂಚರಿಸುತ್ತದೆ. ಮೆಟ್ರೊ ಸುರಂಗ ಮಾರ್ಗವನ್ನು ರಸ್ತೆಯ ಕೆಳಭಾಗದಲ್ಲಿ ಮಾತ್ರ ಕೊರೆಯಲಾಗಿದೆ. ಆದರೆ, ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆ, ವಸತಿ, ವಾಣಿಜ್ಯ ಕಟ್ಟಡಗಳು, ಸಾಂಸ್ಥಿಕ ವಲಯಗಳು, ಸರ್ಕಾರದ ಪ್ರಮುಖ ಕಟ್ಟಡಗಳ ಕೆಳಭಾಗದಲ್ಲಿ ಸಾಗಲಿದೆ. ಇದರಿಂದ, ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿರುವ ಕೊಳವೆ ಬಾವಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ನಗರದ ಕೇಂದ್ರ ಭಾಗವೂ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕೊಳವೆಬಾವಿಗಾಗಿ ನೂರಾರು ಅಡಿ ಆಳ ಕೊರೆಯಲಾಗಿದೆ. ಸುರಂಗ ರಸ್ತೆ 50 ಅಡಿಯಿಂದ 100 ಅಡಿ ಆಳದಲ್ಲಿ ಬರುವುದರಿಂದ ಕೊಳವೆಬಾವಿಗಳಿಗೆ ಸಮಸ್ಯೆ ಆಗುತ್ತದೆ. ಜೊತೆಗೆ ಬೃಹತ್ ಕಟ್ಟಡಗಳ ‘ಫೌಂಡೇಷನ್’ಗೆ ಧಕ್ಕೆಯಾಗುವ ಬಗ್ಗೆಯೂ ನಾಗರಿಕರು– ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
‘ತಿಂಗಳಿಗೆ ₹18 ಸಾವಿರ ಬೇಕು’ ಸುರಂಗ ರಸ್ತೆ ಯೋಜನೆಗೆ ಮಹಾನಗರ ಯೋಜನಾ ಸಮಿತಿ, ಬಿಎಂಎಲ್‌ಟಿಎ ಅಥವಾ ಪರಿಸರ ಇಲಾಖೆಯಿಂದ ಯಾವುದೇ ಅನುಮೋದನೆ ಪಡೆದಿಲ್ಲ. ಸಮಗ್ರ ಸಂಚಾರ ಯೋಜನೆಯಲ್ಲಿ (ಸಿಎಂಪಿ) ಇದು ಇಲ್ಲ. ನಗರ ಭೂಸಾರಿಗೆ ನಿರ್ದೇಶನಾಲಯವು (ಡಿಯುಎಲ್‌ಟಿ) ‘ಈ ಯೋಜನೆಯು ಅಪೇಕ್ಷಣೀಯವಲ್ಲ’ ಎಂದು ಹೇಳಿದೆ. ಎಷ್ಟು ಜನರು ಸುರಂಗ ರಸ್ತೆ ಬಳಸಲಿದ್ದಾರೆ ಎಂದು ಅಂದಾಜಿಸಲು ಯಾವುದೇ ಅಧ್ಯಯನ ಮಾಡಿಲ್ಲ. ಸುರಂಗ ರಸ್ತೆ ‘ಕಾರುಗಳಿಗೆ ಮಾತ್ರ’ ಎಂದು ಡಿಪಿಆರ್ ಹೇಳಿದೆ. ಈಗ ನಗರದಲ್ಲಿ ಕೇವಲ 25 ಲಕ್ಷ ಕಾರುಗಳಿವೆ. ಅವರಲ್ಲಿ ಎಷ್ಟು ಮಂದಿ 16 ಕಿ.ಮೀ. ಪ್ರಯಾಣಿಸಲು ಪ್ರತಿದಿನ ಸುಮಾರು ₹600 ಪಾವತಿಸಲು ಶಕ್ತರು? ಅವರು ಈ ಮಾರ್ಗವನ್ನು ನಿಯಮಿತವಾಗಿ ಬಳಸುತ್ತಿದ್ದರೆ ತಿಂಗಳಿಗೆ ₹18 ಸಾವಿರ ಬೇಕಾಗುತ್ತದೆ. ಎಷ್ಟು ಜನ ಇಷ್ಟು ಮೊತ್ತವನ್ನು ಪಾವತಿಸಲು ಸಾಧ್ಯ?ಕಾತ್ಯಾಯಿನಿ ಚಾಮರಾಜ್, ಸಿವಿಕ್– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ
‘ಮಂಕುಬೂದಿ ಎರಚುವ ಯೋಜನೆ’ಸಾಲ ಮಾಡಿ ಸುರಂಗ ನಿರ್ಮಿಸಿ, ಶುಲ್ಕ ವಿಧಿಸುವುದರಿಂದ ಯಾರಿಗೆ ಉಪಯೋಗ? ಯಾರೋ ಕೆಲವರಿಗೆ ಅನುಕೂಲ ಮಾಡಿಕೊಡಲು ಜನಸಾಮಾನ್ಯರ ತೆರಿಗೆ ಹಣ ಬಳಸಿಕೊಳ್ಳುವುದು ಯಾವ ನ್ಯಾಯ? ಬೆಂಗಳೂರಿನ ಭೂಗರ್ಭದಲ್ಲಿ ಅತ್ಯಂತ ಗಟ್ಟಿಮುಟ್ಟಾದ ಬಂಡೆಗಳಿವೆ. ಇಂತಹ ‘ಹಾರ್ಡ್ ರಾಕ್’ ಕೊರೆಯಲು ಬಿಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆಗಳೇ ಹೆಚ್ಚು. ನಗರ ತಜ್ಞನಾಗಿ ನಾನು ಸರ್ಕಾರಗಳ ಮಟ್ಟದಲ್ಲಿ ಹಲವು ಯೋಜನೆಗಳಿಗೆ ಸಲಹೆಗಳನ್ನೂ ನೀಡಿದ್ದೇನೆ. ಈ ಸುರಂಗ ರಸ್ತೆ ಜನರಿಗೆ ಮಂಕುಬೂದಿ ಎರಚುವ ಅತ್ಯಂತ ದುಬಾರಿ ಯೋಜನೆಯಷ್ಟೇ.ಪ್ರೊ. ಎಂ.ಎನ್. ಶ್ರೀಹರಿ, ಸಂಚಾರ ತಜ್ಞ
‘ಕದ್ದುಮುಚ್ಚಿ ಅನುಷ್ಠಾನ’ ಸುರಂಗ ರಸ್ತೆಯಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತೇವೆ ಎಂದು ಹೇಳುವವರು ಯಾವ ರೀತಿ ಪರಿಹಾರ ಸಿಗಲಿದೆ ಎಂಬುದನ್ನು ಯಾರಿಗೂ ತಿಳಿಸಿಲ್ಲ. ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನ ನಾಗರಿಕರು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಪರಿಸರ ಹಾಗೂ ನಾಗರಿಕರ ಆಸ್ತಿ ಮೇಲಾಗುವ ಪರಿಣಾಮವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನೂ ಹೇಳಿಲ್ಲ. ಸುರಂಗ ರಸ್ತೆ ಯೋಜನೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡದೆ, ಎಲ್ಲವನ್ನೂ ಕದ್ದುಮುಚ್ಚಿ ಮಾಡಲಾಗುತ್ತಿದೆ. ಸುರಂಗ ರಸ್ತೆ ಲಾಲ್‌ಬಾಗ್‌ಗೆ ಧಕ್ಕೆಯನ್ನುಂಟು ಮಾಡಲಿದೆ. ಲಾಲ್‌ಬಾಗ್, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆಗೆ ಮಾತ್ರವಲ್ಲ, ನಗರದ ಎಲ್ಲ ಭಾಗಗಳಿಗೂ ತೊಂದರೆಯಾಗಲಿದೆ..ಡಿ.ಟಿ. ದೇವರೆ, ಪರಿಸರ ಕಾರ್ಯಕರ್ತ
ಹಸಿರುನಾಶದ ಅಭಿವೃದ್ಧಿ ಬೇಡ’ ಯೋಜನೆ ಬಗ್ಗೆ ಯಾರೂ ಸವಿವರವಾದ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಿಲ್ಲ. ಮಾಹಿತಿ ನೀಡದೆ ಮುಚ್ಚಿಡುವಂತಹದ್ದು ಏನಿದೆ ಎಂಬುದೇ ಹಲವಾರು ಗೊಂದಲಕ್ಕೆ ಕಾರಣ. ಲಾಲ್‌ಬಾಗ್‌ನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂಡೆ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳಿವೆ. ಇದಕ್ಕೆ ಹೊಂದಿಕೊಂಡಂತೆಯೇ ಮೂರ್ನಾಲ್ಕು ಜಲಮೂಲಗಳಿವೆ. ಸುರಂಗ ರಸ್ತೆ ಇವುಗಳ ಕೆಳಗೆ ನಿರ್ಮಾಣವಾಗುವುದರಿಂದ ತೊಂದರೆಯಾಗುವುದು ನಿಶ್ಚಿತ. ಇನ್ನು ಮೇಲ್ಭಾಗದಲ್ಲಿ ಕೆಲವು ಎಕರೆಯ ಲಾಲ್‌ಬಾಗ್ ಪ್ರದೇಶದಲ್ಲಿ ‘ಶಾಫ್ಟ್’ ನಿರ್ಮಾಣವಾದರೆ ವಾಹನ ದಟ್ಟಣೆಯ ಜೊತೆಗೆ ಜನದಟ್ಟಣೆಯೂ ಉಂಟಾಗುತ್ತದೆವಿಜಯ್ ನಿಶಾಂತ್,ಪರಿಸರ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.